‘ಅನುಭವ ಮಂಟಪ ನಿರ್ಮಾಣಕ್ಕೆ ಯಡಿಯೂರಪ್ಪ, ನಾನು ಅನುದಾನ ನೀಡಿದ್ದೆವು‘
ಬೆಂಗಳೂರು
ಕಾಲದ ಪರೀಕ್ಷೆಯಲ್ಲೂ ತನ್ನ ಪ್ರಸ್ತುತತೆಯನ್ನು ಉಳಿಸಿಕೊಂಡಿರುವ ವಚನ ಸಾಹಿತ್ಯವನ್ನು ಯಾರಿಂದಲೂ ನಾಶ ಮಾಡಲು ಸಾಧ್ಯವಿಲ್ಲ, ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ಹೇಳಿದರು.
ಬೆಂಗಳೂರಿನಲ್ಲಿ ನಡೆದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ 14ನೇ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಜಗತ್ತಿನ ಎಷ್ಟೋ ಸಾಹಿತ್ಯಗಳು ಭೂತಕಾಲಕ್ಕೆ ಸೇರಿಹೋಗಿವೆ
ಅಥವಾ ಕಾಲಾನಂತರದಲ್ಲಿ ಅಪ್ರಸ್ತುತವಾಗಿವೆ.

ಆದರೆ ಶರಣ ಸಾಹಿತ್ಯವನ್ನು ಅಲ್ಪವಾಗಿಸುವ ನಿರಂತರ ಪ್ರಯತ್ನಗಳು ನಡೆದಾಗಲೂ, ಅದು ಮತ್ತೆ ಮತ್ತೆ ಪುಟಿದೆದ್ದಿದೆ. ಇದನ್ನು ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಶರಣ ಸಾಹಿತ್ಯದಲ್ಲಿ ಯಾವುದೇ ಕಾಲ್ಪನಿಕ ಕಥೆಗಳಿಲ್ಲ. ಶರಣ ಸಾಹಿತ್ಯದಲ್ಲಿ ಬದುಕಿನ ಸತ್ಯ ಇದೆ ಎಂದರು.
ಬಸವಾದಿ ಶರಣರ ವೈಚಾರಿಕ ಕ್ರಾಂತಿಯ ಫಲವೇ ವಚನ ಸಾಹಿತ್ಯ. ಇದು ಕೇವಲ ಸಾಹಿತ್ಯವಲ್ಲ, ಬದುಕಿನ ಸತ್ಯವನ್ನು ಸಾರುವ, ಸಮಾಜಕ್ಕೆ ದಾರಿದೀಪವಾಗಿರುವ ಜೀವಂತ ತತ್ವ, ಎಂದು ತಿಳಿಸಿದರು.

‘ದಯೆಯಿಲ್ಲದ ಧರ್ಮ ಯಾವುದಯ್ಯ’ ಎಂಬ ಬಸವಣ್ಣನವರ ಸಂದೇಶ ಇಂದಿನ ಸಮಾಜಕ್ಕೂ ಅತ್ಯಂತ ಪ್ರಸ್ತುತವಾಗಿದೆ. ಶರಣರ ತತ್ವಗಳು ಸಮಾಜವನ್ನು ಒಗ್ಗೂಡಿಸುವ ಶಕ್ತಿಯಾಗಿದ್ದು, ಅವುಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.
ರಾಜಕಾರಣಿಗಳ ಹೇಳಿಕೆಗೆ ತಲೆಕೆಡಿಸಿ ಕೊಳ್ಳಬೇಡಿ, ರಾಜಕಾರಣಿಗಳು ತಮ್ಮ ಲಾಭಕ್ಕಾಗಿ ಸಮಾಜವನ್ನು ಒಡೆಯುವ ಅಥವಾ ಕೂಡಿಸುವ ಕೆಲಸಗಳನ್ನು ಮಾಡುತ್ತಿರುತ್ತಾರೆ. ಎಂದು ಹೇಳಿದರು.

ಅನುಭವ ಮಂಟಪ
ಬಸವ ಕಲ್ಯಾಣದಲ್ಲಿ ಅನುಭವ ಮಂಟಪದ ನಿರ್ಮಾಣಕ್ಕೆ ದೃಢ ತೀರ್ಮಾನ ಕೈಗೊಂಡು, ಹಣಕಾಸಿನ ನೆರವು ನೀಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕಾರ್ಯವನ್ನು ಈ ಸಂದರ್ಭದಲ್ಲಿ ಸ್ಮರಿಸಿದರು.
ತಾವು ಮುಖ್ಯಮಂತ್ರಿಯಾಗಿದ್ದಾಗ ಅನುಭವ ಮಂಟಪ ನಿರ್ಮಾಣಕ್ಕೆ ಅನುದಾನ ನೀಡಿರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶರಣರ ಮೌಲ್ಯಗಳನ್ನು ಮುಂದಿನ ಯುವಪೀಳಿಗೆಗೆ ತಲುಪಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ, ಎಂದು ಹೇಳಿದರು.
ಸನ್ಮಾನ
ಕೆಎಲ್‌ಇ ಸಂಸ್ಥೆಯ ಅಧ್ಯಕ್ಷ ಪ್ರಭಾಕರ್ ಕೋರೆ, ಇಸ್ರೋ ಮಾಜಿ ಅಧ್ಯಕ್ಷ ಕಿರಣ್ ಕುಮಾರ್, ನಿರ್ಮಾಪಕ ಬಸಂತಕುಮಾರ ಪಾಟೀಲ್, ನಿವೃತ್ತ ಡಿಜಿಪಿ ರೇವಣಸಿದ್ದಯ್ಯ, ನಿವೃತ್ತ ಐಎಎಸ್ ಅಧಿಕಾರಿ ಶಿವಯೋಗಿ ಕಳಸದ ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು.

ಸಮ್ಮೇಳನಾಧ್ಯಕ್ಷ ಡಾ ಗೊ. ರು. ಚನ್ನಬಸಪ್ಪ, ಷಡಕ್ಷರಿ, ಡಾ. ಅರವಿಂದ ಜತ್ತಿ, ಡಾ.ಸೋಮಶೇಖರ್, ಕೊಂಡಜ್ಜಿ ಷಣ್ಮುಖಪ್ಪ, ನಿವೃತ್ತ ಐಪಿಎಸ್ ಡಾ. ಎಲ್. ರೇವಣ್ಣಸಿದ್ಧಯ್ಯ, ಲೇಖಕರಾದ ಪುಷ್ಪ ಬಸವರಾಜ ಬಣಕಾರ್, ಮಾಜಿ ವಿಧಾನ ಪರಿಷತ್ ಸದಸ್ಯ ರುದ್ರೇಗೌಡರು ಸೇರಿದಂತೆ ಹಲವಾರು ಗಣ್ಯರು, ಪ್ರಮುಖರು ಉಪಸ್ಥಿತರಿದ್ದರು.

ಬೊಮ್ಮಯಿಯವರು ಈ ಮಾತುಗಳನ್ನು ತಮ್ಮ ಹೃದಯಾಂತರಾಳದಿಂದ ಹೇಳುವುದಾದರೆ ಸಂಘಪಾರಿವಾರ ಮತ್ತು ಪಾರಿವಾರದ ಹುನ್ನಾರದಿಂದ ವಚನಗಳನ್ನು ಅಲ್ಪವಾಗಿಸುವ ಮತ್ತು ತಿರುಚುವ ಕೆಲಸವನ್ನು ಮಾಡುವಾಗ ಇವರ ಮೌನಕ್ಕೆ ಅರ್ಥವೇನು? ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಅಂತ ಘೋಷಿಸಿದಾಗ ಒಂದು ಬಾರಿಯೂ ಅದನ್ನು ಸ್ವಾಗತಿಸುವ ದೊಡ್ಡ ಹೃದಯ ತೋರಿಸಲಿಲ್ಲ. ವೇದಿಕೆಯ ಮೇಲೆ ಭಾಷಣ ಮಾಡುವುದು ಸುಲಭ. ಮತ್ತು ಈ ಲಿಂಗಾಯತರು ಇವರು ನಮ್ಮವರು ಎನ್ನುವ ಹಿನ್ನೆಲೆಯಲ್ಲಿ ಇವರನ್ನು ಮತ್ತು ಇವರಂತಹವರನ್ನು ಕ್ಷಮಿಸಿ ಬಿಡುತ್ತಾರೆ.