“ಮಹಾ ಶರಣೆ ಅಕ್ಕ ನಾಗಮ್ಮನವರ ವ್ಯಕ್ತಿತ್ವಕ್ಕೆ ಕಳಂಕ ತರುವಂತೆ ಅಶ್ಲೀಲ, ಅವಾಚ್ಯ ಶಬ್ದಗಳನ್ನು ಪ್ರಯೋಗಿಸಿ ಚಿತ್ರಿಸಲಾಗಿದೆ. ಲಿಂಗಾಯತರನ್ನು ಕೆರಳಿಸುವಂತಹ ಭಾರಿ ಕೆಟ್ಟ ಮೆಸೇಜ್ ಇದೆ ಅದ್ರಲ್ಲಿ.“
ಸದ್ಯದಲ್ಲೇ ಬಿಡುಗಡೆಯಾಗುತ್ತಿರುವ ಶರಣರ ಶಕ್ತಿ ಸಿನೆಮಾದ ವಿರುದ್ಧ ಕೆಲವು ದಿನಗಳಿಂದ ವ್ಯಾಪಕ ಟೀಕೆ ಹರಿದಾಡುತ್ತಿದೆ.
ಈಗ ಲಿಂಗಾಯತ ಸಮುದಾಯದ ಪ್ರತಿಷ್ಠಿತ ಶ್ರೀ ಗುರುಬಸವ ಮಂಟಪ ಸಂಸ್ಥೆ (ಹುಬ್ಬಳ್ಳಿ) ಸಿನಿಮಾದ ಟ್ರೈಲರ್ ಪರಿಶೀಲಿಸಿ ಅದರಿಂದ ಲಿಂಗಾಯತ ಧರ್ಮದ ತತ್ವ ಸಿದ್ಧಾಂತಗಳಿಗೆ ಅಪಚಾರವಾಗಿದೆ ಎಂದು ತೀಕ್ಷ್ಣವಾಗಿ ವಿರೋಧಿಸಿ, ಖಂಡನಾ ನಿರ್ಣಯ ತೆಗೆದುಕೊಂಡಿದೆ.
ಸಂಸ್ಥೆಯ ಮುಖ್ಯಸ್ಥ ಮತ್ತು ಹೆಸರಾಂತ ಬಸವತತ್ವ ಚಿಂತಕ ಶಶಿಧರ ಕರವೀರಶೆಟ್ಟರ್ ತಾವು ಈ ಸಿನೆಮಾದ ಟ್ರೈಲರ್ ನಲ್ಲಿ ಗುರುತಿಸಿರುವ ಗಂಭೀರ ಸಮಸ್ಯೆಗಳನ್ನು ಬಸವ ಮೀಡಿಯಾದ ಜೊತೆ ಹಂಚಿಕೊಂಡರು.
“ಈ ಚಲನ ಚಿತ್ರ ತಂಡದವರು ನಮ್ಮ ಸಂಸ್ಥೆಗೆ ಬಂದು ಬ್ರೋಷರ್ ತೋರಿಸಿದರು. ಅವರ ಜೊತೆ ಬಸವಣ್ಣನವರ ಪಾತ್ರ ಮಾಡಿರುವ ಮಂಜುನಾಥ ಗೌಡ ಪಾಟೀಲ ಇದ್ದರು. ಅವರು ಒಂದೆರಡು ಡೈಲಾಗ್ ಕೂಡ ಹೇಳಿದ್ರು.
ಅದನ್ನು ಕೇಳಿ ಚಲೋ ಮಾಡ್ಯಾರ, ಒಳ್ಳೆದಾಗಲಿ ಅಂತ ಹಾರೈಸಿ ಕಳಿಸಿದ್ದೆವು. ನಮ್ಮ ಸಭೆಗಳಲ್ಲಿಯೂ ಕೂಡ ಇದರ ಬಗ್ಗೆ ಮಾತಾಡಿ ಪ್ರಚಾರ ಕೊಟ್ಟಿದ್ದೀವಿ.
ಆದರೆ ಈಗ ಬಂದ ಸಿನೆಮಾದ ಟ್ರೈಲರ್ ಬೇರೆ ರೂಪಾನೇ ಐತ್ರಿ. ಈ ಚಲನಚಿತ್ರದ ಸಂಭಾಷಣೆ ಹಾಗೂ ನಿರೂಪಣೆ ನೋಡಿ ಇದೊಂದು ಅಸಹ್ಯ, ಅಸಂಬದ್ಧ ಸಿನೆಮಾ ಅಂತ ಗೊತ್ತಾಗಿದೆ. ಇದರಲ್ಲಿ ಸಾಕಷ್ಟು ದೋಷಗಳು ಇರುವದು ಕಂಡುಬಂದಿದೆ.
12ನೇ ಶತಮಾನದ ಬಸವಾದಿ ಶರಣರ ತತ್ವ, ಸಿದ್ಧಾಂತಗಳ ಪೂರ್ಣ ಜ್ಞಾನವಿಲ್ಲದೆ ಅಸಂಬದ್ಧ ಹಾಗೂ ಅಸಹ್ಯವಾಗಿರುವ ಕೆಲವು ಸನ್ನಿವೇಶಗಳು ಟ್ರೈಲರ್ ನಲ್ಲಿದೆ.
ಮಹಾ ಶರಣೆ ಅಕ್ಕ ನಾಗಮ್ಮನವರ ವ್ಯಕ್ತಿತ್ವಕ್ಕೆ ಕಳಂಕ ತರುವಂತೆ ಅಶ್ಲೀಲ, ಅವಾಚ್ಯ ಶಬ್ದಗಳನ್ನು ಪ್ರಯೋಗಿಸಿ ಚಿತ್ರಿಸಲಾಗಿದೆ. ಲಿಂಗಾಯತರನ್ನು ಕೆರಳಿಸುವಂತಹ ಭಾರಿ ಕೆಟ್ಟ ಮೆಸೇಜ್ ಇದೆ ಅದ್ರಲ್ಲಿ.
‘ಮನೆಯೊಳಗೆ ಹೊಕ್ಕು ಲಿಂಗ ಕಟ್ಟುತ್ತೇವೆ’ ಎಂದು ಮಾತುಗಳನ್ನು ಬಳಸಿ ಶರಣರ ವ್ಯಕ್ತಿತ್ವಕ್ಕೆ ಧಕ್ಕೆ ಉಂಟು ಮಾಡಲು ಬರೆಯಲಾಗಿದೆ. ಶರಣರದು ಅಹಿಂಸಾ ಮಾರ್ಗ, ಇವರು ಶರಣರು ಹಿಂಸಾವಾದಿಗಳು ಅಂತ ತೋರಿಸ್ಯಾರ.
ಈ ಸಂಭಾಷಣೆ ಇಷ್ಟಲಿಂಗ ತತ್ವಕ್ಕೆ ಧಕ್ಕೆ ಉಂಟು ಮಾಡುತ್ತದೆ. ಇಷ್ಟಪಟ್ಟು, ಯಾರು ಬೇಕೋ ಅವರು ಕಟ್ಟಿ ಕೊಳ್ಳೋದು ಇಷ್ಟಲಿಂಗ. ಹೊಡೆದು ಕಟ್ಟೋದಲ್ಲ ಅದು. ‘ಇಷ್ಟ’ ಅನ್ನೋ ಪದಾನೇ ಇಷ್ಟಲಿಂಗ ದೀಕ್ಷೆ ಹೆಸರಲ್ಲೈತೆ.
ಲಿಂಗವಂತ ಲಿಂಗವಂತರ ಮಧ್ಯ ಸಂಬಂಧ ಆಗಬೇಕು ಅಂತ ಅಂದ್ಕೊಂಡು ಬಸವಣ್ಣ ಉದ್ದೇಶಪೂರ್ವಕವಾಗಿ ಮಾಡಿದ್ದು ಹರಳಯ್ಯನ ಮಗ ಶೀಲವಂತ ಮತ್ತು ಲಾವಣ್ಯರ ಮದುವೆ. ಆವತ್ತಿನ ಚಾತುರ್ವರ್ಣ ವ್ಯವಸ್ಥೆಯನ್ನ ಸೆದೆಬಡಿಯಲು ಮಾಡಿದ್ದ ಕೆಲಸ ಇದು.
ಇವರು ಅವರಿಬ್ಬರ ಮದ್ಯ affair ಇತ್ತು ಅನ್ನೋ ರೀತಿ ಟ್ರೈಲರ್ ನಲ್ಲಿ ತೋರಿಸ್ತಾರೆ. ಅವರ ಲವ್ ಅಫೇರ್ ನಿಂದ ಗಲಾಟೆ ಆಯ್ತು, ಬಸವಣ್ಣನವರ ಶರಣರ ತತ್ವದ ವಿಚಾರವಾಗಿ ಕ್ರಾಂತಿಯಾಗಿಲ್ಲ ಅನ್ನೋದು ಅವರ ಸಂದೇಶ.
ಬಸವಣ್ಣನವರ ಮೂಲ ಉದ್ಧೇಶಾನೇ ಉಲ್ಟಾ ಹೊಡಿಸಿಬಿಟ್ಟಿದ್ದಾರೆ. ಈ ಟ್ರೈಲರ್ ನಲ್ಲಿ ಇನ್ನೂ ಬೇರೆ ಸಮಸ್ಯೆಗಳೂ ಇವೆ.
ಬರಿ trailerನಾಗ ಇಷ್ಟ ಐತ್ರಿ, ಇನ್ನು ಪೂರಾ ಪಿಕ್ಚರ್ನಲ್ಲಿ ಏನೈತೆ ಅಂತ ಯಾರಿಗ್ ಗೊತ್ತು. ಟಾಕೀಸಿಗೆ ಬಂದರೆ ಏನೂ ಮಾಡಕ್ಕಾಗೋದಿಲ್ಲ.
ಅವರಿಗೆ ಬಿಗಿಯಾಗಿ ಹೇಳಬೇಕ್ರಿ. ಯಾರು ನಾಡಿನ ಬಸವತತ್ವದ ಅನುಭಾವಿ ಚಿಂತಕರು ಇದ್ದಾರೆ
ಅವರಿಗೆ ಪೂರ್ಣ ಪಿಕ್ಚರ್ ತೋರ್ಸಿ. ನಾವು ಏನೇನು ಮಿಸ್ಟೇಕ್ ಅದಾವೆ ಅಂತ ಹೇಳ್ತೀವಿ.
ಅದನ್ನೆಲ್ಲಾ ಸರಿಪಡಿಸಿಕೊಂಡು ಬಂದ್ರೆ ನಾವು ಸಿನೆಮಾ ಬಿಡುಗಡೆ ಆಗೋದಿಕ್ಕೆ ಬಿಡ್ತೀವಿ. ಇಲ್ಲಾಂದ್ರೆ ಕೋರ್ಟಿನಿಂದ ಸ್ಟೇ ತರ್ತೀವಿ.
ಲಿಂಗಾಯತರು ಇಡೀ ಕರ್ನಾಟಕದ ದೊಡ್ಡ ಧಾರ್ಮಿಕ ಸಮುದಾಯ. ನಮ್ಮ ಧಾರ್ಮಿಕ ಭಾವನೆಗಳಿಗೆ, ನಮ್ಮ ಧರ್ಮ ಸಂಸ್ಥಾಪಕರಿಗೆ ಧಕ್ಕೆ ಆಗ್ತಾ ಇದೆ ಅಂತ ಹೇಳಿದ್ರಂದ್ರೆ ಗಂಭೀರವಾಗಿ ತೆಗೆದುಕೊಳ್ಳಲೇಬೇಕು.
ಬಸವ ತತ್ವದ ವಿರುದ್ಧವಾಗಿ ಕೆಲಸ ಮಾಡುತ್ತಿರುವ ಯಾವುದೋ ಸಂಘಟನೆಯ ಪ್ರಭಾವಕ್ಕೆ ಒಳಗಾಗಿ ಈ ಚಿತ್ರ ರೂಪಿಸಿದಂತೆ ಕಾಣಬಂದಿದೆ. ಆದರೂ ಅವರು ದುಡ್ ಹಾಕಿ ಖರ್ಚು ಮಾಡಿ ಸಿನೆಮಾ ತೆಗೆದಿದ್ದಾರೆ. ಅವರಿಗೂ ತೊಂದರೆ ಆಗೋದು ಬ್ಯಾಡ.
ನಮಗೆ ತೋರಿಸಿ ಸಂಭಾಷಣೆ, ನಿರೂಪಣೆ ಸರಿಪಡಿಸಿದರೆ, ನಾವೇ ಸಹಕಾರ ಕೊಡ್ತೀವಿ. ಸಿನಿಮಾ ನೋಡಾಕ್ ಲಿಂಗಾಯತರನ್ನ ನಾವೇ ಕಳಿಸ್ತೀವಿ.
ಸರಿ ಪಡಿಸಲಿಲ್ಲ ಅಂದ್ರ ನಿಮ್ಮ ಪಿಕ್ಚರ್ ಹೊರಗ್ ಬರೋಕೆ ಬಿಡೋದಿಲ್ಲ ಅಂತ ಎಚ್ಚರಿಕೆ ಕೊಡಬೇಕ್ರಿ ಅವರಿಗೆ.”
ಅನುರಾಧ ಕುಲಕರ್ಣಿ ನಿರ್ಮಾಪಕತ್ವ ಹಾಗೂ ದಿಲೀಪ ಶರ್ಮಾ ಅವರ ಕಥೆ ಹಾಗೂ ಸಂಭಾಷಣೆ ನಿರ್ದೇಶನದಲ್ಲಿ ಬಂದಿರುವ ಶರಣರ ಶಕ್ತಿ ಅಕ್ಟೋಬರ್ 18 ರಾಜ್ಯಾದ್ಯಂತ ಬಿಡುಗಡೆಯಾಗಲು ತಯಾರಾಗಿದೆ.
ಈ ಸಿನೇಮಾ ಬಿಡುಗಡೆ ಆಗದಂತೆ ನೋಡಿಕೊಳ್ಳಬೇಕು
ಬಸವತತ್ವಕ್ಕೆ ಅಪಚಾರ ಸಲ್ಲದು ಶರಣರ ಚರಿತ್ರೆ ಐತಿಹಾಸಿಕ ಸತ್ಯ ಇದೆಲ್ಲತಿಳಿದು ಸಿನಿಮಾ ಮಾಡಿದರೆ ಒಳ್ಳೆ ಉದ್ದೇಶ ಹೊಂದಿ ಸಮಾಜಕ್ಕೆ ಶರಣರ ಸಂದೇಶ ಮುಟ್ಟಿಸುವರೆಂಬ ಸಂತೋಷ ಎಲ್ಲರಿಗೂ ಸಿಗುತ್ತದೆ ಹೊರತಾಗಿ ಕೆರಳಿಸುವ ದುರುದ್ದೇಶ ಇರಕೂಡದು ಬಿಡುಗಡೆ ಆಗುವ ಮುನ್ನ ನಿರ್ದೇಶಕರು ತಪ್ಪುಗಳನ್ನು ಸರಿಪಡಿಸಲಿ ಎಂದು ಹಾರೈಸುತ್ತೇನೆ
ಈ ಚಲನ ಚಿತ್ರ ತಂಡ ಉದ್ದೇಶಪೂರ್ವಕವಾಗಿ ಈ ಅಸಂಬಂದ್ಧ ಸಂದೇಶಗಳನ್ನು ಸಮಾಜದಲ್ಲಿ ಬಿತ್ತಲು ಹೊರಟಿರುವುದರಿಂದ ನಾವು ನ್ಯಾಯಾಲಯದಿಂದ ಈ ಚಲನಚಿತ್ರಕ್ಕೆ ತಡೆಯಾಜ್ಞೆ ತರುವುದೇ ಅತ್ಯಂತ ಉತ್ತಮ ಮಾರ್ಗ ಶರಣಬಂಧುಗಳೆ.
🙏💞🙏