ವಿಜಯಪುರ
ಸಿಎಂ ಸ್ಥಾನಕ್ಕೆ ಎಂ.ಬಿ. ಪಾಟೀಲರಿಗಿಂತ ಹಿರಿಯರು ಪಕ್ಷದಲ್ಲಿ ಇದ್ದಾರೆ ಎಂದು ಹೇಳಿಕೆ ಕೊಟ್ಟಿದ್ದ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರಿಗೆ ಈಗ ತೀಕ್ಷ್ಣ ಪ್ರತಿಕ್ರಿಯೆ ಬಂದಿದೆ.
ವಿಜಯಪುರದಲ್ಲಿ ರವಿವಾರ ಮಾತನಾಡುತ್ತ ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರು, ನಾನು ಶಿವಾನಂದ ಪಾಟೀಲಗಿಂತ ಸೀನಿಯರ್ ಎಂದು ಮಾರುತ್ತರ ನೀಡಿದ್ದಾರೆ.
‘ನಾನು ಡಿ.ಕೆ. ಶಿವಕುಮಾರ್ ಸತೀಶ ಜಾರಕಿಹೊಳಿ ಪರಮೇಶ್ವರ ಪಕ್ಷದಲ್ಲಿ ಹಿರಿಯರು. ನಾನು ಸತೀಶ ಜಾರಕಿಹೊಳಿ ಅವರಿಗಿಂತ ಹಿರಿಯವ. ನಮಗಿಂತ ಹಿರಿಯರೆಂದರೆ ಮಲ್ಲಿಕಾರ್ಜುನ ಖರ್ಗೆ ಸಿದ್ದರಾಮಯ್ಯ ಮತ್ತು ದೇಶಪಾಂಡೆ,’ ಎಂದರು.
‘ನಾನು ಮುಖ್ಯಮಂತ್ರಿಯಾದರೆ ಜನರಿಗೆ ಒಳ್ಳೆಯದನ್ನೇ ಮಾಡುತ್ತೇನೆ. ನೀರಾವರಿ ಮಂತ್ರಿ ಆಗಿದ್ದಾಗ ಒಳ್ಳೆ ಕೆಲಸ ಮಾಡಿದ್ದೇನೆ. ಆದರೆ ನಾವೆಲ್ಲಾ ಸಿದ್ದರಾಮಯ್ಯ ಪರ ಇದ್ದೇವೆ. ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರಿಗೆ ನ್ಯಾಯ ಸಿಗುವ ವಿಶ್ವಾಸವಿದೆ’ ಎಂದರು.
ಶುಕ್ರವಾರ ಬೆಂಗಳೂರಿನಲ್ಲಿ ನಡೆದ ಸುದ್ದಿ ಘೋಷ್ಠಿಯಲ್ಲಿ ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡಿದರೆ ಎಂ.ಬಿ. ಪಾಟೀಲ ಅವರಿಗೆ ಅವಕಾಶ ಸಿಗುತ್ತದೆಯೇ ಎಂಬ ಪ್ರಶ್ನೆಗೆ ಶಿವಾನಂದ ಪಾಟೀಲರು,”ಮುಖ್ಯಮಂತ್ರಿ ಬದಲಾವಣೆ ವಿಷಯದ ಚರ್ಚೆಯೇ ಅಪ್ರಸ್ತುತ. ಅಂತಹ ಸಮಯ ಎದುರಾದರೆ ಎಂ.ಬಿ. ಪಾಟೀಲ ಅವರಿಗಿಂತ ಹಿರಿಯರು ಕಾಂಗ್ರೆಸ್‌ನಲ್ಲಿ ಇದ್ದಾರೆ,” ಎಂದು ಹೇಳಿದ್ದರು.
ರವಿವಾರ ಮತ್ತೆ ಮಾಧ್ಯಮಗಳ ಜೊತೆ ಮಾತನಾಡಿದ ಶಿವಾನಂದ ಪಾಟೀಲರು, “ನನ್ನ ಹೇಳಿಕೆಯನ್ನು ಮಾಧ್ಯಮಗಳು ವಿವಾದ ಮಾಡಿವೆ,” ಎಂದರು.
“ಎಂ.ಬಿ. ಪಾಟೀಲ ಸಿಎಂ ಆದರೆ ನನ್ನ ಅಭ್ಯಂತರವಿಲ್ಲ. ಈ ನಿಟ್ಟಿನಲ್ಲಿ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಶಾಸಕರು ನಿರ್ಧಾರ ಮಾಡುತ್ತಾರೆ. ಸಿದ್ದರಾಮಯ್ಯ ಇರುವವರೆಗೂ ಅವರೇ ಸಿಎಂ ಆಗಿರುತ್ತಾರೆ ಎಂದು,” ಎಂದು ಹೇಳಿದರು.
ನಾನು ಸುದ್ದಿಗೋಷ್ಟಿ ನಡೆಸಿದ್ದು ನನ್ನ ಇಲಾಖೆಯ ಅಭಿವೃದ್ಧಿ ಕೆಲಸಗಳ ಕುರಿತು ಮಾಹಿತಿ ನೀಡಲು ಮಾತ್ರ. ಅದನ್ನು ಬಿಟ್ಟು ಮಾಧ್ಯಮಗಳು ವಿವಾದವನ್ನೇ ಮಾಡಿದವು ಎಂದು ಹೇಳಿದರು.