ಭಾಲ್ಕಿ :
ವಿಶ್ವಬಸವಧರ್ಮ ಅನುಭವಮಂಟಪ ಬಸವಕಲ್ಯಾಣ ವತಿಯಿಂದ ನವೆಂಬರ್ 28 ಮತ್ತು 29 2026 ರಂದು 47ನೆಯ ಶರಣಕಮ್ಮಟ ಅನುಭವಮಂಟಪ ಉತ್ಸವದ ಪೂರ್ವಭಾವಿ ಸಭೆ ನಡೆಯಿತು.
ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರು ಹಾಗೂ ಪೂಜ್ಯ ಗುರುಬಸವ ಪಟ್ಟದ್ದೇವರು ಸಭೆಯ ಸಾನಿಧ್ಯ ವಹಿಸಿದ್ದರು.
ಸಮಾರಂಭದ ಸಾನಿಧ್ಯ ವಹಿಸಿದ ಪೂಜ್ಯರು ಮಾತನಾಡುತ್ತ, ಅನುಭವಮಂಟಪ ಉತ್ಸವ ರಾಷ್ಟ್ರೀಯ ಉತ್ಸವ ಆಗಬೇಕು. ಕಾರಣ ಶರಣರು ವಚನ ಸಾಹಿತ್ಯ ರಕ್ಷಣೆಗಾಗಿ ತ್ಯಾಗ, ಬಲಿದಾನ ಮಾಡಿದ್ದಾರೆ. ಅವರ ತ್ಯಾಗ, ಬಲಿದಾನದ ಸ್ಮರಣಿಯಲ್ಲಿ ಬಸವಕಲ್ಯಾಣ ಜಗತ್ತಿನ ಅಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗಿ ಬೆಳೆಯಬೇಕು.
ಬಸವಾದಿ ಶರಣರ ಮೌಲ್ಯಗಳು ರಾಷ್ಟ್ರದ ಸಮಗ್ರ ಅಭಿವೃದ್ಧಿಗೆ ದಿಕ್ಕೂಚಿಯಾಗಿದೆ. ಅದಕ್ಕಾಗಿ ಶರಣರ ಮೌಲ್ಯಗಳ ಚಿಂತನೆಯ ವೇದಿಕೆಯಾಗಿ ಅನುಭವಮಂಟಪ ಉತ್ಸವ ರಾಷ್ಟ್ರಮಟ್ಟದ ಉತ್ಸವವಾಗಿ ಬೆಳೆಯುವ ದಿಶೆಯಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಪ್ರಯತ್ನಿಸಬೇಕಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪೂಜ್ಯರು ಉತ್ಸವದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಪಂಚಾಯತ ರಾಜ್ ಸಚಿವರಾದ ಈಶ್ವರ ಖಂಡ್ರೆ ಅವರಿಗೆ ನೇಮಕ ಮಾಡಿದರು. ಹಾಗೂ ಕಾರ್ಯಾಧ್ಯಕ್ಷರಾಗಿ ಬಸವಕಲ್ಯಾಣದ ಶಾಸಕರಾದ ಶರಣು ಸಲಗರ ಅವರಿಗೆ ನೇಮಕ ಮಾಡಿದರು.
ಪೂಜ್ಯ ಶಿವಾನಂದ ಸ್ವಾಮಿಗಳು, ಮಹಾಲಿಂಗ ಸ್ವಾಮಿಗಳು, ಸಿದ್ಧಬಸವ ಸ್ವಾಮಿಗಳು, ಪ್ರಭುಲಿಂಗ ಸ್ವಾಮಿಗಳು, ಬಸವದೇವರು, ಸುಗುಣಾತಾಯಿ, ಹಾಲಮ್ಮತಾಯಿ, ಶ್ರೀಶೈಲ ದೇವರು ಉಪಸ್ಥಿತರಿದ್ದರು.

ಸ್ವಾಗತ ಸಮಿತಿ ಅಧ್ಯಕ್ಷರಾದ ಈಶ್ವರ ಖಂಡ್ರೆ ಅವರು ಶರಣಕಮ್ಮಟ ಅನುಭವಮಂಟಪ ಉತ್ಸವಕ್ಕೆ ಬಹುದೊಡ್ಡ ಇತಿಹಾಸವಿದೆ. ಬಸವಕಲ್ಯಾಣದ ಅಭಿವೃದ್ಧಿಗೆ ತಾಯಿ ಬೇರು ಆಗಿರುವ ಶರಣ ಕಮ್ಮಟ ಪ್ರತಿವರ್ಷ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ.
ಶರಣಕಮ್ಮಟ ಆರಂಭಿಸಿದವರು ಪೂಜ್ಯ ಡಾ. ಚನ್ನಬಸವ ಪಟ್ಟದ್ದೇವರು. ಅವರಿಗೆ ಸಹಕಾರಿಯಾಗಿ ನಿಂತವರು ಡಾ. ಭೀಮಣ್ಣ ಖಂಡ್ರೆ ಅವರು. ಪೂಜ್ಯರ ಸಂಕಲ್ಪದಂತೆ ಶರಣಕಮ್ಮಟದಿಂದಲೇ ಬಸವಕಲ್ಯಾಣದ ಅಭಿವೃದ್ಧಿ ಪ್ರಾಧಿಕಾರ, ನೂತನ ಅನುಭವಮಂಟಪ, ಶರಣರ ಸ್ಮಾರಕಗಳ ರಕ್ಷಣೆ, ಪರುಷ ಕಟ್ಟೆಯ ಅಭಿವೃದ್ಧಿ ಮುಂತಾದ ಕಾರ್ಯಗಳು ನಡೆಯುತ್ತಿವೆ.
ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರ ಅವಿರತ ಪ್ರಯತ್ನದಿಂದ ನೂತನ ಅನುಭವಮಂಟಪ ಸಾಕಾರವಾಗುತ್ತಿರುವುದು ನಮ್ಮೆಲ್ಲರಿಗೆ ಸಂತೋಷ ತಂದಿದೆ. ಬಸವಕಲ್ಯಾಣ ಸಮಗ್ರ ಅಭಿವೃದ್ಧಿಯ ಯೋಜನೆ ರೂಪಿಸಲಾಗುತ್ತಿದೆ. ಅನುಭವಮಂಟಪ ಕಟ್ಟಡಕ್ಕೆ ಹಣದ ಕೊರತೆ ಇಲ್ಲ. 2027 ರ ಬಸವಜಯಂತಿಯವರೆಗೆ ನೂತನ ಅನುಭವಮಂಟಪದ ಪೂರ್ತಿ ಕಾಮಗಾರಿ ಮುಗಿಸಿ ಲೋಕಾರ್ಪಣೆಗೊಳಿಸುವ ಉದ್ದೇಶ ನಮ್ಮದಾಗಿದೆ.
ಇಂದಿನ ದಿನಮಾನಗಳ ಸಮಸ್ಯೆಗಳು ಪರಿಹರಿಸುವ ದಿಶೆಯಲ್ಲಿ ಅನುಭವಮಂಟಪ ಉತ್ಸವದಲ್ಲಿ ಚರ್ಚೆ, ಸಂವಾದ ನಡೆಯಲೆಂದು ಆಶಿಸುತ್ತೇವೆ ಎಂದು ನುಡಿದರು.
ಅನುಭವಮಂಟಪ ಉತ್ಸವದ ಯಶಸ್ವಿಗಾಗಿ ಬಸವರಾಜ ಧನ್ನೂರು, ನಿರ್ಮಲಾ ಶಿವಣಕರ, ಕುಪೇಂದ್ರ ಪಾಟೀಲ, ಡಾ. ಸಂಗೀತಾ ಮಂಠಾಳೆ, ಸಿದ್ಧಯ್ಯ ಕಾವಡಿಮಠ, ವಿಶ್ವನಾಥಪ್ಪ ಬಿರಾದಾರ, ರವೀಂದ್ರ ಕೋಳಕುರ, ಸುಭಾಷ ನಾಗರಾಳೆ ಮುಂತಾದವರು ಮೌಲಿಕ ಸಲಹೆ ಸೂಚನೆಗಳು ನೀಡಿದರು.
ಬಾಬು ವಾಲಿ ಸ್ವಾಗತಿಸಿದರು. ರಾಜು ಜುಬರೆ ನಿರೂಪಿಸಿದರು. ದೀಪಕ ಠಮಕೆ
ವಂದಿಸಿದರು.
