ಶರಣ ದರ್ಶನ ಪ್ರವಚನ
ಚಿಂಚೋಳಿ:
12ನೇ ಶತಮಾನದ ಬಸವಾದಿ ಶರಣೆ ಅಕ್ಕಮಹಾದೇವಿ ಅವರನ್ನು ಶರಣ ಚಳುವಳಿಯ ಪ್ರಮುಖರಾಗಿ, ಸ್ವಾಭಿಮಾನದ ಪ್ರತೀಕವಾಗಿ, ಸ್ತ್ರೀವಾದಿ ಚಳವಳಿಯ ನಿಜವಾದ ಪ್ರತಿಪಾದಕಿಯಾಗಿ, ಅಕ್ಕರೆಯ ಅಕ್ಕನಾಗಿ, ಹೀಗೆ ಹಲವು ರೀತಿ ಗುರುತಿಸಬಹುದಾಗಿದೆ ಎಂದು ಪ್ರಾಂಶುಪಾಲರಾದ ಡಾ. ಕುಸುಮಾ ಪಿ. ಬೋವಿ ಹೇಳಿದರು.
ಶ್ರಾವಣ ಮಾಸದ ನಿಮಿತ್ಯ ಚಂದಾಪೂರ ನೀಲಾಂಬಿಕಾ ಬಸವತತ್ವ ಸೇವಾ ಟ್ರಸ್ಟ್ ವತಿಯಿಂದ ನಡೆದ ಶರಣ ದರ್ಶನ ಪ್ರವಚನದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಶರಣ ಚಳುವಳಿಯ ಮಹಿಳಾ ವಚನಗಾರ್ತಿ ಅಕ್ಕಮಹಾದೇವಿ ಕನ್ನಡದ ಪ್ರಥಮ ಮಹಿಳಾ ಕವಿಯತ್ರಿಯಾಗಿದ್ದಾರೆ.
ಚಿಕ್ಕವಯಸ್ಸಿನಲ್ಲೇ ಸಕಲ ಸುಖವನ್ನು ತ್ಯಜಿಸಿದ ಅಕ್ಕ, ಎದುರಿಸಿದ ಪರೀಕ್ಷೆಗಳು ಬಹಳಷ್ಟು. ಸಾಕ್ಷಾತ್ ಮಲ್ಲಿಕಾರ್ಜುನನನ್ನು ಪತಿದೇವ ಎಂದು ಸ್ವೀಕರಿಸಿ, ಲೌಕಿಕ ಜಗತ್ತನ್ನು ಧಿಕ್ಕರಿಸಿ, ಕೇಶಾಂಬರೆಯಾಗಿ ನಡೆದ ಅಕ್ಕ ಜಗತ್ತಿಗೆ ಮಾದರಿಯಾಗಿದ್ದಾಳೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪ್ರಗತಿಪರ ಚಿಂತಕ ಗೌತಮ ಬೊಮ್ಮನಳ್ಳಿ ಮಾತನಾಡಿ, ಬಸವಣ್ಣನವರು ಇಡೀ ವಿಶ್ವಕ್ಕೆ ಮಾದರಿಯಾದ ಸಮಾಜ ಸುಧಾರಕರಾಗಿದ್ದಾರೆ. ಧ್ವನಿ ಇಲ್ಲದ ಶೋಷಿತರಿಗೆ, ದೀನ ದಲಿತರಿಗೆ ಧ್ವನಿಯಾದವರು ಬಸವಣ್ಣ. ಅವರ ವಿಚಾರಗಳು ಜನಸಾಮಾನ್ಯರಿಗೆ ಮುಟ್ಟಿಸುವ ಕೆಲಸ ಆಗಬೇಕೆಂದರು.
ಜಗನ್ನಾಥರಡ್ಡಿ ಚಟ್ನಳ್ಳಿ ಮಾತನಾಡಿದರು. ಶಿವ ಸ್ವಾಮಿ ಚಂದಾಪೂರ ಉಪಸ್ಥಿತರಿದ್ದರು. ನೀಲಾಂಬಿಕೆ ಟ್ತಸ್ಟ್ ನ ಜ್ಯೋತಿ ಬೊಮ್ಮಾ ಅಧ್ಯಕ್ಷತೆ ವಹಿಸಿದ್ದರು. ಸುನಿತಾ ಪಾಲಾಮೂರ ಬಸವ ಪೂಜೆ ನೆರವೇರಿಸಿದರು. ಡಾ. ಮಲ್ಲಿಕಾರ್ಜುನ ಪಾಲಾಮೂರ ಸ್ವಾಗತಿಸಿದರು. ಪ್ರೊ. ಕಾಶಿನಾಥ ಹುಣಜೆ ನಿರೂಪಿಸಿದರು. ಸುಮಂಗಲಾ ಹುಣಜೆ ಶರಣು ಸಮರ್ಪಿಸಿದರು.
