ಸೂಫಿ ಶರಣ ಕಾಡಸಿದ್ದೇಶ್ವರ ಪರಂಪರೆಗೆ ವಕ್ಕರಿಸಿರುವ ಕೋಮುವಾದಿ ಸ್ವಾಮಿ

ಕೋಮುವಾದ ವೈರಸ್ಸಿಗೆ ಪ್ರಜ್ಞಾವಂತ ಲಿಂಗಾಯತರು ಲಸಿಕೆ ಹಾಕಲೇ ಬೇಕಿದೆ

ಗಂಗಾವತಿ

14-15 ನೇ ಶತಮಾನದ ಕಾಡಸಿದ್ದೇಶ್ವರ ಪರಂಪರೆ ತನ್ನದೆ ಆದ ಒಂದು ಗೌರವ ಗಾಂಭೀರ್ಯತೆ ಇದೆ. ಕಾಡುಸಿದ್ದೇಶ್ವರ ಪರಂಪರೆ ತುಂಬಾ ಧೀರ್ಘವಾದದ್ದು, ಇದೆ ಹೆಸರಿನ 12 ಜನ ಕಾಡುಸಿದ್ದರು ಬಂದು ಹೋಗಿದ್ದಾರೆ.

ಇದೆ ಪರಂಪರೆಯಲ್ಲಿ ಒಬ್ಬರಾದ ಕಾಡಸಿದ್ದೇಶ್ವರರು ‘ ಕಾಡನೊಳಗಾದ ಶಂಕರಪ್ರೀಯ ಚನ್ನಕದಂಬ ಲಿಂಗ ನಿರ್ಮಾಯ ಪ್ರಭುವೆ ‘ ಎಂಬ ಅಂಕಿತನಾಮದಿಂದ 504 ವಚನಗಳನ್ನು ರಚಿಸಿದ್ದಾರೆ. ಆ ಕಾಲಘಟ್ಟದ ಎಲ್ಲಾ ಶರಣರಿಗಿಂತ ವಿಭಿನ್ನವಾಗಿ ವಚನಗಳನ್ನು ರಚಿಸಿದವರು ಇವರು.

ಸೂಫಿ ಶರಣ ಪರಂಪರೆ

ಕರ್ನಾಟಕದ ನೆಲ ಒಂದು ಅದ್ಬುತ ಭಾವೈಕ್ಯತೆಯ ತವರೂರು. ಇಲ್ಲಿ ಹೆಜ್ಜೆ ಹೆಜ್ಜೆಗೂ ವಿಭಿನ್ನತೆ , ವೈವಿಧ್ಯತೆಯ ಸಾಂಸ್ಕೃತಿಕ ತವರು ಇದು. ಅಂತಹ ಒಂದು ನೆಲದಲ್ಲಿ ಸೂಫಿಯ ಟಚ್ ನೊಂದಿಗೆ ಭಾವೈಕ್ಯತೆಯ ಬೆಸುಗೆ ಸಮಾಜಕ್ಕೆ ಕೊಟ್ಟವರು ಕಾಡಸಿದ್ದೇಶ್ವರರು. ಸಮಾಜದಲ್ಲಿ ಶ್ರೇಷ್ಠ, ಕನಿಷ್ಠ , ಮೇಲು ಕೀಳಿನ ಭಾವ, ಜಾತಿ ಜಾತಿಗಳ ಮಧ್ಯೆ , ಧರ್ಮ ಧರ್ಮಗಳ ಮಧ್ಯೆ ಕೋಮುವಾದದ ವಿಷ ಬಿತ್ತಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದವರಿಗೆ ಬೆಂಕಿಯ ಚಂಡಿನಂತೆ ಇದ್ದವರು ಕಾಡಸಿದ್ದೇಶ್ವರರು.

ಕಾಡಸಿದ್ದೇಶ್ವರರು ಉರ್ದು ಮಿಶ್ರಣದೊಂದಿಗೆ ವಚನ ರಚಿಸುವುದು ಅವರದೊಂದು ವಿಶೇಷತೆ. ಕರ್ನಾಟಕದ ಸಂಸ್ಕೃತಿಯೊಳಗೆ ಸೂಫಿಜಂ ಒಡನಾಟ ಸಹಜ ಆದರೂ ಇದೊಂದು ವಿಶೇಷವು ಹೌದು. ಅವರದೊಂದು ವಚನ :

“ತೀಸಹಿದರು ಅಕರ ಬಾಚ್ಯಾಕು ಗರ್ಮೆ ಆಗಮೆ ಜಲ್ಕು
ಸಾಹೇಬಕು ಗರ್ಮೇ ಕರಕರ ಸುಂತಿ ದಿಯಾತೋ
ವೋ ಜಾಕರ ಪಾಚ್ಛಾಮೆ ಮರಗಯಾ ಕಾಡನೊಳಗಾದ ಶಂಕರಪ್ರೀಯ ಚನ್ನಕದಂಬ ಲಿಂಗನಿರ್ಮಾಯ ಪ್ರಭುವೆ “

ಈ ವಚನದ ಅರ್ಥ ಇಷ್ಟೆ ಒಬ್ಬ ಸಾಮಾನ್ಯನು ಗುರಿವಿನ ದೀಕ್ಷೆಯಿಂದ ಶರಣನಾಗುತ್ತಾನೆ ಎನ್ನುವ ತಾತ್ಪರ್ಯ ಇದು.

ಹೀಗೆ ಉರ್ದು ಮಿಶ್ರಿತ ಕನ್ನಡದ ವಚನಗಳ ರಚನೆ ಈ ನೆಲದಲ್ಲಿ ಹಿಂದೂ ಮುಸ್ಲಿಂ ಎಂಬ ಭೇದವ ಕಳೆದು ನಾವೆಲ್ಲರೂ ಮನುಜರು ಎನ್ನುವ ವಿಶ್ವಮಾನವ ಪ್ರಜ್ಞೆ ಸಾರಿದಂತಿದೆ.

ಉರ್ದು ಮಿಶ್ರಿತ ಕನ್ನಡ ವಚನಗಳು

ಕಾಡಸಿದ್ದೇಶ್ವರರು ಮೂಲಭೂತವಾದಿತ್ವ ಕಂಡಲ್ಲೆಲ್ಲಾ ಅದನ್ನು ಖಂಡಿಸಿದ್ದಾರೆ. ಮೂಲಭೂತವಾದಿತ್ವವು ಜನರಲ್ಲಿ ದ್ವೇಷದ ಬೀಜ ಬಿತ್ತುತ್ತೆ ಎನ್ನುವುದು ಮನಗೊಂಡು ಆ ಮೂಲಭೂತವಾದಕ್ಕೆ ಕೊಡಲಿ ಪೆಟ್ಟು ಕೊಟ್ಟವರು ಕಾಡಸಿದ್ದೇಶ್ವರರು.

” ವೇದನೋದುವವರೆಲ್ಲ ಬಂಜೆಯ ಮಕ್ಕಳು.
ಶಾಸ್ತ್ರವನೋದುವವರೆಲ್ಲ ಸೂಳೆಯ ಮಕ್ಕಳು.
ಪುರಾಣವ ಹೇಳುವವರೆಲ್ಲಾ ಕುಂಟಲಗಿತ್ತಿಯ ಮಕ್ಕಳು.
ಆಗಮವ ನೋಡುವವರೆಲ್ಲ ಹಾರುತಿಯ ಮಕ್ಕಳು.
ತರ್ಕತಂತ್ರಗಳ ನೋಡಿ ಹೇಳುವವರೆಲ್ಲ ವೈದ್ಯಗಾರತಿಯ ಮಕ್ಕಳು.
ಇಂತೀ ವೇದಾಗಮ ಶಾಸ್ತ್ರ ಪುರಾಣ ತರ್ಕತಂತ್ರಂಗಳೆಲ್ಲ ಕೇಳಿ ಆಚರಿಸುವವರೆಲ್ಲ ಡೊಂಬಜಾತಕಾರ್ತಿಯ ಮಕ್ಕಳು.
ಇಂತಪ್ಪ ಜಡಮತಿ ವೃತಭೃಷ್ಟ ಮೂಳಹೊಲೆಯರಿಗೆ ಭವಬಂಧನ ಎಂದೂ ಹಿಂಗದು, ಮುಕ್ತಿದೋರದು.

ಇಂತಿವರ ಪುಣ್ಯಕ್ಕೆ ಅಧಿಕಾರಿಗಳಾದ ಬ್ರಹ್ಮ ವಿಷ್ಣು ರುದ್ರ ಮೊದಲಾದ ದೇವತೆಗಳಿಗೆ ಮುನ್ನವೇ ಭವಹಿಂಗದು, ಮುಕ್ತಿದೋರದು ಎಂದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚೆನ್ನಕದಂಬ ಲಿಂಗ ನಿರ್ಮಾಯಪ್ರಭುವೆ “
ವ.ಸಂ: 263.

ಈ ವಚನದಲ್ಲಿ ಮೂಲಭೂತವಾದ ಕಾರಣವಾದ ಇಡೀ ಆ ಸನಾತನದ ಹಿಂದುತ್ವ ಹಿಂಡಿ ಹಿಪ್ಪಿ ಮಾಡಿದಂತಿದೆ. ಶೋಷಣೆಗೆ ಮೂಲವಾದ ಬ್ರಹ್ಮ ವಿಷ್ಣು ರುದ್ರರನ್ನು ಪರಿ ಪರಿಯಾಗಿ ಕಾಡಿದಂತಿದೆ ಹೀಗೆ ಕಾಡಸಿದ್ದೇಶ್ವರರು ಇಡಿ ಸನಾತನದ ಆ ಮೂಲಕ್ಕೆ ಕೊಡಲಿ ಹಾಕಿದ್ದಾರೆ.”

ದ್ವಾದಶಮಾಸ, ಚತುದರ್ಶಿ, ದ್ವಾದಶಿ, ಅಮವಾಸಿಯೊಳಗೆ
ಮಾಘಮಾಸದ ಚತುರ್ದಶಿ,
ಶಿವರಾತ್ರಿ ಅಮವಾಸ್ಯೆ ಫಲಪುಣ್ಯ ಮಹಾದೊಡ್ಡದು ಎಂದು
ಸ್ಕಂದಪುರಾಣ ಬ್ರಹ್ಮೋತ್ತರಕಾಂಡ, ಶ್ರುತಿವಾಕ್ಯಗಳಿಂದ ಕೇಳಿ,
….

ಇಂತಪ್ಪ ಅವಿಚಾರಿಗಳಾದ ಅಜ್ಞಾನ ಜೀವಾತ್ಮರಿಗೆ
ವೀರಮಾಹೇಶ್ವರರೆಂದಡೆ ಪರಶಿವಯೋಗಿಗಳಾದ ಶಿವಶರಣರು ನಗುವರಯ್ಯ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ.

ಹೀಗೆ ವಿಮರ್ಶಾತ್ಮಕವಾಗಿ ಸನಾತನದ ಗುಟ್ಟನ್ನು ಬಯಲಿಗೆಳೆದವರು ಕಾಡಸಿದ್ದೇಶ್ವರರು.

ಇವರು ಕೇವಲ ಹಿಂದೂ ಧರ್ಮದ ಮೂಲಭೂತವನ್ನು ಖಂಡಿಸಲಿಲ್ಲ, ಇಸ್ಲಾಂದೊಳಗಿನ ಮೂಲಭೂತವನ್ನು ಖಂಡಿಸಿದ್ದಾರೆ .

“ಸೈಹಿದರ ಕೊಟ್ಟ ಖುರಾನವ ಮುಂದಿಟ್ಟು ಅರ್ಚಿಸಿ
ನಮಾಜು ಮಾಡುವರು
ಮಾಟವಳಿದು ಕೂಡನಾಡು ಶಬ್ದವಡಗಿ
ಬಯಲು ಖುದಾನಾಗಿರಬಲ್ಲಡೆ ಸಹಿದರೆಂಬೆ ಕಾಡಿನೊಳಗಾದ ಶಂಕರ ಪ್ರಿಯ ಚನ್ನಕದಂಬ ಲಿಂಗನಿರ್ಮಾಯ ಪ್ರಭುವೆ “

ಈ ವಚನದಲ್ಲಿ ತೋರಿಕೆ ಆಚರಣೆ ಬೇಡ ಬಯಲು ಖುದಾ ಆಗಿರಬೇಕು ಎಂಬ ಬಯಲು ತತ್ವವನ್ನು ಅದ್ಬುತವಾಗಿ ತಿಳಿಸಿದ್ದಾರೆ.

ಭಾವೈಕ್ಯತೆಯ ಗುರು

ಕಾಡಸಿದ್ದೇಶ್ವರ ಎಷ್ಟು ಭಾವೈಕ್ಯತೆಯ ಗುರುಗಳು ಆಗಿದ್ದರು ಎಂದರೆ ಕರ್ನಾಟಕದ ಅನೇಕ ಕಡೆ ಇವರ ಗದ್ದುಗೆಗಳು ಸಿಗುತ್ತವೆ. ಅವರು ಭಾವೈಕ್ಯತೆಯ ಗಣಿಯಾಗಿದ್ದರು. ಕಾಡಸಿದ್ದೇಶ್ವರ ಹೆಸರನ್ನು ನೆನಪಿಸುವಂತೆ ಸೂಫಿಗಳಲ್ಲಿ ( ಮುಸ್ಲಿಂರಲ್ಲಿ ) ಜಂಗ್ಲಿ ಸಾಹೇಬ್ ಎನ್ನುವ ಹೆಸರುಗಳು ಇಂದಿಗೂ ಜೀವಂತ ಇವೆ.

ಕಾಡಸಿದ್ದೇಶ್ವರರು ಸಿದ್ದಗಿರಿಗೆ ಹೋದಾಗ ಅಲ್ಲಿಯ ಮಿರ್ಜಿ ಮೀರಾಸಾಹೇಬರ ಜೊತೆಗಿನ ಅವರ ಗಾಢವಾದ ಸ್ನೇಹ ಅವರನ್ನು ಸೂಫಿ ಅನುಭಾವದ ಕಡೆ ಮನಸ್ಸಾಗುವಂತೆ ಮಾಡಿತು.

ಇಂತಹ ಒಂದು ಅದ್ಬುತವಾದ ಭಾವೈಕ್ಯತೆ ಪರಂಪರೆಯ ಮಠಕ್ಕೆ ಇಂದು ಬಂದು ಹೊಕ್ಕಿರುವ ಕೋಮುವಾದದ ಸ್ವಾಮಿಗೆ ಇವು ಗೊತ್ತಿಲ್ಲ ಅಂತೇನೂ ಇಲ್ಲ, ಆದರೆ ಸ್ವಾರ್ಥಕ್ಕಾಗಿ ಇಡಿ ಆ ಮಠದ ಪರಂಪರೆಗೆ ಘಾತಗೊಳಿಸಿದರು.

ಒಂದು ಅದ್ಬುತವಾದ ಭಾವೈಕ್ಯತೆ ಪರಂಪರೆಯ ಮಠಕ್ಕೆ ಇಂದು ಬಂದು ಹೊಕ್ಕಿರುವ ಕೋಮುವಾದದ ಸ್ವಾಮಿಗೆ ಇವು ಗೊತ್ತಿಲ್ಲ ಅಂತೇನೂ ಇಲ್ಲ, ಆದರೆ ಸ್ವಾರ್ಥಕ್ಕಾಗಿ ಇಡಿ ಆ ಮಠದ ಪರಂಪರೆಗೆ ಘಾತಗೊಳಿಸಿದರು.

” ಇಂತಪ್ಪ ವಿರಕ್ತನ ನಿಲುಕಡೆಯ
ದೇವ ದಾನವ ಮಾನವರು ಮೊದಲಾದ ಸಕಲಜೀವಾತ್ಮರು ತಿಳಿಯದೆ ವೇಷ ಧರಿಸಿ , ಗ್ರಾಸಕ್ಕೆ ತಿರುಗುವ ಹೇಸಿಗಳ್ಳರ ನಾನೇಂಬೇನಯ್ಯಾ?
ಇಂತಪ್ಪ ವಿರಕ್ತನ ನಿಲುಕಡೆಯ ಬಲ್ಲರು ಆರೆಂದಡೆ ಸುಜ್ಞಾನೋದಯವಾಗಿ ಶ್ರೀಗುರುಕಾರುಣ್ಯವ ಪಡೆದು ಲಿಂಗಾಂಗಸಂಬಂಧಿಗಳಾಗಿದ ವೀರಮಾಹೇಶ್ವರರಾಗಲಿ ಅಥವಾ ಭಕ್ತಗಣಂಗಳಾಗಲಿ ಅಲ್ಲದೆ ವಿಪ್ರಮೊದಲು ಶ್ವಪಚಕಡೆಯಾಗಿ ಆವ ಜಾತಿಯಾದಡೇನು ಸುಜ್ಞಾನೋದಯವಾಗಿ ಜ್ಞಾನಕಲಾತ್ಮರು ಬಲ್ಲರಲ್ಲದೆ ಮಿಕ್ಕಿನ ಭಿನ್ನಭಾವಿಗಳಾದ
ವೇದಾಂತಿಗಳು , ಸಿದ್ದಾಂತಿ, ಯೋಗಿಮಾರ್ಗಿಗಳು ಮೊದಲಾದ ಕರ್ಮಕಾಂಡಿಗಳಾದ ವೇಷಧಾರಿಗಳೆತ್ತ ಬಲ್ಲರಯ್ಯಾ
ಕಾಡಿನೊಳಗಾದ ಶಂಕರಪ್ರಿಯ ಚೆನ್ನಕದಂಬ ಲಿಂಗ ನಿರ್ಮಾಯಪ್ರಭುವೆ.”

ಪಾಖಂಡಿ ಶ್ರೀಗಳು

ಕಾಡಸಿದ್ದೇಶ್ವರ ಈ ಒಂದು ವಚನ ಸಾಕು ಇಂದಿನ ಕನ್ನೇರಿ ಸ್ವಾಮಿಗಳ ಪಾಖಂಡಿತನ ಅರಿಯಲು. ಸಕಲ ಜೀವಾತ್ಮರಿಗೆ ಲೇಸ ಬಯಸಿದ ಆ ಕಾಡಸಿದ್ದೇಶ್ವರರು ಎಲ್ಲಿ? ಇಂದು ಮನುಷ್ಯ ಮನುಷ್ಯರಲ್ಲಿ ಭೇದ ಹುಟ್ಟಿ ತನ್ನ ಪ್ರಚಾರ ಗಿಟ್ಟಿಸಿಕೊಳ್ಳುವ ಈ ಪಾಖಂಡಿ ಕನ್ನೇರಿ ಸ್ವಾಮಿಗಳು ಎಲ್ಲಿ?

15ನೇ ಶತಮಾನದ ಕಾಡಸಿದ್ದೇಶ್ವರರು ಶರಣತತ್ವದೊಂದಿಗೆ ಸೂಫಿ ತತ್ವವನ್ನು ಬೆಳೆಸಿದರೆ 19 ನೇ ಶತಮಾನದ ಗುರುಪೀರ ಖಾದ್ರಿ ಸೂಫಿಯೊಂದಿಗೆ ಶರಣ ತತ್ವ, ಬಸವ ತತ್ವವನ್ನು ಸಮಾಜಕ್ಕೆ ಸಾರಿದರು.

ಇಂತಹ ಭಾವೈಕ್ಯತೆಯ ನೆಲದಲ್ಲಿ ಕೋಮುವಾದ ಹಾವುಗಳು ವಿಷ ಬೀಜ ಬಿತ್ತಿ ಸಮಾಜದ ಸಾಮರಸ್ಯವನ್ನು ಹಾಳು ಮಾಡುತ್ತಿವೆ. ಇಂತಹ ಸಂದರ್ಭದಲ್ಲಿ ಪ್ರಜ್ಞಾವಂತ ಮುಸ್ಲಿಂರು ಮತ್ತು ಪ್ರಜ್ಞಾವಂತ ಲಿಂಗಾಯತರು ಒಂದಾಗುವ ಜರೂರಿ ಇದೆ. ಕೋಮುವಾದದ ವಿಷಕ್ಕೆ ಭಾವೈಕ್ಯತೆಯ ಏಂಟಿಡೋಟ್ ನೀಡುವ ಸಂದಿಗ್ಧ ಕಾಲಘಟ್ಟದಲ್ಲಿ ನಾವೆಲ್ಲರೂ ಇದ್ದೇವೆ. ಕೋಮುವಾದದ ವೈರಸ್ ಗೆ ಭಾವೈಕ್ಯತೆಯ ಲಸಿಕೆ ಹಾಕಲೆ ಬೇಕಿದೆ.

Share This Article
4 Comments
  • ಸಮಾಜದ ಸಾಮರಸ್ಯ ಮತ್ತು ಭಾವೈಕ್ಯ ಹಾಳು ಮಾಡುವ ಅವಿವೇಕಿ ಕನ್ನೇರಿಯನ್ನು ಪೀಠದಿಂದ ಇಳಿಸಬೇಕು ಅವರು ಮಾಡುತ್ತಿರುವದು ಖಂಡನೀಯ

  • ಓಂ ಶ್ರೀ ಗುರು ಬಸವಲಿಂಗಾಯನಮಃ
    ತುಂಬಾ ನೋವಿನ ಸಂಗತಿ ,
    ಸಮಾಜದ ಸುಧಾರಕರೆಂದು ಭಕ್ತರೆಲ್ಲರೂ ಇವರನ್ನು ಪೀಠದ ಮೇಲೆ ಕುಳ್ಳಿಸಿರಿದೆ ತಪ್ಪು ,
    ಇವರು ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ..ಇಂಥವರಿಂದಲೇ ಸಮಾಜದಲ್ಲಿ ಒಡಕು ಹುಟ್ಟವದು …

  • ಓಂ ಶ್ರೀ ಗುರು ಬಸವಲಿಂಗಾಯನಮಃ
    ತುಂಬಾ ನೋವಿನ ಸಂಗತಿ ,
    ಧರ್ಮ ಸುಧಾರಕರೆಂದು ಭಕ್ತರೆಲ್ಲರೂ ಇವರನ್ನು ಪೀಠದ ಮೇಲೆ ಕುಳ್ಳಿಸಿರಿದೆ ತಪ್ಪು ,
    ಇವರು ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ..ಇಂಥವರಿಂದಲೇ ಸಮಾಜದಲ್ಲಿ ಒಡಕು ಹುಟ್ಟವದು …

    • ಇಂತಹ ಅದ್ಭುತ ಪರಂಪರೆ ಇರುವ ಮಠದ ಐತಿಹಾಸಿಕ ಪರಿಚಯ ಮತ್ತು ಅಲ್ಲಿಯ ಮುಂಚಿನ ಮ್ತಾಧೀಶರುಗಳ ಮೇರು ವ್ಯಕ್ತಿತ್ವದ ವಿವರಗಳನ್ನು ಒಡಗಿಸಿದ್ದಕ್ಕೆ ಧನ್ಯವಾದಗಳು. ಇಂತಹ ಕೋಮುವಾದಿ ಸಿದ್ಧಾಂತಕ್ಕೆ ಒಲವು ತೋರಿಸುತ್ತಾ ಇಡೀ ಮಠದ ಮತ್ತು ಭಕ್ತರ ಮನಸ್ಸಿನಲ್ಲಿ ಮುಸ್ಲಿಮ್ ವಿರೋಧೀ ಭಾವನೆಗಳನ್ನು ಬಿತ್ತುತ್ತಿರುವ ಸ್ವಾಮೀಜಿಗೆ ಹೇಗೆ ಬುದ್ಧಿ ಕಲಿಸುವುದು ಅನ್ನುವುದನ್ನು ಎಲ್ಲಾ ಬಸವಪ್ರಣೀತ ಲಿಂಗಾಯತ ಧರ್ಮೀಯರೂ ಮತ್ತು ಮಠಾಧ್ವೇಶರುಗಳೂ ಯೋಚಿಸಿ ಕಾರ್ಯಪ್ರವೃತ್ತರಾಗಬೇಕು.

Leave a Reply

Your email address will not be published. Required fields are marked *