ತಲೆತಿರುಕರ ಬಗ್ಗೆ ಮಾತನಾಡುವುದು ಹೇಸಿಗೆ ಮೇಲೆ ಕಲ್ಲು ಒಗೆದಂತೆ: ಸಾಣೇಹಳ್ಳಿ ಸ್ವಾಮೀಜಿ

ಸಾಣೇಹಳ್ಳಿ

ಕೆಲವರು ಭ್ರಮಾದೀನರಿರುತ್ತಾರೆ. ದೊಡ್ಡವರನ್ನು ಕೆಣಕಿದರೆ ತಮ್ಮ ಬೇಳೆ ಬೇಯುತ್ತದೆ ಎನ್ನುವ ಹುಚ್ಚು ಕಲ್ಪನೆ ಅವರದು. ಆ ವರ್ಗಕ್ಕೆ ಸೇರಿದ ತಲೆತಿರುಕರ ಬಗ್ಗೆ ಬರೆಯುವುದು, ಮಾತನಾಡುವುದು ಹೇಸಿಗೆ ಮೇಲೆ ಕಲ್ಲು ಒಗೆದಂತೆ.

ಬಸವಣ್ಣನವರ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಮುಂದಾದವರು ತಾವೇ ಮಸಿ ಬಳಿಸಿಕೊಳ್ಳುತ್ತಾರೆ. ಇಂಥವರ ಬಗ್ಗೆ ನಾವು ಈ ಹಿಂದೆ ಮಾತನಾಡಿದ್ದೇವೆ, ಬರೆದಿದ್ದೇವೆ. ಹೀಗೆ ಮಾಡುವುದರಿಂದ ತಾವು ಮತ್ತಷ್ಟು ದೊಡ್ಡವರಾಗುತ್ತೇವೆ ಎನ್ನುವ ದಡ್ಡರಿಗೆ ಬೆಲೆ ಕೊಡದೆ ಉದಾಸೀನ ಮಾಡುವುದೇ ಕ್ಷೇಮ.

ಬಸವಾದಿ ಶರಣರು ಐತಿಹಾಸಿಕ, ನೈಜ ಧಾರ್ಮಿಕ, ಸಾಮಾಜಿಕ ಕಳಕಳಿಯುಳ್ಳ ಅನುಭಾವಿಗಳು. ಅವರ ತತ್ವಾದರ್ಶಗಳನ್ನು ಅರಿತು, ಆಚರಿಸುವ, ಪ್ರಚಾರ, ಪ್ರಸಾರ ಮಾಡುವ ಕಾಯಕ ಈಗ ತುರ್ತಾಗಿ ನಡೆಯಬೇಕಿದೆ.

ಕೆಲವರನ್ನು ನೇರವಾಗಿ ವಿರೋಧ ಮಾಡುತ್ತ ದೊಡ್ಡವರನ್ನಾಗಿ ಮಾಡುವ ಬದಲು ಬಸವಾದಿ ಶರಣರ ಮೌಲ್ಯಗಳು ಹಾಗೂ ವಚನಗಳ ಅಸ್ಮಿತೆ ಮತ್ತು ಶಕ್ತಿಯ ಕುರಿತು ಹೆಚ್ಚು ಮಾತನಾಡುತ್ತ ಹೋಗುವುದು ಒಳಿತು.

ಎಲ್ಲ ಕ್ಷುಲ್ಲಕ ಅಭಿಪ್ರಾಯಗಳಿಗೆ ಕಲ್ಲು ಎಸೆಯುತ್ತ ನಿಂತಲ್ಲೇ ನಿಲ್ಲದೇ ಬಸವ ತತ್ವದ ಜ್ಯೋತಿ ಹಿಡಿದುಕೊಂಡು ಸಮಾಜಮುಖಿಯಾಗಿ ಸಾಗುವುದು ಮಠಗಳ ಮತ್ತು ಸ್ವಾಮಿಗಳ ಗುರಿಯಾಗಬೇಕು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU

Share This Article
2 Comments
  • *✍️ ಉದಾಸೀನತೆಯ ಹೆಸರಿನಲ್ಲಿ ಧರ್ಮಗುರುವಿನ ಅಪಮಾನವನ್ನು ಸಹಿಸಬೇಕೇ???*

    ಕೆಸರಿಗೆ ಕಲ್ಲು ಎಸೆದರೆ ನಮಗೇ ಸಿಡಿಯುತ್ತದೆ ಎಂಬುದು ನಿಜ; ಆದರೆ ಆ ಕೆಸರು ನಮ್ಮ ಮನೆಯ ಅಂಗಳಕ್ಕೇ ಬಂದು ಬಿದ್ದಾಗಲೂ ‘ಸಿಡಿಯುತ್ತದೆ’ ಎಂದು ಸುಮ್ಮನೆ ಕುಳಿತರೆ ಇಡೀ ಮನೆಯೇ ಗಬ್ಬೆದ್ದು ನಾರುತ್ತದೆ.

    ಕಲ್ಲು ಎಸೆಯುವುದು ಬೇಡ, ಆದರೆ ಆ ಕೆಸರು ಎಲ್ಲಿಂದ ಬರುತ್ತಿದೆ ಎಂಬ ಮೂಲವನ್ನು ತಿಳಿದು ಜಾಡು ಹಿಡಿದು ಅದನ್ನು ಸ್ವಚ್ಛಗೊಳಿಸುವುದು ಜವಾಬ್ದಾರಿ ಸ್ಥಾನದಲ್ಲಿರುವವರ ಕರ್ತವ್ಯ.

    ಸಮಾಜದಲ್ಲಿ ಹರಡುತ್ತಿರುವ *ಸುಳ್ಳು ಮತ್ತು ಅಪಪ್ರಚಾರ* ಗಳನ್ನು ಹಾಗೆಯೇ ಬಿಟ್ಟರೆ, ಮುಂದಿನ ಪೀಳಿಗೆ ಅದನ್ನೇ ಸತ್ಯವೆಂದು ನಂಬುವ ಅಪಾಯವಿರುತ್ತದೆ.”

    ನಮ್ಮ *ವೈಯಕ್ತಿಕ* ವಿಚಾರಗಳಿಗೆ ಯಾರಾದರೂ ಟೀಕೆ ಮಾಡಿದರೆ, ಅಪಮಾನ ಮಾಡಿದರೆ ಅದನ್ನು *’ಉದಾಸೀನ’* ಮಾಡುವುದು ದೊಡ್ಡತನವಾಗಬಹುದು.

    ಆದರೆ, ಜಗತ್ತಿಗೆ ಸಮಾನತೆಯ ಬೆಳಕು ನೀಡಿದ ನಮ್ಮ ಧರ್ಮಗುರು ಬಸವಣ್ಣನವರ *ವ್ಯಕ್ತಿತ್ವಕ್ಕೆ,* ತತ್ವಗಳಿಗೆ ಮತ್ತು ಇತಿಹಾಸಕ್ಕೆ ಯಾರೋ ಉದ್ದೇಶಪೂರ್ವಕವಾಗಿ *ಮಸಿ* ಬಳಿಯಲು ಮುಂದಾದಾಗಲೂ ‘ಉದಾಸೀನ’ದ *ಮುಸುಕು* ಹಾಕಿಕೊಂಡು ಮೌನವಾಗಿರುವುದು ಖಂಡಿತವಾಗಿಯೂ ದೊಡ್ಡತನವಲ್ಲ;
    ಅದು ನಮ್ಮ ಗುರುವಿಗೆ ಮತ್ತು ನಮ್ಮ ಅಸ್ಮಿತೆಗೆ ನಾವು ಮಾಡುವ ಬಹುದೊಡ್ಡ *ದ್ರೋಹ.*

    ತತ್ವ ಪ್ರಚಾರ ಎಷ್ಟು ಮುಖ್ಯವೋ, ಆ ತತ್ವದ ಮೇಲೆ ನಡೆಯುವ *ದಾಳಿ* ಗಳನ್ನು ತಾರ್ಕಿಕವಾಗಿ ಮತ್ತು ಸಾಕ್ಷ್ಯಾಧಾರಗಳ ಸಮೇತ ಹಿಮ್ಮೆಟ್ಟಿಸುವುದು ಅಷ್ಟೇ ಮುಖ್ಯ.

    ಮಠಾಧೀಶರು ಮತ್ತು ಸಮಾಜದ ಮುಖಂಡರು ಕೇವಲ ಪ್ರವಚನಗಳಿಗೆ ಸೀಮಿತವಾಗದೆ, ಗುರುನಿಂದನೆಯಾದಾಗ ಗಟ್ಟಿಯಾಗಿ *ಧ್ವನಿ* ಎತ್ತುವ ನೈತಿಕ ಹೊಣೆಗಾರಿಕೆಯನ್ನು ಹೊರಬೇಕು.

    ಇಂದು ನಾವು *’ಉದಾಸೀನ’* ಎಂದು ಸುಮ್ಮನಿದ್ದರೆ, ಅದು ಅಪಪ್ರಚಾರ ಮಾಡುವವರಿಗೆ ಮತ್ತಷ್ಟು *ಧೈರ್ಯ* ತುಂಬಿದಂತಾಗುತ್ತದೆ. ಅವರ ಮೌನವನ್ನೇ ನಮ್ಮ *ದೌರ್ಬಲ್ಯ* ವೆಂದು ಭಾವಿಸಿ ನಾಳೆ ಇತಿಹಾಸವನ್ನೇ ತಿರುಚುವ ಕೆಲಸಕ್ಕೆ ಕೈಹಾಕುತ್ತಾರೆ.

    ಬಸವ ತತ್ವದ *ಜ್ಯೋತಿ* ಯನ್ನು ಹಿಡಿದು ಸಾಗುವುದು ಎಷ್ಟು ಮುಖ್ಯವೋ, ಆ ಜ್ಯೋತಿಯನ್ನು ನಂದಿಸಲು ಪ್ರಯತ್ನಿಸುವವರ ವಿರುದ್ಧ *ಧ್ವನಿ* ಎತ್ತುವುದೂ ಅಷ್ಟೇ ಮುಖ್ಯ.

    ಧರ್ಮಗುರುವಿನ ಘನತೆಗೆ *ಧಕ್ಕೆ* ಬಂದಾಗಲೂ ಮೌನವಾಗಿರುವುದನ್ನು ಉದಾತ್ತ ಗುಣವೆಂದು ಸಮರ್ಥಿಸಿಕೊಳ್ಳಬಾರದು.

    ಗುರು ಬಸವಣ್ಣನವರ ತತ್ವಗಳನ್ನು ಆಚರಿಸುವುದರ ಜೊತೆಗೆ ಅವರ ವ್ಯಕ್ತಿತ್ವದ ಘನತೆಯನ್ನು ಕಾಪಾಡುವ ಜವಾಬ್ದಾರಿಯನ್ನೂ ಲಿಂಗಾಯತ ಮಠಾಧೀಶರು ಮತ್ತು ಮುಖಂಡರು ಮರೆಯಬಾರದು..

    ಶರಣು ಶರಣಾರ್ಥಿ
    🙏🙏🙏
    ( ~ ಸಿದ್ದವೀರ ಸಂಗಮದ )

    • Fairly good rebuttal from your side. I am supporting this view of yours, To distorting the events happened Kalyana & Basaveshwara.👌👌💯

Leave a Reply

Your email address will not be published. Required fields are marked *