ಲಿಂಗಕ್ಕೆ ತೋರುವ ಆದರವನ್ನು ಸಮಾಜರೂಪಿ ಜಂಗಮಕ್ಕೂ ಅರ್ಪಿಸಬೇಕು

ಗುಳೇದಗುಡ್ಡ:

ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ಶನಿವಾರ ಬಸವ ಕೇಂದ್ರದ ವತಿಯಿಂದ ಪ್ರಭು ನೇಮಣ್ಣ ಅಳಗೋಡಿ ಅವರ ಮನೆಯಲ್ಲಿ ನಡೆಯಿತು.

ಧರ್ಮಪಿತ ಬಸವ ತಂದೆಗಳ ಈ ಕೆಳಗಿನ ವಚನವನ್ನು ಚಿಂತನೆಗೆ ಆಯ್ದುಕೊಳ್ಳಲಾಗಿತ್ತು,

ಭೇರುಂಡನ ಪಕ್ಷಿಗೆ ದೇಹ ಒಂದೆ,

ತಲೆಯೆರಡರ ನಡುವೆ ಕನ್ನಡವ ಕಟ್ಟಿ

ಒಂದು ತಲೆಯಲ್ಲಿ ಹಾಲನೆರೆದು

ಒಂದು ತಲೆಯಲ್ಲಿ ವಿಷವನೆರೆದಡೆ

ದೇಹವೊಂದೇ, ವಿಷ ಬಿಡುವುದೇ ಅಯ್ಯಾ ಲಿಂಗದಲ್ಲಿ ಪೂಜೆಯ ಮಾಡಿ

ಜಂಗಮದಲ್ಲಿ ನಿಂದೆಯ ಮಾಡಿದಡೆ

ನಾನು ಬೆಂದೆ ಕಾಣಾ, ಕೂಡಲಸಂಗಮದೇವಾ.

ಪ್ರಾರಂಭದಲ್ಲಿ ಮಹಾಲಿಂಗಪ್ಪ ಕರನಂದಿ ಅವರು ವಚನವನ್ನು ಚಿಂತನೆಗೆ ಆಯ್ದುಕೊಂಡು, “ಅಪ್ಪ ಬಸವಣ್ಣನವರು ಈ ವಚನದಲ್ಲಿ ಕಾಲ್ಪನಿಕ ಪಕ್ಷಿಯೊಂದರ ರೂಪಕವನ್ನು ಆಯ್ದುಕೊಂಡು ತಾತ್ವಿಕ ಚಿಂತನೆಯನ್ನು ಇಲ್ಲಿ ಮಾಡಿದ್ದಾರೆ.

ಒಂದೇ ಶರೀರ ಅಥವಾ ಜಠರವನ್ನು ಹೊಂದಿರುವುದರಿಂದ ಯಾವ ಮುಖದಿಂದಲಾದರೂ ಸೇವಿಸಿದ ಆಹಾರ ಜಠರದ ಮೇಲೆ ನೇರ ಪರಿಣಾಮ ಬೀರುತ್ತದೆ. ಅದು ಅದರ ಗುಣಮಟ್ಟದ ಮೇಲೆ ನಿಂತಿದೆ ವಿನಹ ಯಾವ ಮುಖದಿಂದ ಎಂಬುದರಿಂದಲ್ಲ. ಹೀಗಾಗಿ ಶರಣನಾದವ ಒಳಹೊರಗನ್ನು ಅರ್ಥ ಮಾಡಿಕೊಂಡು ಬದುಕಬೇಕು. ತ್ರಿವಿಧಕ್ಕೆ ತ್ರಿವಿಧವನ್ನು ಅರ್ಪಿಸಬೇಕೆಂದು ತಿಳಿಸಿದರು.

ಪ್ರೊ. ಗಾಯತ್ರಿ ಕಲ್ಯಾಣಿ ಅವರು ಇದೇ ವಚನವನ್ನು ಚಿಂತನೆಗೆ ಒಳಪಡಿಸುತ್ತಾ, ಈ ವಚನವು ಲಿಂಗ- ಜಂಗಮದ ಪೂಜೆಯನ್ನು ಕುರಿತು ತಿಳಿಸುತ್ತದೆ. ಇವೆರಡು ಬೇರೆ ಬೇರೆಯಾಗಿ ಕಂಡರೂ ಒಂದಕ್ಕೊಂದು ಪೂರಕವಾಗಿವೆ. ಲಿಂಗಕ್ಕೆ ತೋರಿದ ಆದರವನ್ನು ಸಮಾಜ ರೂಪಿ ಜಂಗಮಕ್ಕೆ ಅರ್ಪಿಸಿದರೆ ಸಮಾಜದಲ್ಲಿನ ತರತಮ ಭಾವ ನೀಗಿ, ಹಸಿವು ಬಡತನಮುಕ್ತ ಸಮಾಜ ನಿರ್ಮಾಣವಾಗುತ್ತದೆ” ಎಂದು ಅಭಿಪ್ರಾಯಪಟ್ಟರು.

ಪ್ರೊ ಯು, ಸುರೇಶ ರಾಜನಾಳ ಅವರು ಮಾತನಾಡುತ್ತ, ಶರಣರದು ನಡೆನುಡಿ ಸಿದ್ಧಾಂತ. ಹೀಗಾಗಿ ಅವರು ಏನನ್ನೇ ನುಡಿಯಲಿ ಅದನ್ನು ಆಚರಣೆಯಲ್ಲಿ ತರುತ್ತಾರೆ. ಭಕ್ತರಾದವರು ಲಿಂಗ ಜಂಗಮದಲ್ಲಿ ವ್ಯತ್ಯಾಸ ಮಾಡಬಾರದು. ಇದರ ಶ್ರದ್ದೆಯಲ್ಲಿ ಭಕ್ತಿಯ ಆಚರಣೆಯಲ್ಲಿ ಭಿನ್ನಭೇದ ಮಾಡಿದರೆ ಗಂಡಬೇರುಂಡನ ಪಕ್ಷಿಯ ಒಂದು ತಲೆಯಲ್ಲಿ ಹಾಲನ್ನು ಇನ್ನೊಂದು ತಲೆಯಲ್ಲಿ ವಿಷವನ್ನು ಹಾಕಿದಂತೆ ಆಗುತ್ತದೆ. ಇದರ ಒಟ್ಟಾರೆ ಪರಿಣಾಮ ಇಡೀ ವಿಷವೇ ಶರೀರವನ್ನು ವ್ಯಾಪಿಸುತ್ತದೆ. ಕಾರಣ ಲಿಂಗ- ಜಂಗಮಗಳ ಜೊತೆಗೆ ಗುರುವೂ ಅಷ್ಟಾವರಣದಲ್ಲಿ ಸಮಾನವಾಗಿ ಪರಿಗಣಿಸಲ್ಪಡುತ್ತವೆ” ಎಂದು ಪ್ರತಿಪಾದಿಸಿದರು.

ನಿವೃತ್ತ ಪ್ರಾಚಾರ್ಯ ಸಿದ್ದಲಿಂಗಪ್ಪ ಬರಗುಂಡಿಯವರು ಈ ವಚನವನ್ನು ಕುರಿತು ಮಾತನಾಡುತ್ತಾ,” ಈವರೆಗೆ ಎಲ್ಲ ಅನುಭಾವಿಗಳು ಮಾತನಾಡಿದಂತೆ ಶರಣ ಧರ್ಮದ ವಿಶಿಷ್ಟ ತತ್ವ ಇಲ್ಲಿ ಅಡಕಗೊಂಡಿದೆ. ಈ ವಚನದಲ್ಲಿನ ತತ್ವ ಹಾಗೂ ಆಚರಣೆಗಳು ಇತರರಿಗಿಂತ ಭಿನ್ನವಾಗಿವೆ.

ಶರಣರು ಮಾಡುವ ಪೂಜೆ ಕೇವಲ ಅಂಧಾನುಕರಣೆಯಲ್ಲ ಮತ್ತು ಅದು ಕೇವಲ ಷೋಡಶೋಪಚಾರ ಅಷ್ಟ ವಿಧಾರ್ಚನೆಗಳಿಂದ ಕೂಡಿಲ್ಲ. ಪೂಜೆ ಎಂದರೆ ಶರಣರ ದೃಷ್ಟಿಯಲ್ಲಿ ತನು-ಮನ ಭಾವಗಳಲ್ಲಿನ ಕರ್ಮೇಂದ್ರಿಯ, ಜ್ಞಾನೇಂದ್ರಿಯ ಹಾಗೂ ಭಾವೇಂದ್ರಿಯಗಳ ಶುದ್ಧತೆಯನ್ನು ಮಾಡಿಕೊಳ್ಳುವುದು.

ಈ ಶುದ್ಧತೆ ಉಂಟಾದಾಗ ಜೀವ ಸಹಜವಾಗಿ ಶಿವನೇ ಆಗುತ್ತಾನೆ. ಇಲ್ಲಿ ಬಹಿರಂಗವಾಗಿ ಮಾಡುವ ಲಿಂಗ ಪೂಜೆ ಹಾಗೂ ಜಂಗಮ ಪೂಜೆಗಳೆರಡೂ ಒಂದೇ. ಬೇರುಂಡ ಪಕ್ಷಿಯ ಎರಡು ತಲೆಗಳಿದ್ದಂತೆ. ಲಿಂಗ ಜಂಗಮದ ಸಮರಸವೇ ದೇಹವಿದ್ದಂತೆ.

ಸಾಮಾನ್ಯವಾಗಿ ಜನರು ಲಿಂಗ ಜಂಗಮ ತತ್ವಗಳನ್ನರಿಯದೆˌ ಲಿಂಗವನ್ನು ಪಾಷಣವನ್ನಾಗಿ ಬಗೆದು ಉಣ್ಣದ ಲಿಂಗಕ್ಕೆ ಬೋನವ ಹಿಡಿದುˌ ಉಂಬ ಜಂಗಮಕ್ಕೆ ಮುಂದೆ ಹೋಗು ಎನ್ನುತ್ತಾರೆ. ಇದು ಅಪ್ಪನವರ ನೋವಿಗೆ ಕಾರಣವಾಗಿದೆ. ಲಿಂಗಪೂಜೆ ಮಾಡುವುದೇ ಜಂಗಮ ಮನೆಗೆ( ಮಠಕ್ಕೆ) ಬರಬೇಕೆಂದು. ಗುರು ಕ್ರಿಯೆಯನ್ನು ಒಳಗೊಂಡರೆ ಲಿಂಗ ಜ್ಞಾನವನ್ನು ಒಳಗೊಂಡಿದೆ. ಜಂಗಮವು ಕ್ರಿಯೆ ಜ್ಞಾನವನ್ನು ಒಳಗೊಂಡ ಅನುಭಾವವಾಗಿದೆ. ಇದು ಸಮಷ್ಟಿ ದೃಷ್ಟಿಯಿಂದ ಸಮಾಜವೇ ಜಗವೇ ಆಗಿದೆ. ಆದುದರಿಂದ ಲಿಂಗ ಜಂಗಮದಲ್ಲಿ ಅಭಿನ್ನತೆ ಇರುವುದರಿಂದ ಎರಡಕ್ಕೂ ಸಮಾನ ಭಕ್ತಿಯನ್ನು ಅರ್ಪಿಸಬೇಕಾಗುತ್ತದೆ. ಯಾವುದೋ ಒಂದರ ನ್ಯೂನತೆ ನಮ್ಮ ಇಡೀ ಭಕ್ತನಂಗವೇ ವಿಷಪ್ರಾಶನಕ್ಕೆ ಒಳಗಾದಂತಾಗುತ್ತದೆ.

ಆದುದರಿಂದ ಗುರುಲಿಂಗ ಜಂಗಮಗಳು ಒಂದೇ ಆಗಿವೆ. ಅದರಲ್ಲಿ ಏನಾದರೂ ವ್ಯತ್ಯಾಸವಾದರೆ, ಈ ತತ್ವಗಳನ್ನು ತಪ್ಪಾಗಿ ಅರ್ಥೈಸಿದರೆ ತಮಗೆ ನೋವಾಗುತ್ತದೆ ಎಂದು ಪೂಜ್ಯ ಬಸವಣ್ಣನವರು ತಮ್ಮ ಈ ವಚನದಲ್ಲಿ ಸ್ಪಷ್ಟಪಡಿಸಿದ್ದಾರೆ” ಎಂದು ಹೇಳಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಜಯಶ್ರೀ ಬರಗುಂಡಿಯವರ ವಚನ ಪ್ರಾರ್ಥನೆ ಮಾಡಿದರು. ಮಧ್ಯ ಮಧ್ಯದಲ್ಲಿ ಎಲ್ ಎಲ್ ಬಿ ವಿದ್ಯಾರ್ಥಿನಿ ದಾನಮ್ಮ ಕುಂದರಗಿ ಅವರು ವಚನಗಳನ್ನು ಶುಶ್ರಾವ್ಯವಾಗಿ ಹಾಡಿದರು. ಪ್ರಾಚಾರ್ಯ ಬಸಲಿಂಗಯ್ಯ ಕಂಬಾಳಿಮಠ ಅವರು ಎಲ್ಲರನ್ನೂ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಮುರುಗೇಶ ಶೇಖಾ ಶರಣು ಸಮರ್ಪಿಸಿದರು.

ಪುತ್ರಪ್ಪ ಬೀಳಗಿ, ಬಸವರಾಜ ಖಂಡಿ, ರೇವಣಸಿದ್ದಯ್ಯ ರೇವಣಸಿದ್ದೇಶ್ವರಮಠ, ಬಸವರಾಜ ಬರಗುಂಡಿ, ಪ್ರಭು ಅಳಗೋಡಿ ಅವರ ಪರಿವಾರದವರು ದಾಕ್ಷಾಯಿಣಿ ತೆಗ್ಗಿ, ಸುರೇಖಾ ಎಂಡಿಗೇರಿ, ಶ್ರೀದೇವಿ ಶೇಖಾ, ವಿಶಾಲಾಕ್ಷಿ ಗಾಳಿ ಮೊದಲಾದವರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
1 Comment

Leave a Reply

Your email address will not be published. Required fields are marked *