ಶಿಲುಬೆ ಏರಿದ ಕಲ್ಬುರ್ಗಿ

(ಇಂದು ಡಾ. ಎಂ. ಎಂ. ಕಲಬುರ್ಗಿ ಗುರುಗಳ ೧೧ನೇ ಹುತಾತ್ಮ ದಿನಾಚರಣೆ)

ಸಂಶೋಧಕ ಆಗಾಗ ಸಣ್ಣ-ಸಣ್ಣ ಶಿಲುಬೆಗಳನ್ನು ಏರಬೇಕಾಗುತ್ತದೆ. ಸಂಶೋಧಕ ತಪ್ಪು ಹೇಳಿರಬಹುದು ಸುಳ್ಳು ಹೇಳಿರಲಾರ. ಗೆಲುವು ದೀಪಾವಳಿ, ಸೋಲು ಶಿವರಾತ್ರಿ. ಮರಣವೇ ಮಹಾನವಮಿ ಇದು ನನ್ನ ಧ್ಯೇಯಧ್ವಜ. ಕಾಲ ಕೆಳಗಿನ ಬೆಂಕಿಗಿಂತ ಕಣ್ಣ ಮುಂದಿನ ಬೆಳಕು ದೊಡ್ಡದು. ನನ್ನ ಬಲ ನನ್ನ ಛಲ ನೀರು-ಗೊಬ್ಬರ ನನಗೆ. ಸಂಶೋಧನೆಯು ಅಲ್ಪವಿರಾಮ ಅರ್ಧವಿರಾಮದಿಂದ ಪೂರ್ಣವಿರಾಮದ ವರೆಗೆ ಸಾಗುವ ಪ್ರಕ್ರಿಯೆ. ಅಂಬಳಿ-ಕಂಬಳಿ ಆಸ್ತಿ ಮಿಕ್ಕಿದ್ದೆಲ್ಲ ಜಾಸ್ತಿ. ನೀವು ಕೊಲ್ಲಬಯಸುತ್ತೀರಿ ನಾನು ಗೆಲ್ಲಬಯಸುತ್ತೇನೆ.

ಮೇಲಿನಂತೆ ನೂರಾರು ದೃಢ ನಂಬಿಕೆ, ಧ್ಯೇಯಗಳನ್ನು ಹೊಂದಿದವರು, ಅವುಗಳಿಗೆ ಬದ್ಧರಾಗಿ ಬದುಕಿದವರು ಡಾ. ಎಂ.ಎಂ.ಕಲಬುರ್ಗಿ . ಸಂಶೋಧಕ ಚಿಕ್ಕ ಚಿಕ್ಕ ಶಿಲುಬೆಗಳನ್ನೇರಬೇಕಾಗುತ್ತದೆ, ಎನ್ನತ್ತಲೇ ಹಂತಕರ ಗುಂಡೇಟಿಗೆ ಬಲಿಯಾದರು.

ಅಂದು ವರ್ಣಸಂಕುಲಕ್ಕೆ ಬಸವೇಶ್ವರರು ಬಲಿಯಾದಂತೆ, ನಮ್ಮ ಕಣ್ಣ ಮುಂದೆ ಸನಾತನಿಗಳ ಷಡ್ಯಂತ್ರಕ್ಕೆ ಕಲಬುರ್ಗಿ ಬಲಿಯಾದರು. ಸತ್ಯವನ್ನು ಪ್ರತಿಪಾದಿಸಿದ ಗಾಂಧೀಜಿಗೆ ಗುಂಡು ಹಾಕಿದರು, ಏಸುಕ್ರಿಸ್ತನಿಗೆ ಶಿಲುಬೆಗೇರಿಸಿದರು, ಸಾಕ್ರೆಟಿಸ್‌ನಿಗೆ ವಿಷ ಕುಡಿಸಿದರು. ಬುದ್ಧನನ್ನು ದೇಶಾಂತರಿಸಿದರು. ಗೆಲಿಲಿಯೋನಿಗೆ ಕಲ್ಲು ಎಸೆದರು. ಸತ್ಯದ ಪ್ರತಿಪಾದಕರಾದ ಕಲಬುರ್ಗಿ ಅವರಿಗೂ ದುರಂತದ ಕೊನೆಯಾಯಿತು.

ಡಾ. ಎಂ.ಎಂ. ಕಲಬುರ್ಗಿಯವರ ಮೇಲೆ ಹಲವಾರು ಬಾರಿ ಹಲ್ಲೆಗಳಾಗಿದ್ದವು. ೧೯೮೮ರಲ್ಲಿ ಮೊದಲಬಾರಿಗೆ ಹಲ್ಲೆಯಾಗಿತ್ತು. ‘ಪ್ರಸಾದದಿಂದ ಮಕ್ಕಳಾಗುವದಿಲ್ಲ’ಎಂದು ಚೆನ್ನಬಸವಣ್ಣನ ಹುಟ್ಟಿನ ಬಗೆಗೆ ಮಾರ್ಗ-೧ ಸಂಪುಟದಲ್ಲಿ ಪ್ರತಿಪಾದಿಸಿದ್ದರು. ಹೀಗಾಗಿ ಸನಾತನಿಗಳು ಇವರನ್ನು ಒಬ್ಬ ಕೈದಿಯನ್ನು ಎಳೆದುಕೊಂಡು ಬಂದಂತೆ, ಮುರುಘಾಮಠಕ್ಕೆ ಎಳೆದುಕೊಂಡು ಹೋದರು.

ಅವರ ಮನೆಯ ಮೇಲೆ ಹಿಂದುತ್ವವಾದಿಗಳ ದಾಳಿಯೂ ನಡೆಯಿತು. ಆದರೆ ಇಂತಹ ದಾಳಿಗಳಿಗೆ ಹೆದರಿ ಕಲಬುರ್ಗಿಯವರು ತಮ್ಮ ಸಂಶೋಧನಾ ಕಾರ್ಯವನ್ನು ನಿಲ್ಲಿಸಲಿಲ್ಲ. ಮಾರ್ಗ-೧ ಸಂಪುಟದಿಂದ ಪ್ರಾರಂಭವಾದ ಅವರ ಸಂಶೋಧನಾ ಲೇಖನಗಳು ಸಮಾಜ, ಧರ್ಮ, ಸಂಸ್ಕೃತಿ, ನಾಡು-ನುಡಿಗಳಲ್ಲಿಯ ಸಮಸ್ಯೆಗಳ ಬಗೆಗೆ ಮೂಢನಂಬಿಕೆ, ಅಜ್ಞಾನ, ಜಾತೀಯತೆ, ಅಂಧಶ್ರದ್ಧೆ, ಅಂಧಾನುಕರಣೆಗಳನ್ನು ಹೋಗಲಾಡಿಸುವ ದಾಖಲೆಗಳಾದವು.

ಇರುಳನ್ನು ಹಗಲನ್ನಾಗಿಸಿ ದುಡಿದ ಶ್ರಮಜೀವಿ ಇವರು. ಕೆಲಸಗಳಿಂದ ಎಂದೂ ದಣಿಯುತ್ತಿರಲಿಲ್ಲ. ಇಷ್ಟೊಂದು ಸಂಶೋಧನಾ ಗ್ರಂಥಗಳನ್ನೊಬ್ಬರೇ, ಒಂದು ಜೀವಿತಾವಧಿಯಲ್ಲಿ ಹೊರತಂದ ಪರಿಶ್ರಮ ಸೋಜಿಗ, ಆಶ್ಚರ್ಯ ವಿಸ್ಮಯ ಏಕಕಾಲಕ್ಕೆ ಮೂಡಿಸುತ್ತದೆ. ಅಂತಹ ದೈತ್ಯಪ್ರತಿಭೆ, ದೈತ್ಯಶಕ್ತಿ ಕಲಬುರ್ಗಿಯವರದು.

ಆಲದ ಮರದ ಕೆಳಗೆ ಏನೂ ಬೆಳೆಯುವದಿಲ್ಲ ಎನ್ನುವದು ಇವರನ್ನು ನೋಡಿದಾಗ ವಿಪರ‍್ಯಾಸವಾಗುವದು. ಕಲಬುರ್ಗಿಯವರ ಸಾವಿರಾರು ಶಿಷ್ಯ-ಪ್ರಶಿಷ್ಯರು ನಾಡಿನ ಉದ್ದಗಲಕ್ಕೂ ಇದ್ದಾರೆ. ಇವರಲ್ಲಿ ಅಧ್ಯಾಪಕರಾಗಿ, ಪತ್ರಕರ್ತರಾಗಿ, ಸಾಹಿತಿಗಳಾಗಿ-ಕವಿಗಳಾಗಿ, ಸಂಶೋಧಕರಾಗಿ, ಚಿಂತಕರಾಗಿ ಕನ್ನಡ ಸಾಹಿತ್ಯಪ್ರಪಂಚದಲ್ಲಿ ಅಕ್ಷರಲೋಕವನ್ನು ಶ್ರೀಮಂತಗೊಳಿಸುತ್ತಿದ್ದಾರೆ. ತಮ್ಮ ಬದುಕನ್ನು ರೂಪಿಸಿಕೊಂಡಿದ್ದಾರೆ. ಅವರೆಲ್ಲ ‘ನಾನು ಕಲಬುರ್ಗಿ ಸರ್ ಶಿಷ್ಯ’ನೆಂದು ತುಂಬು ಅಭಿಮಾನದಿಂದ ಹೇಳುತ್ತಾರೆ. ಅವರೆಲ್ಲರೂ ದುರಂತದಿಂದ ಆತಂಕಗೊಂಡು ತೀವ್ರ ದುಃಖವನ್ನು ವ್ಯಕ್ತಪಡಿಸಿ, ನೂರಾರು ಲೇಖನಗಳನ್ನು ಪತ್ರಿಕೆಗಳಲ್ಲಿ, ಸಂಚಿಕೆಯಲ್ಲಿ ಹಾಗೂ ಪುಸ್ತಕ ರೂಪದಲ್ಲಿ ಪ್ರಕಟವಾಗಿರುವುದನ್ನು ಊಹಿಸಿದಾಗ ಡಾ. ಕಲಬುರ್ಗಿ ಅವರಿಗೆ ಅಪಾರ ಶಿಷ್ಯಕೋಟಿ ಎಂಬುದು ಗಣನೆಗೆ ಬರುವದು.

ಅವರ ಹತ್ಯೆ ಅಂತರರಾಷ್ಟ್ರೀಯ ಸುದ್ದಿಯಾಯಿತು. ಓಬಾಮಾ, ಮನಮೋಹನ್‌ಸಿಂಗ್, ಸಲ್ಮಾನ್ ರಶ್ದಿ ಸೇರಿದಂತೆ ವಿಶ್ವಾದ್ಯಂತ ಪತ್ರಿಕೆಗಳು, ಚಿಂತಕರು, ಆತಂಕಿತರಾಗಿ ಹೇಳಿಕೆ ನೀಡಿದರು. ದೇಶದ ಹಲವಾರು ಸಾಹಿತಿಗಳು ಪ್ರಶಸ್ತಿಯನ್ನು ಮರಳಿಸಿದರು. ಕನ್ನಡದ ಸಂಶೋಧಕನೊಬ್ಬನಿಗೆ ಜಾಗತಿಕ ಮಟ್ಟದಲ್ಲಿ ಇಷ್ಟೊಂದು ಮನ್ನಣೆ, ಅಭಿಮಾನ ವ್ಯಕ್ತವಾಗಿದ್ದು ಇದೇ ಮೊದಲು. ‘ಶರಣರ ಜೀವನ, ಮರಣದಲ್ಲಿ ಕಾಣು’ಎನ್ನುವ ವಾಕ್ಯದ ಸತ್ಯತೆ ಎಲ್ಲರಿಗೂ ಗೋಚರಿಸಿತು.

ಒಬ್ಬ ಸಮಾಜಮುಖಿ ವ್ಯಕ್ತಿ ಹೇಗೆ ಶಕ್ತಿಯಾಗುತ್ತಾರೆ ಎನ್ನುವದಕ್ಕೆ ಸಾವಿರಾರು ನಿದರ್ಶನಗಳು ಕಣ್ಮುಂದೆ ಗೋಚರಿಸುತ್ತವೆ.

ಗದುಗಿನ ತೋಂಟದಾರ್ಯ ಮಠದ ಲಿಂಗಾಯತ ಅಧ್ಯಯನ ಸಂಸ್ಥೆಯಿಂದ ಈವರೆಗೆ ೫೦೦ ಕೃತಿಗಳು ಪ್ರಕಟವಾಗಿದ್ದಕ್ಕೆ ಇವರ ಪ್ರೇರಣೆಯೇ ಕಾರಣ.

ಬೆಳಗಾವಿ ನಾಗನೂರಮಠದ ಲಿಂಗಾಯತ ಅಧ್ಯಯನ ಅಕಾಡೆಮಿ, ಶಿವಮೊಗ್ಗ ಆನಂದಪುರ ಮಠದ ಮಲೆನಾಡು ಅಧ್ಯಯನ ಸಂಸ್ಥೆ, ಮೈಸೂರು ಸುತ್ತೂರು ಮಠದ ಸ್ವರವಚನ ಸಾಹಿತ್ಯಮಾಲೆ, ಬೆಳಗಾವಿ ಕೆ.ಎಲ್.ಇ.ಸಂಸ್ಥೆಯ ಅಡಿಯಲ್ಲಿ ಸಪ್ತರ್ಷಿಗಳ ಬೃಹತ್ ಸಂಪುಟ ಯೋಜನೆ, ವಿಜಯಪುರದ ಬಿ.ಎಲ್.ಡಿ.ಇ. ಸಂಸ್ಥೆಯ ಫ.ಗು. ಹಳಕಟ್ಟಿ ಸಮಗ್ರ ಸಾಹಿತ್ಯ, ಆದಿಲ್‌ಶಾಹಿ ಸಮಗ್ರ ಸಾಹಿತ್ಯ, ಕರ್ನಾಟಕ ಸರಕಾರದಿಂದ ಪ್ರಕಟಗೊಂಡ ಸಮಗ್ರ ವಚನಸಾಹಿತ್ಯ ಸಂಪುಟಗಳು, ಬೆಂಗಳೂರು ಬಸವ ಸಮಿತಿಯ ವಚನ ಅನುವಾದ ಸಂಪುಟಗಳು ಮುಂತಾದವು ಅವರ ಕೆಲವು ಸಾಧನೆಗಳು.

 ವ್ಯಕ್ತಿಯೊಬ್ಬ-ಸಮಷ್ಟಿಯಾಗಿ ಕಾರ್ಯಗೈದಿರುವದು ನಾಡವರು ಮರೆಯಬಾರದು.  ಒಂದಿಲ್ಲೊಂದು ಕೆಲಸವನ್ನು ತಮ್ಮ ಶಿಷ್ಯಕೋಟಿಗೆ ಹಂಚಿ, ಖುದ್ದಾಗಿ ಸಮಕ್ಷಮ ಪರಿಶೀಲಿಸುವ ದಿನವನ್ನು ನಿಗದಿಗೊಳಿಸಿ, ದುರಂತಕ್ಕೀಡಾದುದನ್ನು ನೆನಸಿಕೊಂಡು ಶಿಷ್ಯಕೋಟಿಯ ಕಣ್ಣುಗಳು ಹನಿಗೂಡುತ್ತವೆ. ಇವರು ಯಾರನ್ನೂ ಹಾಗೆಯೇ ಬಿಟ್ಟವರಲ್ಲ. ದುಡಿಯದವರನ್ನು ದುಡಿಯಲು ಹಚ್ಚುತ್ತಿದ್ದರು. ಪ್ರೀತಿಯಿಂದ ಬೈಯ್ದು, ಕಾಲಮಿತಿ ನೀಡಿ ಕೆಲಸ ತೆಗೆದುಕೊಳ್ಳುತ್ತಿದ್ದರು.

ಇದೆಲ್ಲ ಕನ್ನಡನಾಡು, ನುಡಿ, ಸಮಾಜ, ಸಂಸ್ಕೃತಿ, ಭಾಷಾ ಮೇಲಿನ ಇವರ ನಿತಾಂತ ಪ್ರೇಮಕ್ಕೆ ಸಾಕ್ಷಿಯಾಗಿವೆ.

ಹಿಂದುಳಿದ ವಿಜಾಪೂರ ಜಿಲ್ಲೆಯ ಸಿಂದಗಿ ತಾಲೂಕಿನ ಹಳ್ಳಿಯೊಂದರಲ್ಲಿ ಅವಿಭಕ್ತ ಕುಟುಂಬದಲ್ಲಿ ಹುಟ್ಟಿದ ಯುವಕ, ಯಾವದೇ ಗಾಡಫಾದರ್ ಇಲ್ಲದೆ ಬೆಳೆದು, ಕನ್ನಡಭಾಷೆಯನ್ನು ಸಮೃದ್ಧಗೊಳಿಸುವ ಹಸಿವನ್ನಿಟ್ಟುಕೊಂಡು ಅಧ್ಯಯನಶೀಲರಾದರು.

ಅದರ ಫಲವಾಗಿ ಸಂಶೋಧನೆ, ಗ್ರಂಥಸಂಪಾದನೆ, ಹಸ್ತಪ್ರತಿಶಾಸ್ತ್ರ, ಛಂದಸ್ಸು, ವ್ಯಾಕರಣ, ಶಾಸನ, ಇತಿಹಾಸ, ಜಾನಪದ, ನಾಟಕ, ಕಾವ್ಯ, ಸಾಹಿತ್ಯ ಸಂಸ್ಕೃತಿ ಮುಂತಾದ ವೈವಿಧ್ಯಮಯ ಕ್ಷೇತ್ರಗಳಲ್ಲಿ ಅಪಾರ ಕೃಷಿ ಮಾಡಿ, ಮಹತ್ವದ ಕೊಡುಗೆ ನೀಡಿದರು.

ಕನ್ನಡ ಸಾಹಿತ್ಯದಲ್ಲಿ ಈ ಎಲ್ಲ ಕ್ಷೇತ್ರಗಳಲ್ಲಿ ವಿಪುಲವಾಗಿ ಕೃಷಿ ಮಾಡಿದವರು ಇನ್ನೊಬ್ಬರಿಲ್ಲ. ಹೀಗಾಗಿ ಆನೆ ನಡೆದುದೇ ದಾರಿ ಎನ್ನುವಂತೆ, ಡಾ. ಕಲಬುರ್ಗಿ ಅವರು ನಡೆದುದೇ ‘ಕಲಬುರ್ಗಿ ಮಾರ್ಗ’ಎಂದು ವಿದ್ವಜ್ಜನಗಳ ಅಭಿಪ್ರಾಯ.

ವಿದ್ಯಾರ್ಥಿದಿಶೆಯಿಂದಲೇ ಉದ್ದಕ್ಕೂ ಚಿನ್ನದ ಪದಕದೊಂದಿಗೆ ಉತ್ತೀರ್ಣರಾದ ಡಾ. ಕಲಬುರ್ಗಿಯವರಿಗೆ ಅತ್ಯಂತ ಅಚ್ಚುಮೆಚ್ಚಿನ ವೃತ್ತಿ ಅಧ್ಯಾಪನವೃತ್ತಿ. ೧೯೬೨ರಲ್ಲಿ ಕರ್ನಾಟಕ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಪ್ರಾರಂಭವಾದ ವೃತ್ತಿಜೀವನ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಯಿಂದ  ನಿವೃತ್ತ(೨೦೦೨)ರಾಗುವ ವರೆಗೆ ಅಂದರೆ ಸುದೀರ್ಘ ನಾಲ್ಕೂ ದಶಕಗಳ ಕಾಲ ತಮ್ಮ ವೃತ್ತಿಗೆ ಚ್ಯುತಿ ಬಾರದಂತೆ ಸೇವೆ ಸಲ್ಲಿಸಿದರು.

ಯಾವ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಾ ಬಂದರೂ, ಆ ಸಂಸ್ಥೆಯ ಘನತೆ-ಗೌರವವನ್ನು ಹೆಚ್ಚಿಸಿದರು. ಕೊನೆಗೆ ಹಂಪಿ ವಿಶ್ವವಿದ್ಯಾಲಯಕ್ಕೆ ಒಂದು ಸ್ವರೂಪವನ್ನು ಕೊಟ್ಟರು. ಹಣಕಾಸಿನ ಮುಗ್ಗಟ್ಟಿನಿಂದ ಬಳಲುತ್ತಿದ್ದ ವಿಶ್ವವಿದ್ಯಾಲಯವನ್ನು ಆರ್ಥಿಕವಾಗಿ ಸಬಲಗೊಳಿಸಿ, ತಮ್ಮ ಅಧಿಕಾರಾವಧಿಯಲ್ಲಿ ಸುಮಾರು ೨೦೦ ಮೌಲಿಕ ಗ್ರಂಥಗಳನ್ನು ಪ್ರಕಟಿಸಿದರು.

ವ್ಯಕ್ತಿ ತಾನು ಬೌದ್ಧಿಕವಾಗಿ ಬೆಳೆಯುವದರೊಂದಿಗೆ, ಸಂಸ್ಥೆಯನ್ನು ಭೌತಿಕವಾಗಿ ಬೆಳೆಸಬೇಕು. ವ್ಯಕ್ತಿ ತಾನು ಬಡವನಾಗಿರಬೇಕು, ಸಂಸ್ಥೆಯನ್ನು ಸಮೃದ್ಧ-ಶ್ರೀಮಂತವಾಗಿ ಬೆಳೆಸಬೇಕೆಂಬುದು ಇವರ ನೈಜ ಸಿದ್ಧಾಂತವಾಗಿತ್ತು. ಹೀಗೆ ಶ್ರಮಸಂಸ್ಕೃತಿಯ, ಅವಿಭಕ್ತ ಪ್ರಜ್ಞೆಯ, ಅರಿವನ್ನು ಹೊಂದಿದ್ದ ಈ ತಲೆಮಾರಿನ ಹೆಸರಾಂತ ಸಂಶೋಧಕ ಡಾ. ಕಲಬುರ್ಗಿ ಅವರಿಗೆ ಲಭಿಸಿದ ಪ್ರಶಸ್ತಿ-ಪುರಸ್ಕಾರಗಳಿಗೆ ಲೆಕ್ಕವಿಲ್ಲ.

ಏಳುಸಲ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಚಿದಾನಂದ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಪಂಪ ಪ್ರಶಸ್ತಿ, ರನ್ನ ಪ್ರಶಸ್ತಿ, ನೃಪತುಂಗ ಪ್ರಶಸ್ತಿ, ರಾಷ್ಟ್ರೀಯ ಬಸವ ಪುರಸ್ಕಾರ, ಇದರೊಂದಿಗೆ ಅಖಿಲಭಾರತ ಶರಣ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ, ಧರ್ಮಸ್ಥಳದ ಸರ್ವಧರ್ಮ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಆಳ್ವಾಸ್ ನುಡಿಸಿರಿ ಅಧ್ಯಕ್ಷತೆ ಹೀಗೆ ಪುರಸ್ಕಾರ-ಗೌರವಗಳ ಸಂಖ್ಯೆ ಬೆಳೆಯುತ್ತಾ ಹೋಗುವದು. ಈ ಎಲ್ಲ ಪ್ರಶಸ್ತಿ-ಗೌರವಗಳಿಗಿಂತ ಮೀರಿದ ವ್ಯಕ್ತಿತ್ವ ಇವರದು.

ಈ ವರೆಗಿನ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರನ್ನು ಅಭ್ಯಸಿಸಿದಾಗ, ಆ ಎಲ್ಲ ವಿದ್ವಾಂಸರನ್ನು ಮೀರಿಸಿದ ವ್ಯಕ್ತಿತ್ವ ಇವರದು. ಇಂತಹ ಹಿಮಾಲಯದೆತ್ತರದ ಧೀಮಂತ ವ್ಯಕ್ತಿಯೊಬ್ಬರು ಸನಾತನಿಗಳ ಕುಕೃತ್ಯಕ್ಕೆ ಬಲಿಪಶುವಾದುದು, ನಾಡಿಗೆ-ಬಸವಪರಂಪರೆಗೆ ಆದ ಬಹುದೊಡ್ಡ ದುರಂತ, ಆಘಾತ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *