ವಿಶ್ವಗುರು ಬಸವೇಶ್ವರ, ಸರ್ವ ಶರಣ ಶರಣೆಯರ ಮಹೋತ್ಸವ, ವಚನಗಳ ನಿತ್ಯೋತ್ಸವ ಕಾರ್ಯಕ್ರಮ
ತರೀಕೆರೆ
ಬಸವಾದಿ ಶರಣರು ಸಮಾಜದ ಅಜ್ಞಾನ ತೊಡೆದುಹಾಕಲು ಶ್ರಮಿಸಿದ್ದಾರೆ. ಆದ್ದರಿಂದ ಶರಣರ ಕ್ಷೇತ್ರಗಳ ಅಭಿವೃದ್ಧಿಗೆ ಎಲ್ಲರೂ ಮುಂದಾಗಬೇಕು ಎಂದು ಸಾಣೇಹಳ್ಳಿ ಮಠದ ಪೂಜ್ಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ಅಕ್ಕನಾಗಲಾಂಬಿಕೆ ಸಮುದಾಯ ಭವನದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ವತಿಯಿಂದ ಸೋಮವಾರ ಆಯೋಜಿಸಿದ್ದ ವಿಶ್ವಗುರು ಬಸವೇಶ್ವರ ಹಾಗೂ ಸರ್ವ ಶರಣ ಶರಣೆಯರ ಮಹೋತ್ಸವ, ವಚನಗಳ ನಿತ್ಯೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.


ವಚನಗಳನ್ನು ಉಳಿಸುವ ಕಾರ್ಯ ಆಗಬೇಕು. ಶಿವಶರಣರು ಕಾಯಕ, ದಾಸೋಹ, ಇಷ್ಠಲಿಂಗ ನಿಷ್ಠೆಯಿಂದ ಬದುಕಿದವರು. ವಚನ ತತ್ವ ಉಳಿಸಲು ಇಲ್ಲಿಗೆ ಬಂದಿದ್ದ ಅಕ್ಕ ನಾಗಲಾಂಬಿಕೆ ಅವರ ಗದ್ದುಗೆ ಅಭಿವೃದ್ಧಿಗೆ ಸಾಕಷ್ಟು ಜನರು ಶ್ರಮ ವಹಿಸಿದ್ದಾರೆ. ಎಲ್ಲರ ಹೋರಾಟದಿಂದ ಇಂದು ಈ ಸ್ವರೂಪ ಬಂದಿದೆ. ಆಗಬೇಕಾದ ಕೆಲಸಗಳು ತುಂಬಾ ಇದೆ. ವಿಶ್ರಾಂತಿ ಗೃಹ ನಿರ್ಮಾಣಕ್ಕೆ ಹಣ ಬೇಕು. ನೀವೆಲ್ಲರೂ ಅರ್ಥಿಕ ನೆರವು ನೀಡಬೇಕು ಎಂದು ಹೇಳಿದರು.

ಶರಣ ಸಾಹಿತ್ಯ ಪ್ರಚಾರ ಬಹಳ ಒಳ್ಳೆಯ ಕೆಲಸ, ಸಮಾಜ ಸೇವೆ, ಶರಣರ ಕ್ಷೇತ್ರಗಳ ಅಭಿವೃದ್ಧಿಯಾಗಬೇಕು. ಕೃತಿಗಳನ್ನು ಕೊಂಡು ಓದಬೇಕು. ಇದು ಬಹಳ ಅಪರೂಪದ ಮತ್ತು ಅರ್ಥಪೂರ್ಣ ಕಾರ್ಯಕ್ರಮವಾಗಿದೆ ಎಂದು ಹೇಳಿದರು.

ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿ ಶರಣೆ ಅಕ್ಕನಾಗಮ್ಮ ಗದ್ದುಗೆ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

ಅಕ್ಕ ನಾಗಲಾಂಬಿಕೆ ಗದ್ದುಗೆ ಅಭಿವೃದ್ಧಿಗೆ ಡಾ. ಪಂಡಿತಾರಾಧ್ಯ ಶ್ರೀಗಳು ವಿಶೇಷ ಕಾಳಜಿವಹಿಸಿ, ಅವಿರತ ಶ್ರಮಿಸಿದ್ದಾರೆ. ಗದ್ದುಗೆ ಅಭಿವೃದ್ಧಿ ಕಾರ್ಯಗಳಿಗೆ ಇದುವರೆಗೆ 2.5 ಕೋಟಿ ರೂ. ಅನುದಾನ ಒದಗಿಸಲಾಗಿದೆ.

ರಸ್ತೆ ನಿರ್ಮಾಣಕ್ಕೆ ಇರುವ ಅಡೆತಡೆಗಳು ನಿವಾರಣೆಯಾದರೆ ಅನುದಾನ ಕೊಡಿಸಲಾಗುವುದು. ಯಾತ್ರಿ ನಿವಾಸಕ್ಕೆ ಅನುದಾನ ಮಂಜೂರಾಗಿದೆ ಎಂದು ಹೇಳಿದರು.

ಚಿಕ್ಕಮಗಳೂರು ಜಿಲ್ಲಾ ಘಟಕ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಗಂಗಾಧರಪ್ಪ ಮಾತನಾಡಿ, ಶ್ರೀ ವಿಶ್ವಗುರು ಬಸವೇಶ್ವರರ ಹಾಗೂ ಸರ್ವ ಶರಣ-ಶರಣೆಯರ ಮಹೋತ್ಸವ ವಚನಗಳ ನಿತ್ಯೋತವವಾಗಬೇಕು ಎಂದರು.

ರವೀಶ್ ಬಸಪ್ಪ ಕ್ಯಾತನಬೀಡು, ಬಸವ ಸಮಿತಿ ಅಧ್ಯಕ್ಷ ಡಾ.ಅರವಿಂದ ಜತ್ತಿ, ಶರಣೆ ಶ್ರೀಮತಿ ಗಂಗಾಂಬಿಕ ಅಕ್ಕ ಮಾತನಾಡಿದರು.

ಬೆಂಗಳೂರು ಶ್ರೀ ಬೇಲಿಮಠ ಮಹಾ ಸಂಸ್ಥಾನದ ಶ್ರೀ ಮ.ನಿ.ಪ್ರ. ಶಿವಾನುಭವ ಚರಮೂರ್ತಿ ಶಿವರುದ್ರ ಸ್ವಾಮೀಜಿ, ಕಡೂರು ಶ್ರೀ ಜ್ಞಾನಪ್ರಭು ಸಿದ್ದರಾಮ ದೇಶೀಕೇಂದ್ರ ಸ್ವಾಮೀಜಿ ಮತ್ತಿತರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.
ನಿವೃತ್ತ ಜಿಲ್ಲಾ ನ್ಯಾಯಮೂರ್ತಿ ಎಸ್. ಎನ್. ಕೆಂಪನಗೌಡ್ರು ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ.ಮಾಜಿ ಅಧ್ಯಕ್ಷ ಕೆ.ಆ .ದೃವಕುಮಾರ್, ಜಿ.ಪಂ.ಮಾಜಿ ಉಪಾಧ್ಯಕ್ಷ ಕೆ.ಆರ್.ಆನಂದಪ್ಪ, ಪುರಸಭೆ ಸದಸ್ಯ ಟಿ.ದಾದಾಪೀರ್, ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಚಂದ್ರಶೇಖರಪ್ಪ ನೇರಲಕೆರೆ, ಚಂದ್ರಶೇಖರ್ ಇದ್ದರು.
