ನವದೆಹಲಿ
ತುಮಕೂರು ರೈಲು ನಿಲ್ದಾಣಕ್ಕೆ ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರ ಹೆಸರು ಇಡುವಂತೆ ಪ್ರಧಾನಿ ನರೇಂದ್ರ ಮೋದಿಗೆ ಕೇಂದ್ರ ರೈಲ್ವೆ ಮತ್ತು ಜಲ ಶಕ್ತಿ ರಾಜ್ಯ ಖಾತೆಯ ಸಚಿವ ವಿ.ಸೋಮಣ್ಣ ಮನವಿ ಮಾಡಿದ್ದಾರೆ.
ನವದೆಹಲಿಯಲ್ಲಿಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಸೋಮಣ್ಣ, 30 ನಿಮಿಷಗಳ ಕಾಲ ಚರ್ಚೆ ಮಾಡಿದ್ದಾರೆ. ಕಳೆದ ಮೂರು ತಿಂಗಳಲ್ಲಿ ಕರ್ನಾಟಕದ ರೈಲ್ವೆ ಅಭಿವೃದ್ಧಿ ಕುರಿತು ತೆಗೆದುಕೊಂಡ ಕ್ರಮಗಳ ಕುರಿತು ಮಾಹಿತಿ ನೀಡಿದರು.
‘ತುಮಕೂರು ರೈಲು ನಿಲ್ದಾಣದ ಅಭಿವೃದ್ಧಿಗೆ ₹82 ಕೋಟಿ ಮಂಜೂರಾಗಿದೆ. ಈ ನಿಲ್ದಾಣಕ್ಕೆ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಹೆಸರನ್ನು ಇರಿಸಬೇಕು’ ಎಂದು ಪ್ರಧಾನಿಯವರಿಗೆ ಮನವಿ ಮಾಡಿರುವುದಾಗಿ ಹೇಳಿಕೆ ನೀಡಿದ್ದಾರೆ.
ತುಮಕೂರು– ರಾಯದುರ್ಗ ರೈಲ್ವೆ ಮಾರ್ಗದ ಭೂಸ್ವಾಧೀನ ಪ್ರಕ್ರಿಯೆಯು ಮೂರು ತಿಂಗಳಲ್ಲಿ ಶೇ 90ರಷ್ಟು ಪೂರ್ಣಗೊಂಡಿದೆ. ಮೂರು ತಿಂಗಳಲ್ಲಿ ಎಲ್ಲ ಜಿಲ್ಲೆಗಳಿಗೆ ಪ್ರವಾಸ ಮಾಡಿ ರೈಲ್ವೆಯ ಪ್ರಗತಿ ಪರಿಶೀಲನೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.
ತುಮಕೂರು – ರಾಯದುರ್ಗ ಮತ್ತು ತುಮಕೂರು-ಚಿತ್ರದುರ್ಗ-ದಾವಣಗೆರೆ ರೈಲು ಮಾರ್ಗವನ್ನು 2027ರ ಜೂನ್‌ನಲ್ಲಿ ಲೋಕಾರ್ಪಣೆ ಮಾಡಲು ತುಮಕೂರಿಗೆ ಆಗಮಿಸುವಂತೆ ಪ್ರಧಾನಮಂತ್ರಿಗಳಿಗೆ ಮನವಿ ಮಾಡಿದರು.