ಮತ್ತೆ ಯಾರೂ ವಚನ ದರ್ಶನದಂತಹ ಸಾಹಸಕ್ಕೆ ಕೈ ಹಾಕುವುದಿಲ್ಲ: ಎಂ.ಬಿ. ಪಾಟೀಲ

ಬಸವ ಮೀಡಿಯಾ
ಬಸವ ಮೀಡಿಯಾ

‘ವಚನ ದರ್ಶನ’ ಪುಸ್ತಕ 9 ಜಿಲ್ಲೆಗಳಲ್ಲಿ ಬಿಡುಗಡೆಯಾಯಿತು. ಅದಕ್ಕೆ ತಿರುಗೇಟು ಕೊಟ್ಟಿರುವ ‘ಮಿಥ್ಯ ಸತ್ಯ’ 15 ಜಿಲ್ಲೆಗಳಲ್ಲಿ ಬಿಡುಗಡೆಯಾಗಲಿದೆ.

ಬೆಂಗಳೂರು

ಇಂದಿನ ಕಾರ್ಯಕ್ರಮದ ನಂತರ ಮತ್ತೆ ಯಾರೂ ವಚನ ದರ್ಶನದಂತಹ ಪುಸ್ತಕವನ್ನು ಹೊರ ತರುವ ಸಾಹಸಕ್ಕೆ ಕೈ ಹಾಕುವುದಿಲ್ಲ ಎಂದು ಬೃಹತ್‌ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಗುರುವಾರ ಹೇಳಿದರು.

ನಗರದ ಬಸವ ಸಮಿತಿಯ ತುಂಬಿ ತುಳುಕುತ್ತಿದ್ದ ಸಭಾಂಗಣದಲ್ಲಿ ಟಿ.ಆರ್. ಚಂದ್ರಶೇಖರ್ ಮತ್ತು ಮುಕ್ತ ಕಾಗಲಿ ಸಂಪಾದಿಸಿರುವ ‘ವಚನ ದರ್ಶನ ಮಿಥ್ಯ-ಸತ್ಯ’ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಸಂಘ ಪರಿವಾರದ ‘ವಚನ ದರ್ಶನ’ ಪುಸ್ತಕಕ್ಕೆ ಲಿಂಗಾಯತ ಸಮಾಜದಿಂದ ಬಂದಿರುವ ತೀಕ್ಷ್ಣ ಪ್ರತಿಕ್ರಿಯೆ ಬಗ್ಗೆ ಮಾತನಾಡಿದರು.

“ನಿಮ್ಮ ಅಸ್ಮಿತೆಯ ಬಗ್ಗೆ ನಮಗೆ ಗೌರವವಿದೆ, ಆದರೆ ನಮ್ಮ ಅಸ್ಮಿತೆಗೆ ಕೈ ಹಾಕಬೇಡಿ. ನಮ್ಮದು ಸತ್ಯವಾದ, ಶ್ರೇಷ್ಠವಾದ ಅಸ್ಮಿತೆ,” ಎಂದು ‘ವಚನ ದರ್ಶನ’ ಪುಸ್ತಕ ಹೊರತಂದಿರುವ ಸಂಘ ಪರಿವಾರದ ನಾಯಕರಿಗೆ ಹೇಳಿದರು.

ನಿಮ್ಮ ಅಸ್ಮಿತೆಯ ಬಗ್ಗೆ ನಮಗೆ ಗೌರವವಿದೆ, ಆದರೆ ನಮ್ಮ ಅಸ್ಮಿತೆಗೆ ಕೈ ಹಾಕಬೇಡಿ.

ವಚನಗಳನ್ನು ಪ್ರಸಾರ ಮಾಡಲು ಪ್ರತಿಯೊಬ್ಬರಿಗೆ ಹಕ್ಕಿದೆ. ಆದರೆ ಉದ್ಧೇಶ ಸರಿಯಾಗಿರಬೇಕು. ವಚನಗಳಿಗೆ ಅಪಾರ್ಥ ಕಲ್ಪಿಸಿರುವ ‘ವಚನ ದರ್ಶನ’ ದುರುದ್ಧೇಶದಿಂದ ಕೂಡಿದೆ. ‘ಮಿಥ್ಯ ಸತ್ಯ’ ಪುಸ್ತಕ ಅದಕ್ಕೆ ಸರಿಯಾದ ಉತ್ತರ ನೀಡಿದೆ ಎಂದು ಹೇಳಿದರು.

ಪ್ರಾಸ್ತಾವಿಕ ನುಡಿಗಳನ್ನು ಆಡಿದ ಜಾಗತಿಕ ಲಿಂಗಾಯತ ಮಹಾಸಭಾದ ಎಸ್. ಎಂ. ಜಾಮದಾರ್ ಪುಸ್ತಕವನ್ನು ಲಿಂಗಾಯತರ ಮೂಲಕ ಸಂಪಾದಿಸಿ, ಲಿಂಗಾಯತ ಲೇಖಕರ ಕೈಯಲ್ಲಿ ಲೇಖನಗಳನ್ನು ಬರೆಸಿ, ಆರೆಸ್ಸೆಸ್ ನಾಯಕರಾದ ಮುಕುಂದ, ಹೊಸಬಾಳೆ, ಬಿ ಎಲ್ ಸಂತೋಷರಂತವರು ಬಿಡುಗಡೆ ಮಾಡಿದರು, ಎಂದು ಹೇಳಿದರು.

ಬೇಲಿ ಮಠ, ಮೂರು ಸಾವಿರ ಮಠ, ಜ್ಞಾನಯೋಗಾಶ್ರಮಗಳಂತಹ ಲಿಂಗಾಯತ ಸಂಸ್ಥೆಗಳನ್ನು ಬಳಸಿಕೊಂಡು ಈ ಪುಸ್ತಕ ಬಿಡುಗಡೆ ಮಾಡಲು ಪ್ರಯತ್ನಿಸಿದರು. ಈ ಬಿಡುಗಡೆ ಕಾರ್ಯಕ್ರಮಗಳಲ್ಲಿ ವಚನಗಳನ್ನು ಮಾನವ ನಿರ್ಮಿತವಲ್ಲ ಎಂಬ ಪ್ರಚೋದನಕಾರಿ ಭಾಷಣ ಮಾಡಲಾಯಿತು, ಎಂದು ಹೇಳಿದರು.

ವಚನ ದರ್ಶನವನ್ನು ಲಿಂಗಾಯತರ ಮೂಲಕ ಸಂಪಾದಿಸಿ, ಲಿಂಗಾಯತ ಲೇಖಕರ ಕೈಯಲ್ಲಿ ಲೇಖನಗಳನ್ನು ಬರೆಸಿ, ಆರೆಸ್ಸೆಸ್ ನಾಯಕರು ಬಿಡುಗಡೆ ಮಾಡಿದರು

ವಚನ ದರ್ಶನ ಪುಸ್ತಕವನ್ನು ಎಲ್ಲಾ ಲಿಂಗಾಯತ ಸಂಘಟನೆಗಳು ವಿರೋಧಿಸಿದವು. ಅಸ್ತಿತ್ವದ ಪ್ರಶ್ನೆ ಬಂದಾಗ ಸಣ್ಣ ಪುಟ್ಟ ಬಿನ್ನಾಭಿಪ್ರಾಯ ಮರೆತು ಒಗ್ಗಟ್ಟಿನಿಂದ ಹೋರಾಡಲು ಸಿದ್ಧವೆಂದು ತೋರಿಸಿದ್ದೇವೆ. ವಚನ ದರ್ಶನ ಪುಸ್ತಕ 9 ಜಿಲ್ಲೆಗಳಲ್ಲಿ ಮತ್ತು ದೆಹಲಿಯಲ್ಲಿ ಬಿಡುಗಡೆಯಾಯಿತು. ಅದಕ್ಕೆ ಸರಿಯಾದ ಉತ್ತರ ಕೊಟ್ಟಿರುವ ಮಿಥ್ಯ ಸತ್ಯ 15 ಜಿಲ್ಲೆಗಳಲ್ಲಿ ಮತ್ತು ದೆಹಲಿಯಲ್ಲಿ ಬಿಡುಗಡೆಯಾಗಲಿದೆ ಎಂದು ಜಾಮದಾರ್ ಹೇಳಿದರು.

ಪುಸ್ತಕ ಪರಿಚಯ ಮಾಡಿಕೊಟ್ಟ ಟಿ. ಆರ್. ಚಂದ್ರಶೇಖರ್ ಅವರು ವಚನಗಳು ಉಪನಿಷತ್ತಿನ ಅನುವಾದ, ವೇದಗಮಗಳ ತಾತ್ಪರ್ಯ ಎನ್ನುವ ವಾದಕ್ಕೆ ‘ಮಿಥ್ಯ-ಸತ್ಯ’ ಉತ್ತರ ಕೊಟ್ಟಿದೆ ಎಂದರು.

ಗದಗ ಶ್ರೀಗಳ ನೇತ್ರತ್ವದಲ್ಲಿ ನಡೆದ ಸಭೆಯಲ್ಲಿ ವಚನ ದರ್ಶನಕ್ಕೆ ಉತ್ತರ ನೀಡಲು ನಿರ್ಧರಿಸಲಾಯಿತು. ಪುಸ್ತಕದ ಜವಾಬ್ದಾರಿಯನ್ನು ಜಾಮದಾರ್ ನನಗೆ ಕೊಟ್ಟರು, ಎಂದು ಪುಸ್ತಕ ರೂಪುಗೊಂಡ ರೀತಿಯನ್ನು ಹೇಳಿದರು.

2025ರ ಲಿಂಗಾಯತರು 2017ರ ಹಿಂದಿನ ಲಿಂಗಾಯತರು ಅಲ್ಲ ಎನ್ನುವುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಇಷ್ಟು ದಿನ ಆರೆಸ್ಸೆಸ್ ಬ್ರಾಹ್ಮಣ್ಯದ ಅಜೆಂಡಾಗೆ ನಾವು ಪ್ರತಿಕ್ರಿಯೆ ನೀಡುತ್ತಿದೆವು, ಇನ್ನು ಮೇಲೆ ನಮ್ಮ ಅಜೆಂಡಾಗೆ ಅವರು ಪ್ರತಿಕ್ರಿಯೆ ನೀಡುವಂತೆ ಮಾಡಬೇಕು, ಎಂದು ಹೇಳಿದರು.

2025ರ ಲಿಂಗಾಯತರು 2017ರ ಹಿಂದಿನ ಲಿಂಗಾಯತರು ಅಲ್ಲ ಎನ್ನುವುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು.

ಲಿಂಗಾಯತರ ಮೇಲೆ ನಡೆಯುತ್ತಿರುವ ದಾಳಿಯನ್ನು ವಿಸ್ತೃತವಾಗಿ ಅರ್ಥ ಮಾಡುಕೊಳ್ಳಬೇಕು. ಇದು ಭಾರತದ ಜನತಂತ್ರ, ಸಂವಿಧಾನ, ಕನ್ನಡ ಭಾಷೆಯ ಮೇಲೆ ನಡೆಯುತ್ತಿರುವ ದಾಳಿಯ ಭಾಗ. ಇದು ಬಹುತ್ವ ಸಂಸ್ಕೃತಿಯ ಮೇಲೆ ಏಕ ಸಂಸ್ಕೃತಿಯನ್ನು ಹೇರುವ ಹುನ್ನಾರ, ಎಂದು ಹೇಳಿದರು.

ಸಭೆಯಲ್ಲಿ ಮಾತನಾಡಿದ ಪೂಜ್ಯ ತೋಂಟದ ಸಿದ್ಧರಾಮ ಸ್ವಾಮೀಜಿ ಅವರು ‘ವಚನ ದರ್ಶನ’ ಹುಟ್ಟಿದ್ದು ಗದಗಿನಲ್ಲಿ. ಅದಕ್ಕೆ ವಿರುದ್ಧವಾಗಿ ಸತ್ಯ ತಿಳಿಸುವ ಗ್ರಂಥರಚಿಸುವ ಚಿಂತನೆಯ ಬೀಜವೂ ಗದಗಿನಲ್ಲಿಯೇ ಹುಟ್ಟಿತು, ಎಂದು ಹೇಳಿದರು.

ಶಾಸಕ ಬಿ.ಆರ್. ಪಾಟೀಲ ವಚನ ದರ್ಶನ ಕಲ್ಲಿನ ಮೇಲೆ ಗಾಜು ಬಿದ್ದರೆ ಒಡೆಯುವುದು ಗಾಜು ಎಂದು ಸಂಘ ಪರಿವಾರಕ್ಕೆ ಅರಿವಾಗಿದೆ ಎಂದು ಹೇಳಿದರು.

ಲಿಂಗಾಯತರ ಮೇಲೆ ನಡೆಯುತ್ತಿರುವ ದಾಳಿ ಭಾರತದ ಜನತಂತ್ರ, ಸಂವಿಧಾನ, ಕನ್ನಡ ಭಾಷೆಯ ಮೇಲೆ ನಡೆಯುತ್ತಿರುವ ದಾಳಿಯ ಭಾಗ.

ವಿಧಾನಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಂಕರ ಬಿದರಿಯವರೂ ಸಭೆಯಲ್ಲಿ ಮಾತನಾಡಿದರು.

ಎಲ್ಲಾ ಲಿಂಗಾಯತ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ನಡೆದ ಗುರುವಾರದ ಸಭೆ ಆರಂಭದಲ್ಲಿ ಹೊಸ ಒಗ್ಗಟ್ಟಿನ ಸಂಭ್ರಮವಿತ್ತು. ಆದರೆ ಬಿದರಿಯವರ ಭಾಷಣದ ನಂತರ ಅದು ಬಂದ ವೇಗದಲ್ಲೇ ಕಣ್ಮರೆಯಾಯಿತು.

ಕಾರ್ಯಕ್ರಮದಲ್ಲಿ ಆನ್‌ ಲೈನ್‌ ಲಿಂಗಾಯತ ಮಾಸಿಕ ಪತ್ರಿಕೆ ಮತ್ತು ವಿಜಯ ಕುಮಾರ ಕಮ್ಮಾರ ಬರೆದಿರುವ ‘ವಚನ ದರ್ಶನ ಎನ್ನುವ ಅಪಸವ್ಯ ಮತ್ತು ಅದ್ವಾನ’ ಪುಸ್ತಕಗಳೂ ಬಿಡುಗಡೆಯಾದವು.

ಕಾರ್ಯಕ್ರಮದ ವಿವರ

ಪಾಲ್ಗೊಂಡ ಸಂಘಟನೆಗಳು
ಜಾಗತಿಕ ಲಿಂಗಾಯತ ಮಹಾಸಭಾ, ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಲಿಂಗಾಯತ ಧರ್ಮ ಮಹಾಸಭಾ/ರಾಷ್ಟ್ರೀಯ ಬಸವದಳ ಮತ್ತು ಬಸವ ಸಮಿತಿ ಮತ್ತು ಇತರ ಬಸವಪರ ಸಂಘಟನೆ

ಸಾನಿಧ್ಯ
ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು, ಡಾ. ಬಸವಲಿಂಗ ಪಟ್ಟದ್ದೇವರು, ಡಾ. ಗಂಗಾ ಮಾತಾಜಿಯವರು, ಶ್ರೀ ಶಿವರುದ್ರ ಮಹಾಸ್ವಾಮಿಗಳು, ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು, ಡಾ. ಶರಶ್ಚಂದ್ರ ಸ್ವಾಮಿಗಳು, ಶ್ರೀ ಶ್ರೀಕಂಠ ಸ್ವಾಮಿಗಳು, ಶ್ರೀ ಚಂದ್ರಶೇಖರ ಸ್ವಾಮಿಗಳು, ಶ್ರೀ ಸಿದ್ಧಲಿಂಗ ಸ್ವಾಮಿಗಳು, ಶ್ರೀ ಮೃತ್ಯುಂಜಯ ಸ್ವಾಮಿಗಳು, ಶ್ರೀ ಶಿವಾನಂದ ಸ್ವಾಮಿಗಳು, ಶ್ರೀ ಪ್ರಭುಚನ್ನಬಸವ ಸ್ವಾಮಿಗಳು, ಶ್ರೀ ಬಸವಮರುಳಸಿದ್ಧ ಸ್ವಾಮಿಗಳು, ಶ್ರೀ ಬಸವೇಶ್ವರಿ ಮಾತಾಜಿ

ಅಧ್ಯಕ್ಷತೆ
ಶರಣ ಶ್ರೀ ಬಸವರಾಜ ಹೊರಟ್ಟಿ (ಮಾನ್ಯ ಸಭಾಪತಿಗಳು, ವಿಧಾನಪರಿಷತ್ತು, ಬೆಂಗಳೂರು, ಅಧ್ಯಕ್ಷರು)

ಗ್ರಂಥ ಬಿಡುಗಡೆ
ಡಾ. ಎಂ. ಬಿ. ಪಾಟೀಲ (ಮಾನ್ಯ ಬೃಹತ್‌ ಕೈಗಾರಿಕಾ ಸಚಿವರು, ಬೆಂಗಳೂರು, ಕಾರ್ಯಾಧ್ಯಕ್ಷರು, ಜಾಗತಿಕ ಲಿಂಗಾಯತ ಮಹಾಸಭಾ, ಬೆಂಗಳೂರು)

ಪ್ರಾಸ್ತಾವಿಕ ನುಡಿ
ಡಾ. ಶಿವಾನಂದ ಜಾಮದಾರ (ಐ.ಎ.ಎಸ್‌. (ನಿವೃತ್ತ) ಪ್ರಧಾನ ಕಾರ್ಯದರ್ಶಿಗಳು, ಜಾಗತಿಕ ಲಿಂಗಾಯತ ಮಹಾಸಭಾ, ಬೆಂಗಳೂರು)

ಗ್ರಂಥ ಪರಿಚಯ
ಡಾ. ಟಿ.ಆರ್‌. ಚಂದ್ರಶೇಖರ (ಶರಣ ಸಾಹಿತಿಗಳು, ಬೆಂಗಳೂರು)
ಉಪಸ್ಥಿತಿ: ಪ್ರೊ. ವೀರಭದ್ರಯ್ಯ (ಅಧ್ಯಕ್ಷರು, ಜಾಗತಿಕ ಲಿಂಗಾಯತ ಮಹಾಸಭಾ, ಜಿಲ್ಲಾ ಘಟಕ ಬೆಂಗಳೂರು)

ಉಪಸ್ಥಿತಿ
ಡಾ. ಗೊ.ರು. ಚನ್ನಬಸವಪ್ಪನವರು (ಶರಣ ಸಾಹಿತಿಗಳು, ಜಾನಪದ ವಿದ್ವಾಂಸರು, ಬೆಂಗಳೂರು) ಶರಣ ಶ್ರೀ ಶಂಕರ ಬಿದರಿ (ಐ.ಪಿ.ಎಸ್‌ (ನಿವೃತ್ತ) ರಾಜ್ಯಾಧ್ಯಕ್ಷರು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಬೆಂಗಳೂರು)

ಸ್ವಾಗತ ಭಾಷಣ
ಶರಣ ಶ್ರೀ ಬಸವರಾಜ ಧನ್ನೂರ (ಉಪಾಧ್ಯಕ್ಷರು, ಜಾಗತಿಕ ಲಿಂಗಾಯತ ಮಹಾಸಭಾ, ಬೆಂಗಳೂರು)

ಶರಣು ಸಮರ್ಪಣೆ
ಶರಣ ಶ್ರೀ ಬಸವರಾಜ ರೊಟ್ಟಿ (ಸಂಘಟನಾ ಕಾರ್ಯದರ್ಶಿ, ಜಾಗತಿಕ ಲಿಂಗಾಯತ ಮಹಾಸಭಾ, ಬೆಂಗಳೂರು)

ನಿರೂಪಣೆ
ಕಲಾದೇಗುಲ ಶ್ರೀನಿವಾಸ

Share This Article
Leave a comment

Leave a Reply

Your email address will not be published. Required fields are marked *