ವೈದಿಕತೆ ವಿರೋಧಿಸುವ ವಚನಗಳು 2: ಅಕ್ಕ ಮಹಾದೇವಿ

ದಾವಣಗೆರೆ

ವಚನ ದರ್ಶನದ ನಂತರ ಬಸವಾದಿ ಶರಣರನ್ನು ಹಿಂದುತ್ವದ ಮಡಿಲಿಗೆ ಸೇರಿಸಲು ಮತ್ತೊಂದು ಪ್ರಯತ್ನ ನಡೆದಿದೆ. ಈಚೆಗೆ ಪ್ರಕಟವಾದ ‘ಬಸವ ಶೈವದಲ್ಲಿ ಹಿಂದುತ್ವ’ ಪುಸ್ತಕ ಹಿಂದೂ ಧರ್ಮಕ್ಕೆ ಪೂರಕವಾದಂತೆ ಕಾಣಿಸುವ ಕೆಲವು ವಚನಗಳನ್ನು ಸಂಗ್ರಹಿಸಿ ವಿಶ್ಲೇಷಿಸಿದೆ.

ಸಂಘ ಪರಿವಾರ ಇತ್ತೀಚೆಗೆ ಬಬಲೇಶ್ವರದಲ್ಲಿ ನಡೆಸಿದ ಕನ್ನೇರಿ ಸ್ವಾಮಿ ಪರ ಸಮಾವೇಶದಲ್ಲಿ ಈ ಪುಸ್ತಕ ಮತ್ತೆ ಬಿಡುಗಡೆಯಾಯಿತು.

ಇದಕ್ಕೆ ಪ್ರತಿಯಾಗಿ ಬಸವ ತತ್ವ ಚಿಂತಕ ವಿಶ್ವೇಶ್ವರಯ್ಯ ಬಿ. ಎಂ. ವೈದಿಕತೆಯನ್ನು ನಿರಾಕರಿಸುವ ಹಲವಾರು ಶರಣರ ವಚನಗಳನ್ನು ಆಯ್ಕೆ ಮಾಡಿದ್ದಾರೆ.

‘ಬಸವ ಶೈವದಲ್ಲಿ ಹಿಂದುತ್ವ’ ಲೇಖಕರ ಪಾಂಡಿತ್ಯ, ಉದ್ದೇಶ, ಬಸವಾದಿ ಶರಣರ ಸಾಧನೆ, ಅವರ ವಚನಗಳ ನಿಲುವು – ಇವೆಲ್ಲಾ ಗಂಭೀರ ಚರ್ಚೆಯ ವಿಷಯಗಳು. ಈ ನಿಟ್ಟಿನಲ್ಲಿ ಇದು ಬಸವ ಮೀಡಿಯಾದ ಸಣ್ಣ ಪ್ರಯತ್ನ.

ಅಕ್ಕಮಹಾದೇವಿ ಅವರ ವಚನಗಳು

ಓದಿ ಓದಿ ವೇದ ವಾದಕ್ಕಿಕ್ಕಿತ್ತು.
ಕೇಳಿ ಕೇಳಿ ಶಾಸ್ತ್ರ ಸಂದೇಹಕ್ಕಿಕ್ಕಿತ್ತು.
ಅರಿದೆಹೆ ಅರಿದೆಹೆನೆಂದು ಆಗಮ ಅರೆಯಾಗಿ ಹೋಯಿತ್ತು.
ಪೂರೈಸಿಹೆ ಪೂರೈಸಿಹೆನೆಂದು
ಪುರಾಣ ಪೂರ್ವದ ಬಟ್ಟೆಗೆ ಹೋಯಿತ್ತು.
ನಾನೆತ್ತ ತಾನೆತ್ತ? ಬೊಮ್ಮ ಬಟ್ಟಬಯಲು ಚೆನ್ನಮಲ್ಲಿಕಾರ್ಜುನಾ

ಸನಾತನ ಧರ್ಮದ ವೇದ ಶಾಸ್ತ್ರ ಪುರಾಣಗಳು ಆಗಮಗಳನ್ನು ಓದುವುದರಿಂದ ಏನೇನೂ ಉಪಯೋಗವಿಲ್ಲ ಎಂದಿದ್ದಾರೆ ಅಕ್ಕಮಹಾದೇವಿ ಅವರು ಈ ವಚನದಲ್ಲಿ.

ತನು ಕರಗದವರಲ್ಲಿ ಮಜ್ಜನವನೊಲ್ಲೆಯಯ್ಯಾ ನೀನು
ಮನ ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ ನೀನು
ಹದುಳಿಗರಲ್ಲದವರಲ್ಲಿ ಗಂಧಾಕ್ಷತೆಯನೊಲ್ಲೆಯಯ್ಯಾ ನೀನು
ಅರಿವು ಕಣ್ದೆರೆಯದವರಲ್ಲಿ ಆರತಿಯನೊಲ್ಲೆಯಯ್ಯಾ ನೀನು
ಭಾವಶುದ್ಧವಿಲ್ಲದವರಲ್ಲಿ ಧೂಪವನೊಲ್ಲೆಯಯ್ಯಾ ನೀನು
ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನೊಲ್ಲೆಯಯ್ಯಾ ನೀನು
ತ್ರಿಕರಣ ಶುದ್ಧವಿಲ್ಲದವರಲ್ಲಿ ತಾಂಬೂಲವನೊಲ್ಲೆಯಯ್ಯಾ ನೀನು
ಹೃದಯಕಮಲ ಅರಳದವರಲ್ಲಿ ಇರಲೊಲ್ಲೆಯಯ್ಯಾ ನೀನು
ಎನ್ನಲ್ಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ
ಹೇಳಾ ಚೆನ್ನಮಲ್ಲಿಕಾರ್ಜುನಯ್ಯಾ

ಸನಾತನ ಧರ್ಮದ ಪೂಜಾ ವಿಧಾನಗಳಾದ ಮಜ್ಜನ, ಪತ್ರೆ, ಪುಷ್ಪ, ಧೂಪ, ಆರತಿಗಳಿಗಿಂತ ದೇಹವ ದಂಡಿಸಿದರೆ ಅದೇ ಮಜ್ಜನ, ಇನ್ನೊಬ್ಬರ ಕಷ್ಟಕ್ಕೆ ಮನಸ್ಸು ಕರಗಿದರೆ ಅದೇ ಪತ್ರೆ ಪುಷ್ಪ, ಹೀಗೆ ಉತ್ತಮವಾದ ಪೂಜಾ ವಿಧಾನವನ್ನು ಅಕ್ಕಮಹಾದೇವಿ ಈ ಪ್ರಸಿದ್ಧ ವಚನದಲ್ಲಿ ತಿಳಿಸಿದ್ದಾರೆ.

ವೇದ ಶಾಸ್ತ್ರ ಆಗಮ ಪುರಾಣಗಳೆಲ್ಲವು
ಕೊಟ್ಟಣವ ಕುಟ್ಟಿದ ನುಚ್ಚು ತೌಡು ಕಾಣಿಭೋ.
ಇವ ಕುಟ್ಟಲೇಕೆ ಕುಸುಕಲೇಕೆ?
ಅತ್ತಲಿತ್ತ ಹರಿವ ಮನದ ಶಿರವನರಿದಡೆ
ಬಚ್ಚಬರಿಯ ಬಯಲು ಚೆನ್ನಮಲ್ಲಿಕಾರ್ಜುನಾ.

ಸನಾತನ ಧರ್ಮದ ವೇದ, ಶಾಸ್ತ್ರ, ಪುರಾಣ, ಆಗಮಗಳೆಲ್ಲಾ ಬತ್ತದ ತೌಡು. ಅದನ್ನು ಕುಟ್ಟುವುದೇಕೆ ಎಂದಿದ್ದಾರೆ ಅಕ್ಕಮಹಾದೇವಿ ಅವರು.

ಸಾವಿಲ್ಲದ ಕೇಡಿಲ್ಲದ ರೂಹಿಲ್ಲದ ಚೆಲುವಂಗೆ ನಾನೊಲಿದೆ.
ಎಡೆಯಿಲ್ಲದ ಕಡೆಯಿಲ್ಲದ ತೆರಹಿಲ್ಲದ ಕುರುಹಿಲ್ಲದ
ಚೆಲುವಂಗೆ ನಾನೊಲಿದೆ ಎಲೆ ಅವ್ವಗಳಿರಾ.
ಭವವಿಲ್ಲವ ಭಯವಿಲ್ಲದ
ನಿರ್ಭಯ ಚೆಲುವಂಗೊಲಿದೆ ನಾನು.
ಸೀಮೆಯಿಲ್ಲದ ನಿಸ್ಸೀಮಂಗೊಲಿದೆ ನಾನು.
ಚೆನ್ನಮಲ್ಲಿಕಾರ್ಜುನನೆಂಬ ಗಂಡಂಗೆ
ಮಿಗೆ ಮಿಗೆ ಒಲಿದೆ ಎಲೆ ಅವ್ವಗಳಿರಾ.

ಸನಾತನ ಧರ್ಮದ ದೇವರುಗಳು ಬಹುತೇಕ ಹುಟ್ಟಿ ಸತ್ತಿರುವವು. ಹುಟ್ಟಿ ಸತ್ತಿರುವವರು ದೇವರು ಅಲ್ಲ. ಹಾಗೆಯೇ ಸನಾತನ ಧರ್ಮದ ದೇವರುಗಳು ಕೇಡು ಬಯಸುವಂಥವು ಹಾಗೂ ಭಯ ಹುಟ್ಟಿಸುವಂತವು. ಅಂತಹ ದೇವರನ್ನು ತಿರಸ್ಕರಿಸಿದ ಅಕ್ಕಮಹಾದೇವಿ ಅವರು ಕೇಡಿಲ್ಲದ ಭಯವಿಲ್ಲದ ಸಾವಿಲ್ಲದ ದೇವರನ್ನು ತೋರಿಸಿದ ವಚನ.

ಹಾಲ ಹಿಡಿದು ಬೆಣ್ಣೆಯನರಸಲುಂಟೆ?
ಲಿಂಗವ ಹಿಡಿದು ಪುಣ್ಯತೀರ್ಥಕ್ಕೆ ಹೋಗಲುಂಟೆ?
ಲಿಂಗದ ಪಾದತೀರ್ಥ ಪ್ರಸಾದವ ಕೊಂಡು
ಅನ್ಯಬೋಧೆ ಅನ್ಯಶಾಸ್ತ್ರಕ್ಕೆ ಹಾರೈಸಲೇತಕ್ಕೆ?
ಇಷ್ಟಲಿಂಗವಿದ್ದಂತೆ ಸ್ಥಾವರಲಿಂಗಕ್ಕೆ ಶರಣೆಂದೆನಾದಡೆ
ತಡೆಯದೆ ಹುಟ್ಟಿಸುವನು ಶ್ವಾನನ ಗರ್ಭದಲ್ಲಿ.*
ಅದೆಂತೆಂದಡೆ; ಶಿವಧರ್ಮ ಪುರಾಣದಲ್ಲಿ:
‘ಇಷ್ಟಲಿಂಗಮವಿಶ್ವಸ್ಯ ತೀರ್ಥಲಿಂಗಸ್ಯ ಪೂಜಕಃ|
ಶ್ವಾನಯೋನಿಶತಂ ಗತ್ವಾ ಚಾಂಡಾಲಗೃಹಮಾಚರೇತ್’||
ಎಂದುದಾಗಿ,
ಇದನರಿದು ಗುರು ಕೊಟ್ಟ ಲಿಂಗದಲ್ಲಿಯೆ
ಎಲ್ಲಾ ತೀರ್ಥಂಗಳೂ ಎಲ್ಲಾ ಕ್ಷೇತ್ರಂಗಳು
ಇದ್ದಾವೆಂದು ಭಾವಿಸಿ ಮುಕ್ತರಪ್ಪುದಯ್ಯಾ.
ಇಂತಲ್ಲದೆ ಗುರು ಕೊಟ್ಟ ಲಿಂಗವ ಕಿರಿದು ಮಾಡಿ,
ತೀರ್ಥಲಿಂಗವ ಹಿರಿದು ಮಾಡಿ ಹೋದಾತಂಗೆ
ಅಘೋರ ನರಕ ತಪ್ಪದು ಕಾಣಾ ಚೆನ್ನಮಲ್ಲಿಕಾರ್ಜುನಾ.

ಇಷ್ಟ ಲಿಂಗ ಕಟ್ಟಿದ ಮೇಲೆ ಸನಾತನ ಧರ್ಮದ ರೀತಿಯಲ್ಲಿ ತೀರ್ಥಕ್ಷೇತ್ರ ಹೋಗುವುದು, ಸ್ಥಾವರ ಲಿಂಗ ಪೂಜಿಸುವುದು ಸರಿಯಲ್ಲ ಎಂದು ಅಕ್ಕಮಹಾದೇವಿ ಹೇಳುತ್ತಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HxAWJ403uVgK5HFZlxTVut

Share This Article
Leave a comment

Leave a Reply

Your email address will not be published. Required fields are marked *

ಪ್ರಧಾನ ಕಾರ್ಯದರ್ಶಿ, ಶರಣ ಸಾಹಿತ್ಯ ಪರಿಷತ್ತು ದಾವಣಗೆರೆ ತಾಲ್ಲೂಕು