ಭೈರನಹಟ್ಟಿ ವಿರಕ್ತಮಠದಲ್ಲಿ ಅಕ್ಕಮಹಾದೇವಿ ಜಯಂತ್ಯುತ್ಸವ

ನರಗುಂದ

ಗ್ರಾಮೀಣ ಪ್ರದೇಶಗಳಲ್ಲಿ ಹೆಣ್ಣು ಮಕ್ಕಳು ಪ್ರೌಡಾವಸ್ಥೆಗೆ ಬರುತ್ತಿದ್ದಂತೆ ಪರೋಕ್ಷವಾಗಿ ಅವರ ಸ್ವಾತಂತ್ರ್ಯಗಳನ್ನು ಕಸಿದುಕೊಳ್ಳಲಾಗುತ್ತಿದೆ. ಸರಕಾರ ಸಾಕಷ್ಟು ಕಠಿಣ ಕಾನೂನುಗಳನ್ನು ಜಾರಿಗೆ ತಂದರೂ ಸಹಿತ ಬಾಲ್ಯವಿವಾಹ ದಿನದಿಂದ ದಿನಕ್ಕೆ ಉಲ್ಬಣವಾಗುತ್ತಿದೆ, ಇದರ ಬಗ್ಗೆ ಸಮಾಜ ಜಾಗೃತವಾಗಬೇಕಿದೆ ಎಂದು ನರಗುಂದ ಸಹಾಯಕ ತೋಟಗಾರಿಕೆ ಅಧಿಕಾರಿಗಳಾದ ಕುಮಾರಿ ತೇಜಶ್ವಿನಿ ಶಿರಿಯಪ್ಪಗೌಡ್ರ ಅವರು ಹೇಳಿದರು.

ಅವರು ತಾಲೂಕಿನ ಭೈರನಹಟ್ಟಿ ಗ್ರಾಮದ ಶ್ರೀ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ಶ್ರೀ ದೊರೆಸ್ವಾಮಿ ವಿವಿದೋದ್ದೇಶ ಟ್ರಸ್ಟ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವೈರಾಗ್ಯನಿಧಿ ಅಕ್ಕಮಹಾದೇವಿ ಜಯಂತ್ಯುತ್ಸವದ ನಿಮಿತ್ಯ ಹಮ್ಮಿಕೊಂಡಿದ್ದ ಮಹಿಳಾಗೋಷ್ಠಿ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದರು.

ದೇಶದ ಮೊಟ್ಟಮೊದಲ ಕವಿಯಿತ್ರಿ ವೈರಾಗ್ಯನಿಧಿ ಅಕ್ಕಮಹಾದೇವಿ ಇಡೀ ವಿಶ್ವಕಂಡಂತಹ ದಿಟ್ಟ ಮಹಿಳೆ ಅಕ್ಕಮಹಾದೇವಿಯ ಜೀವನ ಸಂದೇಶ ನಮಗೆಲ್ಲ ದಾರಿದೀಪ. ೧೨ ನೇ ಶತಮಾನದಲ್ಲಿ ಮೌಡ್ಯಾಚರಣೆ ಹಾಗೂ ಅನಿಷ್ಠ ಪದ್ಧತಿಗಳನ್ನು ಧಿಕ್ಕರಿಸಿ ಮಹಿಳೆಯರ ಪರ ದ್ವನಿ ಎತ್ತಿ ಸ್ತ್ರಿಸ್ವಾತಂತ್ರ್ಯವನ್ನು ಬಯಸಿದ ಅಕ್ಕಮಹಾದೇವಿ ಸಾವಿರಾರು ವಚನಗಳನ್ನು ರಚಿಸಿದ್ದಾರೆ, ಅವು ಸರ್ವಕಾಲಿಕವಾಗಿವೆ ಎಂದು ಅವರು ಹೇಳಿದರು.

ಉಪನ್ಯಾಸಕರಾಗಿ ಆಗಮಿಸಿದ್ದ ನ್ಯಾಯವಾದಿಗಳಾದ ಸುವರ್ಣ ಅಕ್ಕಿ ಮಾತನಾಡಿ, ಮಹಿಳೆಯರು ಪ್ರತಿಯೊಂದು ರಂಗದಲ್ಲಿಯೂ ಮುಂಚೂಣಿಯಲ್ಲಿ ಬರಬೇಕು. ಸಮಾಜದಲ್ಲಿ ಮಹಿಳೆಯರು ಸಾಕಷ್ಟು ಶೋಷಣೆಗಳನ್ನು ಅನುಭವಿಸುತ್ತಿದ್ದಾರೆ, ಅವುಗಳನ್ನು ಪ್ರಶ್ನಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಇದು ಶಿಕ್ಷಣದಿಂದ ಮಾತ್ರ ಸಾದ್ಯ ಹೀಗಾಗಿ ಮಹಿಳೆಯರು ಶಿಕ್ಷಣದಿಂದ ವಿಮುಖರಾಗದೆ ಉತ್ತಮ ಶಿಕ್ಷಣ ಪಡೆದು ಕಾನೂನಿನ ಬಗ್ಗೆ ತಿಳುವಳಿಕೆಯನ್ನು ಪಡೆದುಕೊಳ್ಳಬೇಕಾಗಿದೆ.

ಆಧುನಿಕ ಯುಗದಲ್ಲಿ ಮಹಿಳೆಯರೂ ಪುರುಷರಷ್ಟೇ ಸಬಲರಾಗಿ ನಿಲ್ಲಬಲ್ಲವರಾಗಿದ್ದಾರೆ.

ಅಕ್ಕಮಹಾದೇವಿಯ ವಚನಗಳನ್ನು ಪ್ರತಿಯೊಬ್ಬ ಮಹಿಳೆಯರೂ ಅರಿತು. ಅಕ್ಕನ ಮಾರ್ಗದಲ್ಲಿ ಸ್ವಾವಲಂಭಿಯಾಗಿ ಜೀವನವನ್ನು ಸಾಗಿಸಬೇಕು. ಇದಕ್ಕೆ ಪೂರಕವಾಗಿ ಸಂವಿಧಾನದಲ್ಲಿ ಸ್ತ್ರಿಗೆ ಸಮಾನತೆಯನ್ನು ಕಲ್ಪಿಸಿದೆ. ಹೀಗಾಗಿ ಎಲ್ಲ ರಂಗಗಳಲ್ಲಿಯೂ ಮಹಿಳೆಯರು ಮುಂದೆ ಬರಬೇಕು ಎಂದು ಸುವರ್ಣ ಹೇಳಿದರು.

ಈ ಸಂದರ್ಭದಲ್ಲಿ ಪೂಜ್ಯ ಶಾಂತಲಿಂಗ ಶ್ರೀಗಳು ಸಾನಿದ್ಯವಹಿಸಿ ಆಶೀರ್ವಚನ ನೀಡಿದರು. ವಿಶ್ರಾಂತ ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಾ ಪಾಟೀಲ ಪ್ರಸ್ತಾವಿಕವಾಗಿ ಮಾತನಾಡಿದರು. ಸಾಧಕ ಮಹಿಳೆಯರಾದ ಸಾಹಿತಿ ಡಾ. ವ್ಹಿ. ವ್ಹಿ. ಹಿರೇಮಠ, ನ್ಯಾಯವಾದಿ ಸುವರ್ಣ ಅಕ್ಕಿ, ತೇಜಶ್ವಿನಿ ಶಿರಿಯಪ್ಪಗೌಡ್ರ ಅವರನ್ನು ಶ್ರೀಮಠದಿಂದ ಸತ್ಕರಿಸಲಾಯಿತು. ವೇದಿಕೆ ಮೇಲೆ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಸುಕನ್ಯಾ ಸಾಲಿ, ದ್ರಾಕ್ಷಾಯಣಿ ಶಿವಪ್ಪಯ್ಯನಮಠ, ಪದ್ಮಾವತಿ ಗಾಣಿಗೇರ, ಭಾವನಾ ಪಾಟೀಲ, ಡಾ. ವೀರೇಶ ಸತ್ತಿಗೇರಿ, ಈರಪ್ಪ ಕುಪ್ಪಸ್ತ, ಈರಪ್ಪ ತಿಗಡಿ ಪ್ರಮುಖರು ಉಪಸ್ಥಿತರಿದ್ದರು.

ಪ್ರೊ. ಆರ್. ಕೆ. ಐನಾಪೂರ ಕಾರ್ಯಕ್ರಮ ನಿರ್ವಹಿಸಿದರು. ಮಹಾಂತೇಶ ಹಿರೇಮಠ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/EeBeeIO5TisIVCASg0Dpbn

Share This Article
Leave a comment

Leave a Reply

Your email address will not be published. Required fields are marked *