ಬೀದರ:
ವಚನಗಳು ಬದುಕಿನ ದಾರಿದೀಪ. ಶರಣರು ನಮ್ಮೊಂದಿಗೆ ಇಂದಿಗೂ ಮಾತನಾಡುತ್ತಾರೆ. ಯಾವುದರ ಮುಖಾಂತರ ಎಂದರೆ? ವಚನ ಸಾಹಿತ್ಯದ ಮುಖಾಂತರ. ಎಲ್ಲಾ ಸಮಸ್ಯೆಗಳಿಗೆ ಪರಿಹಾರ ವಚನ ಸಾಹಿತ್ಯದಲ್ಲಿದೆ. ಅಂತಹ ಸಾಹಿತ್ಯಕ್ಕೆ ಪಟ್ಟ ಕಟ್ಟುವುದೇ ಅತ್ಯಂತ ಶ್ರೇಷ್ಠ ಎಂದು ತಿಳಿದು ವಚನಗಳಿಗೆ ಪಟ್ಟಕಟ್ಟಿದ ಕೀರ್ತಿ ಅಕ್ಕ ಅನ್ನಪೂರ್ಣ ತಾಯಿಯವರಿಗೆ ಸಲ್ಲುತ್ತದೆ.
ಅದೇ ಕಾರ್ಯವನ್ನು ಮುನ್ನಡೆಸಿಕೊಂಡು ಬಂದು ಇಂದು ಬಸವಕಲ್ಯಾಣದ ಪರುಷಕಟ್ಟೆಯ ಮೇಲೆ ವಚನಗಳಿಗೆ ಪಟ್ಟಕಟ್ಟಲಾಗುತ್ತಿದೆ ಎಂದು ಬಸವಗಿರಿಯ ಲಿಂಗಾಯತ ಮಹಾಮಠ ಬಸವಗಿರಿ ಪಿಠಾಧಿಪತಿಗಳಾದ ಪ್ರಭುದೇವ ಮಹಾಸ್ವಾಮೀಜಿ ತಿಳಿಸಿದರು.
ಬಸವಕಲ್ಯಾಣ ಪರುಷಕಟ್ಟೆಯ ಮೇಲೆ ವಚನ ಸಾಹಿತ್ಯಕ್ಕೆ ಪಟ್ಟವನ್ನು ಕಟ್ಟಿ ಮಾತನಾಡಿದ ಪೂಜ್ಯರು, ಬಸವಣ್ಣನವರು ಕುಂತ ನೆಲವೇ ಪರುಷ ಕಟ್ಟೆ. ಸಮಸ್ಯೆಗಳಿಗೆ ಸಮಾಧಾನವನ್ನು ನೀಡುತ್ತಾ, ಬೇಡಿದವರಿಗೆ ಬೇಡಿದ್ದನ್ನು ಇಲ್ಲೆನ್ನದೆ ದಾಸೋಹ ಮಾಡುತ್ತಾ, ಸರ್ವರ ಸಮಸ್ಯೆಗಳಿಗೆ ಸ್ಪಂದಿಸಿದ ನೆಲವೇ ಪರುಷಕಟ್ಟೆ.

ಹಲವಾರು ವರ್ಷಗಳ ಪೂರ್ವದಲ್ಲಿ ಪೂಜ್ಯ ಅಕ್ಕ ಅನ್ನಪೂರ್ಣತಾಯಿ ಈ ಒಂದು ಸತ್ಯವನ್ನು ತಿಳಿದು ವಚನಗಳಿಗೆ ಪಟ್ಟಕಟ್ಟುವ ಕಾರ್ಯ ನಡೆಸಿಕೊಂಡು ಬಂದಿದ್ದಾರೆ. ಅವರ ಸಂಕಲ್ಪದಂತೆ ಇಂದು ವಚನಗಳಿಗೆ ಪಟ್ಟ ಕಟ್ಟುವ ಕಾರ್ಯ ಮಾಡಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶರಣ ಸಾಹಿತಿಗಳಾದ ರಮೇಶ ಮಠಪತಿ, ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಶರಣರು ಕಲ್ಯಾಣ ತೊರೆದು ಹೋಗಬೇಕಾದರೆ ಪ್ರಾಣ ಉಳಿಸಿಕೊಳ್ಳಬೇಕೆಂದು ಕಲ್ಯಾಣ ತೊರೆದವರಲ್ಲ, ವಚನ ಸಾಹಿತ್ಯ ಉಳಿಸಲು ಕಲ್ಯಾಣ ತೊರೆದು ಹೋದವರು. ಉಳವಿಯ ದಟ್ಟಕಾಡಿನಲ್ಲಿ ವಚನ ಸಾಹಿತ್ಯವನ್ನು ಇಟ್ಟು, ವಚನಗಳಿಗೆ ಪಟ್ಟ ಕಟ್ಟಿದವರು ಮೊಟ್ಟಮೊದಲು ಬಸವಣ್ಣನವರ ಅಕ್ಕನಾದ ಅಕ್ಕನಾಗಮ್ಮ ತಾಯಿಯವರು. ಅಂತೆಯೇ ಜನಪದ ನುಡಿಯಲ್ಲಿ ಹೇಳುತ್ತಾರೆ, ಮೇರಿಸಿದರು ತತ್ವ ಮಂಟಪವ ಎಂದು.

ಆ ಒಂದು ಸತ್ಯವನ್ನು ಅರಿತವರು ಪೂಜ್ಯ ಅಕ್ಕ ಅನ್ನಪೂರ್ಣತಾಯಿ. ಅಂತೆಯೇ ಹಲವಾರು ವರ್ಷಗಳಿಂದ ವಚನಗಳಿಗೆ ಪಟ್ಟುವ ಕಟ್ಟುವ ಕಾರ್ಯ ನಿರಂತರ ನಡೆಸಿಕೊಂಡು ಬಂದಿರುವರು. ಅಕ್ಕನವರ ಕಾರ್ಯವನ್ನು ಮುನ್ನಡೆಸಿಕೊಂಡು ಬರುತ್ತಿರುವ ಲಿಂಗಾಯತ ಮಹಾಮಠದ ಪೀಠಾಧಿಪತಿಗಳಾದ ಪೂಜ್ಯ ಪ್ರಭುದೇವ ಮಹಾಸ್ವಾಮೀಜಿ ವಚನಗಳಿಗೆ ಪರಮೋಚ್ಚ ಸ್ಥಾನವನ್ನು ನೀಡಿ ಪಟ್ಟ ಕಟ್ಟಿರುವುದು ನಿಜವಾಗಲೂ ಬಸವ ಭಕ್ತರಿಗೆ ಸಂತೋಷವನ್ನುಂಟು ಮಾಡಿದೆ ಎಂದು ತಿಳಿಸಿದರು.
ನೀಲಮ್ಮನ ಬಳಗದ ಶರಣಿಯರು 108 ವಚನಗಳು ಹಾಡುವುದರ ಮೂಲಕ ಪ್ರಾರ್ಥನೆ ಪೂಜೆ ಮಾಡಿ ಕಾರ್ಯಕ್ರಮ ನಡೆಸಿಕೊಂಡು ಬಂದರು. ಕಾರ್ಯಕ್ರಮದಲ್ಲಿ ಲಿಂಗಾಯತ ಮಹಾಮಠದ ಹಿರಿಯರಾದ ಮಾಣಿಕಪ್ಪ ಗೋರನಾಳೆ, ಸಿ.ಎಸ್. ಗಣಾಚಾರಿ, ಬಾಬುರಾವ ರಾಜೋಳೆ, ಚಂದ್ರಕಾಂತ ಕಣಜ, ಸುಭಾಷ ಪತಂಗೆ, ಶ್ರೀಮಂತಪ್ಪ ರಾಜೇಶ್ವರೆ, ಶಿವರಾಜ ಕನಕಟ್ಟೆ, ಬಸವರಾಜ ಮಾಶೆಟ್ಟಿ ಮುಂತಾದವರು ಮತ್ತಿತರರು ಭಾಗವಹಿಸಿದ್ದರು.
