ರಾಯಚೂರು:
ಆಂಧ್ರಪ್ರದೇಶದ ಪುತ್ತೂರು ಗ್ರಾಮದಲ್ಲಿ ಜನಿಸಿದ ಕಿನ್ನರಿ ಬೊಮ್ಮಯ್ಯನವರು, ಅಕ್ಕಸಾಲಿಗ ಕಾಯಕದಲ್ಲಿದ್ದಾಗ ಅದರಲ್ಲಿ ಆಗಿನ ಕಾಲದಲ್ಲಿ ಇದ್ದ ಮೋಸವನ್ನು ಮನಗಂಡರು. ಅದಕ್ಕೆ ಆ ಕಾಯಕವನ್ನೆ ತ್ಯಜಿಸಿ, ಕಿನ್ನರಿ ಬಾರಿಸುವ ಕಾಯಕದಲ್ಲಿ ತೊಡಗಿದಂತಹ ಕಾಯಕ ಯೋಗಿ ಬೊಮ್ಮಯ್ಯನವರು ಎಂದು ವಿಶ್ರಾಂತ ಪ್ರಾಚಾರ್ಯ ಪ್ರೊ. ಅಮರೇಗೌಡ ಪಾಟೀಲ ಅವರು ತಿಳಿಸಿದರು.
ಬಸವ ಕೇಂದ್ರದಲ್ಲಿ ಆಯೋಜಿಸಲಾದ ಚಿನ್ಮಯ ಜ್ಞಾನಿ ಚನ್ನಬಸವಣ್ಣನವರ ಸ್ಮರಣೆ, ವೀರ ಗಣಾಚಾರಿ ಮಡಿವಾಳ ಮಾಚಿದೇವರ ಹಾಗೂ ಕಿನ್ನರಿ ಬೊಮ್ಮಯ್ಯನವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಲ್ಯಾಣದಲ್ಲಿ ಬಸವಣ್ಣನವರು ಮಾಡುತ್ತಿರುವ ಜನಪರ ಕಾರ್ಯಕ್ರಮಗಳನ್ನು ಕೇಳಿ ಕಲ್ಯಾಣಕ್ಕೆ ಬಂದು ತ್ರಿಪುರಾಂತಕೇಶ್ವರ ದೇವಸ್ಥಾನದಲ್ಲಿ ಬೊಮ್ಮಯ್ಯ ನೆಲೆಸುತ್ತಾನೆ. ದಯಾಪರನಾದ ಕಿನ್ನರಿ ಬೊಮ್ಮಯ್ಯ ಹರಕೆ ಕುರಿಯನ್ನು ರಕ್ಷಿಸಿದ ಕುರಿತು ಅವರು ತಿಳಿಸಿದರು.
ಜಯಶ್ರೀ ಮಹಾಜನಶೆಟ್ಟಿ ಅವರು ಮಾತನಾಡಿ, 12ನೇ ಶತಮಾನದ ಪ್ರಸಿದ್ಧರಾದ ಮಡಿವಾಳ ಮಾಚಿದೇವರು ಜನಿಸಿದ್ದು, ಸಿಂದಗಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ. ಹಿಪ್ಪರಗಿಯಿಂದ ಕಲ್ಯಾಣಕ್ಕೆ ಬಂದ ಮಾಚಿದೇವರು ಶರಣರ ಬಟ್ಟೆಗಳನ್ನು ಮಡಿ ಮಾಡುವ ಕಾಯಕ ಮಾಡುತ್ತಿದ್ದರು. ಕಲ್ಯಾಣ ಕ್ರಾಂತಿಯ ನಂತರ ವಚನಗಳ ರಕ್ಷಣೆ ಮಾಡುವ ಅತ್ಯಂತ ಮಹತ್ವದ ಪಾತ್ರವಹಿಸಿದ ಅವರು ಚನ್ನಬಸವೇಶ್ವರ ಮತ್ತು ಅಕ್ಕ ನಾಗಮ್ಮನವರ ಉಳಿವಿಗೆ ಹೋರಾಡಿದವರು. ಮುಂದೆ ಅಲ್ಲಿಯೇ ಲಿಂಗೈಕ್ಯರಾದರು. ಕಲಿದೇವರದೇವ ಎಂಬ ಅಂಕಿತನಾಮದೊಂದಿಗೆ 250ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ ಎಂದರು.

ಚಿನ್ಮಯ ಜ್ಞಾನಿ ಚನ್ನಬಸವಣ್ಣನವರ ಅಪ್ರತಿಮ ಜ್ಞಾನ, ವೈರಾಗ್ಯ, ವಚನ ಸಾಹಿತ್ಯವನ್ನು ರಕ್ಷಿಸುವಲ್ಲಿ ಅವರ ಅನುಪಮ ಸಾಧನೆ ಕುರಿತು ಗೌರವಾಧ್ಯಕ್ಷರಾದ ಹರವಿ ನಾಗನಗೌಡ, ಉಪಾಧ್ಯಕ್ಷರಾದ ಚನ್ನಬಸವ, ಇಂಜಿನಿಯರ್ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷರಾದ ರಾಚನಗೌಡ ಕೋಳೂರ ಕಾಯಕ, ದಾಸೋಹದ ಕುರಿತು ನುಡಿಗಳನ್ನಾಡಿದರು. ಇದೇ ಸಂದರ್ಭದಲ್ಲಿ ಕಲ್ಬುರ್ಗಿಯಿಂದ ಆಗಮಿಸಿದ ಹಿರಿಯ ಶರಣೆ ಗಂಗಮ್ಮನವರನ್ನು ಗೌರವಿಸಲಾಯಿತು.

ವಚನ ಗಾಯನವನ್ನು ರಾಘವೇಂದ್ರ ಆಶಾಪುರ, ಸಂಗಡಿಗರು ನಡೆಸಿಕೊಟ್ಟರು. ಮಕ್ಕಳಿಗೆ ವಚನಗಳನ್ನು ಪೂರ್ಣಿಮಾ ಪಾಟೀಲ ಹೇಳಿಕೊಟ್ಟರು. ವಕೀಲರಾದ ಜೆ. ಬಸವರಾಜ ಸ್ವಾಗತಿಸಿದರು. ವಕೀಲರಾದ ಸಿ.ಬಿ. ಪಾಟೀಲ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಲ್ಲಿಕಾರ್ಜುನ ಗುಡಿಮನಿ ವಂದಿಸಿದರು.
ಹರವಿ ಶಂಕರಗೌಡ, ಸರೋಜಾ ಮಾಲಿಪಾಟೀಲ, ವನಜಾಕ್ಷಿ ಗಿರಿಜಾ ಶಂಕರ, ಚಂದ್ರಕಲಾ ಡಾ. ವಿರುಪಾಕ್ಷಪ್ಪ, ಡಾ. ಬಸನಗೌಡ, ಲಲಿತಾ, ಶರಣಬಸವ ನರಕಲದಿನ್ನಿ, ಸುಮಂಗಲ ಹಿರೇಮಠ, ಶರಣಬಸವ ಜಾಡಲದಿನ್ನಿ ಇತರರು ಇದ್ದರು.
