ದಾವಣಗೆರೆ:
ಜಿಲ್ಲಾ ಕದಳಿ ಮಹಿಳಾ ವೇದಿಕೆಯ ಸಮಾವೇಶದಲ್ಲಿ 130 ಅಭ್ಯರ್ಥಿಗಳು ವಚನ ಗಾಯನ ಮಾಡುವ ಮೂಲಕ ‘ವಚನೋತ್ಸವ’ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
12ನೆಯ ಶತಮಾನದ ಐದು ಜನ ಶರಣೆಯರ ಆಯ್ದ ಐದು ವಚನಗಳನ್ನು ಒಂದೇ ವೇದಿಕೆಯಲ್ಲಿ ಒಂದೇ ಕಂಠವೆಂಬತೆ ಹಾಡಿದ್ದು ವಿಶೇಷವೆನಿಸಿತು.
ಜಿಲ್ಲೆಯ ಆರು ತಾಲೂಕಿನ ಮಕ್ಕಳು, ದೊಡ್ಡವರು ಭಾಗವಹಿಸಿದ್ದರು. ವೇದಿಕೆಯ ಗೌರವ ಸಲಹೆಗಾರರಾದ ಯಶಾ ದಿನೇಶ ಅವರ ಪರಿಕಲ್ಪನೆಯಲ್ಲಿ ಮೂಡಿಬಂದ ಕಾರ್ಯಕ್ರಮವಿದು.
ಈ ಮೊದಲು ಪೂರ್ವಭಾವಿಯಾಗಿ ಜಿಲ್ಲೆಯ ಆರು ತಾಲೂಕುಗಳಲ್ಲಿ ಯಶಾರವರು ಐದು ವಚನಗಳ ಗಾಯನ ತರಬೇತಿ ನೀಡಿ ಅಭ್ಯಾಸ ಮಾಡಿಸಿದ್ದರು.
ಜಿಲ್ಲಾ ಅಧ್ಯಕ್ಷರಾದ ಮಮತಾ ನಾಗರಾಜ ಅವರು ಪ್ರತಿ ಶಿಬಿರದಲ್ಲೂ ಶಿಬಿರಾರ್ಥಿಗಳಿಗೆ ವಚನಗಳ ಮಹತ್ವ ತಿಳಿಸಿ, 5 ವಚನಗಳ ಭಾವಾರ್ಥವನ್ನು ವಿಶ್ಲೇಷಿಸಿದ್ದರು.
ಪ್ರತಿಯೊಬ್ಬರೂ ವಚನಗಳನ್ನು ಹಾಡಲು ಕಲಿಯಬೇಕು, ಅವು ಇಂದಿಗೂ ಪ್ರಸ್ತುತ, ವಚನ ಸಾಹಿತ್ಯ ಅರಿತು ಹಾಗೂ ಶರಣ ಸಂಸ್ಕೃತಿಯಂತೆ ನಡೆದರೆ ಸಮಾಜದಲ್ಲಿ, ಸಂಸಾರದಲ್ಲಿ ಸಮಸ್ಯೆಗಳೇ ಇರುವುದಿಲ್ಲ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ವಿಜಯ ಚಂದ್ರಶೇಖರ, ನಿಕಟಪೂರ್ವ ಅಧ್ಯಕ್ಷರಾದ ಗಾಯತ್ರಿ ವಸ್ತ್ರದ ಅವರು ವಚನಗಳ ಭಾವಾರ್ಥ ತಿಳಿಸಿದರು.
ವೇದಿಕೆಯ ಪದಾಧಿಕಾರಿಗಳಾದ ಪೂರ್ಣಿಮಾ ಪ್ರಸನ್ನ, ಚಂದ್ರಿಕಾ, ರತ್ನ, ಲಕ್ಷ್ಮಿ, ಸೌಮ್ಯ ವಸಂತ ಹಾಗೂ ಇನ್ನಿತರರು ವಚನೋತ್ಸವ ಯಶಸ್ವಿಯಾಗಲು ಸಹಕಾರ ನೀಡಿದರು.
ಆರೂ ತಾಲೂಕುಗಳ ಕದಳಿ ವೇದಿಕೆಯ ಅಧ್ಯಕ್ಷರುಗಳಾದ ನಿರ್ಮಲ ಶಿವಕುಮಾರ, ರೂಪ ನಾಗರಾಜ, ಡಾ. ಪ್ರತಿಮಾ ನಿಜಗುಣ, ಪ್ರೇಮ ಸೋಮೇಶ್ವರ, ಅಂಬಿಕಾ ಸುಭಾಷಚಂದ್ರ, ಗೌರಮ್ಮ ಶ್ರೀನಿವಾಸ್ ಹಾಗೂ ವೇದಿಕೆ ಪದಾಧಿಕಾರಿಗಳು ಸದಸ್ಯರು ಹಾಗೂ ನಾಗರಿಕರು ಆಸಕ್ತಿಯಿಂದ ವಚನ ಕಲಿತು, ಅಭ್ಯಾಸ ಮಾಡಿ ವಚನೋತ್ಸವದಲ್ಲಿ ಉತ್ಸಾಹದಿಂದ ಪಾಲ್ಗೊಂಡರು.
ಕಾರ್ಯಕ್ರಮವು ಸಂಗೀತ ಗುರುಗಳಾದ ರೇವಣಸಿದ್ದಪ್ಪ ಅವರ ಹಾರ್ಮೋನಿಯಂ ವಾದನ ಹಾಗೂ ಅಭಿಷೇಕ ಅವರ ತಬಲಾ ವಾದನದಿಂದಾಗಿ ವಚನ ಸಂಗೀತ ಕಾರ್ಯಕ್ರಮ ಉತ್ತಮವಾಗಿ ನೆರವೇರಿತು.
ವಚನೋತ್ಸವದಲ್ಲಿ ಭಾಗಿಯಾದವರಿಗೆ ಪ್ರಮಾಣ ಪತ್ರವನ್ನು ಹಾಗೂ ಶರಣ ಸಾಹಿತ್ಯ ಪರಿಷತ್ತಿನ ಗೌರವ ಸಲಹೆಗಾರರಾದ ಹೆಚ್. ಕೆ. ಲಿಂಗರಾಜ ಅವರು ಬರೆದ ‘ಭುವನದ ಭಾಗ್ಯ’ ಪುಸ್ತಕವನ್ನು ನೀಡಿ ಗೌರವಿಸಲಾಯಿತು.
ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/
