ಬೆಂಗಳೂರು:
ನಗರದ ಹೊರವಲಯದಲ್ಲಿರುವ ಯಡವನಹಳ್ಳಿಯ ಹನುಮಾನ ಟೌನ್‌ಶಿಪ್‌ನಲ್ಲಿ ಸಿದ್ದಾರೂಢ ಗವಿ ಅವರ ಮಗುವಿನ ನಾಮಕರಣ ಹಾಗೂ ತೊಟ್ಟಿಲು ಕಾರ್ಯಕ್ರಮವು ಬಸವತತ್ವದ ಪ್ರಕಾರ ನಡೆಯಿತು.
ಕಾರ್ಯಕ್ರಮದಲ್ಲಿ ಬಸವಣ್ಣನವರ ವಚನಗಳ ಪಠಣದೊಂದಿಗೆ ಬಸವ ಭಾವಚಿತ್ರವನ್ನು ತೊಟ್ಟಿಲಲ್ಲಿ ಇರಿಸಿ, ಲಿಂಗಧಾರಣೆಯಾದ ಮಗುವನ್ನು ತೊಟ್ಟಿಲಲ್ಲಿ ತೂಗಲಾಯಿತು. ಈ ವೇಳೆ “ಬಸವ ಧರೆಗೆ ಬಂದಾ ಜೋ ಜೋ” ಎಂಬ ವಚನಗೀತೆಯನ್ನು ಹಾಡುತ್ತಾ, ಅದರ ಭಾವಾರ್ಥದ ಗುಣಗಳಲ್ಲಿ ಮಗು ಬೆಳೆಯಲಿ ಎಂಬ ಆಶಯವನ್ನು ವ್ಯಕ್ತಪಡಿಸಲಾಯಿತು.

ಮಗುವನ್ನು ಜ್ಞಾನದ ತೊಟ್ಟಿಲಲ್ಲಿ ತೂಗುತ್ತಾ ವೈಚಾರಿಕ ವಚನಗಳನ್ನು ಹಾಡಿ,“ಜೋ ಜೋ ಕಂದಾ, ಪರಮಾನಂದ, ಸಾಗು ನೀ ಬಸವ ಪಥದಲ್ಲಿ ಎಂದೆಂದೂ ಮುಂದೆ” ಎಂದು ಹಾಡಿ ಆಶೀರ್ವದಿಸಲಾಯಿತು.
ಇದೇ ಸಂದರ್ಭದಲ್ಲಿ ಮಗುವಿಗೆ “ಸಿದ್ಧಬಸವಾ”ಎಂದು ನಾಮಕರಣ ಮಾಡಲಾಯಿತು. “ಸಿದ್ದಬಸವಾ ನೀನಾಗು ಕಂದ, ಭಾರತದ ಭುವಿಗೆ ಬೆಳಕಾಗಿ ಬಾ”ಎಂದು ಹಾರೈಸಲಾಯಿತು.

ಕಾರ್ಯಕ್ರಮವನ್ನು ವಚನ ಕ್ರಿಯಾಮೂರ್ತಿಗಳಾದ ಶ್ರೀಶೈಲ ಜಿ. ಮಸೂತೆ ಲಿಂಗಾಯತ ಅವರು ಅರ್ಥಪೂರ್ಣವಾಗಿ ನಡೆಸಿಕೊಟ್ಟರು. ಬಸವತತ್ವದ ಸಮಾನತೆ, ಮಾನವೀಯತೆ ಮತ್ತು ವೈಚಾರಿಕತೆಯ ಸಂದೇಶಗಳನ್ನು ಒಳಗೊಂಡ ಈ ಕಾರ್ಯಕ್ರಮವು ಭಾಗವಹಿಸಿದವರ ಮನಸ್ಸಿನಲ್ಲಿ ಆಳವಾದ ಪ್ರೇರಣೆಯನ್ನು ಮೂಡಿಸಿತು.
