ಗದಗ
ಲಿಂಗಾಯತ ಮತಗಳನ್ನು ಬಳಸಿಕೊಂಡು ಗೆಲ್ಲುವ ಲಿಂಗಾಯತ ರಾಜಕಾರಣಿಗಳು ಲಿಂಗಾಯತರ ವಿರುದ್ಧವೇ ಕೆಲಸ ಮಾಡುತ್ತಾರೆ.
ನಾಡಿನುದ್ದಕ್ಕೂ ಸಕ್ರಿಯವಾಗಿರುವ ಬಸವ ಸಂಘಟನೆಗಳು ರಾಜಕೀಯ ಪ್ರಜ್ಞೆ, ಪ್ರಭಾವ ಬೆಳಸಿಕೊಂಡರೆ ಮಾತ್ರ ಲಿಂಗಾಯತ ವಿರೋಧಿ ರಾಜಕಾರಣಕ್ಕೆ ಕಡಿವಾಣ ಹಾಕಲು ಸಾಧ್ಯ.
ಈ ವಿಷಯದ ಬಗ್ಗೆ ಬಸವ ಸಂಘಟನೆಗಳಲ್ಲಿ ಜಾಗೃತಿ ಮೂಡಿಸಲು ಬಸವ ಶಕ್ತಿ ಶಿಬಿರ, ಸಮಾವೇಶಗಳನ್ನು ನಡೆಸಬೇಕೆಂಬ ಸಲಹೆ ಅನೇಕ ಬಸವ ಕಾರ್ಯಕರ್ತರಿಂದ ಬಂದಿದೆ.
ಇಂದು ಗದಗ ಬಸವದಳದ ಗೌರಕ್ಕ ಬಡಿಗಣ್ಣವರ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಬಸವ ಸಂಘಟನೆಗಳು ರಾಜಕೀಯ ಪ್ರಭಾವ ಬೆಳೆಸಿಕೊಳ್ಳಬೇಕೇ? ಯಾಕೆ?
ಬಸವ ಸಂಘಟನೆಗಳು ಜನರಲ್ಲಿ ದೇವರು, ಧರ್ಮದ ಕುರಿತು ಅರಿವು ಮೂಡಿಸುತ್ತಾ ಬರುತ್ತಿವೆ. ಕಾಯಕ, ದಾಸೋಹ, ಶಿವಯೋಗ ಮುಂತಾದವು ವ್ಯಕ್ತಿ ಸತ್ಯದ ಮಾರ್ಗದ ಕಡೆಗೆ ಸಾಗಲು ಪೂರಕವಾಗಿವೆ.
ಇದೇ ರೀತಿ ರಾಜಕೀಯವನ್ನೂ ಸ್ವಾತ್ವಿಕವಾಗಿ, ಕ್ರಮಬದ್ದವಾಗಿ ಶರಣರು ತೋರಿಸಿದ ರೀತಿಯಲ್ಲಿ ನಡೆಸಬಹುದು.
ನಾಯಕನಾದವನು ಸ್ವಾರ್ಥದಿಂದ ಸರ್ವಾಧಿಕಾರಯಂತೆ ವರ್ತಿಸದೆ ಸಮಾಜದ, ನಾಗರಿಕರ ಹಿತವನ್ನು ಕಾಪಾಡಬೇಕು. ಈ ಬಾಧ್ಯತೆಗಳ ಬಗ್ಗೆ ವಚನಗಳಲ್ಲಿ ತಿಳುವಳಿಕೆಯಿದೆ.
ಪ್ರತಿಯೊಬ್ಬರು ಸ್ವತಂತ್ರ, ಸ್ವಾವಲಂಬನೆಯ ಜೀವನ ನಡೆಸಬೇಕೆಂಬುದು ಬಸವ ತತ್ವದ ಮೂಲ ಸಿದ್ದಾಂತ. ಇದೇ ಬಸವಾದಿ ಶರಣರ ಕಲ್ಯಾಣ ರಾಜ್ಯದ ಕನಸು. ಇದನ್ನು ನನಸು ಮಾಡುವ ಅವಕಾಶ ನಮ್ಮ ಮುಂದಿದೆ. ಅದಕ್ಕಾಗಿ ರಾಜಕೀಯ ಪ್ರಭಾವ ಬೆಳೆಸಿಕೊಳ್ಳುವುದು ಅವಶ್ಯವಾಗಿದೆ.
ಯಾವುದೇ ಸಮಾಜದ ಬೆಳವಣಿಗೆಗೆ ರಾಜಕೀಯ ಅನಿವಾರ್ಯ. ಶಿಕ್ಷಣ, ವಸತಿ, ಔಷಧ, ಆಹಾರ ಈ ಎಲ್ಲ ಅವಶ್ಯಕತೆಗಳನ್ನು ವ್ಯಕ್ತಿ ತನ್ನ ಸಂಪಾದನೆಯಿಂದಲೇ ಪಡೆದುಕೊಳ್ಳಲು ಅಸಮರ್ಥನಾಗಬಹುದು.
ಹಲವಾರು ಯೋಜನೆಗಳ ಮುಖಾಂತರ ಪ್ರತಿಯೊಬ್ಬ ಪ್ರಜೆಗೆ ಈ ಸೌಲಭ್ಯ ನೀಡುವ ಜವಾಬ್ದಾರಿ ಸರ್ಕಾರದ ಮೇಲಿದೆ. ರಾಜಕಾರಣಿಗಳು ದಕ್ಷವಾಗಿ ಈ ಯೋಜನೆಗಳನ್ನು ಜನರಿಗೆ ತಲುಪಿಸುವ, ಸಮಾಜದ ಅಭ್ಯುದಯಕ್ಕೆ ದುಡಿಯುವ ಕಾರ್ಯ ಮಾಡಬೇಕು.
ರಾಜಕಾರಣಿಗಳು ತಮ್ಮ ಜವಾಬ್ದಾರಿಯನ್ನು ನಿಭಾಯಿಸಲು ವಿಫಲರಾದಾಗ ಪ್ರಜ್ಞಾವಂತ ಸಂಸ್ಥೆಗಳು ಅವರನ್ನು ಪ್ರಶ್ನಿಸಿ ದಾರಿಗೆ ತರಬೇಕು.
ಬಸವ ಸಂಘಟನೆಗಳು ರಾಜಕೀಯ ಪ್ರಜ್ಞೆ, ಪ್ರಭಾವ ಬೆಳೆಸಿಕೊಂಡರೆ ಅದರಿಂದ ಸಮಾಜಕ್ಕೆ ಒಳ್ಳೆಯದೇ ಆಗುತ್ತದೆ. ಆದರೆ ರಾಜಕೀಯದ ಸಹವಾಸದಿಂದ ಬಸವ ಪ್ರಜ್ಞೆಯನ್ನು ಕಡೆಗಣಿಸದಂತೆ ನಾವು ಜಾಗೃತರಾಗಿರಬೇಕು.
ಇದಕ್ಕೆ ತರಬೇತಿಯ ಅಗತ್ಯವಿದೆಯೇ?
ಮಾರ್ಗದರ್ಶನದ ಅವಶ್ಯಕತೆ ಇದೆ, ಏಕೆಂದರೆ ಸಮಾಜಮುಖಿಯಾಗಿ ನಡೆದುಕೊಳ್ಳಬೇಕಾದ ವ್ಯಕ್ತಿಗೆ ಕಾಯಾ, ವಾಚಾ, ಮನಸಾ, ತಾನು ಜಂಗಮ ಸೇವೆಗೆ ನಿಂತಿದ್ದೇನೆ ಎಂಬ ಪ್ರಜ್ಞೆ ಜಾಗತಿಕವಾಗಬೇಕಾಗಿದೆ. ಹಾಗಾದಾಗ ಮಾತ್ರ ಇದರ ಸದುಪಯೋಗ ಸಾಧ್ಯ. ಇಲ್ಲವಾದರೆ ಹಣ ಸಂಪಾದನೆ, ಜನರಿಗೆ ಮೋಸ ಮಾಡುವ ಮಾರ್ಗ ಆಗಬಾರದು. ಹೀಗಾಗುವುದರಿಂದ ಬಸವ ಸಂಘಟನೆಗಳು ಅಪಪ್ರಚಾರಕ್ಕೆ ಒಳಗಾಗುತ್ತವೆ. ತರಬೇತಿಯನ್ನು ಶಾಲೆ, ಕಾಲೇಜುಗಳಲ್ಲಿ ಶಿಕ್ಷಣದಲ್ಲೇ ಬೋಧಿಸುವಂತಾಬೇಕು.
ಬಸವ ಶಕ್ತಿ ಶಿಬಿರ, ಸಮಾವೇಶಗಳ ರೂಪುರೇಷೆಯ ಬಗ್ಗೆ ನಿಮ್ಮ ಸಲಹೆ.
ಸಮಾವೇಶದಲ್ಲಿ ಮಂಡಿಸಬೇಕಾದ ವಿಷಯಗಳ ಸ್ಪಷ್ಟತೆಯು ಸಂಘಟಕರಿಗೆ ಇರಬೇಕು.
ಸಮಾವೇಶ ಎಂದಾಕ್ಷಣ ಮೊದಲ ಆಧ್ಯತೆ ಹಣಕಾಸು, ಸ್ಥಳ, ವಸತಿ, ಪ್ರಸಾದ ಅನೇಕ ವಿಷಯಗಳು ಮುಂದೆ ಬರುತ್ತವೆ. ಇವುಗಳ ಬಗ್ಗೆಯೂ ಚಿಂತನೆ ನಡೆಯಲಿ.
ನಿಮ್ಮ ಸಂಘಟನೆಯಿಂದ ಎಷ್ಟು ಜನ ಭಾಗವಹಿಸುತ್ತೀರಾ?
ನಮ್ಮಲ್ಲಿ ಬೇರೆ ಬೇರೆ ಸಂಘಟನೆಗಳು ಇರುವುದರಿಂದ ಅವರೆಲ್ಲರ ಮನವೊಲಿಸಿ, ಪಾಲ್ಗೊಳ್ಳುವಂತೆ ಮಾಡುತ್ತೇವೆ.
ಸಮಾವೇಶ ಸಂಘಟಿಸಲು ನೆರವಾಗಲು ನಿಮಗೆ ಆಸಕ್ತಿಯಿದೆಯೇ?
ಸಮಾವೇಶ ಸಂಘಟಿಸುವವರಿಗೆ ಪೂರಕವಾಗಿರಲು ಆಸಕ್ತಳಾಗಿರುವೆ.
