ಚಿಕ್ಕಮಗಳೂರು :
ಬಸವತತ್ವ ಪೀಠದ ಸುವರ್ಣ ಮಹೋತ್ಸವ ಹಾಗೂ ಬಸವತತ್ವ ಸಮಾವೇಶ ಫೆಬ್ರವರಿ 24 ರಿಂದ 28 ರ ವರೆಗೆ ದೊಡ್ಡಕುರುಬರಹಳ್ಳಿಯ ಬಸವ ಮಂದಿರದಲ್ಲಿ ನಡೆಯುತ್ತಿದೆ ಎಂದು ಬಸವತತ್ವ ಪೀಠದ ಅಧ್ಯಕ್ಷರಾದ ಬಸವ ಮರಳುಸಿದ್ಧ ಸ್ವಾಮೀಜಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬಸವತತ್ತ್ವದ ಪ್ರಚಾರವನ್ನೇ ಮುಖ್ಯ ಉದ್ಧೇಶವಾಗಿಟ್ಟುಕೊಂಡು 1976ರಲ್ಲಿಸ್ಥಾಪನೆಯಾದ ಬಸವತತ್ವ ಪೀಠವು ಈ ವರ್ಷಕ್ಕೆ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿದೆ.
ಪರಮಪೂಜ್ಯ ಶ್ರೀ ಮ.ನಿ.ಪ್ರ.ಜಯಚಂದ್ರಶೇಖರ ಮಹಾಸ್ವಾಮಿಗಳವರಿಂದ ಸ್ಥಾಪಿಸಲ್ಪಟ್ಟ, ಅಭಿಮಾನ ಹಾಗೂ ಶ್ರದ್ಧೆಯ ಕೇಂದ್ರವಾಗಿರುವ ಶ್ರೀ ಬಸವತತ್ತ್ವ ಪೀಠವು ಸುಸಜ್ಜಿತ ಮಠವಾಗಿ ಮರುನಿರ್ಮಾಣಗೊಂಡು ಕಳೆದ ವರ್ಷ ಉದ್ಘಾಟನೆಯಾಗಿರುವುದು.
ಭಕ್ತರ ಸದಾಶಯಗಳನ್ನು ಈಡೇರಿಸುವ ಸಂಕಲ್ಪದ ಸಾಕಾರವಾಗಿರುವ ಶ್ರೀ ಬಸವತತ್ವ ಪೀಠವು ಇತ್ತೀಚಿನ ದಿನಗಳಲ್ಲಿ ತನ್ನ ಸಮಾಜಮುಖಿ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆಯ ಸಂಘಟನಾತ್ಮಕ ಕಾರ್ಯಕ್ರಮಗಳ ಮೂಲಕ ನಾಡಿನ ಸಹೃದಯರ ಗಮನ ಸೆಳೆದಿದೆ.
ಮಠದ ಪೀಠಾಧ್ಯಕ್ಷರಾದ ಪೂಜ್ಯ ಡಾ.ಬಸವ ಮರುಳಸಿದ್ಧಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಶ್ರೀ ಪೀಠದ ಮೂಲಕ ಕೋವಿಡ್ ಸಂದರ್ಭದಲ್ಲಿ ಒಂದೇ ದಿನ ಸಾವಿರಕ್ಕೂ ಹೆಚ್ಚು ಜನರಿಗೆ ಲಸಿಕೆ ಹಾಕಿಸಿದ್ದು, ಸಾವಿರಾರು ಬಡಜನರಿಗೆ ಆಹಾರ ಧಾನ್ಯಗಳ ಕಿಟ್ ಒದಗಿಸಿದ್ದು, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ರಕ್ತಾಮೃತ ದಾಸೋಹದ ಮೂಲಕ ಸುಮಾರು ನೂರಕ್ಕೂ ಹೆಚ್ಚು ಜನರಿಂದ ರಕ್ತ ಸಂಗ್ರಹಿಸಿ ರಕ್ತನಿಧಿಗೆ ಕೊಡುಗೆ ನೀಡಿದ್ದು ಶ್ರೀ ಪೀಠದ ಸಮಾಜಮುಖಿ ಆಲೋಚನೆಗಳಿಗೆ ಸಾಕ್ಷಿಯಾಗಿವೆ.
ಭಕ್ತರೆಡೆಗೆ ಗುರುವಿನ ನಡಿಗೆ, ವಿಭೂತಿ ವೀಳ್ಯ, ಪ್ರತೀ ತಿಂಗಳು ನಡೆಯುವ ಶಿವಾನುಭವ ಗೋಷ್ಠಿಗಳು, ಮಕ್ಕಳ ಬೇಸಿಗೆ ಶಿಬಿರ, ಶಿವಾನುಭವ ಸಪ್ತಾಹ, ಗ್ರಂಥ ಪ್ರಕಟಣೆ, ಸದಭಿರುಚಿಯ ಸಿನಿಮಾಗಳ ಪ್ರದರ್ಶನ- ನೋಡುವುದನ್ನೇ ನೋಡೋಣ ಇವುಗಳು ಶ್ರೀ ಪೀಠವು ಸಮುದಾಯವನ್ನು ಸಾಂಸ್ಕೃತಿಕವಾಗಿ ಸಂಘಟಿಸುತ್ತಿರುವುದಕ್ಕೆ ಮಾದರಿಯಾಗಿವೆ.

ನಾಡಿನ ಪ್ರತಿಷ್ಠಿತ ಮಠ ಪೀಠಗಳ ಮಹಾಸ್ವಾಮಿಗಳವರು, ಸಮಾಜದ ಮುಖಂಡರು, ರಾಜಕೀಯ ನೇತಾರರು, ವಿದ್ವಾಂಸರು, ಅನುಭಾವಿಗಳು ಶ್ರೀ ಪೀಠದ ಬಗ್ಗೆ ಅಭಿಮಾನದಿಂದ ಸ್ಪಂದಿಸುತ್ತಿದ್ದಾರೆ. ಪೂಜ್ಯ ಶ್ರೀ ಮ.ನಿ.ಪ್ರ.ಜಯಚಂದ್ರಶೇಖರ ಮಹಾಸ್ವಾಮಿಗಳವರ ಆಶಯದಂತೆ ಶ್ರೀ ಬಸವತತ್ವ ಪೀಠವು ಸಾಗುತ್ತಿರುವುದು ಬಹುದೊಡ್ಡ ಭಕ್ತ ಸಮೂಹಕ್ಕೆ ಭರವಸೆ ಮೂಡಿಸಿದೆ. ಪ್ರಸ್ತುತ ಸುವರ್ಣ ಮಹೋತ್ಸವ ಆಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ಭಕ್ತ ಸಮೂಹ ತೀರ್ಮಾನಿಸಿದೆ ಎಂದು ಹೇಳಿದರು.
ಮಠಾಧೀಶರು, ರಾಜಕೀಯ ಧುರೀಣರು, ಸಾಹಿತಿ-ಕಲಾವಿದರು ಭಾಗವಹಿಸುವ ಈ ಕಾರ್ಯಕ್ರಮಕ್ಕೆ ಸದ್ಭಕ್ತರೆಲ್ಲರೂ ತನು, ಮನ, ಧನಗಳೊಂದಿಗೆ ಭಾಗವಹಿಸಿ ಕೃತಾರ್ಥರಾಗಬೇಕೆಂದು ಈ ಮೂಲಕ ವಿನಂತಿಸಿಕೊಳ್ಳಲಾಗಿದೆ.
27ರಂದು ಬೆಳಿಗ್ಗೆ 06.30ಕ್ಕೆ ಇಷ್ಟಲಿಂಗ ಪೂಜೆ ಹಾಗೂ ದೀಕ್ಷಾ ಕಾರ್ಯಕ್ರಮ ಇರುತ್ತದೆ. ನಂತರ 7.30ಕ್ಕೆ ಷಟಸ್ಥಲ ಧ್ವಜಾರೋಹಣ, ಬೆಳಿಗ್ಗೆ 8 ಕ್ಕೆ ಶ್ರೀ ಬಸವತತ್ತ್ವ ಪೀಠದ ಕರ್ತೃಗಳಾದ ಶ್ರೀ ಮ.ನಿ.ಪ್ರ.ಜಯಚಂದ್ರಶೇಖರ ಮಹಾಸ್ವಾಮಿಗಳವರ ಗದ್ದುಗೆಗೆ ವಚನಾಭಿಷೇಕ ಪೂಜೆ, ಬೆಳಿಗ್ಗೆ ೮.೩೦ಕ್ಕೆ ವಿಶ್ವಗುರು ಬಸವಣ್ಣನವರ, ಶ್ರೀ ಮ.ನಿ.ಪ್ರ.ಚಂದ್ರಶೇಖರಮಹಾಸ್ವಾಮಿಗಳವರ, ಶ್ರೀ ಮ.ನಿ.ಪ್ರ.ಜಯಚಂದ್ರಶೇಖರ ಮಹಾಸ್ವಾಮಿಗಳವರ ಉತ್ಸವ- ಕಾರ್ಯಕ್ರಮಗಳು ನಡೆಯಲಿವೆ.
ಅದೇ ದಿನ ಸಂಜೆ 6.30ಕ್ಕೆ ನಡೆಯುವ ಸಮಾವೇಶದಲ್ಲಿ ಬಸವತತ್ವ ಪ್ರಚಾರಕ್ಕೆ ಶ್ರೀ ಬಸವತತ್ವ ಪೀಠದ ಕೊಡುಗೆ ಕುರಿತಾಗಿ ಸಾಹಿತಿ ಬಿ.ತಿಪ್ಪೇರುದ್ರಪ್ಪನವರಿಂದ ಉಪನ್ಯಾಸ ನಡೆಯಲಿದೆ. ಧಾರವಾಢ ಮುರುಘಾ ಮಠದ ಡಾ.ಮಲ್ಲಿಕಾರ್ಜುನ ಮಹಾಸ್ವಾಮಿಗಳವರು, ಕಡೂರಿನ ಯಳನಾಡು ಸಂಸ್ಥಾನದ ಜಗದ್ಗುರು ಜ್ಞಾನಪ್ರಭು ಸಿದ್ಧರಾಮ ದೇಶೀಕೇಂದ್ರ ಮಹಾಸ್ವಾಮಿಗಳವರು, ಸಿಂದಿಗೆರೆ ಶ್ರೀ ಕರಡಿಗವಿ ಮಠದ ಶ್ರೀ ಶಿವಶಂಕರ ಶಿವಯೋಗಿ ಸ್ವಾಮಿಗಳವರ ದಿವ್ಯಸಾನ್ನಿಧ್ಯದಲ್ಲಿ ನಡೆಯುವ ಈ ಸಮಾವೇಶವನ್ನು ವಿ. ಸೋಮಣ್ಣ, ಮಾನ್ಯ ರಾಜ್ಯ ಸಚಿವರು, ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಮಂತ್ರಾಲಯ, ಭಾರತ ಸರ್ಕಾರ ಇವರು ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರುಗಾಳಾದ ಟಿ. ಡಿ. ರಾಜೇಗೌಡ, ನಯನಾ ಮೋಟಮ್ಮ, ಡಾ. ಸಿ.ಟಿ.ರವಿ, ಎಸ್.ಎಲ್.ಭೋಜೇಗೌಡ, ಭದ್ರಾ ಕಾಡಾ ಅಧ್ಯಕ್ಷರಾದ ಡಾ.ಕೆ.ಪಿ.ಅಂಶುಮಂತ್, ಮಾಜಿ ಶಾಸಕರಾದ ಗಾಯತ್ರಿ ಶಾಂತೇಗೌಡ, ನೊಳಂಬ ಲಿಂಗಾಯತ ಸಮಾಜದ ರಾಜ್ಯಾಧ್ಯಕ್ಷರಾದ ಎಸ್.ಎಂ.ನಾಗರಾಜ ಮೊದಲಾದವರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಖ್ಯಾತ ಗಾಯಕರಾದ ತೋಟಪ್ಪ ಉತ್ತಂಗಿ ಹಾಗೂ e-ಸಾಹಿತ್ಯದ ಅಶೋಕ ದೊಮ್ಮಲೂರು ಅವರನ್ನು ಸನ್ಮಾನಿಸಲಾಗುವುದು.
28ರಂದು ಬೆಳಿಗ್ಗೆ 07.30ಕ್ಕೆ ಇಷ್ಟಲಿಂಗ ಪೂಜಾ ಪ್ರಾತ್ಯಕ್ಷಿಕೆ ನಡೆಯಲಿದೆ.
ಅದೇ ದಿನ ಸಂಜೆ ನಡೆಯುವ ಸಮಾವೇಶದಲ್ಲಿ ವಚನಗಳಲ್ಲಿ ರಾಷ್ಟ್ರೀಯ ಮೌಲ್ಯಗಳು ವಿಷಯದ ಕುರಿತು ಸಾಹಿತಿ ಡಾ.ಕುಮಾರ ಚಲ್ಯ ಉಪನ್ಯಾಸ ಮಾಡಲಿದ್ದಾರೆ. ಸಿರಿಗೆರೆಯ ತರಳಬಾಳು ಜಗದ್ಗುರು ಬೃಹನ್ಮಠದ ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಹಾಗೂ ಪುಷ್ಪಗಿರಿ ಸಂಸ್ಥಾನದ ಜಗದ್ಗುರು ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರ ದಿವ್ಯಸಾನ್ನಿಧ್ಯದಲ್ಲಿ ನಡೆಯುವ ಈ ಸಮಾವೇಶವನ್ನು ಅರಣ್ಯ ಮತ್ತು ಪರಿಸರ ಖಾತೆ ಸಚಿವರಾದ ಈಶ್ವರ ಬಿ.ಖಂಡ್ರೆ ಉದ್ಘಾಟಿಸಲಿದ್ದಾರೆ. ಸ್ವಾಗತ ಸಮಿತಿಯ ಅಧ್ಯಕ್ಷರಾದ ಮಹಡಿಮನೆ ಸತೀಶ್ ಪ್ರಾಸ್ತಾವಿಕ ನುಡಿಗಳನ್ನು ಆಡಲಿದ್ದಾರೆ. ಕೆ.ಎಲ್.ಈ ಸಂಸ್ಥೆಯ ಪ್ರಭಾಕರ ಬ.ಕೋರೆ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದು.
ಮುಖ್ಯ ಅತಿಥಿಗಳಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕ ಎಚ್.ಡಿ.ತಮ್ಮಯ್ಯ, ಮಾಜಿ ಶಾಸಕರಾದ ಬೆಳ್ಳಿ ಪ್ರಕಾಶ್, ಕೆ.ಬಿ.ಮಲ್ಲಿಕಾರ್ಜುನ್, ಕೆಎಪಿಪಿಇಸಿ ಅಧ್ಯಕ್ಷ ಬಿ.ಎಚ್.ಹರೀಶ್ ಮತ್ತಿತರರು ಭಾಗವಹಿಸಲಿದ್ದಾರೆ.
ನಾಟಕೋತ್ಸವ–
ಕಾರ್ಯಕ್ರಮದ ಪ್ರಾರಂಭದಲ್ಲಿ 24 ರಿಂದ 26ರವರೆಗೆ ಕರ್ನಾಟಕ ನಾಟಕ ಅಕಾಡೆಮಿಯ ಮೈಸೂರು ವಿಭಾಗ ಮಟ್ಟದ ನಾಟಕೋತ್ಸವವು ಶ್ರೀ ಮಠದ ಆವರಣದಲ್ಲಿ ಆರಂಭಗೊಂಡಿದೆ.
ಉಚಿತ ಕಣ್ಣಿನ ತಪಾಸಣಾ ಶಿಬಿರ-
ಫೆಬ್ರವರಿ 27 ಮತ್ತು 28 ಎರಡೂ ದಿನಗಳ ಕಾಲ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಶಿವಮೊಗ್ಗದ ಆದರ್ಶ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ವೈದ್ಯರಿಂದ ನಡೆಸಲಾಗುವುದು.
ಸಮೂಹ ಗಾಯನ, ಭಜನೆ
ಫೆಬ್ರವರಿ 27 ಮತ್ತು 28 ಎರಡೂ ದಿನಗಳ ಕಾಲ ಸಂಜೆ 5 ರಿಂದ 6ರವರೆಗೆ ಮಲ್ಲಿಗೆ ಸುಧೀರ್ ಮತ್ತು ಎಂ.ಎಸ್.ಸುಧೀರ್ ಮಾರ್ಗದರ್ಶನದಲ್ಲಿ ವಚನ, ವಂದೇ ಮಾತರಂ, ನಾಡಗೀತೆಗಳ ಸಮೂಹ ಗಾಯನವನ್ನು ನೂರಕ್ಕೂ ಹೆಚ್ಚು ಮಾತೆಯರಿಂದ ಏರ್ಪಡಿಸಲಾಗಿದೆ.
6ರಿಂದ 6.30ರವರೆಗೆ ಬೆಳವಾಡಿಯ ಬಸವೇಶ್ವರ ಭಜನಾ ಕಲಾತಂಡದವರಿಂದ ಭಜನೆ ನಡೆಯಲಿದೆ.
ಭರತನಾಟ್ಯ-
ಎರಡೂ ದಿನಗಳಕಾಲ ಸಮಾವೇಶದಲ್ಲಿ ವಿವಿಧ ಕಲಾವಿದರಿಂದ ಭರತನಾಟ್ಯ ಪ್ರದರ್ಶನ ಇರಲಿದೆ.
ಈ ಎಲ್ಲಾ ಕಾರ್ಯಕ್ರಮಗಳಿಗೆ ಸದ್ಭಕ್ತರೆಲ್ಲರೂ ಆಗಮಿಸಲು ಈ ಮೂಲಕ ಕೋರಿದೆ.
ಪತ್ರಿಕಾಗೋಷ್ಠಿಯಲ್ಲಿ ಪೂಜ್ಯ ಬಸವ ಮರುಳಸಿದ್ಧ ಸ್ವಾಮೀಜಿ, ಟ್ರಸ್ಟಿಗಳು, ಸ್ವಾಗತ ಸಮಿತಿಯ ಪ್ರಮುಖರು, ಸದಸ್ಯರು ಉಪಸ್ಥಿತರಿದ್ದು ಸಮಾವೇಶದ ವಿವರ ನೀಡಿದರು.
