ಬಸವಾಭಿಮಾನಿಗಳೇ, ಅನುಭವ ಮಂಟಪದ ಸಂರಕ್ಷಣೆಗೆ ತುರ್ತಾಗಿ ಮುಂದೆ ಬನ್ನಿ

ಬಸವ ಮೀಡಿಯಾ
ಬಸವ ಮೀಡಿಯಾ

1) ಸಹಸ್ರ ಸಂಖ್ಯೆಯಲ್ಲಿ ಬಸವಾಭಿಮಾನಿಗಳ ಸ್ವಯಂಸೇವಕರ ಪಡೆ ಕಟ್ಟಬೇಕು

2) ಮುಂದಿನ ಒಂದು ವರ್ಷದಲ್ಲಿ, ನೂರಾರು ಅನುಭವ ಮಂಟಪ ಜಾಗೃತಿ ಶಿಬಿರಗಳನ್ನು ನಡೆಸಬೇಕು.

ಬೆಂಗಳೂರು

ಶರಣ ಬಂಧುಗಳೇ, ಶರಣು ಶರಣಾರ್ಥಿಗಳು

೧೨ನೆಯ ಶತಮಾನದಲ್ಲಿ ಬಸವಣ್ಣನವರು ಮತ್ತು ಶರಣರು ಜಗತ್ತಿಗೆ ನೀಡಿದ ‘ಅನುಭವ ಮಂಟಪ’ ಕೇವಲ ಒಂದು ಸಭಾಂಗಣವಾಗಿರಲಿಲ್ಲ. ಅದು ಸಮಾನತೆ, ಕಾಯಕ, ದಾಸೋಹ ಅನುಭಾವಗಳಂತಹ ಮಾನವೀಯ ಮೌಲ್ಯಗಳನ್ನು ಕುರಿತ ವಿಶ್ವದ ಪ್ರಥಮ ಚಿಂತನ ಸಂಸತ್ತಾಗಿತ್ತು.

ಆ ಪರಂಪರೆಯ ಸ್ಮರಣಾರ್ಥ, ಡಾ. ಗೊ.ರು.ಚ ಸಮಿತಿಯ ಶಿಫಾರಸ್ಸುಗಳಂತೆ ಬಸವಕಲ್ಯಾಣದಲ್ಲಿ ಈಗ ನಿರ್ಮಾಣವಾಗುತ್ತಿರುವ ‘ನೂತನ ಅನುಭವ ಮಂಟಪ’ವು ಶರಣ ಸಿದ್ಧಾಂತದ ಅತ್ಯಂತ ಆಧುನಿಕ ಮತ್ತುಆಕರ್ಷಕವಾದ ಭವ್ಯ ಕಟ್ಟಡವಾಗುತ್ತದೆ.

ವಾಸ್ತವವಾಗಿ, ಅನುಭವ ಮಂಟಪ ಕೇವಲ ಕಲ್ಲು, ಮಣ್ಣು ಸಿಮೆಂಟ್, ಕಬ್ಬಿಣ ಬಳಸಿ ಕಟ್ಟುವ ಸ್ಥಾವರವಲ್ಲ. ಅದು ನಿರ್ಜೀವ ಕಟ್ಟಡವಲ್ಲ. ಅದಕ್ಕೆ ತನ್ನದೇ ಆದ ವಿಶೇಷ ಲಕ್ಷಣಗಳಿವೆ, ಪರಿಕಲ್ಪನೆ ಇದೆ, ಸಿದ್ಧಾಂತವಿದೆ, ಇತಿಹಾಸವಿದೆ. ಅದೊಂದು ಜೀವನ ಸೂತ್ರಗಳ ಗಂಭೀರ ಚಿಂತನ ವೇದಿಕೆ.

ಉದ್ಘಾಟನೆಯಾದ ನಂತರ ಮೂಲ ಅನುಭವ ಮಂಟಪದಲ್ಲಿ ನಡೆಯುತ್ತಿದ್ದ ಚಟುವಟಿಕೆಗಳು ನಡೆಯದಿದ್ದರೆ ಆ ಕಟ್ಟಡಕ್ಕೆ ಯಾವುದೇ ಬೆಲೆ ಇರುವುದಿಲ್ಲ.

ಅನುಭವ ಮಂಟಪದಲ್ಲಿ ಕಾರ್ಯಕ್ರಮಗಳು

ಅನುಭವ ಮಂಟಪದಲ್ಲಿ ಮೂರು ರೀತಿಯ ಕಾರ್ಯಕ್ರಮಗಳನ್ನು ರೂಪಿಸಬೇಕಾಗಿದೆ. ಒಂದು, ದೈನಂದಿನ ಕಾರ್ಯಕ್ರಮಗಳು.

ಎರಡನೆಯದು, ಪ್ರತಿ ವರ್ಷ ಆಯಾ ಕಾಲಕ್ಕೆ ನಡೆಯುವ ಬಸವ ಜಯಂತಿ ಮತ್ತು ವಿವಿಧ ಶರಣರ ಜಯಂತಿಗಳಂತಹ ಕಾರ್ಯಕ್ರಮಗಳು.

ಮೂರನೆಯದು, ಇಂದಿನ ಪ್ರಜಾಪ್ರಭುತ್ವವನ್ನು ಸಬಲಗೊಳಿಸುವಂತಹ ಸಂವಿಧಾನದ ಓದು, ಮತದಾರರಲ್ಲಿ ಜಾಗೃತಿ, ನಾಗರಿಕ ಶಿಕ್ಷಣ, ಸಮುದಾಯದಲ್ಲಿ ಸಮಾನತೆ, ವೈಚಾರಿಕತೆ ಮುಂತಾದ ವಿಷಯಗಳಿಗೆ ಪೂರಕವಾದ ಜಾಗೃತಿ ಕಾರ್ಯಕ್ರಮಗಳು.

ಅನುಭವ ಮಂಟಪದ ನಿರ್ವಹಣೆ

ಮುಖ್ಯವಾಗಿ, ನೂತನ ಅನುಭವ ಮಂಟಪದ ನಿರ್ವಹಣೆ ನಾವು ಬಹಳ ಗಂಭೀರವಾಗಿ ಪರಿಗಣಿಸಬೇಕಾದ ವಿಚಾರ. ನೂತನ ಅನುಭವ ಮಂಟಪವು ೧೧೪ ಎಕರೆ ಪ್ರದೇಶವನ್ನು ವ್ಯಾಪಿಸಿದೆ.

ಅಲ್ಲಿನ ಭೌತಿಕ ಸ್ಥಾವರಗಳ ಸರಿಯಾದ ನಿರ್ಮಲವಾದ ಪರಿಸರದ ಸ್ವಚ್ಚ ಸುಂದರ ಮತ್ತು ಅಚ್ಚುಕಟ್ಟಾದ ನಿರ್ವಹಣೆ ಮೊದಲ ಆದ್ಯತೆಯಾಗಬೇಕು.

ನಿರ್ಮಾಣದ ಬಗೆಗೆ ರಾಜ್ಯ ಸರ್ಕಾರ ವಹಿಸಿರುವ ಆಸಕ್ತಿ ಅಭಿನಂದನೀಯವಾದರೂ ನಂತರದ ನೂತನ ಅನುಭವ ಮಂಟಪದ ಕಟ್ಟಡ ನಿರ್ವಹಣೆಯನ್ನು ಸರ್ಕಾರದ ಮೇಲೆ ಬಿಟ್ಟರೆ ಅಲ್ಲಿ ಸುವ್ಯವಸ್ಥೆಯನ್ನು ನಿರೀಕ್ಷಿಸಲಾಗುವುದಿಲ್ಲ.

ಕೇವಲ ಸರ್ಕಾರದ ಮೇಲೆ ಭಾರ ಚೆಲ್ಲಿ “ಅಧಿಕಾರಿಗಳು ಮಾಡುತ್ತಾರೆ ಬಿಡಿ” ಎಂದರೆ, ಸರ್ಕಾರಿ ಕೆಲಸಗಳ ಹಾಗೆ ಈ ಕಟ್ಟಡವೂ ಪೂರ್ಣಗೊಂಡು ಉದ್ಘಾಟನೆಯ ನಂತರ ಕೆಲವೇ ತಿಂಗಳು ಅಥವಾ ವರ್ಷಗಳಲ್ಲಿ ಅಲಕ್ಷ್ಯಕ್ಕೆ ಒಳಗಾಗಿ, ಅವ್ಯವಸ್ಥೆಯ ಕೇಂದ್ರವಾಗಿ, ಅಲ್ಲಿಗೆ ಬರುವವರಿಗೆ ಅಸಹ್ಯ ಉಂಟುಮಾಡುವ ಸ್ಥಳವಾಗುತ್ತದೆ. ಇದಕ್ಕೆ ನೂರಾರು ನಿದರ್ಶನಗಳಿವೆ.

ಹಾಗಾಗದಂತೆ ಪೂರ್ವ ಎಚ್ಚರಿಕೆ ವಹಿಸಿ ಅದರ ಸೂಕ್ತ ನಿರ್ವಹಣೆಗೆ ಒಂದು ಕ್ರಮಬದ್ಧ ವ್ಯವಸ್ಥೆಯನ್ನು ಈಗಿನಿಂದಲೇ ಯೋಚಿಸಿ ಪ್ರಾರಂಭಿಸುವುದು ಅಗತ್ಯವೆಂದು ಬೇರೆ ಹೇಳಬೇಕಾಗಿಲ್ಲ.

ಬಸವಾಭಿಮಾನಿಗಳು ದೀರ್ಘಕಾಲದಿಂದ ಕಾಯುತ್ತಿದ್ದ ಈ ನಿರ್ಮಾಣ ಸಾರ್ಥಕಗೊಳ್ಳಬೇಕಾದರೆ ಆಸಕ್ತರಿಗೆ ಶರಣ ಪರಂಪರೆಯ ಬಗ್ಗೆ ಸೂಕ್ತವಾದ ಅರಿವು ಮೂಡಿಸುವ ವ್ಯವಸ್ಥೆಯಾಗಬೇಕು.

ಇದೊಂದು ಐತಿಹಾಸಿಕ ಮಹತ್ವದ ಕೇಂದ್ರವಾಗಿರುವ ಕಾರಣದಿಂದ ಈ ನೂತನ ಅನುಭವ ಮಂಟಪಕ್ಕೆ ಬರುವವರು ಒಂದಿಲ್ಲೊಂದು ಕಾಯಕ ಸಲ್ಲಿಸಿ, ಕಟ್ಟಡದ ನಿರ್ವಹಣೆ ಹಾಗೂ ಇತರ ಸೇವಾ ಕಾರ್ಯಗಳಲ್ಲಿ ನೆರವಾದರೆ ಮಾತ್ರ ಅದು ಪವಿತ್ರವಾದ ಸ್ಥಳವಾಗಿ ಉಳಿಯುತ್ತದೆ.

ಕ್ಷೇತ್ರಕ್ಕೆ ಬರುವ ಬಸವಾಭಿಮಾನಿಗಳಲ್ಲಿ ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಿ ,ಅವರಿಗೆಲ್ಲ ಸೂಕ್ತವಾದ ಕಾಯಕದ ಜವಾಬ್ದಾರಿ ನೀಡುವ ವ್ಯವಸ್ಥೆಗೆ ಈಗಿನಿಂದಲೇ ಸಿದ್ಧವಾಗಬೇಕು. ಇದು ನಾವೆಲ್ಲ ಬಸವಾದಿ ಶರಣರಿಗೆ ಸಲ್ಲಿಸುವ ನಿಜವಾದ ಭಕ್ತಿ, ಗೌರವ ಮತ್ತು ಕೃತಜ್ಞತೆಯ ಸೇವೆಯಾಗುತ್ತದೆ.

ಇಂತಹ ಧಾರ್ಮಿಕ ಮತ್ತು ಸಮಾಜಿಕ ಸೇವಾ ಕೇಂದ್ರಗಳ ನಿರ್ವಹಣೆಗೆ ಸುವರ್ಣ ಮಂದಿರವನ್ನು ನಿರ್ವಹಣೆ ಮಾಡುತ್ತಿರುವ ಸಿಖ್ ಬಂಧುಗಳು ಬಸವಾಭಿಮಾನಿಗಳಿಗೆ ಮಾದರಿಯಾಗಬೇಕು.

ಅನುಭವ ಮಂಟಪದ ಸಂರಕ್ಷಣೆ

ಈಚೆಗಂತೂ ಅನುಭವ ಮಂಟಪದ ನಿಷ್ಠ ಅನುಯಾಯಿಗಳಾದ ಲಿಂಗಾಯತರನ್ನು ದಾರಿತಪ್ಪಿಸಲು ಹಗಲಿರುಳೂ ಹಲವಾರು ಗೋಚರ ಮತ್ತು ಅಗೋಚರ ಪ್ರಯತ್ನಗಳು ನಡೆಯುತ್ತಿವೆ.

ಈ ನಿಟ್ಟಿನಲ್ಲಿ ಪಂಚಾಚಾರ್ಯರು, ಅವರ ಅನುಯಾಯಿಗಳು ಮತ್ತು ಸಂಘ ಪರಿವಾರದವರು ಸಕ್ರಿಯರಾಗಿದ್ದಾರೆ. ಅವರು ಯಶಸ್ವಿಯಾದರೆ ಅದು ಅನುಭವ ಮಂಟಪ ವಿಫಲಗೊಂಡಂತಾಗುತ್ತದೆ ಎಂದು ಬೇರೆ ಹೇಳಬೇಕಾಗಿಲ್ಲ.

ಈ ಸಂಪ್ರದಾಯವಾದಿ ಅಸಹಿಷ್ಣುಗಳಿಗೆ ಬಸವಾಭಿಮಾನಿಗಳು ಕಡಿವಾಣ ಹಾಕದಿದ್ದರೆ ಅನುಭವ ಮಂಟಪವು ‘ರಾಷ್ಟ್ರೀಯತೆ’ ಹೆಸರಿನಲ್ಲಿ ‘ಹಿಂದುತ್ವ ತರಬೇತಿ ಕೇಂದ್ರವಾಗಿ, ನೇರವಾಗಿ, ಪರೋಕ್ಷವಾಗಿ ಹಿಂದುತ್ವ ಬೆಳೆಸಲು, ಬಳಕೆಯಾಗುವ ಅಪಾಯ ಹೆಚ್ಚಾಗುತ್ತದೆ.

ಈ ಹಿನ್ನೆಲೆಯಲ್ಲಿ ನೂತನ ಅನುಭವ ಮಂಟಪವನ್ನು ಬಸವಾದಿ ಶರಣರ ಸೈದ್ಧಾಂತಿಕ ವಿರೋಧಿಗಳಿಂದಲೂ ನಾವು ಸಂರಕ್ಷಿಸಿಕೊಳ್ಳಬೇಕಾಗಿದೆ.

ತುರ್ತಾಗಿ ಮಾಡಬೇಕಾಗಿರುವುದು

ಈ ಎಲ್ಲಾ ಜವಾಬ್ದಾರಿಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಿರುವುದು ಬಸವಾಭಿಮಾನಿಗಳಿಂದ ಮಾತ್ರ. ಇದಕ್ಕಾಗಿ ಈಗ ಎರಡು ಕಾರ್ಯಗಳನ್ನು ತುರ್ತಾಗಿ ಕೈಗೆತ್ತುಕೊಳ್ಳಬೇಕಾಗಿದೆ:

1) ನೂತನ ಅನುಭವ ಮಂಟಪದ ನಿರ್ವಹಣೆ ಹಾಗೂ ರಕ್ಷಣೆಗೆ ನಾಡಿನಾದ್ಯಂತ ಸ್ವಯಂಸೇವಕರ ಪಡೆ ಕಟ್ಟಬೇಕು. ಇವರು ಸಣ್ಣ ಸಣ್ಣ ತಂಡಗಳಲ್ಲಿ ಈಗಿನಿಂದಲೇ ನಿಗದಿತವಾಗಿ ಅನುಭವ ಮಂಟಪ ಕ್ಷೇತ್ರಕ್ಕೆ ಹೋಗಿ ಶ್ರಮದಾನ ಮಾಡುವ ವ್ಯವಸ್ಥೆ ಆರಂಭವಾಗಬೇಕು.

ಬಸವಾದಿ ಶರಣರ ಪರಂಪರೆ ಉಳಿಸಿಕೊಳ್ಳಲು ನಾವೆಲ್ಲರೂ ಪ್ರತಿ ವರ್ಷ ಅನುಭವ ಮಂಟಪಕ್ಕೆ ಹೋಗಿ ಅಲ್ಲಿ ಒಂದಷ್ಟು ದಿನ ಕಾಯಕ ಸೇವೆ ಸಲ್ಲಿಸುವಂತಾಗಬೇಕು.

ಈ ಪವಿತ್ರ ಕಾರ್ಯಕ್ಕೆ ವಿವಿಧ ಜಿಲ್ಲೆ, ತಾಲೂಕುಗಳಲ್ಲಿರುವ ಬಸವಾಭಿಮಾನಿಗಳು ಸಹಸ್ರ ಸಹಸ್ರ ಸಂಖ್ಯೆಗಳಲ್ಲಿ ಮುಂದೆ ಬಂದು ಕೈ ಜೋಡಿಸಬೇಕು.

ಆಸಕ್ತರ ಹೆಸರು ನೋಂದಾಯಿಸಲು ಸಧ್ಯದಲ್ಲೇ ಆನ್ಲೈನ್ ವ್ಯವಸ್ಥೆ ರೂಪಿಸಲಾಗುತ್ತದೆ. ನೀವೂ ಹೆಸರು ಕೊಡಬೇಕು, ನಿಮ್ಮ ಬಳಗದಲ್ಲಿಯೂ ಜಾಗೃತಿ ಮೂಡಿಸಿ ಇತರ ಬಸವಾಭಿಮಾನಿಗಳೂ ಮುಂದೆ ಬರುವಂತೆ ಮಾಡಬೇಕು.

ಈ ಕಾರ್ಯ ಈಗಿರುವ ಲಿಂಗಾಯತ ಸಮುದಾಯದಲ್ಲಿ ಹುಟ್ಟಿರುವವರಿಗೆ ಮಾತ್ರ ಸೀಮಿತವಾಗದೆ ಬಸವಾದಿ ಶರಣರ ತತ್ವ, ಪರಂಪರೆಗಳಲ್ಲಿ ನಂಬಿಕೆ, ಅಭಿಮಾನ, ಕಾಳಜಿ ಇರುವವರೆಲ್ಲಾ ಈ ಚಳುವಳಿಯಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ಅಗತ್ಯ ಕರ್ತವ್ಯವಾಗಿದೆ.

ಯಾವುದೇ ಧರ್ಮ, ಜಾತಿಗಳ ಅಡೆತಡೆಯಿಲ್ಲದೆ ಪ್ರತಿಯೊಬ್ಬರಿಗೂ ತೆರೆದುಕೊಳ್ಳುವ, ಇಡೀ ವಿಶ್ವಕ್ಕೆ ಪ್ರೀತಿ ಹಂಚುವ ವೇದಿಕಯಾದರೆ ಮಾತ್ರ ನೂತನ ಅನುಭವ ಮಂಟಪ ಶರಣರೇ ಹೇಳುವ ‘ಲಿಂಗ ಮೆಚ್ಚಿ ಅಹುದಹುದು’ ಎನಿಸಿಕೊಳ್ಳುತ್ತದೆ.

2) ಈ ಎಲ್ಲಾ ವಿಷಯಗಳನ್ನು ಜನರಿಗೆ ಮುಟ್ಟಿಸಲು ರಾಜ್ಯದಲ್ಲಿ ಎಲ್ಲೆಡೆ ‘ಅನುಭವ ಮಂಟಪ ಜಾಗೃತಿ ಶಿಬಿರ’ಗಳನ್ನು ನಡೆಸಲು ನಿರ್ಧರಿಸಲಾಗಿದೆ.

ಮುಂದಿನ ವರ್ಷ ಅನುಭವ ಮಂಟಪ ಲೋಕಾರ್ಪಣೆಯಾಗುವಷ್ಟರಲ್ಲಿ ನಾಡಿನ ನೂರಾರು ಕಡೆ ಜಾಗೃತಿ ಶಿಬಿರಗಳನ್ನು ನಡೆಸಲು ಬಸವಾಭಿಮಾನಿಗಳು ಕೈ ಜೋಡಿಸಿಬೇಕು.

ಈ ತರಬೇತಿ ಶಿಬಿರಗಳನ್ನು ರೂಪಿಸುವ ಕೆಲಸ ನಡೆಯುತ್ತಿದೆ. ಸಧ್ಯದಲ್ಲೇ ಇದರ ಬಗ್ಗೆ ಮತ್ತಷ್ಟು ಮಾಹಿತಿ ಹಂಚಿಕೊಳ್ಳುತ್ತೇವೆ.

900 ವರ್ಷಗಳ ನಂತರ ಮತ್ತೆ ‘ಅನುಭವ ಮಂಟಪ’ ಸ್ಥಾಪನೆಯಾಗುತ್ತಿರುವುದು ಐತಿಹಾಸಿಕ ಬೆಳವಣಿಗೆ.
ಇದನ್ನು ಸಮರ್ಪಕವಾಗಿ ನಿರ್ವಹಿಸಿ, ಸಂರಕ್ಷಿಸಿ ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

ನಾವೆಲ್ಲ ಲೋಕದಾರ್ಶನಿಕ ಬಸವಣ್ಣನವರು ಸ್ಥಾಪಿಸಿದ ‘ಅನುಭವ ಮಂಟಪ’ದ ಪುನರುತ್ಥಾನ ಕಾರ್ಯದಲ್ಲಿ ಬದ್ಧ ಸಂಕಲ್ಪ ಮಾಡೋಣ.

ತಮ್ಮ ವಿಶ್ವಾಸಿಗಳಾದ,

ಗೊ.ರು. ಚನ್ನಬಸಪ್ಪ
ಎಸ್.ಎಂ. ಜಾಮದಾರ್
ವೀರಣ್ಣ ರಾಜೂರ
ಟಿ. ಆರ್. ಚಂದ್ರಶೇಖರ್
ಅಶೋಕ ಬರಗುಂಡಿ
ಮೀನಾಕ್ಷಿ ಬಾಳಿ

Share This Article
8 Comments
  • ಕಾಯಕ ಮತ್ತು ದಾಸೋಹ ಪ್ರೇಮಿಗಳಾಗಿದ್ದು, ವಚನ ಸಾಹಿತ್ಯದಲ್ಲಿ ಆಳವಾದ ಅಧ್ಯಯನ ಅರಿವು ಆಚರಣೆಯೇ ತಮ್ಮ ಜೀವನದ ಆದ್ಯಂತ ಧ್ಯೇಯವಾಗಿಟ್ಟುಕೊಂಡು; ಅಷ್ಟಾವರಣ ಧರಿಸಿ, ಪಂಚಾಚಾರ ಪಾಲಿಸಿ, ಷಟ್ಸ್ಥಲ ಸಾಧಕರು ಅನುಭವ ಮಂಟಪದ ನಿರ್ವಹಣೆಯಲ್ಲಿ ತೊಡಗುವವರಾಗಿರಬೇಕು.

  • 900 ವರ್ಷಗಳ ನಂತರ ಅನುಭವ ಮಂಟಪ ಸ್ಥಾಪನೆಯಾಗುತ್ತಿರುವುದು ಸಂತಸದ ವಿಷಯ. ಗೊರುಚರಂತಹ ಹಿರಿಯರ ಕರೆಗೆ ಎಲ್ಲಾರು ಓಗೊಡಬೇಕು. ಎಲ್ಲಿ ಹೆಸರು ಕೊಡಬೇಕೆಂದು ತಿಳಿಸಿ.

    • ನಾನು ಸಿದ್ಧನಿದ್ದೇನೆ. ಸೂಕ್ತವಾದ ವಿಚಾರ. ಕೂಡಲೇ ಆಯಾ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಶಿಬಿರ ನಡೆಸಿ ಅಭ್ಯರ್ಥಿಗಳ ಪಟ್ಟಿ ಮಾಡಿ ಅವರನ್ನು 3-5 ದಿನ ಅನುಭವ ಮಂಟಪಕ್ಕೆ ಕರೆಯಿಸಿ ಅವರಿಗೆ ಸೂಕ್ತ ಸೇವೆ ಸಲ್ಲಿಸುವ ಬಗ್ಗೆ ಮಾರ್ಗದರ್ಶನ ಮಾಡಬೇಕು.

  • ಅತ್ಯಂತ ಮಹತ್ವದ ಈ ಜಾಗೃತಿ ಕಾರ್ಯಕ್ರಮಕ್ಕೆ ನನ್ನ ಕೈಲಾದ ಸೇವೆ ಮಾಡಲು ಸದಾ ಸಿದ್ಧ.
    ಇಂಥದೊಂದು ಕಾರ್ಯದ ನೇತೃತ್ವ ವಹಿಸಿದ ಹಿರಿಯರಿಗೆ ತುಂಬು ಹೃದಯದ ಧನ್ಯವಾದಗಳು.

    ಶರಣು ಶರಣಾರ್ಥಿ…

  • ಖಂಡಿತವಾಗಿಯೂ, ಹಿರಿಯರ ಹಾಗೂ ಅನುಭಾವಿಗಳ ಮಾರ್ಗದರ್ಶನದಲ್ಲಿ ನನ್ನ ಅಳಿಲು ಸೇವೆಯ ಸುಧೈವವಕಾಶಕ್ಕಾಗಿ ತಯಾರಾಗಿದ್ದೇನೆ.
    ಶಿವಾನಂದ ನರಕಲದಿನ್ನಿ ಬಾಗಲಕೋಟೆ
    Mobile No. 9448805707

  • I am santosh health wellness coach about WEIGHT LOSS WEIGHT GAIN BP SUGAR THYROID PILES EYE HEALTH whole body check up free in my MOTHER NUTRITION CLUB.
    I am ready to seva in ANYBHAV MANTAP
    Call me 8970656616
    THANK YOU

  • ಸ್ವರ್ಣ ಮಂದಿರದ ಮಾದರಿ ಎಂದಿದ್ದೀರಿ ಆ ಮಾದರಿಯನ್ನು ಅಧ್ಯಯನ ಮಾಡಲು ಒಂದು ತಂಡವನ್ನು ರಚಿಸಬೇಕಾಗುತ್ತದೆ. ಆ ತಂಡ ವಿವಿಧ ವಿಷಯಗಳ ಪರಿಣಿತಿಯನ್ನು ಹೊಂದಿರಬೇಕಾಗುತ್ತದೆ ಉದಾಹರಣೆಗೆ ಆಡಳಿತ ಸಂಪನ್ಮೂಲಗಳ ನಿರ್ವಹಣೆ ಸಿದ್ಧಾಂತದ ಪ್ರಕರತೆಯ ಬಗ್ಗೆ ಸ್ಪಷ್ಟ ನಿಲುವು ಸೇವಾ ಸಿಬ್ಬಂದಿಯ ಬಳಸುವ ಬಗೆ, ಆಂತರಿಕ ಆಡಳಿತ ನಿರ್ವಹಣೆ, ಹೊರವಲಯದ ಆಡಳಿತ ನಿರ್ವಹಣೆ
    ತಾಂತ್ರಿಕ ಸಿಬ್ಬಂದಿ, ಕಟ್ಟಡಗಳ ನಿರ್ವಹಣೆ, ಶುಚಿತ್ವದ ನಿರ್ವಹಣೆ,, ನಿರ್ವಹಣೆಯ ಮಾರ್ಗದರ್ಶಿಯ ಮಂಡಳಿ, ಆಂತರಿಕ ಶಿಸ್ತು, ಇನ್ನು ಮುಂತಾದ ಅನೇಕ ಸೂಕ್ಷ್ಮ ವಿಚಾರಗಳಲ್ಲಿ ನಿರ್ವಹಣಾ ವ್ಯವಸ್ತೆ ರೂಪಗೊಳಿಸುವುದು. ಇವುಗಳನ್ನೆಲ್ಲ ಒಳಗೊಂಡ ಅಧ್ಯಯನ ಅದನ್ನು ಹಾಗೂ ಮಾಡುವ ಕಮಿಟಿಗಳು ಇದೆಲ್ಲದರ ಬಗ್ಗೆ ಒಂದು ವಿಸೃತ ವರದಿಯನ್ನು ಅಧ್ಯಯನಕಾರರಿಂದ ತರಿಸಿಕೊಂಡು ನಿರ್ವಹಣಾ ಪ್ರಾಧಿಕಾರವನ್ನು ರಚಿಸುವುದು ಸೂಕ್ತ ಅನಿಸುತ್ತದೆ. ವ್ಯಾಟಿಕನ್ ಮೆಕ್ಕ ಸುವರ್ಣ ಮಂದಿರ, ತಿರುಪತಿ ನಿರ್ವಾಣ ವಿಧಾನ ಹೀಗೆ ಹಲವಾರು ಮಾದರಿಗಳನ್ನು ಅಧ್ಯಯನ ಮಾಡಿ ಸೂಕ್ತವಾದ ಮಾದರಿಯನ್ನು ರಚಿಸುವ ಸಮಿತಿ ತುರ್ತಾಗಿ ನೇಮಕಗೊಳ್ಳಲಿ. ಮುಂದೆ ಸಾಗುವ ಮಾರ್ಗ ತಾನಾಗೆ ತಿಳಿಯುತ್ತದೆ.

Leave a Reply

Your email address will not be published. Required fields are marked *