ಡಾ. ಸಿದ್ಧನಗೌಡ ಪಾಟೀಲರಿಗೆ ಸಿದ್ದಲಿಂಗ ಸ್ವಾಮೀಜಿ ಪ್ರಶಸ್ತಿ ಪ್ರದಾನ

ಮಣ್ಣನ್ನು ತಯಾರು ಮಾಡುವುದು ಯಾವ ಕಾರ್ಖಾನೆಯಿಂದಲೂ ಸಾಧ್ಯವಿಲ್ಲ

ಅಣ್ಣಿಗೇರಿ:

ಕಾರ್ಖಾನೆಗಳು ಉಕ್ಕನ್ನು ಒಳಗೊಂಡಂತೆ ಎಂತಹ ಉತ್ಪನ್ನಗಳನ್ನೂ ಉತ್ಪಾದಿಸಬಹುದು. ಆದರೆ ಮಣ್ಣನ್ನು ತಯಾರು ಮಾಡುವುದು ಯಾವ ಕಾರ್ಖಾನೆಯಿಂದಲೂ ಸಾಧ್ಯವಿಲ್ಲ. ಆದ್ದರಿಂದ ನಮ್ಮ ಭೂಮಿ, ನಮ್ಮ ಬದುಕು ನಾಶಮಾಡಿಕೊಂಡು ಸ್ಥಾಪಿಸುವ ಕಾರ್ಖಾನೆಗಳು ನಮಗೆ ಅಗತ್ಯವಿಲ್ಲ ಎಂದು ಹೋರಾಟಗಾರ ಡಾ. ಸಿದ್ಧನಗೌಡ ಪಾಟೀಲ ಸ್ಪಷ್ಟವಾಗಿ ಹೇಳಿದರು.

ಸ್ಥಳೀಯ ನಿಂಗಮ್ಮ ಎಸ್. ಹೂಗಾರ ಸಮೂಹ ವಿದ್ಯಾಲಯಗಳ ಆವರಣದಲ್ಲಿ ಬುಧವಾರ ಜರುಗಿದ ಗದಗನ ಲಿಂಗೈಕ್ಯ ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.

ಜಗತ್ತಿನ ಬಂಡವಾಳಶಾಹಿಗಳಿಗೆ ಅಲ್ಲಿನ ಜನರ ಬದುಕಿಗಿಂತ ತಮ್ಮ ಲಾಭವೇ ಮುಖ್ಯ. ಗದಗ ಸಮೀಪದಲ್ಲಿ  ಪೋಸ್ಕೊ ಕಾರ್ಖಾನೆ ಸ್ಥಾಪಿಸಿದ್ದರೆ ಗದಗ ಸುತ್ತಮುತ್ತಲು 20ಕ್ಕೂ ಹೆಚ್ಚು ಕಿಲೋಮೀಟರ್ ವ್ಯಾಪ್ತಿಯಲ್ಲಿ ಶುದ್ಧ ಗಾಳಿಯನ್ನು ಸೇವಿಸಲು ಯಾರಿಗೂ ಆಗುತ್ತಿರಲಿಲ್ಲ.

ಕಾರ್ಖಾನೆ ಸ್ಥಾಪಿಸುವುದರಿಂದ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗುತ್ತೆ ಎನ್ನುವುದು ಶುದ್ಧ ಸುಳ್ಳು. ಸ್ಥಳೀಯರನ್ನು ಕಂಪನಿಯವರು ಎಂದಿಗೂ ನೇಮಕ ಮಾಡಿಕೊಳ್ಳುವುದಿಲ್ಲ. ನೇಮಕ ಮಾಡಿಕೊಂಡರೆ ಅವರನ್ನು ಶೋಷಿಸಲು ಸಾಧ್ಯವಿಲ್ಲ. ಹೊರ ರಾಜ್ಯದವರಾದರೆ ಅವರನ್ನು ನಿರ್ದಯವಾಗಿ ಶೋಷಣೆ ಮಾಡಬಹುದು ಎನ್ನುವದು ಅವರ ಮುಖ್ಯ ಕಾರಣವಾಗಿದೆ.

ಗೋಕಾಕ ಚಳುವಳಿ ಕುರಿತು ಮಾತನಾಡಿದ ಅವರು, ಗೋಕಾಕ ಆಯೋಗ ರಚಿಸಿದ್ದೇ ಸಂಸ್ಕೃತದ ಸ್ಥಾನಮಾನಕ್ಕಾಗಿ. ಆದರೆ ಇಡೀ ರಾಜ್ಯಾದ್ಯಂತ ಅದಕ್ಕೆ ವಿರೋಧವಾದ ಹಿನ್ನೆಲೆಯಲ್ಲಿ ವಿ.ಕೃ. ಗೋಕಾಕ ಅವರು ಕನ್ನಡದ ಮಹತ್ವದ ಸ್ಥಾನಮಾನಕ್ಕಾಗಿ ವರದಿ ನೀಡಿದರು. ಶಂ. ಭಾ. ಜೋಶಿ, ಡಾ. ಬಸವರಾಜ ಕಟ್ಟಿಮನಿ, ಡಾ. ಎಂ.ಎಂ. ಕಲಬುರ್ಗಿ, ಚಂದ್ರಶೇಖರ ಪಾಟೀಲ, ಡಾ ಪಾಟೀಲ ಪುಟ್ಟಪ್ಪ, ಗದಗನ ತೋಂಟದ ಸಿದ್ದಲಿಂಗ ಶ್ರೀಗಳು, ಡಾ. ರಾಜಕುಮಾರ ಆದಿಯಾಗಿ ಅನೇಕ ಮಹಾತ್ಮರು ಹೋರಾಟ ಮಾಡಿದ ಸ್ಮರಣೀಯರು ಎಂದರು.

ಡಾಬೋಲ್ಕರ್, ಪನ್ಸಾರೆ, ತೋಟದ ಸಿದ್ಧಲಿಂಗ ಶ್ರೀಗಳು, ನಿಡುಮಾಮಿಡಿ ಶ್ರೀಗಳ ಒತ್ತಾಸೆಯಿಂದ ಮೌಢ್ಯ ವಿರೋಧಿ ಕಾನೂನು ಕರ್ನಾಟಕದಲ್ಲಿ ಜಾರಿ ಬಂತು. ಆದರೆ ಅನುಷ್ಠಾನದ ವಿಷಯದಲ್ಲಿ ಸರಕಾರಗಳ ಬದ್ಧತೆ ಇರಬೇಕು ಎಂದರು.

ನವಲಗುಂದ, ನರಗುಂದ ರೈತ ಬಂಡಾಯದ ಚಳುವಳಿ ಇಡೀ ರಾಜ್ಯಾದ್ಯಂತ ಎಲ್ಲ ಚಳುವಳಿಗಳಿಗೆ ಮೂಲ. ನಾಗನೂರು ಮಠ ನನ್ನ ಹೋರಾಟದ ಬದುಕಿನ ಮೂಲ ಎಂದು ನಾಗನೂರು ಮಠದ ಜೊತೆ ತಮಗಿದ್ದ ಅವಿನಾಭವ ಸಂಬಂಧ ಕುರಿತು ನೆನೆದರು.

ಪ್ರಶಸ್ತಿ ಯಾರು ಯಾಕೆ ಕೊಡುತ್ತಾರೆ ಎನ್ನುವುದು ಮುಖ್ಯ. ಆಯ್ಕೆ ಸಮಿತಿಯ ಪ್ರೀತಿಯನ್ನು ಗೌರವಿಸಿ ನನ್ನ ಹೋರಾಟದ ಬದುಕಿನುದ್ದಕ್ಕೂ ನನ್ನ ಜೊತೆಯಾಗಿ ನಿಂತವರ ಪರವಾಗಿ ಈ ಪ್ರಶಸ್ತಿಯನ್ನು ಸ್ವೀಕರಿಸುತ್ತಿದ್ದೇನೆ. ಈ ಪ್ರಶಸ್ತಿ ನನಗಲ್ಲ ನನ್ನ ಜೊತೆಯಾಗಿ ನಿಂತವರಿಗೆ ಎಂದು ಮನದುಂಬಿ ಹೇಳಿದರು.

ಎಲ್ಲಿ ಎತ್ತರದ ಸ್ವಾಮಿಗಳು ಕೂತುಕೊಳ್ಳುತ್ತಾರೋ ಅವರ ಜೊತೆ ನಾನೆಂದೂ ವೇದಿಕೆ ಹಂಚಿಕೊಂಡಿಲ್ಲ, ಹಂಚಿಕೊಳ್ಳುವುದೂ ಇಲ್ಲ. ಯಾವ ಮಠಗಳು ಸಮಾನತೆ, ಪ್ರೀತಿ ಬೋಧಿಸುತ್ತವೆಯೋ, ಯಾವ ಮಠಗಳು ಜಾತ್ಯಾತೀತ, ಲಿಂಗಾತೀತವಾಗಿ ಅನ್ನದಾಸೋಹ, ಜ್ಞಾನದಾಸೋಹ ಉಣಬಡಿಸುತ್ತವೆಯೋ ಅವೇ ನಿಜವಾದ ಮಠಗಳು.

ಅಂತಹ ಮಠಗಳಲ್ಲಿ ಗದಗ ತೋಂಟದಾರ್ಯ ಮಠ ಹಾಗೂ ನಾಗನೂರು ಮಠಗಳು ಅಗ್ರಗಣ್ಯ ಸ್ಥಾನದಲ್ಲಿ ನಿಲ್ಲುತ್ತವೆ. ಈ ಮಠಗಳ ಬಗ್ಗೆ ನನಗೆ ಯಾವತ್ತೂ ಗೌರವ ಎಂದು ನುಡಿದರು.

ಪ್ರಶಸ್ತಿ ಪತ್ರ ಹಾಗೂ 25 ಸಾವಿರ ರೂಪಾಯಿ ನಗದನ್ನು ಒಳಗೊಂಡ ಪ್ರಶಸ್ತಿಯನ್ನು  ಗಣ್ಯಮಾನ್ಯರ ಜೊತೆಗೂಡಿ ಪಾಟೀಲರಿಗೆ ಪ್ರದಾನ ಮಾಡಿ ಮಾತನಾಡಿದ ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು, ಲಿಂಗೈಕ್ಯ ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ಪ್ರೀತಿಗೆ ಪಾತ್ರರಾದವರಲ್ಲಿ ಸಿದ್ದನಗೌಡ ಪಾಟೀಲರು ಅಗ್ರಗಣ್ಯರು ಎಂದರು.

ಜಗತ್ತಿನ ಬಂಡವಾಳಶಾಹಿಗಳಿಂದ ವಾಯುಮಾಲಿನ್ಯ, ಪರಿಸರ ಮಾಲಿನ್ಯದಿಂದಾಗಿ ಜನರ ಬದುಕು ನರಕವಾಗುತ್ತಿದೆ ಎಂದು ನೋವು ವ್ಯಕ್ತಪಡಿಸಿದರು.

ಹೋರಾಟದ ಬದುಕು ಸುಖದಿಂದ ಕೂಡಿರುವುದಿಲ್ಲ. ಸನಾತನಿಗಳು ಸಾಂಪ್ರದಾಯವಾದಿಗಳಿಗೆ ಕಮ್ಯುನಿಸ್ಟ್ ವಿಚಾರಧಾರೆಯ ಸಿದ್ದನಗೌಡ ಪಾಟೀಲ ಅವರ ಹೋರಾಟಗಳನ್ನು ಸಹಿಸಿಕೊಳ್ಳಲಾಗುತ್ತಿಲ್ಲ ಎಂದರು. ಸಿದ್ದನಗೌಡ ಪಾಟೀಲ ಅವರಿಗೆ ಪ್ರದಾನ ಮಾಡಿದ ಈ ಪ್ರಶಸ್ತಿಯಿಂದ ಪ್ರಶಸ್ತಿ ಗೌರವ ಹೆಚ್ಚಾಗಿದೆ ಎಂದು ನುಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರೊ. ಎಸ್ ಎಸ್ ಹರ್ಲಾಪೂರ, ಅಭಿನಂದನಾ ನುಡಿ ನುಡಿದ ಶಂಕರ ಹಲಗತ್ತಿ, ಮುಖ್ಯ ಅತಿಥಿಯಾಗಿ ಮಾತನಾಡಿದ ಚಂದ್ರಶೇಖರ ವಸ್ತ್ರದ, ಪ್ರಶಸ್ತಿ ಬಿನ್ನವತ್ತಳೆ ಪ್ರಸ್ತುತಪಡಿಸಿದ ಡಾ. ಸುಧಾ ಕೌಜಗೇರಿ, ಡಾ ಸಿದ್ದನಗೌಡ ಪಾಟೀಲರು ಯಾವತ್ತೂ ಯಾವುದೇ ಪ್ರಶಸ್ತಿ ಸ್ವೀಕರಿಸಿಲ್ಲ. ಮಾಲಾರ್ಪಣೆಯನ್ನು ಮಾಡಿಸಿಕೊಂಡಿಲ್ಲ ಎಂದು ಅವರ ವ್ಯಕ್ತಿತ್ವವನ್ನು ಬಣ್ಣಿಸಿದರು.

ತೋಂಟದ ಸಿದ್ದಲಿಂಗ ಶ್ರೀಗಳನ್ನು ಸ್ಮರಿಸಿ, ಸಂಶೋಧನೆ, ಕೃಷಿ, ಸಾಹಿತ್ಯ, ಪರಿಸರ, ಜಾನಪದ, ಹೋರಾಟ ಸೇರಿದಂತೆ ಹಲವಾರು ವಿಷಯಗಳಲ್ಲಿ ಸಿದ್ದನಗೌಡ ಪಾಟೀಲ ಅವರು ತೋಂಟದ ಸಿದ್ದಲಿಂಗ ಶ್ರೀಗಳ ತದ್ರೂಪಿ. ಒಂದು ರೀತಿಯಲ್ಲಿ ಸಿದ್ದನಗೌಡರು ಸಂತರು ಎಂದರು.

ಇದೇ ಸಂದರ್ಭದಲ್ಲಿ ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರು ಹೋರಾಟದಿಂದ ತಮಗೆ ಬದುಕುಕೊಟ್ಟ ಡಾ.ಸಿದ್ದನಗೌಡ ಪಾಟೀಲ ಅವರನ್ನು ಸನ್ಮಾನಿಸಿದರು.

ಪ್ರಶಸ್ತಿ ಆಯ್ಕೆ ಸಮಿತಿಯ ಶಶಿಧರ ತೋಡಕರ್, ನಿಂಗಮ್ಮ ಹೂಗಾರ ವಿದ್ಯಾಲಯಗಳ ಆಡಳಿತ ಮಂಡಳಿಯ ಮಲ್ಲಿಕಾರ್ಜುನ ಸುರಕೋಡ, ಶಿವಯೋಗಪ್ಪ ಸುರಕೋಡ, ಮೃತ್ಯುಂಜಯ ನವಲಗುಂದ, ಮಲ್ಲಪ್ಪ ಹಾಳದೋಟರ ಮತ್ತಿತರರು ಉಪಸ್ಥಿತರಿದ್ದರು.

ಡಾ. ಶಾಂತಾ ಲಕ್ಷ್ಮೇಶ್ವರ ವಚನ ಪ್ರಾರ್ಥನೆ ಮಾಡಿದರು. ಮಲ್ಲಿಕಾರ್ಜುನ ಸುರಕೋಡ ಸ್ವಾಗತಿಸಿದರು. ಕೃಷ್ಣ ಜಿಂಗಾಡೆ ವಂದಿಸಿದರು. ಅನ್ವರ ಭಾಷಾ ಹುಬ್ಬಳ್ಳಿ ನಿರೂಪಿಸಿದರು. ಎಲ್ಲರಿಗೂ ಪ್ರಸಾದ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7eXkKdvSgzIz1asEX6uZh

Share This Article
Leave a comment

Leave a Reply

Your email address will not be published. Required fields are marked *

ಪತ್ರಕರ್ತರು, ಅಣ್ಣಿಗೇರಿ