ಆಳಂದ:
ಸಮಾಜದಲ್ಲಿ ಕೇವಲ ಬಾಹ್ಯವಾಗಿ ತಾರತಮ್ಯವನ್ನು ತೊಡೆದುಹಾಕುವುದರಿಂದ ಬದಲಾವಣೆ ತರಲು ಸಾಧ್ಯವಿಲ್ಲ. ಪ್ರಸ್ತುತ ಸುಶಿಕ್ಷಿತ ಸಮಾಜದಲ್ಲಿ ಬಹಿರಂಗವಾಗಿ ಅಸ್ಪೃಶ್ಯತೆ ಆಚರಣೆ ಕಾಣದಿರಬಹುದು.
ಆದರೆ ವ್ಯಕ್ತಿಯ ಮಿದುಳಿಗೆ ಜಾತಿಯ ಅಸಮಾನತೆಯ ಸೋಂಕು ತಗುಲಿದೆ. ಮನಸ್ಸಿನಲ್ಲಿ ಬೇರೂರಿರುವ ಈ ಭೇದಭಾವ ಅಂತ್ಯವಾದಾಗ ಮಾತ್ರ ನೈಜ ಸಮಾನತೆಯ ಸಮಾಜ ಸ್ಥಾಪನೆ ಸಾಧ್ಯವೆಂದು ಶ್ರೀ ತೋಂಟದ ಸಿದ್ಧಲಿಂಗೇಶ್ವರ ಅನುಭವ ಮಂಟಪದ ಸಂಚಾಲಕರು ಹಾಗೂ ಸತ್ಯಧರ್ಮ ಸಂವಾದ ಸಂಸ್ಥೆಯ ದಕ್ಷಿಣ ಭಾರತದ ಪ್ರಮುಖರಾದ ಪೂಜ್ಯ ಕೋರಣೇಶ್ವರ ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು.
ಪಟ್ಟಣದ ಶರಣ ಏಕಾಂತರಾಮಯ್ಯ ಅನುಭವ ಮಂಟಪದಲ್ಲಿ ಗುರುವಾರ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಹಾಗೂ ಪೃಥ್ವಿ ಹೈದರಾಬಾದ್ ಕರ್ನಾಟಕ ಶೋಷಿತ ಮಹಿಳೆಯರ ಅಭಿವೃದ್ಧಿ ಸಂಸ್ಥೆ, ನಿಂಬರ್ಗಾ ಸಹಯೋಗದಲ್ಲಿ ಏರ್ಪಡಿಸಿದ್ದ ‘ಅಸ್ಪೃಶ್ಯತಾ ನಿವಾರಣೆ’ ಕುರಿತ ವಿಚಾರಗೋಷ್ಠಿ ಹಾಗೂ ಬೀದಿ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
“ಎಲ್ಲರಿಗೂ ಮೂಲಭೂತ ಹಕ್ಕು, ವ್ಯಕ್ತಿ ಗೌರವ ಹಾಗೂ ಘನತೆ ತಂದುಕೊಡುವುದು ನಮ್ಮ ಸಂವಿಧಾನದಿಂದ ಸಾಧ್ಯವಿದೆ. ನಿಜವಾದ ಧರ್ಮವು ಮನುಷ್ಯನಿಗೆ ಮಾನವೀಯತೆ ಮತ್ತು ಸಮಾನತೆಯ ಹಾದಿಯನ್ನು ತೋರಿಸುತ್ತದೆ. ಆದರೆ ಧರ್ಮ, ಸಂಪ್ರದಾಯ ಮತ್ತು ಮೌಢ್ಯದ ನೆಪದಲ್ಲಿ ತಾರತಮ್ಯ ಸೃಷ್ಟಿಸುವ ಹುನ್ನಾರ ನಡೆಯುತ್ತಿದೆ. ಹೃದಯದಿಂದ ಈ ಮೇಲು-ಕೀಳು ಭಾವನೆ ದೂರವಾಗದ ಹೊರತು ದೇಶದ ಸಮಗ್ರ ಪ್ರಗತಿ ಅಸಾಧ್ಯ,” ಎಂದು ಸ್ವಾಮೀಜಿ ಕರೆ ನೀಡಿದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮಿ ಹೊಲ್ಕರ್ ಮಾತನಾಡಿ, “ಅಸ್ಪೃಶ್ಯತಾ ಆಚರಣೆಯನ್ನು ಕಾನೂನುಬದ್ಧವಾಗಿ ನಿಷೇಧಿಸಲಾಗಿದೆ, ಅದನ್ನು ಪಾಲಿಸುವುದು ಎಲ್ಲರ ಕರ್ತವ್ಯ,” ಎಂದರು.
ಉಪನ್ಯಾಸಕರಾದ ರಮೇಶ ಮಾಡಿಯಾಳಕರ್ ಹಾಗೂ ಸಂಜಯ ಪಾಟೀಲ ವಿಶೇಷ ಉಪನ್ಯಾಸ ನೀಡಿದರು.

ಜಾಗೃತಿ ಮೂಡಿಸಿದ ಬೀದಿ ನಾಟಕ:
ಇದೇ ಸಂದರ್ಭದಲ್ಲಿ ಲೋಹಿಯಾ ಕಲಾ ತಂಡದ ಕಲಾವಿದರಾದ ಪ್ರಭುಲಿಂಗ ಅಷ್ಟಗಿ, ಕಲ್ಯಾಣಿ ತುಕಾಣೆ, ಮೌಲಾಲಿ ನಾಗಲೇಗಾಂವ, ಶಾಂತವೀರ ಪಾಟೀಲ ಹಾಗೂ ನೀಲಮ್ಮ ಹಿರೋಳ್ಳಿ ಅವರು ವಿವಿಧ ಕ್ರಾಂತಿಗೀತೆಗಳನ್ನು ಹಾಡಿ, ಜಾತಿವಿನಾಶದ ಕುರಿತು ಜಾಗೃತಿ ಮೂಡಿಸುವ ಅರ್ಥಪೂರ್ಣ ಬೀದಿ ನಾಟಕ ಪ್ರದರ್ಶಿಸಿದರು.
ಪೃಥ್ವಿ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಸಂಜೀವಕುಮಾರ ನಿರ್ಮಲಕರ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮುಖಂಡರಾದ ದಯಾನಂದ ಶೇರಿಕಾರ, ಬಾಬುರಾವ ಮಡ್ಡೆ, ಬಸವಲಿಂಗಪ್ಪ ಗಾಯಕವಾಡ, ಸತೀಶ ಸನ್ಮುಖ, ಧರ್ಮಾ ಬಂಗರಗಿ, ಶ್ರೀಮಂತ ಜಿಡ್ಡೆ, ರೇಖಾ ರಂಗನ್, ಧರ್ಮಣ್ಣ ಕೋಣೇಕರ್, ಮಲ್ಲಿನಾಥ ಯಲಶೆಟ್ಟಿ, ವಿಠಲ ಚಿಕಣಿ, ಅಪ್ಪಾಸಾಬ ತೀರ್ಥೆ, ಸಿದ್ದರಾಮ ನಂದಗಾಂವ ಹಾಗೂ ಮರೆಪ್ಪ ಬಡಿಗೇರ ಉಪಸ್ಥಿತರಿದ್ದರು.
ರಾಜಶೇಖರ ಕಡಗನ್ ಕಾರ್ಯಕ್ರಮ ನಿರೂಪಿಸಿದರು, ಸಿದ್ಧಾರ್ಥ ಹಸೂರೆ ಸ್ವಾಗತಿಸಿದರು ಮತ್ತು ಶಿವಲಿಂಗಪ್ಪ ಮಂಟಗಿ ವಂದಿಸಿದರು.
