ದಾವಣಗೆರೆ
ವಚನ ದರ್ಶನದ ನಂತರ ಬಸವಾದಿ ಶರಣರನ್ನು ಹಿಂದುತ್ವದ ಮಡಿಲಿಗೆ ಸೇರಿಸಲು ಮತ್ತೊಂದು ಪ್ರಯತ್ನ ನಡೆದಿದೆ.
ಈಚೆಗೆ ಪ್ರಕಟವಾದ ‘ಬಸವ ಶೈವದಲ್ಲಿ ಹಿಂದುತ್ವ’ ಪುಸ್ತಕ ಹಿಂದೂ ಧರ್ಮಕ್ಕೆ ಪೂರಕವಾದಂತೆ ಕಾಣಿಸುವ ಕೆಲವು ವಚನಗಳನ್ನು ಸಂಗ್ರಹಿಸಿ ವಿಶ್ಲೇಷಿಸಿದೆ. ಈ ಪುಸ್ತಕವನ್ನು ಈಗ ಹಿಂದುತ್ವ ಸಂಘಟನೆಗಳು ಅನೇಕ ನಗರಗಳಲ್ಲಿ ಬಿಡುಗಡೆ ಮಾಡುತ್ತಿವೆ.
ಇದಕ್ಕೆ ಪ್ರತಿಯಾಗಿ ಬಸವ ತತ್ವ ಚಿಂತಕ ವಿಶ್ವೇಶ್ವರಯ್ಯ ಬಿ. ಎಂ. ವೈದಿಕತೆಯನ್ನು ನಿರಾಕರಿಸುವ ಹಲವಾರು ಶರಣರ ವಚನಗಳನ್ನು ಆಯ್ಕೆ ಮಾಡಿದ್ದಾರೆ.
ಇಂದು ಸನಾತನ ಧರ್ಮವನ್ನು ಸಾರಾಸಗಟಾಗಿ ನಿರಾಕರಿಸುವ ಚನ್ನಬಸವಣ್ಣನವರ ಕೆಲವು ವಚನಗಳು:
ವೇದ, ಶಾಸ್ತ್ರ, ಪುರಾಣ, ಆಗಮಗಳು ದೊಡ್ಡವಲ್ಲ
ವೇದ ಘನವೆಂಬೆನೆ? ವೇದ ವೇಧಿಸಲರಿಯದೆ ಕೆಟ್ಟವು.
ಶಾಸ್ತ್ರ ಘನವೆಂಬೆನೆ? ಶಾಸ್ತ್ರ ಸಾಧಿಸಲರಿಯದೆ ಕೆಟ್ಟವು.
ಪುರಾಣ ಘನವೆಂಬೆನೆ? ಪುರಾಣ ಪೂರೈಸಲರಿಯದೆ ಕೆಟ್ಟವು.
ಆಗಮ ಘನವೆಂಬೆನೆ? ಆಗಮ ಅರಸಲರಿಯದೆ ಕೆಟ್ಟವು.
ಅದೇನು ಕಾರಣವೆಂದಡೆ:
ವೇದ ಶಾಸ್ತ್ರ ಪುರಾಣಾಗಮಂಗಳೆಲ್ಲ,
ತಮ್ಮ ತನುವಿಡಿದು ಅರಸಲರಿಯವು.
ಇದಿರಿಟ್ಟುಕೊಂಡು ಕಡೆಹೋದ,
ನರಲೋಕದ ನರರುಗಳರಿಯರು,
ಸುರಲೋಕದ ಸುರರುಗಳರಿಯರು,
ಕೂಡಲಚೆನ್ನಸಂಗಮದೇವಾ ನಿಮ್ಮ ಶರಣನೇ ಬಲ್ಲ.
ದೇವರು ವೇದ ಪ್ರಿಯನಲ್ಲ
ವೇದಪ್ರಿಯನೆಂಬೆನೆ ನಮ್ಮ ದೇವ? ವೇದಪ್ರಿಯನಲ್ಲ.
ನಾದಪ್ರಿಯನೆಂಬೆನೆ ನಮ್ಮ ದೇವ? ನಾದಪ್ರಿಯನಲ್ಲ.
ಭೋಗಪ್ರಿಯನೆಂಬೆನೆ ನಮ್ಮ ದೇವ? ಭೋಗಪ್ರಿಯನಲ್ಲ.
ತುತ್ತುಪ್ರಿಯನೆಂಬೆನೆ ನಮ್ಮ ದೇವ? ತುತ್ತುಪ್ರಿಯನಲ್ಲ.
ಮನದ ಭಕ್ತಿಪ್ರಿಯ ಕಾಣಾ, ಕೂಡಲಚೆನ್ನಸಂಗಮದೇವಾ.
ವೇದ ಶಾಸ್ತ್ರ ಪುರಾಣಗಳನ್ನು ಓದುವುದು ದೊಡ್ಡ ಸಾಧನೆಯಲ್ಲ
ವೇದವನೋದುವ ಅಣ್ಣಗಳು ನೀವು ಕೇಳಿರೊ!
ವೇದ ವೇದಿಸಲಿಲ್ಲ ಶಾಸ್ತ್ರ ಸಾಧಿಸಲಿಲ್ಲ;
ಪುರಾಣ ಪೂರೈಸಲಿಲ್ಲ, ಆಗಮಕ್ಕೆ ಆದಿಯಿಲ್ಲ. ಇದು ಕಾರಣ-
ಆದ್ಯರಲ್ಲ, ವೇದ್ಯರಲ್ಲ, ಸಾಧ್ಯರಲ್ಲ
ಬರಿಯ ಹಿರಿಯರು ನೋಡಾ,
ಕೂಡಲಚೆನ್ನಸಂಗಮದೇವಾ.
ಶರಣರಿಗೆ ಗಣಪತಿಯ ಭಯವಿಲ್ಲ
ಬೇಡವೊ ಇಲಿಚಯ್ಯಾ!
ಮೊನ್ನೆ ಬಂದು ನಮ್ಮ ಶಿವದಾರವ ಕಡಿದೆ,
ಇಂದು ಬಂದು ನಮ್ಮ ವಸ್ತ್ರವ ಕಡಿದೆ.
ಬೇಡವೋ ಇಲಿಚಯ್ಯಾ!
ನಿನಗಂಜರು, ನಿನ್ನ ಗಣಪತಿಗಂಜರು;
ಕೂಡಲಚೆನ್ನಸಂಗನ ಶರಣರು ಕಂಡಡೆ,
ನಿನ್ನ ಹಲ್ಲ ಕಳೆವರು, ಹಂತವ ಮುರಿವರು.
ವೇದ ಅಂತಿಮವಲ್ಲ, ಬ್ರಾಹ್ಮಣರು ದೇವರಲ್ಲ
ಬ್ರಹ್ಮ ನಿಮ್ಮ ಬಲ್ಲಡೆ ನಿರ್ಮಾಲ್ಯವಹನೆ?
ವಿಷ್ಣು ನಿಮ್ಮ ಬಲ್ಲಡೆ ಭುಜವ ಸುಡಿಸಿಕೊಂಬನೆ?
ಶ್ರವಣ ನಿಮ್ಮ ಬಲ್ಲಡೆ ಬತ್ತಲೆಯಾಗಿ ತಲೆಯ ತರಿಸಿಕೊಂಬನೆ?
ಕೃತಯುಗದಲ್ಲಿ ಶಿವನ ಹೊಗಳುವ ವೇದವನೋದಿ
ಗಜಯಾಗವ ಮಾಡಿ ಆನೆಯ ತಿನ್ನ ಹೇಳಿತ್ತೆ ನಿಮ್ಮ ವೇದ?
ತ್ರೇತಾಯುಗದಲ್ಲಿ ಶಿವನ ಹೊಗಳುವ ವೇದವನೋದಿ
ಅಶ್ವಯಾಗವ ಮಾಡಿ ಕುದುರೆಯ ಕೊಂದು
ತಿನ್ನ ಹೇಳಿತ್ತೆ ನಿಮ್ಮ ವೇದ?
ದ್ವಾಪರಯುಗದಲ್ಲಿ ಶಿವನ ಹೊಗಳುವ ವೇದವನೋದಿ
ಮಹಿಷಹೋಮವ ಮಾಡಿ ಕೋಣನ ಕೊಂದು
ತಿನ್ನ ಹೇಳಿತ್ತೆ ನಿಮ್ಮ ವೇದ?
ಕಲಿಯುಗದಲ್ಲಿ ಶಿವನ ಹೊಗಳುವ
ವೇದವನೋದಿ ಅಜಯಾಗವ ಮಾಡಿ
ಹೋತನ ಕೊಂದು ತಿನ್ನ ಹೇಳಿತ್ತೆ ನಿಮ್ಮ ವೇದ?
ಬ್ರಾಹ್ಮಣನೆ ದೈವವೆಂದಾರಾಧಿಸಿ
ಗೌತಮ ಗೋಹತ್ಯವಾದುದಿಲ್ಲವೆ?
ಬ್ರಾಹ್ಮಣನೆ ದೈವವೆಂದಾರಾಧಿಸಿ
ಪಂಚಪಾಂಡವರು ದೇಶಭ್ರಷ್ಟರಾಗರೆ?
ಬ್ರಾಹ್ಮಣನೆ ದೈವವೆಂದಾರಾಧಿಸಿ
ಹರಿಶ್ಚಂದ್ರ ಚಂಡಾಲಗೆ ಮಾರಿಸಿಕೊಳ್ಳನೆ?
ಬ್ರಾಹ್ಮಣನೆ ದೈವವೆಂದಾರಾಧಿಸಿ ಬಲಿಚಕ್ರವರ್ತಿ
ಬಂಧನಕ್ಕೊಳಗಾಗನೆ?
ಬ್ರಾಹ್ಮಣನೆ ದೈವವೆಂದಾರಾಧಿಸಿ
ಮುಕ್ತಿಗೆ ಸಂದವರಿಲ್ಲ.
ಬಲ್ಲಡೆ ನೀವು ಹೇಳಿರೊ,
ಅರಿಯದಿದ್ದರೆ ನೀವು ಕೇಳಿರೊ:
ನಮ್ಮ ಜಂಗಮಲಿಂಗವ ದೈವವೆಂದಾರಾಧಿಸಿ;
ಬಾಹೂರ ಬೊಮ್ಮಯ್ಯಗಳು
ಕಲ್ಲ ನಂದಿಗೆ ಕಬ್ಬು ಮೇಯಿಸಿದ್ದಲ್ಲವೆ?
ನಮ್ಮ ಜಂಗಮಲಿಂಗವ ದೈವವೆಂದಾರಾಧಿಸಿ
ಗೊಬ್ಬೂರ ಬಿಬ್ಬಿಬಾಚಯ್ಯಗಳು ಪ್ರಸಾದದಿಂದ
ಗೊಬ್ಬೂರ ಸುಟ್ಟುದಿಲ್ಲವೆ?
ನಮ್ಮ ಜಂಗಮಲಿಂಗವ ದೈವವೆಂದಾರಾಧಿಸಿ
ಶಂಕರ ದಾಸಿಮಯ್ಯಗಳು ಸರ್ವಭೂತಂಗಳ ಕೈಯಲ್ಲಿ
ಕೊಟ್ಟಣವ ಕುಟ್ಟಿಸಲಿಲ್ಲವೆ?
ನಮ್ಮ ಜಂಗಮಲಿಂಗವ ದೈವವೆಂದಾರಾಧಿಸಿ
ಹಾವಿನಹಾಳ ಕಲ್ಲಯ್ಯಗಳು
ಶ್ವಾನನ ಬಾಯಿಂದ ವೇದವನೋದಿಸಲಿಲ್ಲವೆ?
ನಮ್ಮ ಜಂಗಮಲಿಂಗವ ದೈವವೆಂದಾರಾಧಿಸಿ
ಸಿಂಧುಬಲ್ಲಾಳ ಸ್ವಯಲಿಂಗಿಯಾಗಲಿಲ್ಲವೆ?
ಅಯ್ಯಾ ನಮ್ಮ ಜಂಗಮಲಿಂಗವ ದೈವವೆಂದಾರಾಧಿಸಿ
ಸಿರಿಯಾಳಸೆಟ್ಟಿ ಕಂಚಿಪುರವ ಕೈಲಾಸಕ್ಕೆ ಕೊಂಡೊಯ್ಯಲಿಲ್ಲವೆ?
ಅಯ್ಯಾ ನಮ್ಮ ಜಂಗಮಲಿಂಗವ ದೈವವೆಂದಾರಾಧಿಸಿ
ಮುಂದೆ ನುತಿಸಿ ಹಿಂದೆ ಆಡಿಕೊಂಬ ಪರವಾದಿ ಹೊಲೆಯರ ಬಾಯಲ್ಲಿ
ನಮ್ಮ ಪಡಿಹಾರಿ ಉತ್ತಣ್ಣಗಳ ಎಡದ ಪಾದರಕ್ಷೆಯ
ಅಂಗುಳವ ಮೆಟ್ಟಿಕ್ಕುವನೆಂದ.
ಕೂಡಲಚೆನ್ನಸಂಗಮದೇವ.
ವೇದ ಓದಿದವರ ಮನೆಯ ಹೋಳಿಗೆಯನ್ನು ಶಿವಭಕ್ತರ ನಾಯಿ ಮೂಸಿಯೂ ನೋಡುವುದಿಲ್ಲ
ನಾಲ್ಕು ವೇದವನೋದಿದ ವಿಪ್ರರ ಮನೆಯ
ಎಣ್ಣೆ ಹೋಳಿಗೆ ತುಪ್ಪ ಸಕ್ಕರೆ ಎಂದಡೆ
ನಮ್ಮ ಶಿವಭಕ್ತರ ಮನೆಯ ಶ್ವಾನ,
ಮೂಸಿನೋಡಿ ಒಲ್ಲದೆ ಹೋಯಿತ್ತು.
ಅದೆಂತೆಂದಡೆ: ಸಾಮವೇದಿ ಹೋಗುತ್ತಿರಲು
ಶ್ವಪಚಯ್ಯಗಳು, ತಮ್ಮ ಪಾಕಕ್ಕೆ
ಪಾದರಕ್ಷೆಯ ತೆರೆಯ ಹಿಡಿದಿದ್ದರಾಗಿ.
ಆ ಶ್ವಾನನೆ ಶುಚಿಯೆಂದು ಹಾಕಿದ ಮುಂಡಿಗೆಯ
ಆರಾದಡೂ ಎತ್ತುವಿರೊ,
ಜಗದ ಸಂತೆಯ ಸೂಳೆಯ ಮಕ್ಕಳಿರಾ?
ಜಗಕ್ಕೆ ಪಿತನೊಬ್ಬನೆ ಅಲ್ಲದೆ
ಇಬ್ಬರೆಂದು ಬೊಗಳುವನ ಬಾಯಲ್ಲಿ
ನಮ್ಮ ಪಡಿಹಾರಿ ಉತ್ತಣ್ಣಗಳ ಎಡದ ಪಾದರಕ್ಷೆಯ
ಅವನಂಗಳ ಮೆಟ್ಟಿಕ್ಕುವೆನೆಂದ
ಕೂಡಲಚೆನ್ನಸಂಗಮದೇವ.
ಹಿರಿಯತನ ಬರುವುದು ವಯಸ್ಸು, ತಪಸ್ಸಿನಿಂದಲ್ಲ, ಜ್ಞಾನದಿಂದ
ಅಜಕೋಟಿ ಕಲ್ಪ ವರುಷದವರೆಲ್ಲರು ಹಿರಿಯರೆ?
ಹುತ್ತೇರಿ ಬೆತ್ತ ಬೆಳೆದ ತಪಸ್ವಿಗಳೆಲ್ಲರು ಹಿರಿಯರೆ?
ನಡುಮುರಿದು ಗುಡುಗೂರಿ ತಲೆ ನಡುಗಿ
ನೆರೆತೆರೆ ಹೆಚ್ಚಿ, ಮತಿಗೆಟ್ಟು
ಒಂದನಾಡ ಹೋಗಿ ಒಂಬತ್ತನಾಡುವ
ಅಜ್ಞಾನಿಗಳೆಲ್ಲರು ಹಿರಿಯರೆ?
ಅನುವನರಿದು, ಘನವ ಬೆರಸಿ ಹಿರಿದು
ಕಿರಿದೆಂಬ ಭೇದವ ಮರೆದು,
ಕೂಡಲಚೆನ್ನಸಂಗಯ್ಯನಲ್ಲಿ ಬೆರಸಿ
ಬೇರಿಲ್ಲದಿಪ್ಪ ಹಿರಿಯತನ
ನಮ್ಮ ಮಹಾದೇವಿಯಕ್ಕಂಗಾಯಿತ್ತು.
ಅಗ್ಘವಣಿ ಪುಷ್ಪ ತಂದು ಪೂಜೆ ಮಾಡುವುದು ವ್ಯರ್ಥ
ಅಗ್ಘವಣಿಯನೆ ತುಂಬಿ,
ಪುಷ್ಪವನೆ ತಂದು ಪೂಜಿಸಿ ಲಯಕ್ಕೊಳಗಾದರು.
ಜನಮರುಳೋ ಜಾತ್ರೆಮರುಳೊ
ಅಗ್ಘವಣಿಯನೆ ತುಂಬಿದ ಜಲ ಬತ್ತಿಹೋಯಿತ್ತು,
ಪುಷ್ಪವನೆ ತಂದು ತಂದು ಗಿಡು ಅಡವಿ ಕೂಡಿತ್ತು.
ನೀ ಪೂಜಿಸಿದ ಪೂಜೆ ಗಿಡುವು
ಮಡುವಿಗಲ್ಲದೆ ನಿನಗೆಲ್ಲಿಹುದೋ?
ಮಾಡಿ ಮಾಡಿ [ಮಾ]ಡಿಕೆ ಕೇಡು.
ಮಾಡಿ ಮನ ಮರುಗದೆ, ನೀಡಿ ನಿಜವಿಲ್ಲದೆ
ಅಣ್ಣಗಳ ಕೆಟ್ಟ ಕೇಡು ನೋಡಾ
ಮಹಾದಾನಿ ಕೂಡಲಚೆನ್ನಸಂಗಮದೇವಾ.
ಅಷ್ಟವಿಧಾರ್ಚನೆ ಷೋಡಶೋಪಚಾರ ಮಾಡುವುದು ವ್ಯರ್ಥ
ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡಲಾಗದು,
ಮಾಡಿದರು ಮಾಡಿರಿ, ಬೇಡಿ ಮಾಡಲಾಗದು.
ಬೇಡಿ ಮಾಡಿದ ಭಕ್ತಿ ಈಡಾಗಲರಿಯದು
ಕೂಡಲಚೆನ್ನಸಂಗಯ್ಯಾ.
ವೇದಗಳನ್ನು ಓದಿದವರು ಶ್ರೇಷ್ಠರಲ್ಲ
ಆನೆಯನೇರಿದ ಮಾವತಿಗ
ಚಕ್ರೇಶ್ವರನಾಗಬಲ್ಲನೆ ಅಯ್ಯಾ?
ವೇದಾಗಮಶಾಸ್ತ್ರ ಪುರಾಣಂಗಳನೋದಿ ಕೇಳಿ,
ನಡೆ ನುಡಿ ಪೂರಾಯವಾದ
ಪುರಾತನರಾಗಬಲ್ಲರೆ ಅಯ್ಯಾ?
ಅದೆಂತೆಂದಡೆ; ಪೂರ್ಣಶ್ಚ ಪುರಾತನಃʼ ಎಂದುದಾಗಿ. ತೊತ್ತು ಲಕ್ಷಣವಿರಲು, ನಾಣ್ಯವ ನುಡಿಸಿ, ನವರತ್ನಾಭರಣಂಗಳ ತೊಡಿಸಿ, ದಂಡಿಗೆಯನೇರಿಸಲು ಶಂಕರಸ್ಯ ಯಥಾ ಗೌರೀ’
ಎನಿಸಿಕೊಳ್ಳಬಲ್ಲಳೆ ಅಯ್ಯಾ?
ಖ್ಯಾತಿಗಾಗಿ ನಿಜತತ್ತ್ವಂಗಳನೋದಿ
ಕೇಳಿ ಹೇಳಿದಡೇನು?
ಅದಕ್ಕೆ ತಕ್ಕ ಅರಿವು ಆಚಾರ ನಡೆನುಡಿಯಲ್ಲಿ
ನಿರ್ಣಯವಿಲ್ಲದಿರ್ದಡೆ ಕುಂಭೀಪಾತಕ
ನಾಯಕನರಕ ತಪ್ಪದು-
ಕೂಡಲಚೆನ್ನಸಂಗಮದೇವಾ.
ಕಲ್ಲು ಮಣ್ಣು ದೇವರಲ್ಲ, ಜಂಗಮ ದೇವರು
ಕಲ್ಲದೇವರ ಪೂಜೆಯ ಮಾಡಿ
ಕಲಿಯುಗದ ಕತ್ತೆಗಳಾಗಿ ಹುಟ್ಟಿದರಯ್ಯಾ.
ಮಣ್ಣದೇವರ ಪೂಜೆಯ ಮಾಡಿ
ಮಣ್ಣಾಗಿ ಹುಟ್ಟಿದರಯ್ಯಾ.
ಮರನದೇವರ ಪೂಜೆಯ
ಮಾಡಿ ಎಗ್ಗಗಳಾದರಯ್ಯ.
ಜಂಗಮದೇವರ ಪೂಜೆಯ ಮಾಡಿ
ಪ್ರಾಣಲಿಂಗಿ ಪ್ರಸಾದಿಗಳಾದರಯ್ಯ.
ಅದೆಂತೆಂದಡೆ:
ಜಂಗಮದೇವರು ನಡೆಸಿದರೆ ನಡೆವರು,
ನುಡಿಸಿದರೆ ನುಡಿವರು,
ಒಡನೆ ಮಾತಾಡುವರು,
ತಪ್ಪಿದರೆ ಬುದ್ಧಿಯ ಹೇಳುವರು.
ಜಂಗಮದೇವರ ಪೂಜೆಯ ಮಾಡಿ
ಕೈಲಾಸಕ್ಕೆ ಯೋಗ್ಯರಾದರಯ್ಯಾ.
ಕೂಡಲಚೆನ್ನಸಂಗಮದೇವಯ್ಯಾ.
