ಸಾಣೇಹಳ್ಳಿ:
ಮಲೇಷಿಯಾದ ಎಂಸಿಆರ್ ಸಭಾಂಗಣದಲ್ಲಿ ಈಚೆಗೆ ‘ಬಸವತತ್ವ’ ಚಿಂತನಗೋಷ್ಠಿ ನಡೆಯಿತು. ಚಿಂತನಾಗೋಷ್ಠಿಯ ಸಾನಿಧ್ಯ ವಹಿಸಿ ಮಾತನಾಡಿದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ನಮ್ಮೊಳಗೆ ಅನೇಕ ರೀತಿಯ ಸೈಟ್ಗಳಿವೆ.
ಆದರೆ ಎಲ್ಲ ಸೈಟ್ಗಳ ಬಗ್ಗೆ ಗೊತ್ತಿಲ್ಲ. ನಮಗೆ ಗೊತ್ತಿರುವುದು ಪಂಚೇಂದ್ರಿಗಳು ಮಾತ್ರ. ಆದರೆ ಇದಕ್ಕಿಂತ ಸೂಕ್ಷ್ಮವಾಗಿ ಇಂದ್ರಿಯಗಳು ಮನುಷ್ಯನ ಅಂತರಂಗದಲ್ಲಿ ಅಡಗಿವೆ. ಅದನ್ನು ಬಹಿರಂಗಗೊಳಿಸಿದವರು ೧೨ನೆಯ ಶತಮಾನದ ಶಿವಶರಣರು ಎಂದರು.
ಐದು ದಿನಗಳ ಕಾಲ ಮಲೇಷಿಯಾ ಪ್ರವಾಸ ಕೈಗೊಂಡು ಬಸವತತ್ವ ಚಿಂತನಾ ಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇಹಲೋಕದಲ್ಲಿ ನೆಮ್ಮದಿಯಿಂದ ಬಾಳಬೇಕಾದರೆ ಹೇಗೆ ನಮ್ಮ ಬದುಕಿದೆ ಎಂದು ಆತ್ಮಾವಲೋಕನ ಮಾಡಿಕೊಳ್ಳಲು ಶರಣರು ಅವಕಾಶ ಮಾಡಿಕೊಟ್ಟರು. ಮನುಷ್ಯ ಯಾವಾಗಲೂ ಬಹಿರ್ಮುಖಿಯಾಗಲು ಇಷ್ಟಪಡುತ್ತಾನೆಯೇ ಹೊರತು ಅಂತರ್ಮುಖಿಯಾಗಲು ಇಷ್ಟಪಡುವುದಿಲ್ಲ.
ಹೊರಗಿನ ನೋಟ ತುಂಬ ಖುಷಿಕೊಡುತ್ತದೆ. ಆದರೆ ಹೊರಗಿನಕ್ಕಿಂತ ಹೆಚ್ಚು ಖುಷಿ ಕೊಡುವುದು ಒಳಗಡೆ ಇದೆ. ಒಳಗಡೆ ಏನಿಲ್ವೋ ಖಂಡಿತ ಅದು ಹೊರಗಡೆ ಇಲ್ಲ ಎನ್ನುವುದು ಶರಣರ ಅಭಿಪ್ರಾಯ. ಹಾಗಾಗಿ ಅಂತರಂಗದ ನೋಟವನ್ನು ಕಲಿಸುವುದೇ ಅನುಭವ ಮಂಟಪ. ಅಲ್ಲಿ ಅನುಭವ ಮತ್ತು ಅನುಭಾವ ಎರಡರ ಸಂಗಮ ಇರುತ್ತದೆ.
ಈ ನಾಡಿನಲ್ಲಿ ಭವ್ಯವಾದ ಕಟ್ಟಡಗಳಿಗೇನು ಕೊರತೆಯಿಲ್ಲ. ಆದರೆ ಕಟ್ಟಡದ ಒಳಗಡೆ ನಡೆಯುವ ಕ್ರಿಯೆಗಳಿಂದ ವ್ಯಕಿಯ ವ್ಯಕ್ತಿತ್ವ ಅರಳುವಂತಿರಬೇಕು. ಅನುಭವ ಮಂಟಪಕ್ಕೆ ಪ್ರವೇಶಿಸಿದಾಗ ನಮ್ಮತನವನ್ನು ಸಂಪೂರ್ಣವಾಗಿ ಕಳೆದುಕೊಂಡು ಎಲ್ಲರೊಳಗೊಬ್ಬ ನಾನು ಎನ್ನುವ ಭಾವನೆ ಬೆಳೆಸಿಕೊಳ್ಳಬೇಕು.
ಇವತ್ತು ಇಡೀ ಜಗತ್ತು ನಿಂತಿರುವುದು ಕಾಯಕ, ದಾಸೋಹ, ಇಷ್ಟಲಿಂಗನಿಷ್ಠೆಯ ಮೂಲಕ. ಈ ಮೂರನ್ನು ಸರಿಯಾಗಿ ಪ್ರಯೋಗ ಮಾಡಿದರೆ ಭಾರತ ಜಗತ್ತಿನಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲಲು ಸಾಧ್ಯ. ಆ ಕನಸನ್ನು ೧೨ನೆಯ ಶತಮಾನದಲ್ಲಿ ಬಸವಣ್ಣನವರು ನನಸು ಮಾಡಿದರು. ಹಾಗಾಗಿಯೇ ದೇಶದ ನಾನಾ ಭಾಗಗಳಿಂದ ಅಸಾಮಾನ್ಯ ವ್ಯಕ್ತಿಗಳು ಬಂದು ಸಾಮಾನ್ಯ ವ್ಯಕ್ತಿಗಳಂತೆ ಕಾಯಕ ಮಾಡಿ ಅನುಭವ ಮಂಟಪಕ್ಕೆ ಬಂದು ತಮ್ಮ ಅಂತರಂಗದ ಅವಲೋಕನ ಮಾಡಿಕೊಂಡರು.
ಇದುವರೆಗೂ ನಾವು ನಡೆದ ದಾರಿ ಯಾವುದು ಈಗ ನಡೆಯಬೇಕಾದ ದಾರಿ ಯಾವುದು ಎಂದು ಶರಣರು ಆತ್ಮಾವಲೋಕನ ಮಾಡಿಕೊಂಡರು. ಆ ಕಾರಣಕ್ಕಾಗಿಯೇ ಶರಣರನ್ನು ಇಂದಿಗೂ ನಾವು ಮತ್ತೆ ಮತ್ತೆ ನೆನಪು ಮಾಡಿಕೊಳ್ಳುತ್ತೇವೆ ಎಂದರು.

ಬಸವ ಕಲ್ಯಾಣದಲ್ಲಿ ನಿರ್ಮಾಣವಾಗುತ್ತಿರುವ ನೂತನ ಅನುಭವ ಮಂಟಪದ ವಿನ್ಯಾಸಕಾರ ಡಾ. ಬಾಬಾ ಸಾಹೇಬ ಗೆಡ್ಡೆ ಮಾತನಾಡಿ; ಬಸವಕಲ್ಯಾಣದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ‘ಅನುಭವ ಮಂಟಪ’ದ ನಿಜಸ್ವರೂಪ ತಿಳಿಸುವ ಕಾರ್ಯ ನಡೆಯುತ್ತಿದೆ. ೧೨ನೆಯ ಶತಮಾನದಲ್ಲಿರುವ ಅನುಭವ ಮಂಟಪವನ್ನು ೨೧ನೇ ಶತಮಾನದ ಜನರಿಗೆ ಯಾವ ರೀತಿ ಕಟ್ಟಬಹುದು ಎನ್ನುವುದನ್ನು ಕರ್ನಾಟಕದ ಎಲ್ಲ ಸಾಹಿತಿಗಳು, ಚಿಂತಕರು, ಮಠಾಧೀಶರು ಸೇರಿ ರೂಪರೇಷೆ ಮಾಡಿ ಅದರಂತೆ ವಿನ್ಯಾಸ ಆಗಬೇಕೆಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆ ಮಾಡಿದ್ದು ಅದರಲ್ಲಿ ನಾವು ಜಯಗಳಿಸಿದ್ದು ಹೆಮ್ಮೆಯ ವಿಷಯ. ಇನ್ನು ಒಂದು ವರ್ಷದಲ್ಲಿ ಅನುಭವ ಪೂರ್ಣಗೊಳ್ಳುವುದು.
ಮಹಿಳೆಯರಿಗೆ ಕವಿಯತ್ರಿ ಸ್ಥಾನವನ್ನು ಕೊಟ್ಟಿರುವ ಜಗತ್ತಿನ ಪ್ರಪ್ರಥಮ ಸಾಹಿತ್ಯ ವಚನ ಸಾಹಿತ್ಯ. ಮಹಿಳೆಯರ ಗೌರವವನ್ನು ಎತ್ತಿಹಿಡಿದದ್ದು ವಚನ ಸಾಹಿತ್ಯ. ಮಹಿಳೆಯರನ್ನು ಭೋಗದ ವಸ್ತು ಎಂದು ತಿಳಿದುಕೊಂಡಿದ್ದ ಕಾಲದಲ್ಲಿ ಅನುಭವ ಮಂಟಪದಲ್ಲಿ ಸ್ಥಾನವನ್ನು ಕೊಟ್ಟ ಕನ್ನಡ ಭಾಷೆಯಲ್ಲಿ ವಚನ ರಚಿಸುವಂತೆ ಮಾಡಿದ್ದು ಶರಣ ಪರಂಪರೆ. ಅಂದಿನ ಕಾಲದ ಆಧ್ಯಾತ್ಮಿಕ ಜ್ಞಾನವನ್ನು ಸರಳ ಕನ್ನಡ ಭಾಷೆಯಲ್ಲಿ ತಿಳಿಸಿದ್ದು ವಚನ ಸಾಹಿತ್ಯ.
ಎಲ್ಲ ಕನ್ನಡಿಗರು ಬಸವತತ್ವವನ್ನು ಆಚರಿಸದೇ ಇರಬಹುದು, ಲಿಂಗಾಯತ ಧರ್ಮದ ಬಗ್ಗೆ ಗೊತ್ತಿಲ್ಲದೇ ಇರಬಹುದು. ಅದನ್ನು ಹೊರತುಪಡಿಸಿ ಕನ್ನಡಿಗರು ಹೆಮ್ಮೆ ಪಡುವ ವಿಷಯ ಎಂದರೆ ಜಗತ್ತಿಗೆ ಮಹಿಳಾ ಕವಿಯತ್ರಿ ಕೊಟ್ಟಿರುವುದು ಜಗತ್ತೇ ಹೆಮ್ಮೆ ಪಡುವಂಥದ್ದು.
ಒಬ್ಬ ಸಾಮಾನ್ಯ ವ್ಯಕ್ತಿ ಅನುಭವ ಮಂಟಪದ ಸಂಪರ್ಕಕ್ಕೆ ಬಂದಾಗ ಶರಣನಾಗುವನು. ಶರಣ ಎಂದರೆ ನುಡಿದಂತೆ ನಡೆಯುವುದು, ಬಯಲಲ್ಲಿ ರೂಪ ಕಾಣುವುದು, ವ್ಯಕ್ತಿತ್ವ ವಿಕಾಸ ಹೊಂದುವುದು ಶರಣ ತತ್ವದ ಮೂಲ ಸಿದ್ಧಾಂತ. ಶರಣ ಸಾಹಿತ್ಯದಲ್ಲಿ ಜ್ಞಾನಕ್ಕಿಂತ ದೊಡ್ಡದು ಅರಿವು. ಅರಿವಿಗಿಂತ ದೊಡ್ಡದು ಆಚಾರ. ಈ ಸಿದ್ಧಾಂತ ಇವತ್ತು ನಮ್ಮ ದೇಶಕ್ಕೆ ಅವಶ್ಯಕವಾಗಿ ಬೇಕಾಗಿದೆ. ಇಂತಹ ವಿಚಾರಗಳ ಬಗ್ಗೆ ನೀವೆಲ್ಲರೂ ಸಮಗ್ರವಾಗಿ ತಿಳಿದುಕೊಳ್ಳಲು ಪ್ರತಿಯೊಬ್ಬರು ಅನುಭವ ಮಂಟಪಕ್ಕೆ ಬನ್ನಿ ಎಂದರು.
ವಚನ ಟಿವಿ ಮುಖ್ಯಸ್ಥ ಸಿದ್ಧು ಯಾಪಲಪರವಿ ಮಾತನಾಡಿ, ಇಂಗ್ಲೆಂಡನ ಪ್ರಜಾಪ್ರಭುತ್ವಕ್ಕಿಂತಲೂ ಶ್ರೇಷ್ಠ ಪ್ರಜಾಪ್ರಭುತ್ವ ಕೊಟ್ಟ ದೇಶ ಭಾರತ. ೧೨ನೆಯ ಶತಮಾನದಲ್ಲಿ ಏಳು ನೂರಾ ಎಪ್ಪತ್ತು ಅಮರಗಣಂಗಳು ಆಯ್ಕೆ ಆಗಿ ಕಲ್ಯಾಣದ ಕಲ್ಯಾಣಕ್ಕಾಗಿ ದುಡಿದರು. ಬಾಬಾಸಾಹೇಬ ಗಡ್ಡೆಯವರು ಲಿಂಗಾಯತ ಧರ್ಮದ ತತ್ವ ಸಿದ್ಧಾಂತದ ಆಶಯಗಳನ್ನಿಟ್ಟುಕೊಂಡು ಅನುಭವ ಮಂಟಪದ ವಿನ್ಯಾಸ ಮಾಡುತ್ತಿರುವುದು ಹೆಮ್ಮೆಯ ವಿಷಯ. ಅನುಭವ ಮಂಟಪದ ಕಟ್ಟಡ ಆಧ್ಯಾತ್ಮಿಕ, ವೈಜ್ಞಾನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಅನುಭವ ಮಂಟಪ ಕಟ್ಟುತ್ತಿದ್ದಾರೆ ಎಂದರು.
ಮಲೇಷಿಯಾದ ವಲಸಿ ಕನ್ನಡಿಗ ಹರ್ಷಿತ್ ಗೌಡ ಮಾತನಾಡಿ, ಕನ್ನಡ ನಾಡಿನ ಸಂಸ್ಕೃತಿಯಿಯನ್ನು ಮಲೇಷಿಯಾ ದೇಶಕ್ಕೂ ಪರಿಚಯಿಸುವ ಕಾರ್ಯವನ್ನು ಮುಂದಿನ ದಿನಮಾನಗಳಲ್ಲಿ ಮಾಡುತ್ತೇನೆ. ಕನ್ನಡ ನಾಡಿನ ಜನರು ಮಲೇಷಿಯಾ ದೇಶಕ್ಕೆ ಬಂದರೆ ಅವರಿಗೆ ಎಲ್ಲ ರೀತಿಯ ಸಹಾಯ ಮಾಡುವೆ ಎಂದರು.
ಕಾರ್ಯಕ್ರಮವನ್ನು ಟಿಸಿಎಸ್ ಡ್ರೀಮ್ ಹಾಲಿಡೇಸ್ ಮುಖ್ಯಸ್ಥ ಸುರೇಶ್ ಎಸ್.ಎಂ. ಸ್ವಾಗತಿಸಿ ನಿರೂಪಿಸಿದರು.
