36 ವರ್ಷಗಳಿಂದ ಜಾತಿಭೇದವಿಲ್ಲದ ಸರಳ, ಸಾಮೂಹಿಕ ವಿವಾಹ ಕಾರ್ಯಕ್ರಮ
ಚಿತ್ರದುರ್ಗ :
ನಗರದ ಬಸವಕೇಂದ್ರದಲ್ಲಿರುವ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ೩೬ನೇ ವರ್ಷದ ಮೂರನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವವು ಅತ್ಯಂತ ಸರಳ ಹಾಗೂ ಅರ್ಥಪೂರ್ಣವಾಗಿ ನಡೆಯಿತು. ಕಾರ್ಯಕ್ರಮದಲ್ಲಿ ೧೩ ಜೋಡಿಗಳ ವಿವಾಹ ನೆರವೇರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ಜಗದ್ಗುರು ಮುರುಘರಾಜೇಂದ್ರ ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ.ಬಿ. ಗುಡಸಿ ಅವರು, ದಾಂಪತ್ಯ ಜೀವನವು ಕೇವಲ ಒಂದು ಅಥವಾ ಎರಡು ವರ್ಷಗಳಿಗೆ ಸೀಮಿತವಾಗಿರುವುದಿಲ್ಲ. ಜೀವನದಲ್ಲಿ ಅನೇಕ ಸವಾಲುಗಳು ಮತ್ತು ಸಮಸ್ಯೆಗಳು ಎದುರಾಗುತ್ತವೆ. ಅವುಗಳನ್ನು ಸಮರ್ಥವಾಗಿ ಎದುರಿಸಿ ಸಾರ್ಥಕ ಜೀವನ ನಡೆಸುವುದರ ಜೊತೆಗೆ ಮುಂದಿನ ಪೀಳಿಗೆಗೂ ಸಮಾಜಕ್ಕೂ ಉತ್ತಮ ಕೊಡುಗೆ ನೀಡುವಂತೆ ವಧು-ವರರು ಬದುಕಬೇಕು ಎಂದು ಹೇಳಿದರು.
ಮಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಮಾತನಾಡಿ, ಶ್ರೀಮಠವು ಕಳೆದ ೩೬ ವರ್ಷಗಳಿಂದ ಮೌಢ್ಯ, ಕಂದಾಚಾರ ಹಾಗೂ ಜಾತಿಭೇದಗಳನ್ನು ತೊರೆದು ಅತ್ಯಂತ ಸರಳವಾಗಿ ಸಾಮೂಹಿಕ ವಿವಾಹಗಳನ್ನು ನಡೆಸುತ್ತ ಬಂದಿದೆ. ಯಾವುದೇ ರೀತಿಯ ಆಡಂಬರ ಇಲ್ಲದೆ ಬಸವಾದಿ ಶರಣರ ಆಶಯದಂತೆ ವಿವಾಹಗಳನ್ನು ನೆರವೇರಿಸಲಾಗುತ್ತಿದೆ ಎಂದು ಹೇಳಿದರು.

ದಾವಣಗೆರೆ ವಿರಕ್ತಮಠದ ಡಾ. ಬಸವಪ್ರಭು ಸ್ವಾಮೀಜಿ ಮಾತನಾಡಿ, ಮಾನವನಿಗೆ ಎರಡು ಕಣ್ಣುಗಳಿದ್ದರೂ ದೃಷ್ಟಿ ಒಂದೇ ಇರುತ್ತದೆ. ಎರಡು ಕಿವಿಗಳಿದ್ದರೂ ಶಬ್ದ ಒಂದೇ ಕೇಳುತ್ತದೆ. ಅದೇ ರೀತಿ ದಾಂಪತ್ಯ ಜೀವನದಲ್ಲಿ ದೇಹಗಳು ಎರಡು ಇದ್ದರೂ ಮನಸ್ಸು ಒಂದಾದಾಗ ಮಾತ್ರ ಕೌಟುಂಬಿಕ ಜೀವನ ಸುಖಮಯವಾಗುತ್ತದೆ. ಮದುವೆ ಎಂಬ ಪದದಲ್ಲಿರುವ ‘ಮಧು’ಎಂದರೆ ಸಿಹಿ. ಜೀವನ ಜೇನಿನಂತೆ ಸಿಹಿಯಾಗಬೇಕಾದರೆ ಹೊಂದಾಣಿಕೆ ಮತ್ತು ಪರಸ್ಪರ ಗೌರವ ಅತ್ಯಗತ್ಯ ಎಂದು ತಿಳಿಸಿದರು.
ತುಮ್ಮಿನಕಟ್ಟೆಯ ಪದ್ಮಪೀಠದ ಪ್ರಭುಲಿಂಗ ಸ್ವಾಮಿಗಳು ಮಾತನಾಡಿ, ಇಂದಿನ ಕಾಲದಲ್ಲಿ ಒಂದು ಮದುವೆ ನಡೆಸಲು ಸುಮಾರು ೧೦ ರಿಂದ ೧೫ ಲಕ್ಷ ರೂ. ವೆಚ್ಚವಾಗುತ್ತದೆ. ಇದು ಬಡವರಿಗೆ ಕಷ್ಟಸಾಧ್ಯ. ಶ್ರೀಮಠವು ಸಾಮೂಹಿಕ ವಿವಾಹಗಳ ಮೂಲಕ ಆರ್ಥಿಕ ದುಂದುವೆಚ್ಚವನ್ನು ಕಡಿಮೆ ಮಾಡುವ ಕೆಲಸ ಮಾಡುತ್ತಿದೆ. ವಿವಾಹವು ಎರಡು ಕುಟುಂಬಗಳ ಬಾಂಧವ್ಯವನ್ನು ಬೆಸೆಯುವ ಪವಿತ್ರ ಸಂಬಂಧವಾಗಿದ್ದು, ವಧು-ವರರು ಹೊಂದಾಣಿಕೆ ಮತ್ತು ಉತ್ತಮ ಸಂಸ್ಕಾರಗಳೊಂದಿಗೆ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರೊ. ಹೆಚ್. ಲಿಂಗಪ್ಪ ಅವರು, ಸಾಮೂಹಿಕ ವಿವಾಹಗಳು ಜನಸಾಮಾನ್ಯರಿಗೆ ಆರ್ಥಿಕವಾಗಿ ಸಹಾಯಕವಾಗಿವೆ. ಭಗವಾನ್ ಬುದ್ಧ, ಬಸವಣ್ಣ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರು ಕರ್ಮಸಿದ್ಧಾಂತವನ್ನು ತಿರಸ್ಕರಿಸಿ ವೈಚಾರಿಕತೆಯಿಂದ ಬದುಕುವ ಮಾರ್ಗವನ್ನು ತೋರಿಸಿದರು. ಅವರ ತತ್ವಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶ್ರೀಮಠವು ಮನುಷ್ಯತ್ವದ ಮಠವಾಗಿ ಸಮಾಜಕ್ಕೆ ಮಹತ್ವದ ಸೇವೆ ಸಲ್ಲಿಸುತ್ತಿದೆ ಎಂದು ಹೇಳಿದರು.
ಮತ್ತೋರ್ವ ಸನ್ಮಾನಿತರಾದ ಕೃಷ್ಣಯ್ಯ ಅವರು ಮಾತನಾಡಿ, ತಾನು ಹಲವು ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದು, ಶ್ರೀಮಠದ ಜನೋಪಯೋಗಿ ಕಾರ್ಯಕ್ರಮಗಳನ್ನು ಸಮೀಪದಿಂದ ಕಂಡಿದ್ದೇನೆ. ಶ್ರೀಮಠದಿಂದ ಇದುವರೆಗೆ ಸುಮಾರು ೧೫,೦೦೦ಕ್ಕೂ ಹೆಚ್ಚು ವಿವಾಹಗಳು ನೆರವೇರಿವೆ. ಇಲ್ಲಿ ಅಮಾವಾಸ್ಯೆ, ಹುಣ್ಣಿಮೆ, ಆಷಾಢ, ಶೂನ್ಯಮಾಸ ಮುಂತಾದವುಗಳನ್ನು ಲೆಕ್ಕಿಸದೆ ನಿರಂತರವಾಗಿ ವಿವಾಹಗಳನ್ನು ನಡೆಸಲಾಗುತ್ತಿದೆ. ಯಾವುದೇ ಮಧ್ಯವರ್ತಿಗಳು, ಪೌರೋಹಿತ್ಯ ಅಥವಾ ಜಾತಿಭೇದವಿಲ್ಲದೆ ಸಮಾನತೆಯ ತತ್ವದ ಮೇಲೆ ಈ ಕಾರ್ಯಕ್ರಮ ನಡೆಯುತ್ತಿದೆ. ಇದು ಒಂದು ಸಾಮಾಜಿಕ ಕ್ರಾಂತಿಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೆಇಬಿ ಷಣ್ಮುಖಪ್ಪ, ಜಿ.ವಿ. ಗುರುಮೂರ್ತಿ, ಗಂಜಿಗಟ್ಟೆ ಕೃಷ್ಣಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಜಮುರಾ ಕಲಾವಿದರು ಪ್ರಾರ್ಥನೆ ಸಲ್ಲಿಸಿದರು. ಗಿರೀಶಾಚಾರ್ ಸ್ವಾಗತಿಸಿದರು. ಪ್ರೊ. ಟಿ.ಪಿ. ಜ್ಞಾನಮೂರ್ತಿ ಕಾರ್ಯಕ್ರಮವನ್ನು ನಿರೂಪಿಸಿದರು.
