ಬೆಂಗಳೂರು ವಚನಾಮೃತ ಕಾರ್ಯಕ್ರಮದಲ್ಲಿ ‘ದಾಸೋಹ’ ಕುರಿತು ಚಿಂತನೆ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು:

ಇಲ್ಲಿನ ಬಸವನಗರದ ಬಸವ ಸೇವಾ ಸಮಿತಿ ವತಿಯಿಂದ ಇತ್ತೀಚೆಗೆ ನಡೆದ ಮಾಸಿಕ ವಚನಾಮೃತ ೬೧ನೇ ಕಾರ್ಯಕ್ರಮದಲ್ಲಿ “ದಾಸೋಹ”ವಿಷಯದ ಮೇಲೆ ಮುಕ್ತ ಚರ್ಚೆ ನಡೆಯಿತು. ಕಾರ್ಯಕ್ರಮ ಶರಣ ದಂಪತಿಗಳಾದ ಮಧು ಹಾಗೂ ಕೊಟ್ರಪ್ಪ ರಿತ್ತಿಮಠ ಅವರ ನಿವಾಸದಲ್ಲಿ ನಡೆಯಿತು.

ರಾಜೇಶ್ವರಿ ನರೇಗಲ್ ಅವರ ಪ್ರಾರ್ಥನೆ, ಬಸವರಾಜೇಶ್ವರಿ ಪಾಟೀಲ ವಚನ ಗಾಯನ ಮಾಡಿದರು. ಎ.ಎಸ್. ಓಂಕಾರಪ್ಪ ಸ್ವಾಗತಿಸಿದರು. ರಾಜಕೀಯ ಮುಖಂಡರಾದ ಎಸ್.ಜಿ. ನಾಗರಾಜ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಇದೇ ಸಂದರ್ಭದಲ್ಲಿ ವಿಯೆಟ್ನಾಂ ದೇಶದಲ್ಲಿ ನಡೆದ ಇಂಡಿಯಾ ಇಂಟರ್ನ್ಯಾಷನಲ್ ಬಿಸಿನೆಸ್ ಕಾಂಕ್ಲೇವ್ 2025 ನಲ್ಲಿ ಸಮಾಜ ಸೇವೆಗೆ ನೀಡಲಾದ ಅಂತರಾಷ್ಟ್ರೀಯ ಪ್ರಶಸ್ತಿ ಪಡೆದ ಎಸ್.ಜಿ. ನಾಗರಾಜ ಅವರನ್ನು ಸಮಿತಿಯ ಪರವಾಗಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಅವರು ಸಮಿತಿಯ ಕಾರ್ಯಕ್ರಮಗಳನ್ನು ಪ್ರಶಂಸಿಸಿದರು.

“ದಾಸೋಹ” ಕುರಿತು ವಿದ್ಯಾ ಲಾಲಗೊಂಡ ಮಾತನಾಡಿ, ತ್ರಿವಿಧ ದಾಸೋಹವೆಂದರೆ ಗುರು, ಲಿಂಗ ಹಾಗೂ ಜಂಗಮರಿಗೆ ತನು–ಮನ–ಧನಗಳನ್ನು ಸಮರ್ಪಿಸುವುದು ಎಂದು ಹೇಳಿದರು. “ಅರಿವೆ ಗುರುವಾಗುವುದು, ಆಚಾರವೇ ಲಿಂಗವಾಗುವುದು ಮತ್ತು ಅನುಭವವೇ ಜಂಗಮವಾಗುವುದು  ಇದೇ ನಿಜವಾದ ದಾಸೋಹ” ಎಂದು ಅಭಿಪ್ರಾಯಪಟ್ಟರು.

ಎ.ಎಸ್. ಓಂಕಾರಪ್ಪ ‘ಕಾಯಕ’ ಮತ್ತು ‘ದಾಸೋಹ’ ಒಂದೇ ನಾಣ್ಯದ ಎರಡು ಮುಖಗಳಂತೆ”ಎಂದು ತಿಳಿಸಿ, ಸತ್ಯಶುದ್ಧ ಕಾಯಕದಿಂದಲೇ ನಿಜವಾದ ದಾಸೋಹ ಸಾಧ್ಯವೆಂದು ಹೇಳಿದರು.

ಸಮಿತಿಯ ಹಿಂದಿನ ಅಧ್ಯಕ್ಷ ಆರ್.ಡಿ. ಪಾಟೀಲ ಸಮಿತಿಯ ಕಾರ್ಯಕ್ರಮಗಳನ್ನು ಪ್ರಶಂಸಿಸಿ “ಅನ್ನ ದಾಸೋಹ ಎಲ್ಲಕ್ಕಿಂತ ಶ್ರೇಷ್ಠ” ಎಂದು ಅಭಿಪ್ರಾಯಪಟ್ಟರು.

ಬಿಇಎಲ್ ಬಸವ ಸಮಿತಿಯ ಮಾಜಿ ಅಧ್ಯಕ್ಷ ಅಶೋಕ ಹಳ್ಳದಮಠ ದಾನ ಮತ್ತು ದಾಸೋಹಗಳ ನಡುವಿನ ವ್ಯತ್ಯಾಸವನ್ನು ವಿವರಿಸಿ, ದಾಸೋಹ ದಾನಕ್ಕಿಂತ ಮೇಲುಪಂಕ್ತಿಯಲ್ಲಿ ನಿಲ್ಲುತ್ತದೆ ಎಂದು ಹೇಳಿದರು.

ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಣ್ಣೇಗೌಡರು ಮಾನವನ ಅವಶ್ಯಕತೆಗಳಲ್ಲಿ ಅನ್ನದ ಮಹತ್ವವನ್ನು ಗಮನಿಸಿದ ಶರಣರು ಅನ್ನದಾಸೋಹಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದಾರೆ ಎಂದು ತಿಳಿಸಿದರು.

ಹನುಮಂತಪ್ಪ ದಾಸನಾಗುವ ಮನಸ್ಥಿತಿ ದಾಸೋಹಕ್ಕೆ ಅತ್ಯವಶ್ಯವಾಗಿದ್ದು ಸಮರ್ಪಣಾಭಾವದಿಂದ ತನು–ಮನ–ಧನಗಳಿಂದ ಸೇವೆ ಮಾಡಬೇಕು ಎಂದು ಹೇಳಿದರು.

ರಾಣಿ ಚೆನ್ನಮ್ಮ ಮಹಿಳಾ ಸಂಘದ ಅಧ್ಯಕ್ಷೆ ವಿಶಾಲಮ್ಮ ಸಮಿತಿಯ ಕಾರ್ಯಕ್ರಮಗಳನ್ನು ಮೆಚ್ಚಿ ದಾಸೋಹದ ಮಹತ್ವವನ್ನು ವಿವರಿಸಿದರು. ಜಗದ್ಗುರು ಬಸವೇಶ್ವರ ಚೀಟ್ಸ್ ಸಂಸ್ಥೆಯ ನಿರ್ದೇಶಕ ಸಿ.ವೈ. ಕೇಂದ್ರಿ ಮಾತನಾಡಿ, ಮಕ್ಕಳು ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿ, ಬಸವ ಸಂಸ್ಕೃತಿ ಉಳಿಸಿ ಬೆಳೆಸಲು ದಾಸೋಹ ಅತ್ಯಮೂಲ್ಯವೆಂದು ಹೇಳಿದರು.

ನಿವೃತ್ತ ಶಾಲಾ ಶಿಕ್ಷಕರಾದ ಶಹಾಬಾದಿ ಮತ್ತು ನಟರಾಜ ಅವರು ತ್ರಿವಿಧ ದಾಸೋಹಿ ಡಾ. ಶಿವಕುಮಾರ ಮಹಾಸ್ವಾಮಿಗಳ ಅನ್ನ, ವಸತಿ ಹಾಗೂ ಜ್ಞಾನ ದಾಸೋಹದ ಸೇವೆಯನ್ನು ಸ್ಮರಿಸಿ ಶರಣ ಪರಂಪರೆಯನ್ನು ಕೊಂಡಾಡಿದರು.

ಹಿರಿಯರಾದ ಮಲ್ಲೇಶಗೌಡ ಪಾಟೀಲ ನುಡಿ ದಾಸೋಹದ ಮಹತ್ವವನ್ನು ವಿವರಿಸಿ, ನಾಗರಿಕರು ಸರ್ಕಾರಗಳಿಗೆ ನೀಡುವ ತೆರಿಗೆಗಳನ್ನು ದಾಸೋಹಕ್ಕೆ ಹೋಲಿಸಿ ಸರ್ಕಾರಗಳು ಅದನ್ನು ಸದುಪಯೋಗಪಡಿಸಿ ಬಡವರ ಸೇವೆ ಮಾಡಬೇಕು ಎಂದು ಅಭಿಪ್ರಾಯಪಟ್ಟರು.

ಸಮಿತಿಯ ಅಧ್ಯಕ್ಷರಾದ ಡಾ. ಮಲ್ಲಿಕಾರ್ಜುನ ಹಂಜಿ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ವೇದ–ಉಪನಿಷತ್ತುಗಳಲ್ಲಿ ಉಲ್ಲೇಖವಿಲ್ಲದ ದಾಸೋಹಪದ್ಧತಿ ಹಿಂದಿನ ದಾನ ಪದ್ಧತಿಗಿಂತ ಹೇಗೆ ವಿಭಿನ್ನವಾಗಿದೆ ಮತ್ತು ದಾಸೋಹದ ಮೂಲಕ ಶರಣರು ಸಮಾಜದಲ್ಲಿ ಸಮಾನತೆಯನ್ನು ಸಾಧಿಸಿದ ರೀತಿಯನ್ನು ವಿವರಿಸಿದರು.

ಸಭಾಧ್ಯಕ್ಷ ಗುರುವೀರಮೂರ್ತಿ ಚರ್ಚೆಯಲ್ಲಿ ಬಂದ ಅಭಿಪ್ರಾಯಗಳನ್ನು ಕ್ರೋಢೀಕರಿಸಿ, ಬಸವ ಸಮಿತಿ ನಡೆಸುತ್ತಿರುವ ಕಾರ್ಯಕ್ರಮಗಳು ಸಮಾಜದಲ್ಲಿ ಐಕ್ಯತೆಯನ್ನು ಬೆಳೆಸಲು ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದರು. ಜೊತೆಗೆ ಚರ್ಚೆಯಲ್ಲಿ ಭಾಗವಹಿಸಿದ ಮತ್ತು ಪ್ರಾರ್ಥನೆ ಮಾಡಿದ ಎಲ್ಲರಿಗೂ ಶರಣ ಸಾಹಿತ್ಯ ಪುಸ್ತಕಗಳನ್ನು ವಿತರಿಸಿದರು.

ಕಾರ್ಯಕ್ರಮದ ಪ್ರಾಯೋಜಕರಾದ ರಿತ್ತಿಮಠ ದಂಪತಿಗಳನ್ನು ಹಾಗೂ ಸಭಾಧ್ಯಕ್ಷರನ್ನು ಸಮಿತಿಯ ಪರವಾಗಿ ಸನ್ಮಾನಿಸಲಾಯಿತು. ಸಮಿತಿ ಅಧ್ಯಕ್ಷರನ್ನು ರಿತ್ತಿಮಠ ದಂಪತಿಗಳು ಗೌರವಿಸಿದರು.

ಪ್ರಧಾನ ಕಾರ್ಯದರ್ಶಿ ಎ.ಎಸ್. ಓಂಕಾರಪ್ಪ ವಂದನಾರ್ಪಣೆ ಸಲ್ಲಿಸಿದರು. ಶಕುಂತಲಾ ಸಾಲಿಮಠ ಮಂಗಲ ವಚನ ಹಾಡಿದರು. ಖಜಾಂಚಿಗಳಾದ ಮಲ್ಲಿಕಾರ್ಜುನ ಕಲಹಾಳ, ಸಹಕಾರ್ಯದರ್ಶಿ ವೀರೇಶ ಜಿ.ಕೆ. ಸೇರಿದಂತೆ ಹಲವು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಶರಣ–ಶರಣೆಯರು ಭಾಗವಹಿಸಿದ್ದರು. ಪ್ರಸಾದ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *