ಶಿವಯೋಗ ಮನಸ್ಸಿನ ವಿಕಾಸಕ್ಕೆ ಪೂರಕ: ಡಾ. ಗುರುಮಹಾಂತಪ್ಪಗಳು

ನಿಲಯದ ವಿದ್ಯಾರ್ಥಿನಿಯರ ಸಾಮೂಹಿಕ ಶಿವಯೋಗ

ಸಿಂಧನೂರು:

ಇಷ್ಟಲಿಂಗ ಶಿವಯೋಗ ಮನಸ್ಸಿನ ವಿಕಾಸಕ್ಕೆ ಪೂರಕವಾಗಿದೆ ಎಂದು ಇಳಕಲ್ಲ ವಿಜಯಮಹಾಂತೇಶ್ವರ ಮಠದ ಡಾ. ಗುರುಮಹಾಂತಪ್ಪಗಳು ಹೇಳಿದರು.

ಬಸವ ಚಾರಿಟೇಬಲ್ ಟ್ರಸ್ಟ್ ನೀಲಾಂಬಿಕ ಪ್ರಸಾದ ನಿಲಯದ ವಿದ್ಯಾರ್ಥಿನಿಯರಿಗಾಗಿ ಹಮ್ಮಿಕೊಂಡಿದ್ದ ಇಷ್ಟಲಿಂಗ ದೀಕ್ಷಾ ಹಾಗೂ ಸಾಮೂಹಿಕ ಶಿವಯೋಗ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಟ್ರಸ್ಟ್ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆ ಮಾಡುವ ಮೂಲಕ ಮಹಿಳೆಯರ ಶಿಕ್ಷಣಕ್ಕೆ ಸಹಕಾರಿಯಾಗಿರುವುದು ಶ್ಲಾಘನೀಯ. ಶಿಕ್ಷಣದ ಜೊತೆಗೆ ಬಸವಾದಿ ಶರಣರ ವಿಚಾರಗಳನ್ನು ಹಾಗೂ ಆಧ್ಯಾತ್ಮಿಕ ವಿಷಯಗಳನ್ನು ವಿದ್ಯಾರ್ಥಿನಿಯರಿಗೆ ತಿಳಿಸುವ ಮೂಲಕ ಸಾರ್ಥಕ ಕಾರ್ಯವನ್ನು ಮಾಡುತ್ತಿದೆ.

ವಿದ್ಯಾರ್ಥಿನಿಯರು 12ನೇ ಶತಮಾನದ ಶರಣ ಶರಣೆಯರ ಜೀವನ ಹಾಗೂ ಅವರ ವಚನಗಳನ್ನು ಓದುವುದು ಮತ್ತು ಅರ್ಥೈಸಿಕೊಂಡು ನಡೆಯುವುದನ್ನು ರೂಢಿಸಿಕೊಂಡಿದ್ದಾದರೆ ನಿಮ್ಮ ಭವಿಷ್ಯ ಉಜ್ವಲವಾಗಿರುತ್ತದೆ.

ಇಷ್ಟಲಿಂಗ ಪೂಜೆ ಅಥವಾ ಶಿವಯೋಗ ಅನ್ನುವುದು ಶರಣರು ನಮಗೆ ಕೊಟ್ಟ ವೈಜ್ಞಾನಿಕ ಪರಿಕಲ್ಪನೆ. ಇದು ಕೇವಲ ದೇವರನ್ನು ಒಲಿಸಿಕೊಳ್ಳಲು ಇರುವ ಮಾರ್ಗ ಅಷ್ಟೇ ಅಲ್ಲ ಜೊತೆಗೆ ನಮ್ಮ ಚಂಚಲವಾಗುವ ಮನಸ್ಸನ್ನು ಏಕಾಗ್ರತೆಯತ್ತ ಹಿಡಿದಿಟ್ಟುಕೊಳ್ಳಲು ಇರುವ ಮಾರ್ಗವೂ ಹೌದು.

ಇದು ವಿಶೇಷವಾಗಿ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ತುಂಬಾ ಅನುಕೂಲವಾಗಿರುವಂತದ್ದು. ಮನಸ್ಸಿನ ಏಕಾಗ್ರತೆ ಪುಸ್ತಕದ ವಿಷಯವನ್ನು ಗ್ರಹಿಸಲು ತುಂಬಾ ಪೂರಕವಾಗುತ್ತದೆ. ಏಕಾಗ್ರತೆ ಸಾಧನೆ ಮಾಡಲು ಪ್ರಾಚೀನ ಕಾಲದಲ್ಲಿ ಋಷಿಗಳು ಕಾಡಿಗೆ ಹೋಗಿ ತಪಸ್ಸು ಮಾಡುತ್ತಿದ್ದರು. ಬಸವಾದಿ ಶರಣರು ಸಂಸಾರದಲ್ಲಿ ಇದ್ದುಕೊಂಡು ಇಷ್ಟಲಿಂಗ ಪೂಜೆಯ ಮೂಲಕ ಮನಸ್ಸಿನ ಏಕಾಗ್ರತೆಯನ್ನು ಸಾಧಿಸಬಹುದು ಎಂಬುದನ್ನು ತೋರಿಸಿಕೊಟ್ಟರು.

ನಮ್ಮ ನಮ್ಮ ಮನಸ್ಸನ್ನು ವಿಕಾಸ ಮಾಡಿಕೊಳ್ಳಲು ನಮ್ಮ ಅಂತರಂಗದಲ್ಲಿ ಒಂದು ಶಕ್ತಿ ಇದೆ. ಆ ಶಕ್ತಿಯನ್ನು ಈ ಶಿವಯೋಗದ ಮೂಲಕ ಕಂಡುಕೊಳ್ಳಬೇಕಾಗಿದೆ. ಕಣ್ಣು ಮುಚ್ಚಿ ಏಕಾಗ್ರತೆಯನ್ನು ಕಂಡುಕೊಳ್ಳುವುದು ಕಷ್ಟ. ನಾವು ಕಣ್ಣು ತೆರೆದು ಇಷ್ಟಲಿಂಗದ ಮೇಲೆ ಗಮನವಿಟ್ಟು ಇಷ್ಟಲಿಂಗದ ಒಂದು ಕೇಂದ್ರ ಬಿಂದುವಿನ ಮೇಲೆ ನಮ್ಮ ದೃಷ್ಟಿ ನೆಟ್ಟಾಗ ನಮ್ಮಲ್ಲಿ ನಮ್ಮ ದೇಹದಲ್ಲಿ ಸಕಾರಾತ್ಮಕವಾದ ಬೆಳವಣಿಗೆಗಳು ಆಗುತ್ತವೆ. ಆಗ ಮನಸ್ಸು ಸಂತೋಷದಲ್ಲಿ ತೇಲಾಡುತ್ತದೆ.

ಮನಸ್ಸಿಗೆ ಅಂಟಿದ ರೋಗಗಳಾದ ಕೋಪ, ಹೊಟ್ಟೆಕಿಚ್ಚು, ದುಡುಕುತನ, ದ್ವೇಷ, ಗರ್ವ ಮುಂತಾದವುಗಳನ್ನು ದೂರ ಮಾಡಿಕೊಳ್ಳಬಹುದು.

 ತೃಣವನ ಕೆಂಡ ನುಂಗಿದಂತೆ ಇಷ್ಟಲಿಂಗ ಪೂಜೆಯ ಮೂಲಕ ಮನಸ್ಸಿನ ಕಲ್ಮಶಗಳು ಭಸ್ಮವಾಗಿ ಮನಸ್ಸಿಗೆ ಅಪಾರವಾದ ಆನಂದ ದೊರೆಯುತ್ತದೆ. ಸ್ವಚ್ಛವಾದ ಮನಸ್ಸಿನಲ್ಲಿ ಅರಿವು ಎಂಬ ಸಸಿ ಬೆಳೆಯುತ್ತದೆ ಸದ್ಗುಣಗಳೆಂಬ ಬೆಳೆ ಹುಲುಸಾಗುತ್ತದೆ.

ಈ ಹಿನ್ನೆಲೆಯಲ್ಲಿ ಬಸವಾದಿ ಶರಣರು ಇಷ್ಟಲಿಂಗದ ಕುರಿತು ಆಳವಾಗಿ ಅಧ್ಯಯನ ಮಾಡಿ ನಮಗೆ ದಯಪಾಲಿಸಿದ್ದಾರೆ. ಶಿವಯೋಗ ಒಂದು ದಿನದ ಕ್ರಿಯೆ ಆಗಬಾರದು. ನಾವು ಪ್ರತಿನಿತ್ಯ ನಮ್ಮ ಜೀವನದ ಉದ್ದಕ್ಕೂ ಪಾಲಿಸಿಕೊಂಡು ಹೋಗಬೇಕು ಎಂದು ವಿದ್ಯಾರ್ಥಿನಿಯರನ್ನು ಕುರಿತು ಮಹಾಂತ ಶ್ರೀಗಳು ಭೋದನೆ ಮಾಡಿದರು.

ನಂತರ ಶಿವಯೋಗ ಮಾಡಿಕೊಳ್ಳುವ ವಿಧಾನವನ್ನು ತುಂಬಾ ಸರಳವಾಗಿ ಮತ್ತು ಮನಮುಟ್ಟುವಂತೆ ಅವರು ತೋರಿಸಿಕೊಟ್ಟರು.

ಕಾರ್ಯಕ್ರಮದಲ್ಲಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷರಾದ ಶರಣಪ್ಪ ತೆಂಗಿನಕಾಯಿ, ಗಂಗಮ್ಮ ರುದ್ರಪ್ಪ ಅಕ್ಕನವರು, ಬಸವರಾಜ ಸಾಹುಕಾರ, ಎ. ಪಿ. ವೆಂಕಟರೆಡ್ಡಿ, ಹೆಚ್.ಜಿ. ಹಂಪಣ್ಣ, ಶಂಭನಗೌಡ ನಿಡಗೋಳ, ಪರಶುರಾಮ ಮಲ್ಲಾಪುರ, ಸಿದ್ದರಾಮಪ್ಪ ಕಾನಿಹಾಳ, ಅಮರೇಗೌಡ ಕುರುಕುಂದ, ಚಿನ್ಮಯಿ ಮಲ್ಲಿಕಾರ್ಜುನ, ನಿಲಯ ಪಾಲಕರಾದ ಶರಣಬಸವ ಮೇಟಿ, ಜಯಶ್ರೀ ಮೇಟಿ ಹಾಗೂ ನೂರಾರು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

ಕಾರ್ಯಕ್ರಮದ ನಂತರ ಸಸಿಗಳನ್ನು ನೆಡಲಾಯಿತು. ಧರ್ಮದ ಜೊತೆಗೆ ಪ್ರಕೃತಿ ಸಂರಕ್ಷಣೆಯ ಸಂದೇಶವನ್ನು ಸಾರಲಾಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP

Share This Article
Leave a comment

Leave a Reply

Your email address will not be published. Required fields are marked *