ಉತ್ತಂಗಿ ತೋಟಪ್ಪ ಗವಾಯಿಗಳಿಗೆ ವಚನಭೂಷಣ ಪ್ರಶಸ್ತಿ ಪ್ರದಾನ
ಬಳ್ಳಾರಿ:
ನಗರದ ರಾಷ್ಟ್ರೀಯ ಬಸವದಳದ ಬಸವ ಮಂಟಪದಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ವಿದ್ವಾನ್ ಉತ್ತಂಗಿ ತೋಟಪ್ಪ ಗವಾಯಿಗಳಿಗೆ ವಚನಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಇತಿಹಾಸ ಅಕಾಡೆಮಿ, ಟಿಹೆಚ್ಎಮ್ ಸಾಂಸ್ಕೃತಿಕ ಕಲಾ ಟ್ರಸ್ಟ್ ಸಹಯೋಗದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ದತ್ತಿ ಉಪನ್ಯಾಸ ನೀಡಿದ ಕರ್ನಾಟಕ ಇತಿಹಾಸ ಅಕಾಡೆಮಿ ಅಧ್ಯಕ್ಷ ಎಚ್. ಎಂ. ಬಸವರಾಜ ಅವರು ವಚನ ಭಾಷಾಂತರ ಇತಿಹಾಸವನ್ನು ಪರಿಚಯ ಮಾಡಿಕೊಟ್ಟರು. ವಚನಗಳ ಅನುವಾದ 12ನೇ ಶತಮಾನದಲ್ಲಿಯೇ ಶುರುವಾಯಿತು. ಬಸವಣ್ಣನವರ ವಚನಗಳು ಪಾಲ್ಕುರಿಕೆ ಸೋಮನಾಥನ ತೆಲುಗು ಬಸವಗೀತಮು ಕೃತಿಯಲ್ಲಿ ಆಗಾಗ ಭಾವನಾರೂಪದಲ್ಲಿ ಕಾಣಿಸಿಕೊಂಡಿದೆ.

15ನೇ ಶತಮಾನದ ಮಗ್ಗೆಯ ಮಾಯಿ ದೇವರು ಅಲ್ಲಮಪ್ರಭುವಿನ ಷಟ್ಸ್ಥಲ ವಚನಗಳನ್ನು ಪ್ರಭುಗೀತಾ ಹೆಸರಿನಲ್ಲಿ ಸಂಸ್ಕೃತಕ್ಕೆ ಅನುವಾದಿಸಿದರು. ಕನ್ನಡ ಪಂಡಿತ ಈ.ಪಿ. ರೈಸ್ ಅವರು ಮತ್ತೊಬ್ಬ ವಿದೇಶಿ ವಿದ್ವಾಂಸರಾದ ಜಿ.ಎಸ್. ಪಾರ್ಕರ್ ಅವರ ಸಹಾಯದಿಂದ 1915ರಲ್ಲಿ 139 ವಚನಗಳನ್ನು ಅನುವಾದಿಸಿದರು. ಅದು ಅಂದಿನ ಪ್ರಮುಖ ಇಂಗ್ಲೀಷ್ ಪತ್ರಿಕೆಯೊಂದರಲ್ಲಿ 1922ರಲ್ಲಿ ಪ್ರಕಟವಾಯಿತು.
ಹರಿದು ಹಂಚಿ ಹೋದ ತಾಳೆಗರಿಗಳನ್ನು ಹಳಕಟ್ಟಿ ಅವರು ಕಾಪಾಡಿ ಪ್ರಕಟಿಸಿದ ಮೇಲೆ ಅನುವಾದಗಳು ಹೆಚ್ಚಿದವು. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಸೇಯಿಂಗ್ಸ್ ಆಫ್ ಬಸವಣ್ಣ ಎಂಬ ಕೃತಿಯನ್ನು 1934ರಲ್ಲಿ ಪ್ರಕಟಿಸಿದರು.
27 ಭಾಷೆಗಳಲ್ಲಿ 27 ವಿದ್ವಾಂಸರಿಂದ ಅನುವಾದವಾದ ಬಸವಣ್ಣನವರ ವಚನಗಳ 27 ಪುಸ್ತಕಗಳನ್ನು ಪ್ರಧಾನಿ ನರೇಂದ್ರ ಮೋದಿಯವರ ಮೂಲಕ ಡಾ. ಎಂ.ಎಂ. ಕಲಬುರ್ಗಿಯವರು ಬಿಡುಗಡೆ ಮಾಡಿಸಿದರು, ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ ಮಾತನಾಡಿ, ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಸರ್ಕಾರವು ಘೋಷಣೆ ಮಾಡಿ, ಪ್ರತಿ ಸರ್ಕಾರಿ ಕಚೇರಿಗಳಲ್ಲಿ ಅವರ ಭಾವಚಿತ್ರ ಹಾಕುವುದನ್ನು ಕಡ್ಡಾಯ ಮಾಡಿದೆ. ಬಸವಣ್ಣನವರು ನಮಗೆ ಸಾಂಸ್ಕೃತಿಕ ನಾಯಕರಾಗಿ ಮಾತ್ರ ಉಳಿದಿಲ್ಲ ಸಾಮಾಜಿಕ ವಿಮೋಚನೆಯ ನಾಯಕನಾಗಿ ಅರಿವಿನ ಗುರುವಾಗಿ ಕಾಣುತ್ತಾರೆ, ಎಂದರು.
ಬಳ್ಳಾರಿಯ ಪಶುವೈದ್ಯಾಧಿಕಾರಿ ಡಾ. ರಾಜಶೇಖರ ನಾಗೂರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಮೇಲೆ ಎಸ್. ಸುರೇಖಾ ಮಲ್ಲನಗೌಡ ಮಹಾನಗರ ಪಾಲಿಕೆ ಸದಸ್ಯರು, ರಾಷ್ಟ್ರೀಯ ಬಸವದಳದ ಉಪಾಧ್ಯಕ್ಷರಾದ ಟಿ.ಆರ್. ನಾಗರಾಜ ಉಪಸ್ಥಿತರಿದ್ದರು.
ವಿದ್ವಾನ ತೋಟಪ್ಪ ಉತ್ತಂಗಿ ಗವಾಯಿಗಳವರ ತಂಡದವರಿಂದ ನಡೆದ ಮೂರು ಗಂಟೆಗಳ ವಚನ ಗಾಯನವನ್ನು ಕೇಳಲು ಜನರು ಕಿಕ್ಕಿರಿದು ತುಂಬಿದ್ದರು.
ರಾಷ್ಟ್ರೀಯ ಬಸವದಳದ ಪ್ರಧಾನ ಕಾರ್ಯದರ್ಶಿ ಕೆ.ವಿ. ರವಿಶಂಕರ ಎಲ್ಲರನ್ನೂ ಸ್ವಾಗತಿಸಿದರು. ಟಿ.ಹೆಚ್.ಎಂ. ಬಸವರಾಜ ನಿರೂಪಿಸಿದರು. ಕೊನೆಯಲ್ಲಿ ನಿಷ್ಟಿ ರುದ್ರಪ್ಪ ಅವರು ವಂದಿಸಿದರು. ನಂತರ ಮಹಾಮಂಗಳಾರತಿ ನಂತರ ಪ್ರಸಾದ ವಿತರಣೆಯಾಯಿತು.
