ಗಜೇಂದ್ರಗಡ:
ತಾಲೂಕಿನ ಗೋಗೇರಿ ಗ್ರಾಮದಲ್ಲಿ ಶುಕ್ರವಾರ ಲಿಂಗಾಯತ ವೀರಶೈವ ಸಮಾಜದ ವತಿಯಿಂದ ಶರಣಬಸವೇಶ್ವರ ದೇವಸ್ಥಾನದಲ್ಲಿ ರಂಜಾನ್ ಪ್ರಯುಕ್ತ ಸೌಹಾರ್ದ ಇಫ್ತಾರ್ ಕೂಟ ನಡೆಯಿತು.
ಇಫ್ತಾರ್ ಕೂಟದಲ್ಲಿ ವೀರಶೈವ-ಲಿಂಗಾಯತ, ಹಿಂದೂ, ಮುಸ್ಲಿಂ ಬಾಂಧವರು ಪಾಲ್ಗೊಂಡು ಕೋಮು ಸೌಹಾರ್ದತೆ, ಸಹೋದರತ್ವ ಭಾವನೆಯನ್ನು ಸಾರಿದರು.

ಈ ಸಂದರ್ಭದಲ್ಲಿ ನಡೆದ ಸಭೆಯಲ್ಲಿ ತಾಲೂಕಿನ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಸವರಾಜ ಕೊಟಗಿ ಮಾತನಾಡಿ, ದೇಶದ ಭವಿಷ್ಯದ ಹಿತದೃಷ್ಟಿಯಿಂದ ಇಂತಹ ಸೌಹಾರ್ದ ಕೂಟಗಳ ಅಗತ್ಯವಿದೆ. ಇದರಿಂದ ಅಂತರ್ ಧರ್ಮೀಯ ಆಚಾರ, ವಿಚಾರಗಳ ವಿನಿಮಯವು ಸಾಧ್ಯವಾಗಲಿದೆ. ಪರಸ್ಪರ ನಮ್ಮನ್ನು ನಾವು ಅರಿಯುವ ಅವಕಾಶವೂ ಸಿಗಲಿದೆ. ದ್ವೇಷ, ಅನುಮಾನವೂ ದೂರವಾಗಲಿದೆ ಎಂದರು.

ರಂಜಾನ್ ಪ್ರಯುಕ್ತ ರೋಜಾನಿರತ ಮುಸ್ಲಿಂ ಬಾಂಧವರು ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿಕೊಂಡು ಬಂದು, ಲಿಂಗಾಯತ ವೀರಶೈವ ಸಮಾಜದವರು ದೇವಸ್ಥಾನದಲ್ಲಿ ಏರ್ಪಡಿಸಿದ್ದ ಪ್ರೀತಿಯ ಭೋಜನ ಸವಿದು ಸಂತಸ ಪಟ್ಟರು.
ಮುಖ್ಯ ಅತಿಥಿಗಳಾಗಿದ್ದ ಪ್ರೊ. ಬಿ. ಎ. ಕೆಂಚರಡ್ಡಿ, ಅಮರೇಶ ಗಾಣಿಗೇರ, ಬಸವರಾಜ ಮೂಲಿಮನಿ, ಉರ್ದು ಶಾಲೆಯ ಮುಖ್ಯೋಪಾದ್ಯಾಯರಾದ ಆರ್. ಆಯ್. ಬಾಗವಾನ, ಹುಸೇನಸಾಬ ಬಡಿಗೇರ, ಲಿಂಗಾಯತ-ವೀರಶೈವ ಸಮಾಜದ ಅಧ್ಯಕ್ಷರಾದ ಈರಣ್ಣ ಮೂಲಿಮನಿ, ಹುಸೇನ ನಿಡಗುಂದಿ, ಇಮಾಮಸಾಬ ಬಾಗವಾನ, ಬಸಪ್ಪ ಗುಂಡೆ, ಕೆ.ಕೆ. ಬಾಗವಾನ, ಇಮಾಮ ಹಾದಿಮನಿ, ದಸ್ತಗೀರ ನದಾಫ್, ರುದ್ರೇಶ ಕೆರಿ, ಮಾರ್ತಾಂಡಪ್ಪ ಹದ್ದಣ್ಣವರ, ದಸ್ತಗೀರ ವಾಲಿಕಾರ, ಶಾಬುದ್ದೀನ ನದಾಫ್ ಇದ್ದರು.

ಶಿಕ್ಷಕ, ಸಾಹಿತಿ ಆರ್.ಕೆ. ಬಾಗವಾನ ಕಾರ್ಯಕ್ರಮ ನಿರೂಪಿಸಿದರು.
