ಜಾತ್ರೆ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು
ಕೂಡಲಸಂಗಮ :
ಸ್ಥಳೀಯ ಕ್ಷೇತ್ರಾಧಿಪತಿ ಸಂಗಮೇಶ್ವರ ಜಾತ್ರೆ ಎಪ್ರಿಲ್ ೭ ರಂದು ಸಂಭ್ರಮದಿಂದ ನಡೆಯುವುದು, ಜಾತ್ರೆಯ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವವು ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ಬುಧವಾರ ಕೂಡಲಸಂಗಮ ಅಭಿವೃದ್ಧಿ ಮಂಡಳಿ ಕಾರ್ಯಾಲಯ ಸಭಾಂಗಣದಲ್ಲಿ ನಡೆದ ಸಂಗಮೇಶ್ವರ ಜಾತ್ರೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸುಕ್ಷೇತ್ರ ರಕ್ಷಣೆ ಮಾಡುವ ಜವಾಬ್ದಾರಿ ಸ್ಥಳೀಯರದ್ದು ಆಗಿದೆ. ಸ್ವಚ್ಚತೆಗೆ ಹೆಚ್ಚು ಆದ್ಯತೆ ಕೊಡಬೇಕು.
ಮಾರಾಟ ಮಳಿಗೆ ವ್ಯಾಪಾರಸ್ತರು ರಸ್ತೆಗೆ ಅಂಗಡಿಗಳನ್ನು ಹಚ್ಚುತ್ತಿರುವುದರಿಂದ ಸಾರಿಗೆ ಸಂಸ್ಥೆಯ ಬಸ್‌ಗಳು, ಪ್ರವಾಸಿಗರ ವಾಹನಗಳು ಸಂಚರಿಸಲು ತೊಂದರೆಯಾಗಿದೆ ಕೂಡಲೇ ತೆರವುಗೊಳಿಸಲು ಸೂಚಿಸಿ, ತೆಗೆಯದಿದ್ದರೆ ಶಿಸ್ತು ಕ್ರಮಕೈಗೊಂಡು ಕಿತ್ತಿಸಬೇಕು, ಮಾರಾಟ ಮಳಿಗೆ ವ್ಯಾಪಾರಸ್ಥರು ಬಾಡಿಗೆ ಹಣ ಅಧಿಕವಾಗಿ ಉಳಿಸಿಕೊಂಡಿದ್ದು, ಕೂಡಲೇ ಕಟ್ಟಲು ಸೂಚಿಸಿ, ಕಟ್ಟದಿದ್ದರೆ ಹರಾಜು ಮಾಡಿ ಬೇರೆಯವರಿಗೆ ನೀಡಲು ಮಂಡಳಿಯ ಆಯುಕ್ತರಿಗೆ ಸೂಚಿಸಿದರು.
ಸುಕ್ಷೇತ್ರದಲ್ಲಿ ಮಧ್ಯ, ಮಾಂಸಾಹಾರವನ್ನು ನಿಷೇಧಿಸಿದ್ದು, ಎಲ್ಲಕಡೆ ನಾಮಫಲಕ, ಸಿಸಿ ಕ್ಯಾಮರಾ ಅಳವಡಿಸಿ. ಯಾರು ನಿಯಮ ಉಲ್ಲಂಘಿಸುತ್ತಾರೆ ಅವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಜಾತ್ರೆಯ ನಿಮಿತ್ಯ ಎಪ್ರಿಲ್ ೭ ರಂದು ಇಲಕಲ್ಲ, ಹುನಗುಂದ ಸಾರಿಗೆ ಘಟಕದಿಂದ ತಾಲೂಕಿನ ಎಲ್ಲ ಹೋಬಳಿಯಿಂದ ವಿಶೇಷ ಬಸ್‌ಗಳನ್ನು ಬಿಡಬೇಕು, ಹೂನನೂರ ಬಳಿ ರಸ್ತೆಯಲ್ಲಿಯೇ ತ್ಯಾಜ್ಯಗಳನ್ನು ಹಾಕಿರುವದನ್ನು ಸ್ವಚ್ಚಗೊಳಿಸಬೇಕು, ಬಾಗಲಕೋಟೆಯಿಂದ ಕೂಡಲಸಂಗಮಕ್ಕೆ ಬರುವ ಬಂಗಾರ ಕಳಸಕ್ಕೆ ಸೂಕ್ತ ಭದ್ರತೆ ನೀಡಬೇಕು, ಮಾರ್ಗ ಮಧ್ಯದಲ್ಲಿ ಆರೋಗ್ಯ ಇಲಾಖೆಯವರು ತಾತ್ಕಾಲಿಕ ಆರೋಗ್ಯ ತಪಾಸನಾ ಕೇಂದ್ರ ಹಾಕಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕೂಡಲಸಂಗಮ ಅಭಿವೃದ್ಧಿ ಮಂಡಳಿ ಆಯುಕ್ತ ವಿಜಯಕುಮಾರ ಆಜೂರ ಮಾತನಾಡಿ, ಜಾತ್ರೆಯ ಎಲ್ಲ ಸಿದ್ದತೆಗಳನ್ನು ಮಾಡಿಕೊಂಡಿದ್ದು, ಸಮಯಕ್ಕೆ ಅಧಿಕ ಆದ್ಯತೆ ಕೊಡಬೇಕು, ರಥೋತ್ಸವ ಸರಿಯಾದ ಸಮಯಕ್ಕೆ ನಡೆಯಬೇಕು ಎಂದರು.
ಸಭೆಯಲ್ಲಿ ಹುನಗುಂದ ತಹಶೀಲ್ದಾರ ಪ್ರವೀಣಕುಮಾರ ಹಿರೇಮಠ, ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಮುರಳೀಧರ ದೇಶಪಾಂಡೆ, ಪಿಎಸ್‌ಐ ಸಿದ್ದಾರೋಡ ಆಲದಕಟ್ಟಿ, ಮುಖಂಡರಾದ ಅಶೋಕಗೌಡ ಗೌಡರ, ಶೇಖಪ್ಪ ದೇಶಿ, ಗಂಗಣ್ಣ ಬಾಗೇವಾಡಿ, ಶೇಖರಗೌಡ ಗೌಡರ, ಎಸ್.ಎಂ.ಪುರಾಣಿಕ, ಕರಸಂಗಯ್ಯ ಖಾತೆದಾರ, ಅಮರಯ್ಯ ಕೋಟೂರ, ಕರಸಂಗಯ್ಯ ಗುಡಿ, ಪ್ರಭು ಹಿರೇಮಠ ಮುಂತಾದವರು ಇದ್ದರು.
ಜಾತ್ರಾ ಪೂರ್ವಭಾವಿ ಸಭೆಗೆ ಹೆಸ್ಕಾಂ ಕೂಡಲಸಂಗಮದ ಶಾಖಾಧಿಕಾರಿ, ತಾಲೂಕಾ ಮಟ್ಟದ ಅಧಿಕಾರಿಗಳು ಬರದೆ, ಲೈನಮನ್ ಸಿಬ್ಬಂದಿಯನ್ನು ಕಳುಹಿಸಿದ್ದರು, ಕೋಪಗೊಂಡ ಶಾಸಕ ವಿಜಯಾನಂದ ಕಾಶಪ್ಪನವರ, ಜವಾಬ್ದಾರಿ ಸ್ಥಾನದಲ್ಲಿರುವ ಅಧಿಕಾರಿಗಳು ಜವಾಬ್ದಾರಿ ಅರಿಯಬೇಕು, ಕೂಡಲೇ ಬರಬೇಕು ಎಂದು ದೂರವಾಣಿ ಕರೆಮಾಡಿ ಸೂಚಿಸಿದರು, ನೋಟಿಸು ನೀಡಲು ತಹಶೀಲ್ದಾರ, ಮಂಡಳಿಯ ಆಯುಕ್ತರಿಗೆ ಸೂಚಿಸಿದರು.
