ನೀನೇ ದೇವರು ಎಂದು ಅರಿವಿನ ಪ್ರಜ್ಞೆ ಮೂಡಿಸಿದ ಬಸವಣ್ಣ: ಡಾ. ಮಾನಸ

ಅಣ್ಣಿಗೇರಿ:

ಮನೆಯ ಕೋಣೆಗಳಲ್ಲಿ ದೇವರಿದ್ದೂ ಮತ್ತೆ ದೇಶದ ತುಂಬಾ ದೇವರನ್ನು ಹುಡುಕಿಕೊಂಡು ಹೋಗುವ ಜನರನ್ನು ಕಂಡೇ ಬಸವಣ್ಣನವರು ಕಾಯಕ, ದಾಸೋಹದ ಜೊತೆಗೆ ಇಷ್ಟಲಿಂಗ ಕೊಟ್ಟು ದೇವರು ನಿನ್ನೊಂದಿಗಿದ್ದಾನೆ, ನೀನೇ ದೇವರು ಎಂದು ಭಕ್ತಿಯನ್ನು ಜೋಡಿಸಿ ಜ್ಞಾನದ ಅರಿವಿನ ಪ್ರಜ್ಞೆ ಮೂಡಿಸಿದರು ಎಂದು ರಾಜ್ಯ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಬಣ್ಣಿಸಿದರು.

ರಾಜ್ಯ ಕನ್ನಡ ಪುಸ್ತಕ ಪ್ರಾಧಿಕಾರ, ಜಿಲ್ಲಾ ಜಾಗೃತಿ ಸಮಿತಿ, ಜಿಲ್ಲಾ ಹಾಗೂ ಅಣ್ಣಿಗೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಪಟ್ಟಣದ ಶಿಕ್ಷಕ ವಿ. ಎಂ. ಹಿರೇಮಠ ಸಸ್ಯೋಧ್ಯಾನದಲ್ಲಿ ಜರಗಿದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಮತ್ತು ಉಪನ್ಯಾಸ  ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ತಮ್ಮ ದುಡಿದ ಎರಡು ರೂಪಾಯಿ ದುಡಿಮೆಯಲ್ಲಿ ಒಂದು ರೂಪಾಯಿಯನ್ನು ಹೊಟ್ಟೆಯ ಹಸಿವಿಗೆ ಖರ್ಚು ಮಾಡಿದರೆ, ಇನ್ನೊಂದು ರೂಪಾಯಿಯನ್ನು ಪುಸ್ತಕಕ್ಕೆ ಖರ್ಚು ಮಾಡಬೇಕು ಎಂದು ಕರೆ ನೀಡಿದ ಡಾ. ಬಿ.ಆರ್. ಅಂಬೇಡ್ಕರ್ ಮಾತನ್ನು ರಾಜ್ಯದ ಜನ ಪಾಲಿಸಬೇಕು ಎಂದು ಅವರು ಮನವಿ ಮಾಡಿದ ಅವರು ಸಾಹಿತ್ಯದ ದತ್ತಿ ಪುಸ್ತಕದ ಭಿತ್ತಿ ಈ ಕಾರ್ಯಕ್ರಮ ವೈಶಿಷ್ಟ ಎಂದು ಸಂತಸ ವ್ಯಕ್ತಪಡಿಸಿದರು.

ಮನೆಗೊಂದು ಗ್ರಂಥಾಲಯ ಈ ಯೋಜನೆಯನ್ನು ರಾಜ್ಯದ ಒಂದು ಲಕ್ಷ ಮನೆಗಳಿಗೆ ಅನುಷ್ಠಾನಗೊಳಿಸುವ ಕನಸನ್ನು ತಾವು ಹೊಂದಿರುವುದಾಗಿ ಅದು ಜಾರಿಗೆ ತರುವ ಸರಳ ಲೆಕ್ಕಾಚಾರವನ್ನು ಅವರು ಸಭೆಗೆ ತೆರೆದಿಟ್ಟರು.

ಉಪನ್ಯಾಸ ನೀಡಿದ ಡಾ. ರಮೇಶ ಕಲ್ಲನಗೌಡರ, ಪುಸ್ತಕಗಳೇ ಇಲ್ಲದಿದ್ದರೆ ದೇವರೇ ಮೂಕನಾಗುತ್ತಿದ್ದ. ನ್ಯಾಯ ದೇವತೆ ನ್ಯಾಯ ನೀಡುವುದು ದುಷ್ತರವಾಗುತ್ತಿತ್ತು. ಹೆಚ್ಚು ಕಡಿಮೆ ಲೋಕವೇ ಸ್ತಬ್ಧವಾಗುತ್ತಿತ್ತು. ಆದ್ದರಿಂದ ಪುಸ್ತಕಗಳು ಮನುಷ್ಯನ ನಿಜವಾದ ಸಂಗಾತಿ ಎಂದ ಅವರು ಓದುವ ಹವ್ಯಾಸ ಎಂದೆಂದೂ ಕಡಿಮೆಯಾಗುವುದಿಲ್ಲ ಈ ಕುರಿತು ಯಾವುದೇ ಆತಂಕ ಬೇಡ ಎಂದರು.

ಡಾ. ವೀಣಾ ಬಿರಾದಾರ ಮಾತನಾಡಿ ನಾವು ಒಂದು ಲಕ್ಷ ಮನೆಗಳಲ್ಲಿ ಗ್ರಂಥಾಲಯ ಸ್ಥಾಪಿಸಿ ಒಂದು ಕೋಟಿ ಮನೆ ಮನಸುಗಳನ್ನು ಮುಟ್ಟಬೇಕಾಗಿದೆ ಎಂದು ಹೇಳಿದರು.

ಮನೆಗಳಲ್ಲಿ ಗ್ರಂಥಾಲಯ ಅನುಷ್ಠಾನಗೊಳಿಸಿರುವ ಪ್ರೊ. ಎಸ್.ಎಸ್. ಹರ್ಲಾಪೂರ, ಅಮೃತೇಶ್ವರ ತಂಡರ, ಡಾ ಎ.ಸಿ. ವಾಲಿ, ವಿ. ಎಂ. ಹಿರೇಮಠ, ಅನ್ವರ ಹುಬ್ಬಳ್ಳಿ, ರವಿರಾಜ ವೆರ್ಣೇಕರ, ಮೃತ್ಯುಂಜಯ ನವಲಗುಂದ, ಡಾ. ಸುಧಾ ಕೌಜಗೇರಿ, ಎನ್. ಎಂ. ಯಲಬುರ್ಗಿ, ಕೃಷ್ಣ ಜಿಂಗಾಡೆ, ಎನ್. ಎಸ್. ಮೇಲ್ಮರಿ, ವಿನೋದ ಪೂಜಾರ ಮನೆ ಗ್ರಂಥಾಲಯಗಳಿಗೆ ಡಾ. ಮಾನಸ ಭೇಟಿ ನೀಡಿ ಹರ್ಷ ವ್ಯಕ್ತಪಡಿಸಿದರು.

ದತ್ತಿದಾನಿಗಳಲ್ಲಿ ಒಬ್ಬರಾದ ಗಂಗಾ ಪ್ರಶಾಂತ ಹಂದಿಗೋಳ ದಂಪತಿಯನ್ನು ಸನ್ಮಾನಿಸಲಾಯಿತು.

ಜಿಲ್ಲಾ ಜಾಗೃತ ಸಮಿತಿ ಸಂಚಾಲಕ ಮಹಾಂತಪ್ಪ ನಂದೂರ, ತಾಲೂಕು ಸಂಚಾಲಕ ಎಂ. ಎನ್. ಯಲಬುರ್ಗಿ, ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಪ್ರೊ. ಎಸ್. ಎಸ್. ಹರ್ಲಾಪೂರ, ಹಿರಿಯ ಪತ್ರಕರ್ತ ವೀರೇಶ ಶಾನುಭೋಗರ,  ಎಂ.ಎಸ್. ಪೂಜಾರ, ದೇವರಾಜ ನಾವಳ್ಳಿ ಮತ್ತಿತರರು ಉಪಸ್ಥಿತರಿದ್ದರು.

ವೈಷ್ಣವಿ ವೈಭವ ಹಿರೇಮಠ ಪ್ರಾರ್ಥಿಸಿದರು. ಪ್ರಶಾಂತ ಹಂದಿಗೋಳ ಕನ್ನಡ ಗೀತೆ ಹಾಡಿದರು. ಅನ್ವರ್ ಬಾಷಾ ಹುಬ್ಬಳ್ಳಿ ಸ್ವಾಗತಿಸಿದರು. ವಿ.ಎಂ. ಹಿರೇಮಠ ವಂದಿಸಿದರು. ಸವಿತಾ ಡಬರಿ ನಿರೂಪಿಸಿದರು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *

ಪತ್ರಕರ್ತರು, ಅಣ್ಣಿಗೇರಿ