ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆ
ಬೀದರ:
ಬಸವಣ್ಣನವರು ಅನುಭವ ಮಂಟಪದ ಮೂಲಕ ಮಹಿಳೆಯರಿಗೆ ಸಮಾನತೆ ನೀಡಿದ್ದಾರೆ ಎಂದು ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ನುಡಿದರು.
ನಗರದ ಶರಣ ಉದ್ಯಾನದಲ್ಲಿ ಬಸವ ಸೇವಾ ಪ್ರತಿಷ್ಠಾನದ ವತಿಯಿಂದ ನಡೆದ ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿಕೊಂಡು ಮಾತನಾಡಿದರು.
ವಚನಕಾರರು ಬಂದ ನಂತರ ಮಹಿಳೆಯರಿಗೆ ಒಂದು ಶಕ್ತಿ ಬಂತು. ಇಡೀ ಶರಣ ಸಮುದಾಯವೇ ಮಹಿಳೆಯರಿಗೆ ಸಮಾನತೆಯನ್ನು ತಂದಿತು. ಮಹಿಳೆಯರು ಮೌಢ್ಯದಿಂದ ದೂರವಿರಬೇಕು. ಮಹಿಳೆಯರ ಬದುಕಿಗೆ ಹೊಸ ಆಯಾಮ ನೀಡಿದ್ದು ವಚನ ಚಳುವಳಿ ಎಂದು ನುಡಿದರು.
ಭಾಲ್ಕಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ಡಾ. ಜಗದೇವಿ ತಿಬಶೆಟ್ಟಿ ಅನುಭಾವ ನೀಡಿ, ಜಗತ್ತಿನಲ್ಲೇ ಮೊಟ್ಟಮೊದಲ ಬಾರಿಗೆ ಮಹಿಳಾ ಸ್ವಾತಂತ್ರ್ಯ ಎತ್ತಿ ಹಿಡಿದವರು ವಚನಕಾರರು, ಮಹಿಳೆಯರನ್ನು ಸಾಮಾಜಿಕ ಚೌಕಟ್ಟಿನಿಂದ ಹೊರ ತಂದು ಸಾಮಾಜಿಕ, ಆರ್ಥಿಕ, ನೈತಿಕ ಮೌಲ್ಯ ನೀಡಿ ಸ್ವಾವಲಂಬಿ ಜೀವನಕ್ಕೆ ದಾರಿ ಮಾಡಿಕೊಟ್ಟರು. ಮಹಿಳೆಯರು ಕೇವಲ ಮನೆಗೆಲಸಕ್ಕೆ ಸೀಮಿತವಾಗದೆ, ಪುರುಷರಂತೆ ಕಾಯಕ ಮಾಡುವುದನ್ನು ಪ್ರೊತ್ಸಾಹಿಸಿದರು.
ಅಕ್ಕಮಹಾದೇವಿ, ಅಕ್ಕನಾಗಮ್ಮರಂತಹ ಶರಣೆಯರ ಮೂಲಕ ಮಹಿಳಾ ಸಬಲೀಕರಣಕ್ಕೆ ನಾಂದಿ ಹಾಡಿ ಬಂಧನಗಳಿಂದ ಮುಕ್ತಗೊಳಿಸಿದ ಶರಣರ ಆಶಯಗಳು ಇಂದಿಗೂ ಪ್ರಸ್ತುತ ಎಂದರು.
ಡಾ. ವಿಜಯಶ್ರೀ ಬಶೆಟ್ಟಿ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿ, ೧೨ನೇ ಶತಮಾನದಲ್ಲಿ ವಚನ ಸಾಹಿತ್ಯದ ಮೂಲಕ ಅಂಧಕಾರದಲ್ಲಿದ್ದ ಸಮಾಜವನ್ನು ತಿದ್ದುವ ಕಾಯಕದಲ್ಲಿ ನಿರತರಾಗಿದ್ದ ಅಕ್ಕಮಹಾದೇವಿ ಮಹಾನ ಚೇತನವಾಗಿದ್ದರು. ಅಂತಹ ಶರಣೆಯರ ವಚನಗಳನ್ನು ದಿನನಿತ್ಯ ಪಠಣ ಮಾಡುವುದರ ಮೂಲಕ ಆದರ್ಶ ಹಾಗೂ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಸರಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯ ಬೀದರ ಸಹಪ್ರಾಧ್ಯಾಪಕರಾದ ಡಾ. ರಾಜಶ್ರೀ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗುರುನಾನಕ್ ಪಬ್ಲಿಕ್ ಸ್ಕೂಲ್ ಶಿಕ್ಷಕಿ ಜಗದೇವಿ ಕೊಂಡೆ ಧ್ವಜಾರೋಹಣ ಮಾಡಿದರು. ಪ್ರಭಾವತಿ ನಂದಿ, ಸುರೇಕಲಾ ಖದ್ಮೆ, ಭಾಗ್ಯವಂತಿ ಇಂದ್ರಾಳೆ, ರೇಷ್ಮಾ ಸುಗೂರ, ಶಿಲ್ಪಾ ಧಬಾಲೆ, ಮಮತಾ, ಜ್ಯೋತಿ ಹಲಗುಂದೆ, ಸುವರ್ಣಾ, ಲತಾ ವರ್ಮಾ ಸೇರಿದಂತೆ ಇತರರಿದ್ದರು.
ನ್ಯೂ ಆದರ್ಶ ಕಾಲೋನಿ ನೀಲಮ್ಮ ಬಳಗದವರು ವಚನ ಪ್ರಾರ್ಥನೆ ನಡೆಸಿಕೊಟ್ಟರು. ಕವಿತಾ ಪರಶೆಟ್ಟಿ ಸ್ವಾಗತಿಸಿದರು. ಕಮಲಾ ಭಾವಗೆ ನಿರೂಪಿಸಿದರು.
