ಬಸವಕಲ್ಯಾಣ
‘ಇಲ್ಲಿನ ನೆಲ ಬಸವಾದಿ ಶರಣರು ಕಾರ್ಯಗೈದಿರುವ ಪುಣ್ಯಭೂಮಿ. ಆದ ಕಾರಣ ಇಲ್ಲಿರುವ ಬಸವೇಶ್ವರ ದೇವಸ್ಥಾನ ಪಂಚ ಸಮಿತಿಗೆ ಎಲ್ಲಿಲ್ಲದ ಪ್ರಾಮುಖ್ಯತೆ ಇದೆ. ಬಸವತತ್ವ ವಿಶ್ವಮಟ್ಟದಲ್ಲಿ ಬೆಳೆಸುವಂತಹ ಅಭ್ಯರ್ಥಿ ಆಯ್ಕೆಯಾಗುವುದು ಮುಖ್ಯ, ಆದ ಕಾರಣ ಉತ್ತಮರನ್ನು ಆಯ್ಕೆ ಮಾಡಬೇಕು’ ಎಂದು ಮಾಜಿ ಶಾಸಕ, ಜೆ.ಡಿ.ಎಸ್ ನಾಯಕ ಮಲ್ಲಿಕಾರ್ಜುನ ಖೂಬಾ ಕೇಳಿಕೊಂಡಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಇದು ಬರೀ ಹೆಸರಿಗಷ್ಟೇ ಸಮಿತಿ ಆಗಿರದೆ ಜಗತ್ತಿನ ಗಮನ ಸೆಳೆಯುವಂತಹ ಕಾರ್ಯ ಕೈಗೊಳ್ಳಬೇಕು. ಉನ್ನತ ಶಿಕ್ಷಣದ ಕೇಂದ್ರಗಳನ್ನು ಸ್ಥಾಪಿಸಬೇಕು, ಸಂಸ್ಥೆಯ ಅಡಿಯಲ್ಲಿ ಆಸ್ಪತ್ರೆ, ಉದ್ಯೋಗ ಖಾತ್ರಿ ಯೋಜನೆ, ತರಬೇತಿ ಶಾಲೆಗಳು ಪ್ರಾರಂಭಿಸಬೇಕು.
ಮೈಸೂರು ದಸರಾ ಮಾದರಿಯಲ್ಲಿ ಪ್ರತಿವರ್ಷ ಬಸವ ಜಯಂತಿಯಂದು ಸರ್ಕಾರವು ಮೂರು ದಿನಗಳ ಕಾಲ ಬಸವ ಉತ್ಸವವನ್ನು ಅದ್ದೂರಿಯಾಗಿ ಆಚರಿಸಬೇಕು. ವಿಶ್ವದೆಲ್ಲೆಡೆ ನೆಲೆಸಿರುವ ನಿಷ್ಠಾವಂತ ಬಸವಭಕ್ತರನ್ನು ದೇವಸ್ಥಾನ ಸಮಿತಿಗೆ ಸದಸ್ಯರನ್ನಾಗಿ ಸೇರಿಸಿಕೊಳ್ಳಬೇಕು. ಚುನಾವಣೆಯಲ್ಲಿ ಸಂಬಂಧಿಕರು ಗೆಳೆಯರು ಎಂಬ ವಾದ ಬೇಡ ಬಸವತತ್ವ ಪ್ರಸಾರಕರನ್ನು ಆಯ್ಕೆ ಮಾಡಬೇಕೆಂದು ಖೂಬಾ ಕರೆ ಮನವಿ ಮಾಡಿದರು.
ಬಸವೇಶ್ವರ ದೇವಸ್ಥಾನದ ನಿರ್ದೇಶಕರ ಸ್ಥಾನದಲ್ಲಿ ಶೇ. 50ರಷ್ಟು ಮೀಸಲಾತಿಯನ್ನು ಮಹಿಳೆಯರಿಗೆ ಮೀಸಲಿಡಬೇಕು. ಇಲ್ಲವಾದರೂ ಶೇ. 33ರಷ್ಟಾದರೂ ಮೀಸಲಿರಲಿ. ಅಷ್ಟೆಯಲ್ಲದೆ ಬಿಕೆಡಿಬಿ ಆಡಳಿತ ಮಂಡಳಿಯಲ್ಲಿ ದೇವಸ್ಥಾನದ ಅಧ್ಯಕ್ಷರಿಗೆ ಖಾಯಂ ಸದಸ್ಯತ್ವ ಸ್ಥಾನ ನೀಡಬೇಕು. ಈ ಸಮಿತಿಯಲ್ಲಿ ಬಸವತತ್ವದ ನಿಷ್ಠ ಸ್ವಾಮಿಗಳು, ಸಾಹಿತಿಗಳು, ಚಿಂತಕರನ್ನು ಒಟ್ಟುಗೂಡಿಸಿ ನಿರಂತರವಾಗಿ ಸಭೆಗಳು ಆಯೋಜಿಸಬೇಕು. ಉತ್ತಮ ರೀತಿಯಲ್ಲಿ ಬಸವಕಲ್ಯಾಣ ಅಭಿವೃದ್ಧಿ ಕಾಮಗಾರಿಗಳು ನಡೆಯುವಂತಾಗಲಿ ಎಂದು ತಮ್ಮ ಆಶಯವನ್ನು ವ್ಯಕ್ತಪಡಿಸಿದರು.
ಮಹಾರಾಷ್ಟ್ರದ ಗಡಿಯು ಜೂಜು, ಮೋಜು, ಮಸ್ತಿ ಕೇಂದ್ರಗಳಾಗಿ ಪರಿವರ್ತನೆಯಾಗುತ್ತಿರುವುದೇ ದುರಂತ. ಇದನೆಲ್ಲ ನಿಯಂತ್ರಿಸಲು ಶಾಸಕರು ಮಹಾರಾಷ್ಟ್ರ ಸರ್ಕಾರದ ಜೊತೆ ಮಾತನಾಡಲು ಪ್ರಯತ್ನಿಸಬೇಕು. ಇಲ್ಲವಾದರೆ ಶರಣರ ನಾಡಿಗೆ ಕೆಟ್ಟ ಹೆಸರು ಬರುತ್ತದೆ ಎಂದರು.
ಗೋಷ್ಠಿಯಲ್ಲಿ ಜೆ.ಡಿ.ಎಸ್. ಪಕ್ಷದ ಮುಖಂಡರಾದ ಆಕಾಶ ಖಂಡಾಳೆ, ಅನಿಲ ಪರೆಪ್ಪ, ವೆಂಕಟ ಪಾಟೀಲ, ವಿಜಯ ಶಾಲಗಾರ, ಧನರಾಜ ರಾಜೋಳೆ, ಡಾ. ಜಿಯಾಉದ್ದೀನ್ ನಿಲನೇಗಕರ, ಬಸವರಾಜ ಖೂಬಾ ಇದ್ದರು.
