ರಾಯಚೂರು ನಗರದಲ್ಲಿ ಅದ್ಧೂರಿಯಾಗಿ ನಡೆದ 3ನೇ ಬಸವ ಉತ್ಸವ

ರಾಯಚೂರು:

ಎಡೆದೊರೆ ನಾಡಾದ ರಾಯಚೂರ ನಗರದ ಯರಮರಸನಲ್ಲಿ ಭಕ್ತಿಭಾವ ಮತ್ತು ಸಂಭ್ರಮದಿಂದ 3ನೇ ಬಸವೋತ್ಸವ ನಡೆಯಿತು.

ಗಂಜ್ ಕಲ್ಯಾಣ ಮಂಟಪದಲ್ಲಿ ರಾಷ್ಟ್ರೀಯ ಬಸವದಳ ಮತ್ತು ಬಸವಪರ ಸಂಘಟನೆಗಳ ಆಶ್ರಯದಲ್ಲಿ ಜುಲೈ 25 ಮತ್ತು 26ರ ಎರಡು ದಿನಗಳ ಕಾಲ ಹಬ್ಬದಂತೆ ನಡೆದು ತೆರೆಕಂಡಿತು.

25 ಶರಣವಾರದಂದು ಬೆಳಿಗ್ಗೆ 6ಗಂಟೆಗೆ ಪೂಜ್ಯ ಗುಣತೀರ್ಥವಾಡಿಯ ಬಸವಪ್ರಭು ಸ್ವಾಮೀಜಿ ಹಾಗೂ ಬೀದರ ಬಸವ ಮಂಟಪದ ಪೂಜ್ಯ ಮಾತೆ ಸತ್ಯದೇವಿಯವರ ಸಮ್ಮುಖದಲ್ಲಿ ಇಷ್ಟಲಿಂಗ ಪೂಜೆ, ಗುರುಬಸವಪೂಜೆ ನಡೆಯಿತು.

11ಗಂಟೆಗೆ ವೇದಿಕೆ ಕಾರ್ಯಕ್ರಮದಲ್ಲಿ ರಾಯಚೂರು ನಗರ ಶಾಸಕ ಎಸ್. ಶಿವರಾಜ ಪಾಟೀಲ ಅವರು ಜ್ಯೋತಿ ಬೆಳಗಿಸಿ ಬಸವೋತ್ಸವವನ್ನು ಉದ್ಘಾಟಿಸಿದರು.

ಅವರು, ಇಂದಿನ ಸಂದರ್ಭದಲ್ಲಿ ಬಸವತತ್ವ ಅಗತ್ಯತೆಯಿದೆ. ಪೂಜ್ಯ ಡಾ. ಚನ್ನಬಸವಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ಭಾರತ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲಿ ವಿದೇಶಗಳಲ್ಲೂ ಬಸವಧರ್ಮ ಪ್ರಸಾರ ಆಗುತ್ತಿದೆ. ಇದೇ ರೀತಿ ಬಸವೋತ್ಸವ ಎಲ್ಲೆಡೆ ನಡೆಯಲಿ ಎಂದು ಹಾರೈಸಿದರು.

ಬಸವಕಲ್ಯಾಣದ ಪರುಷ ಕಟ್ಟೆಯಿಂದ ಬಸವ ಜ್ಯೋತಿ ಚಾಲನೆಗೊಂಡು, 6ದಿನಗಳ ಕಾಲ ನಿರಂತರವಾಗಿ ಜ್ಯೋತಿ ಸಂಚರಿಸುತ್ತ, 15ಜನ ಶರಣರನ್ನು ಕರೆದುಕೊಂಡು ಅದರಲ್ಲಿ 5ಜನ ಹಿರಿಯ ಶರಣೆಯರು, 1 ರಥದ ವಾಹನ 2 ಇತರೆ ಕಾರು, ಧ್ವನಿವರ್ಧಕ, 8 ಜನ ಸಾಧಕರನ್ನು ಇಂಬಿಟ್ಟುಕೊಂಡು ಜ್ಯೋತಿ ಯಾತ್ರೆಯು ಬೀದರ, ಆಣ ದುರು, ಹಳ್ಳಿಖೇಡ.ಕೆ, ಮಹಾಗಾಂವ, ಕಲಬುರಗಿ ನಗರ, ಯಾದಗಿರಿ ನಗರ, ಗುರುಮಠಕಲ್ ಖಾಸಾಮಠ, ಸೈದಾಪುರ, ದೇವಸೂಗೂರ ಕ್ಷೇತ್ರ ಮಾರ್ಗವಾಗಿ ಜ್ಯೋತಿ ಯಾತ್ರೆ ಸಾಗಿಬಂದು, ಅದೇ ಜ್ಯೋತಿಯಿಂದ ಉತ್ಸವ ಉದ್ಘಾಟನೆ ಮಾಡಲಾಯಿತು.

ಪೂಜ್ಯರಾದ ಡಾ. ಚನ್ನಬಸವಾನಂದ ಸ್ವಾಮೀಜಿ ಪ್ರಾಸ್ತವಿಕವಾಗಿ ಮಾತನಾಡಿ, ಪೂಜ್ಯ ಡಾ. ಮಹಾದೇವಿ ಮಾತೆಯವರು ಲಿಂಗೈಕ್ಯರಾದ ಮೇಲೆ ಲಿಂಗಾಯತ ಧರ್ಮದ ಹೋರಾಟ ನಿಂತಿದೆ ಎಂದು ಕೆಲವರು ತಪ್ಪಾಗಿ ಭಾವಿಸಿದ್ದಾರೆ. ಆದರೆ ಮಾತಾಜಿಯವರ ನಿಜ ವಾರಸುದಾರರಾದ ನಾವು ಲಿಂಗಾಯತ ಧರ್ಮಕ್ಕೆ ಮಾನ್ಯತೆ ಪಡೆಯುವವರೆಗೂ ವಿಶ್ರಮಿಸುವುದಿಲ್ಲ ಎಂದು ಹೇಳಿದರು.

ಬಸವಪ್ರಭು ಸ್ವಾಮೀಜಿ ಆಶಯ ನುಡಿ ಆಡಿದರು. ಪೂಜ್ಯಮಾತೆ ಸತ್ಯಾದೇವಿ, ರಾಷ್ಟ್ರೀಯ ಬಸವ ದಳ ಹಾಗೂ ಬಸವ ಪರ ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು.

ಮಧ್ಯಾಹ್ನ ಯುವ ಸಮಾವೇಶ ಜರುಗಿತು. ಯುವ ಮುಖಂಡರು ‘ಕಲ್ಯಾಣ ರಾಜ್ಯ ಕಟ್ಟುವಲ್ಲಿ ಯುವಕರ ಪಾತ್ರ’ ಕುರಿತು ಮಾತನಾಡಿದರು.

ಸಂಜೆ 7 ಗಂಟೆಗೆ ಗೃಹಸ್ಥ ಜಂಗಮರ ಸಮಾವೇಶ ಜರುಗಿತು. ಪ್ರಾಸ್ತಾವಿಕವಾಗಿ ಮಾತನಾಡಿದ ಗಂಗಾವತಿ ವೀರೇಶ ಅವರು, ವಿರಕ್ತರಿಗಿಂತಲೂ, ಗೃಹಸ್ಥರಾದ ನಮ್ಮಂತಹ ಶರಣರೆ ಹೆಚ್ಚು ಧರ್ಮ ಪ್ರಚಾರ ಮಾಡುತಿದ್ದೇವೆ ಎಂದರು.

ರೈಲ್ವೆ ಇಲಾಖೆಯ ಕಾರ್ಯ ನಿರ್ವಾಹಕ ಎಂಜಿನಿಯರ್ ಸಚ್ಚಿದಾನಂದ ಚಟ್ನಳ್ಳಿ ಬರೆದಿರುವ ಎರಡು ಗ್ರಂಥಗಳ ಲೋಕಾರ್ಪಣೆ ನಡೆಯಿತು. ಹುಬ್ಬಳ್ಳಿಯ ಏಕಲಾಸಪುರ ಶರಣರು ಬಿಡುಗಡೆ ಮಾಡಿದರು.

‘ಹರನೆಡೆಯಿಂದ ಪರಮನೆಡೆಗೆ’ ಮತ್ತು ‘ಮಠ, ಪೀಠ, ಪ್ರತಿಷ್ಠಾನಗಳು ಬೋಧೀಸದೆ ಬಚಿಟ್ಟ ವಚನಗಳು’ ಎಂಬ ಎರಡು ಮೌಲ್ಯಯುತವಾದ ಗ್ರಂಥಗಳ ಬಗ್ಗೆ ಯಕಲಾಸಪುರ ಅವರು ಮಾತನಾಡಿದರು.

ಡಾ. ಚನ್ನಬಸವಾನಂದ ಸ್ವಾಮೀಜಿ ಬರೆದಿರುವ ಕನ್ನೇರಿ ಶ್ರೀಗೊಂದು ಕೈಗನ್ನಡಿ ಗ್ರಂಥವನ್ನು ನಿವೃತ್ತ ಕೆಎಎಸ್ ಅಧಿಕಾರಿ ದಿವಾಕರ್ ಅವರು ಲೋಕಾರ್ಪಣೆಗೊಳಿಸಿ, ಲಿಂಗಾಯತ ಧರ್ಮ ಸ್ವಂತಂತ್ರ ಧರ್ಮ ಇದನ್ನು ಯಾರೂ ಅಳಿಸಲು ಸಾಧ್ಯವಿಲ್ಲ. ಕನ್ನೇರಿ ಸ್ವಾಮಿಗಳಿಗೆ ವಚನಗಳ ಆಧಾರವಾಗಿಟ್ಟುಕೊಂಡೇ ಡಾ. ಚನ್ನಬಸವಾನಂದ ಶ್ರೀ ಗಳು ಉತ್ತರಿಸಿದ್ದಾರೆ ಎಂದು ನುಡಿದರು.

ಇದೆ ಸಂದರ್ಭದಲ್ಲಿ ಕವಿತಾಂಬಿಕೆ ಜವಳಗಿ ಅವರು ಲಿಂಗಾನಂದ ಅಪ್ಪಾಜಿ ಕುರಿತು ಬರೆದ ‘ಜಂಗಮಜ್ಯೋತಿ’ ಪುಸ್ತಕ ಬಿಡುಗಡೆ ಮಾಡಲಾಯಿತು. ಲೇಖಕರಿಗೆ ಸತ್ಕರಿಸಲಾಯಿತು.

ಬೀದರಿನ ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷ ಬಸವಕುಮಾರ ಪಾಟೀಲ ಮಾತನಾಡಿ, ಪೂಜ್ಯ ಲಿಂಗಾನಂದ ಅಪ್ಪಾಜಿ, ಮಹಾದೇವಿ ಮಾತಾಜಿಯವರು ಗೃಹಸ್ಥ ಜಂಗಮರಿಗೆ ಮತ್ತು ಶರಣರಿಗೆ ಹೆಚ್ಚು ಮಹತ್ವ ಕೊಟ್ಟಿದ್ದರು ಎಂದು ಹೇಳಿದರು. ಸಮಾರಂಭದಲ್ಲಿ ಅನೇಕ ಗಣ್ಯರು ಪಾಲ್ಗೊಂಡಿದ್ದರು.

26 ದೇವವಾರದಂದು ಬೆಳಿಗ್ಗೆ 6 ಗಂಟೆಗೆ ಇಷ್ಟಲಿಂಗ ಪೂಜೆ ಹಾಗೂ ದೀಕ್ಷಾ ಕಾರ್ಯಕ್ರಮ ಜರುಗಿತು. 9ರಿಂದ 11 ರವರೆಗೆ ನಗರದ ಮುಖ್ಯ ಬೀದಿಯಲ್ಲಿ ಪಥ ಸಂಚಲನ ನಡೆಯಿತು. ಸಾವಿರಾರು ಶರಣ ಶರಣೆಯರು ಹಾಡಿ ಪಾಡಿ ಕುಣಿದಾಡಿ ನಲಿದರು.

ಆನಂತರ ಮಹಿಳಾ ಸಮಾವೇಶ ಹಾಗೂ ಸಮಾರೋಪ ಸಮಾರಂಭ ನಡೆಯಿತು.

ಕಲಬುರಗಿಯ ಸರಕಾರಿ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಪದಗ್ರಹಣ ಮಾಡಿರುವ ಇಂದುಮತಿ ಪಾಟೀಲ ಅವರು ಉದ್ಘಾಟನೆ ಮಾಡಿ ಮಾತನಾಡಿದರು.

ಮಾತೆ ಸತ್ಯದೇವಿಯವರು ಪ್ರಸ್ತಾವನೆ ಮಾಡಿದರು. ಅನೇಕ ಜನ ಮಹಿಳಾ ಸಾಹಿತಿಗಳು, ಮುಖಂಡರು ಮಹಿಳಾ ಸಬಲೀಕಾರಣ ಬಗ್ಗೆ ಮಾತನಾಡಿದರು.

ಆಯೋಜಕರಾದ ಸಿದ್ದರಾಮಪ್ಪ ಪಾಟೀಲ ಯರಮರಸ್ ಹಾಗೂ ಇತರೆ ಶರಣರನ್ನು ಸತ್ಕಾರಿಸಲಾಯಿತು.

ಹಿರೇಹೊನ್ನಳ್ಳಿಯ ಚನ್ನಬಸವ ಸ್ವಾಮಿಗಳು, ಗುರುಮಠ ಯಕಲ್‌ನ ಪೂಜ್ಯ ಶಾಂತವೀರ ಸ್ವಾಮೀಜಿ ಆಶೀರ್ವಚನ ನೀಡುತ್ತ, ಪೂಜ್ಯ ಮಾತಾಜಿಯವರ ನಂತರ ಚನ್ನಬಸವಾನಂದ ಸ್ವಾಮೀಜಿ ಅವರ ಕಾರ್ಯ ಮುಂದುವರಿಸಿದ್ದಾರೆ. ಅವರ ಕಾರ್ಯಕ್ಕೆ ಸದಾ ನಮ್ಮ ಸಹಕಾರವಿದೆ ಎಂದು ನುಡಿದರು.

ಉತ್ಸವದ ಊಟ ಮತ್ತು ವಸತಿ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಶರಣ ಶರಣೆಯರು ಬಸವೋತ್ಸವದಲ್ಲಿ ಪಾಲ್ಗೊಂಡಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM

Share This Article
1 Comment
  • ನಾನು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದೆ ಬಹಳ ಅತ್ಯುತ್ತಮವಾದ ಕಾರ್ಯಕ್ರಮ ನಡೆಯಿತು

Leave a Reply

Your email address will not be published. Required fields are marked *

ಬಸವ ತತ್ವ ಚಿಂತಕರು, ಬೀದರ