ರಾಮಜನ್ಮಭೂಮಿ ಟ್ರಸ್ಟಿನಲ್ಲಿ ಲಿಂಗಾಯತ ಮಠಾಧೀಶರಿಗೆ ಸ್ಥಳವಿಲ್ಲ

“ನಾವೆಲ್ಲ ಹಿಂದೂ” ಎನ್ನುವ ಲಿಂಗಾಯತ ಮಠಾಧೀಶರು ಇದಕ್ಕೆ ಕಾರಣ ನೀಡಲಿ

ಬೆಂಗಳೂರು

ವೀರಶೈವ ಹಾಗೂ ಲಿಂಗಾಯತ ಸಹೋದರರೇ, ಒಂದೇ ಒಂದು ನಿಮಿಷ ನಿಲ್ಲಿ. ಈ ಸುದ್ದಿಯನ್ನು ಸರಿಯಾಗಿ ಓದಿ. ಆಮೇಲೆ ನೀವೇ ತೀರ್ಮಾನ ಮಾಡಿ.

ಅಯೋಧ್ಯೆಯ ರಾಮಮಂದಿರದ ಪೂಜೆ, ವಿಧಿ-ವಿಧಾನ ಮತ್ತು ಆಚರಣೆಗಳ ಕುರಿತು ನಿರ್ಧರಿಸಲು ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಒಂಬತ್ತು ಸದಸ್ಯರ ಶಾಶ್ವತ ಧಾರ್ಮಿಕ ಸಮಿತಿಯನ್ನು ರಚಿಸಿದೆ.

ಆ ಸಮಿತಿಯಲ್ಲಿ ಇರುವವರು:

* ಜ್ಯೋತಿಷ್ಪೀಠದ ಶಂಕರಾಚಾರ್ಯ ವಾಸುದೇವಾನಂದ ಸರಸ್ವತಿ
* ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ
* ನಿರ್ಮೋಹಿ ಅಖಾಡದ ದಿನೇಂದ್ರ ದಾಸ್
* ಕಮಲ್‌ನಯನ್ ದಾಸ್
* ರಾಜಕುಮಾರ್ ದಾಸ್
* ರಾಮಾನಂದ ದಾಸ್
* ಮಿಥಿಲೇಶ್ ನಂದಿನಿ ಶರಣ್
* ಪರಮಾನಂದ ಗಿರಿ
* ಅಧ್ಯಕ್ಷರಾಗಿ ಟ್ರಸ್ಟ್ ಖಜಾಂಚಿ ಗೋವಿಂದ ದೇವಗಿರಿ

ಕರ್ನಾಟಕಕ್ಕೆ ಸಿಕ್ಕಿದ್ದು ಒಂದೇ ಸ್ಥಾನ. ಅದೂ ಮಾಧ್ವ ವೈಷ್ಣವ ಮಠಕ್ಕೆ.

ಈ ರಾಜ್ಯದಲ್ಲಿ ಸಾವಿರಾರು ಲಿಂಗಾಯತ ಮಠಗಳಿವೆ. ಗದಗಿನ ತೋಂಟದಾರ್ಯ, ಚಿತ್ರದುರ್ಗದ ಮುರುಘಾ, ಸಿರಿಗೆರೆಯ ತರಳಬಾಳು, ನಾಗನೂರು, ಭಾಲ್ಕಿ, ಕೂಡಲಸಂಗಮ — ಶತಮಾನಗಳಿಂದ ಉಚಿತ ಪ್ರಸಾದ ನಿಲಯ ನಡೆಸಿ, ಬಡ ಮಕ್ಕಳಿಗೆ ಅನ್ನ ಅಕ್ಷರ ಕೊಟ್ಟ ಮಠಗಳು. ಪಟ್ಟಿಯಲ್ಲಿ ಒಂದೇ ಒಂದು ಹೆಸರಿಲ್ಲ, ಶೂನ್ಯ.

ಈಗ ಪ್ರಾಮಾಣಿಕವಾಗಿ ಒಂದು ಪ್ರಶ್ನೆ ಕೇಳಿಕೊಳ್ಳಿ. ಚುನಾವಣೆ ಬಂದಾಗ “ನಾವೆಲ್ಲ ಹಿಂದೂ, ನಾವೆಲ್ಲ ಒಂದು” ಎಂದು ಬಸವ ಭವನದಿಂದ ಕೂಡಲಸಂಗಮದವರೆಗೆ ರಥ ಓಡಿಸುತ್ತಾರಲ್ಲ — ಆ ಒಂದೇ ಕುಟುಂಬದಲ್ಲಿ ಪೂಜೆ ಹೇಗೆ ನಡೆಯಬೇಕು ಎಂದು ನಿರ್ಧರಿಸುವ ಒಂಬತ್ತು ಕುರ್ಚಿಗಳಲ್ಲಿ ನಿಮಗೆ ಒಂದೂ ಇಲ್ಲ ಏಕೆ? ಮತ ಹಾಕುವಾಗ ಒಂದು, ಅಧಿಕಾರ ಹಂಚುವಾಗ ಬೇರೆ. ಇದನ್ನೇ ಕನ್ನಡದಲ್ಲಿ ಗಿಮಿಕ್ ಎನ್ನುವುದು.

ಇದು ಅವಮಾನವಲ್ಲ, ಸೈದ್ಧಾಂತಿಕ ಪ್ರಾಮಾಣಿಕತೆ

ನಿಜ ಹೇಳಬೇಕೆಂದರೆ, ಇದು ಅವಮಾನವಲ್ಲ. ಇದು ಪ್ರಾಮಾಣಿಕತೆ. ಆ ಸಮಿತಿಯ ಕೆಲಸ ಏನೆಂದು ನೋಡಿ — ಯಜ್ಞ ನಡೆಸುವುದು, ವೇದ ಪಠಣ ಮಾಡಿಸುವುದು, ರಾಮಾರ್ಚಾ ವಿಧಿ ನಿರ್ವಹಿಸುವುದು, ಪುರೋಹಿತರ ನೇಮಕ, ಅವರ ತರಬೇತಿ, ಅವರ ಉಡುಪಿನ ನಿಯಮ.

ಬಸವಣ್ಣನ ತತ್ವ ಮತ್ತು ಈ ವ್ಯವಸ್ಥೆಯ ನಡುವೆ ಇರುವ ಮೂಲಭೂತ ಭಿನ್ನತೆಯನ್ನು ಇದಕ್ಕಿಂತ ಸ್ಪಷ್ಟವಾಗಿ ಇನ್ನೇನು ತೋರಿಸಬೇಕು?

ಬಸವಣ್ಣನ ದಾರಿ ಯಾವುದು?

ಬಸವಣ್ಣ ವೇದದ ಶ್ರೇಷ್ಠತೆಯನ್ನು ಒಪ್ಪಲಿಲ್ಲ. ಯಜ್ಞ-ಯಾಗಗಳನ್ನು ಪ್ರಶ್ನಿಸಿದರು. ದೇವರನ್ನು ತಲುಪಲು ಪುರೋಹಿತ ಮಧ್ಯವರ್ತಿತ್ವ ಅಗತ್ಯವೆಂಬ ವ್ಯವಸ್ಥೆಯನ್ನು ತಿರಸ್ಕರಿಸಿದರು.

ಅವರು ಹೇಳಿದ್ದು:

ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ.

ಒಂದು ಕ್ಷಣ ಯೋಚಿಸಿ. ಬಸವಣ್ಣ ಬದುಕಿದ್ದ ಎಪ್ಪತ್ತು ವರ್ಷ ಎದುರಿಸಿದ್ದೇ ಇದನ್ನು:

ವೇದದ ಶ್ರೇಷ್ಠತೆಯನ್ನು ಅವರು ಒಪ್ಪಲಿಲ್ಲ. ಯಜ್ಞ ಯಾಗಗಳನ್ನು ತಿರಸ್ಕರಿಸಿದರು.

ಪುರೋಹಿತನೊಬ್ಬ ಮಧ್ಯೆ ನಿಂತು ದೇವರನ್ನು ತಲುಪಿಸುವ ವ್ಯವಸ್ಥೆಯನ್ನೇ ಒಡೆದು ಹಾಕಿದರು.

ಗುಡಿಗೆ ಹೋಗಬೇಡ, ನಿನ್ನ ದೇಹವೇ ದೇಗುಲ ಎಂದರು. ಎದೆಯ ಮೇಲಿನ ಇಷ್ಟಲಿಂಗವೇ ಸಾಕು ಎಂದರು.

‘ಸ್ಥಾವರಕ್ಕೆ ಅಳಿವುಂಟು, ಜಂಗಮಕ್ಕೆ ಅಳಿವಿಲ್ಲ’ ಎಂಬ ಒಂದೇ ಸಾಲಿನಲ್ಲಿ ಇಡೀ ದೇವಾಲಯ ಸಂಸ್ಕೃತಿಯನ್ನು ಪ್ರಶ್ನಿಸಿದರು.

ಜಾತಿಯನ್ನು ಒಪ್ಪಲಿಲ್ಲ. ಅನುಭವ ಮಂಟಪದಲ್ಲಿ ಮಡಿವಾಳ ಮಾಚಿದೇವ, ಸಮಗಾರ ಹರಳಯ್ಯ, ಅಂಬಿಗರ ಚೌಡಯ್ಯ, ಅಕ್ಕಮಹಾದೇವಿ, ಆಯ್ದಕ್ಕಿ ಲಕ್ಕಮ್ಮ — ಎಲ್ಲರೂ ಒಂದೇ ಪೀಠದ ಮೇಲೆ ಕುಳಿತು ಚರ್ಚೆ ಮಾಡಿದರು.

ಹೆಣ್ಣಿಗೆ ಧರ್ಮ ಚರ್ಚೆಯ ಹಕ್ಕು ಕೊಟ್ಟರು. ಕಾಯಕವೇ ಕೈಲಾಸ ಎಂದರು. ದಾಸೋಹ ಕಲಿಸಿದರು.

ಹರಳಯ್ಯ ಮತ್ತು ಮಧುವರಸರ ಮನೆಗಳ ನಡುವಿನ ಆ ಒಂದು ಮದುವೆಗಾಗಿ ಇಡೀ ಕಲ್ಯಾಣ ರಕ್ತದಲ್ಲಿ ಮುಳುಗಿತು.

ಇಷ್ಟೆಲ್ಲ ನಡೆದ ಮೇಲೂ, ಈ ಪರಂಪರೆ ವೇದ ಆಧಾರಿತ ವ್ಯವಸ್ಥೆಯ “ಒಂದು ಸಣ್ಣ ಪಂಗಡ”ಎಂದು ಹೇಗೆ ಆಗುತ್ತದೆ? ಒಪ್ಪಿಗೆ ಆಗುತ್ತಾ?

ಸ್ವತಂತ್ರ ಧರ್ಮದ ಹೋರಾಟ ಮತ್ತು ಕೇಂದ್ರದ ತಿರಸ್ಕಾರ

ಲಿಂಗಾಯತ ಸ್ವತಂತ್ರ ಧರ್ಮದ ಬೇಡಿಕೆ ನಿನ್ನೆ-ಮೊನ್ನೆಯದ್ದಲ್ಲ. ಇದು ದಶಕಗಳಿಂದ ನಡೆಯುತ್ತಿರುವ ಚರ್ಚೆ ಮತ್ತು ಹೋರಾಟ.

1942ರಿಂದಲೂ ಈ ಬೇಡಿಕೆ ಇದೆ.

2017ರ ಡಿಸೆಂಬರ್‌ನಲ್ಲಿ ನಿವೃತ್ತ ನ್ಯಾಯಮೂರ್ತಿ ಎಚ್. ಎನ್. ನಾಗಮೋಹನದಾಸ್ ನೇತೃತ್ವದಲ್ಲಿ ಏಳು ಸದಸ್ಯರ ತಜ್ಞರ ಸಮಿತಿ ರಚನೆಯಾಯಿತು.

2018ರ ಮಾರ್ಚ್ 2ರಂದು ಸಲ್ಲಿಸಿದ ವರದಿಯಲ್ಲಿ ಲಿಂಗಾಯತವನ್ನು ಸ್ವತಂತ್ರ ಧರ್ಮವಾಗಿ ಪರಿಗಣಿಸುವ ಶಿಫಾರಸು ಮಾಡಲಾಯಿತು. ಕರ್ನಾಟಕ ಸಚಿವ ಸಂಪುಟವು ಆ ಶಿಫಾರಸನ್ನು ಒಪ್ಪಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿತು.

ನಂತರ, 2018ರ ನವೆಂಬರ್ 13ರಂದು ಕೇಂದ್ರ ಸರ್ಕಾರದ ಪ್ರತಿಕ್ರಿಯೆಯಲ್ಲಿ ಪ್ರಮುಖವಾಗಿ ಎರಡು ಅಂಶಗಳು ಕೇಳಿಬಂದವು:

* 1871ರ ಬ್ರಿಟಿಷ್ ಜನಗಣತಿಯಿಂದಲೂ ಲಿಂಗಾಯತರನ್ನು ಹಿಂದೂ ವಿಭಾಗದಲ್ಲೇ ದಾಖಲಿಸಲಾಗಿದೆ ಎಂಬ ವಾದ.

* ಪ್ರತ್ಯೇಕ ಧರ್ಮದ ಮಾನ್ಯತೆಯಿಂದ ಪರಿಶಿಷ್ಟ ಜಾತಿ ಸೌಲಭ್ಯಗಳಿಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು ಎಂಬ ಆತಂಕ ಇದು ಹೊಸ ಜಗಳವಲ್ಲ.

ಗಮನಿಸಿ: ಈ ವಾದಗಳಲ್ಲಿ ಬಸವಣ್ಣನ ತತ್ವದ ಚರ್ಚೆ ಎಲ್ಲಿದೆ?

ವಚನ ಸಾಹಿತ್ಯದ ಸ್ಥಾನ ಏನು? ಇಷ್ಟಲಿಂಗದ ವಿಶಿಷ್ಟತೆ ಏನು?

ಅನುಭವ ಮಂಟಪದ ಸಮಾನತೆಯ ತತ್ವಕ್ಕೆ ಯಾವ ಉತ್ತರ ಇದೆ?

ಒಬ್ಬ ಬ್ರಿಟಿಷ್ ಅಧಿಕಾರಿಯು 1871ರಲ್ಲಿ ಹಾಕಿದ ಜನಗಣತಿ ಗುರುತೇ ಇಂದಿಗೂ ನಮ್ಮ ಆಧ್ಯಾತ್ಮಿಕ ಗುರುತಾಗಬೇಕೆ?

ಧರ್ಮದ ಪ್ರಶ್ನೆಗೆ ಸೌಲಭ್ಯ ಕಳೆದುಕೊಳ್ಳುವ ಭಯವನ್ನು ಉತ್ತರವಾಗಿ ನೀಡುವುದು ನ್ಯಾಯವೇ?

ಇತರರಿಗೆ ಸಾಧ್ಯವಾದುದು ನಮಗೆ ಏಕೆ ಅಲ್ಲ?

ರಾಜಕೀಯ ಲೆಕ್ಕಾಚಾರ:

ಸಿಖ್ಖರಿಗೆ ಪ್ರತ್ಯೇಕ ಗುರುತು ಇದೆ. ಬೌದ್ಧರಿಗೆ ಪ್ರತ್ಯೇಕ ಗುರುತು ಇದೆ. ಜೈನ ಸಮುದಾಯಕ್ಕೂ ರಾಷ್ಟ್ರೀಯ ಅಲ್ಪಸಂಖ್ಯಾತ ಮಾನ್ಯತೆ ದೊರೆತಿದೆ.

ಅವರೆಲ್ಲರೂ ಇದೇ ದೇಶದಲ್ಲಿ ಹುಟ್ಟಿದ ಧಾರ್ಮಿಕ ಪರಂಪರೆಗಳು. ಹಾಗಾದರೆ ಬಸವಣ್ಣನ ಅನುಯಾಯಿಗಳಾದ ಲಿಂಗಾಯತರಿಗೆ ಮಾತ್ರ ಸ್ವತಂತ್ರ ಧಾರ್ಮಿಕ ಗುರುತು ಏಕೆ ಸಾಧ್ಯವಾಗಬಾರದು?

ಉತ್ತರ ಸರಳ: ಇದರ ಹಿಂದೆ ತತ್ವಶಾಸ್ತ್ರಕ್ಕಿಂತ ರಾಜಕೀಯ ಲೆಕ್ಕಾಚಾರವೇ ಹೆಚ್ಚಿದೆ ಎಂಬ ಅನುಮಾನ ಸಹಜ. ಕರ್ನಾಟಕದ ಜನಸಂಖ್ಯೆಯ ದೊಡ್ಡ ಭಾಗ ಒಂದು ಪ್ರತ್ಯೇಕ ಧಾರ್ಮಿಕ ಗುರುತಿನಡಿ ದಾಖಲಾದರೆ, ಯಾರ ಮತಲೆಕ್ಕ ಬದಲಾಗುತ್ತದೆ ಎಂಬ ಪ್ರಶ್ನೆಯನ್ನು ಕೇಳಲೇಬೇಕು.

ಎಂ. ಬಿ. ಪಾಟೀಲರು ಹೇಳಿದ ಒಂದು ಮಾತನ್ನು ಇಲ್ಲಿ ನೆನಪಿಸಿಕೊಳ್ಳಬೇಕು: ಹೆಸರಿನೊಂದಿಗೆ “ಶೈವ” ಎಂಬ ಗುರುತು ಉಳಿದಿರುವವರೆಗೆ ಪ್ರತ್ಯೇಕ ಧರ್ಮದ ಪ್ರಶ್ನೆ ಸಂಕೀರ್ಣವಾಗಿಯೇ ಉಳಿಯುತ್ತದೆ. ಶೈವವು ಹಿಂದೂ ಧಾರ್ಮಿಕ ಚೌಕಟ್ಟಿನೊಳಗಿನ ಪಂಥ; ಲಿಂಗಾಯತವು ಬಸವಣ್ಣ ಕಟ್ಟಿದ ವಿಶಿಷ್ಟ, ಸಮಾನತೆಯ ಮತ್ತು ಇಷ್ಟಲಿಂಗಕೇಂದ್ರಿತ ದಾರಿ.

ವೀರಶೈವ ಸಹೋದರರ ವಿರುದ್ಧ ದ್ವೇಷವಿಲ್ಲ. ಆದರೆ ತಾತ್ವಿಕ ಸತ್ಯವನ್ನು ಮುಚ್ಚಿಡುವುದೂ ಬೇಡ. ವೇದವನ್ನು ಒಪ್ಪುವ ಮತ್ತು ವೇದದ ಪ್ರಾಮಾಣ್ಯವನ್ನೇ ಪ್ರಶ್ನಿಸಿದ ಪರಂಪರೆಗಳು ಒಂದೇ ಧರ್ಮ ಎಂದು ಹೇಗೆ ಹೇಳಬಹುದು?

ಮತ್ತೊಂದು ಸಂಗತಿ ಬಿಡಬೇಡಿ. 2025ರಲ್ಲಿ ಸಮೀಕ್ಷೆಯ ವೇಳೆ “ಹಿಂದೂ ಎಂದು ಬರೆಸಿ”ಎಂದು ಕರೆ ಕೊಟ್ಟ ಪಂಚಮಸಾಲಿ ಪೀಠದ ಸ್ವಾಮೀಜಿಯನ್ನು ಸಮಾಜವೇ ಪದಚ್ಯುತಗೊಳಿಸಿತು. ಸಮುದಾಯದ ಒಳಗಿನ ಗಾಳಿ ಯಾವ ಕಡೆ ಬೀಸುತ್ತಿದೆ ಎಂಬುದಕ್ಕೆ ಅದೇ ಸಾಕ್ಷಿ.

ಮುಂಬರುವ ಜನಗಣತಿ: ನಿಮ್ಮ ನಡೆ ಏನು?

ಈಗ ಜನಗಣತಿ ಬರುತ್ತಿದೆ. ನಿಮ್ಮ ಕೈಯಲ್ಲಿ ಬಂದೂಕಿಲ್ಲ, ರಥವಿಲ್ಲ. ಒಂದು ಕಾಲಂ ಇದೆ. ಅಷ್ಟೇ ಸಾಕು.

ಧರ್ಮದ ಕಾಲಂನಲ್ಲಿ ಸ್ಪಷ್ಟವಾಗಿ ಬರೆಸಿ:

ಲಿಂಗಾಯತ

“ಹಿಂದೂ”ಅಲ್ಲ. 
“ವೀರಶೈವ-ಲಿಂಗಾಯತ”ಅಲ್ಲ. 
ಬರೀ—ಲಿಂಗಾಯತ.

ನಮ್ಮ ಗ್ರಂಥ ವಚನ ಸಾಹಿತ್ಯ. 
ನಮ್ಮ ಆರಾಧ್ಯ ಇಷ್ಟಲಿಂಗ. 
ನಮ್ಮ ಗುರು ಬಸವಣ್ಣ. 
ನಮ್ಮ ಸಾಮಾಜಿಕ ಸಂವಿಧಾನ ಅನುಭವ ಮಂಟಪ. 
ನಮ್ಮ ಧರ್ಮ ಕಾಯಕ ಮತ್ತು ದಾಸೋಹ.

ಇದನ್ನು ಯಾರೂ ನಮಗೆ ಕೊಡುವುದಿಲ್ಲ. ನಾವು ದಾಖಲಿಸಿಕೊಳ್ಳಬೇಕು.

ಒಂಬತ್ತು ಕುರ್ಚಿಗಳಲ್ಲಿ ಒಂದೂ ಕೊಡದವರು ನಾಳೆ ನಿಮ್ಮ ಮನೆ ಬಾಗಿಲಿಗೆ ಬಂದು “ನಾವೆಲ್ಲ ಒಂದು”ಎಂದಾಗ, ಈ ಪಟ್ಟಿಯನ್ನು ತೋರಿಸಿ ಕೇಳಿ — ಸ್ವಾಮಿ, ನಮ್ಮ ಜಾಗ ಎಲ್ಲಿ?

ಈ ಬರಹವನ್ನು ಹಂಚಿಕೊಳ್ಳಿ. ನಿಮ್ಮ ಮಕ್ಕಳಿಗೆ ಅವರ ನಿಜವಾದ ಗುರುತು ತಿಳಿಯಲಿ.

ಸಕಲಜೀವಾತ್ಮರಿಗೆ ಲೇಸಾಗಲೆಂದು, ಅನ್ನದಾತನಿಗೆ/ಕಾಯಕ ಜೀವಿಗಳಿಗೆ ಜಯವಾಗಲೆಂದು ಪ್ರಾಥಿ೯ಸುತ್ತ, ಬಸವಾದಿ ಶರಣರಿಗೆ ಶರಣಾರ್ಥಿ ಹೇಳುವೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM

Share This Article
Leave a comment

Leave a Reply

Your email address will not be published. Required fields are marked *