ಬಸವ ಶಕ್ತಿ: ಲಿಂಗಾಯತ ನಾಯಕತ್ವ ನಾಶ ಮಾಡುವ ಪ್ರಯತ್ನ ನಡೆಯುತ್ತಿದೆ

ಬಸವ ಮೀಡಿಯಾ
ಬಸವ ಮೀಡಿಯಾ

ಹೊಸಪೇಟೆ ಶಿಬಿರದ ಮೊದಲನೇ ದಿನದ ವರದಿ

ಹೊಸಪೇಟೆ

ವಿಜಯನಗರ ಜಿಲ್ಲೆಯ ಹಲವಾರು ಬಸವ ಸಂಘಟನೆಗಳು ಬಸವ ಮೀಡಿಯಾದ ಸಹಯೋಗದಲ್ಲಿ ಜುಲೈ 25, 26 ಬಸವ ಶಕ್ತಿ ಶಿಬಿರ ಆಯೋಜಿಸಿದ್ದವು.

ನಾಡಿನಲ್ಲಿ ಸಕ್ರಿಯವಾಗಿರುವ ಬಸವ ಸಂಘಟನೆಗಳಲ್ಲಿ ರಾಜಕೀಯ ಚಿಂತನೆ ಮೂಡಿಸಲು ನಡೆದ ಸಂವಾದದಲ್ಲಿ 12 ಸಂಪನ್ಮೂಲ ವ್ಯಕ್ತಿಗಳು ಹಾಗೂ ನೂರಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿದರು.

ವಚನ ಹಾಗೂ ಸಂವಿದಾನ ಪೀಠಿಕೆಯ ಪಠಣ, ಬಸವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶನಿವಾರ ಬಸವ ಶಕ್ತಿ ಶಿಬಿರಕ್ಕೆ ಚಾಲನೆ ನೀಡಲಾಯಿತು.

ಪಕ್ಷಾತೀತ ಶಿಬಿರಗಳು

ಪ್ರಾಸ್ತಾವಿಕ ನುಡಿ ಹೇಳಿದ ಬಸವ ಮೀಡಿಯಾ ಟ್ರಸ್ಟಿನ ಛೇರ್ಮನ್ ಟಿ ಆರ್ ಚಂದ್ರಶೇಖರ್ ಲಿಂಗಾಯತ ಧರ್ಮ, ಸಂಸ್ಕೃತಿ, ಸಮಾಜದ ಮೇಲೆ ನಡೆಯುತ್ತಿರುವ ನಿರಂತರ ದಾಳಿಯ ಹಿನ್ನಲೆಯಲ್ಲಿ ಬಸವ ಶಕ್ತಿ ಶಿಬಿರಗಳನ್ನು ರೂಪಿಸಲಾಗಿದೆ.

ಈ ದಾಳಿ ತಡೆಯುವುದು ಹಾಗೂ ಲಿಂಗಾಯತ ಧರ್ಮಕ್ಕಿರುವ ರಾಜಕೀಯ ವಿರೋಧವನ್ನು ಮಣಿಸುವ ಅಗತ್ಯವಿದೆ.

ಬಸವ ಸಂಘಟನೆಗಳಲ್ಲಿ ಧಾರ್ಮಿಕ, ಸಾಮಾಜಿಕ ಜಾಗೃತಿಯಿದೆ ಆದರೆ ರಾಜಕೀಯ ತಿಳುವಳಿಕೆ ಕಡಿಮೆಯಿದೆ. ಅದನ್ನು ಮೂಡಿಸಲು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಬಸವ ಶಕ್ತಿ ಶಿಬಿರಗಳು ನಡೆಯಲಿವೆ, ಎಂದರು.

ಈ ಶಿಬಿರಗಳು ಪಕ್ಷಾತೀತವಾಗಿ ನಡೆಯಲಿದೆ. ಲಿಂಗಾಯತರು ಯಾವುದೇ ಪಕ್ಷದಲ್ಲಿರಲಿ ಅಲ್ಲಿ ಬಸವತತ್ವ ಗಟ್ಟಿ ಮಾಡುವಂತಹ ಕೆಲಸ ಮಾಡಬೇಕು. ಯಾರನ್ನೇ ಗೆಲ್ಲಿಸುವ ಅಥವಾ ಸೋಲಿಸುವ ಅಥವಾ ಲಿಂಗಾಯತ ಶಾಸಕರನ್ನು ಹೆಚ್ಚಿಸುವ ಉದ್ದೇಶ ನಮಗಿಲ್ಲ, ಲಿಂಗಾಯತ ಧರ್ಮ, ಸಮಾಜಕ್ಕೆ ಸ್ಪಂದಿಸುವ ಶಾಸಕರನ್ನು ಹೆಚ್ಚಿಸುವುದು ನಮ್ಮ ಉದ್ದೇಶ ಎಂದು ಹೇಳಿದರು

ಲಿಂಗಾಯತರನ್ನು ಹಿಡಿತಕ್ಕೆ ತೆಗೆದುಕೊಳ್ಳುವ ಪ್ರಯತ್ನ

ಬೆಳಗ್ಗೆ 11 ಗಂಟೆಗೆ ಶುರುವಾದ ಮೊದಲನೇ ಅಧಿವೇಶನದಲ್ಲಿ ಡಾ ಸಂಗಮೇಶ ಕಲಹಾಳ ಹಾಗೂ ಅಶೋಕ ಬರಗುಂಡಿ ಲಿಂಗಾಯತರ ಮೇಲೆ ನಡೆಯುತ್ತಿರುವ ಸಾಂಸ್ಕೃತಿಕ ಹಾಗೂ ರಾಜಕೀಯ ದಾಳಿಯ ಬಗ್ಗೆ ಮಾತನಾಡಿದರು.

ವಚನ ದರ್ಶನ, ಶರಣರ ಶಕ್ತಿಗಳಂತಹ ಪ್ರಯತ್ನಗಳ ಮೂಲಕ ಲಿಂಗಾಯತರ ಮೇಲೆ ಸಾಂಸ್ಕೃತಿಕ ದಾಳಿ ಶುರುವಾಯಿತು. ಅದೀಗ ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶದ ಮೂಲಕ ನೇರ ಘರ್ಷಣೆಯಾಗಿ ಬೆಳೆಯುತ್ತಿದೆ, ಎಂದು ಕಲಹಾಳ ಹೇಳಿದರು.

ಲಿಂಗಾಯತರನ್ನು ಸಾಂಸ್ಕೃತಿಕವಾಗಿ, ರಾಜಕೀಯವಾಗಿ ನೇರವಾಗಿ ಹಿಡಿತಕ್ಕೆ ತೆಗೆದುಕೊಳ್ಳಲು ಸಂಘ ಪರಿವಾರ ಪ್ರಯತ್ನಿಸುತ್ತಿದೆ. ಇದಕ್ಕಾಗಿ ಯಡಿಯೂರಪ್ಪನವರ ನಂತರ ಯಾರೇ ಲಿಂಗಾಯತ ನಾಯಕರು ಪ್ರಬಲವಾಗಿ ಬೆಳೆಯದಂತೆ ನೋಡಿಕೊಳ್ಳಲಾಗುತ್ತಿದೆ, ಎಂದು ಹೇಳಿದರು.

ಲಿಂಗಾಯತರ ಮೇಲೆ ಗೋಚರಿಸದಂತಹ ರೀತಿಗಳಲ್ಲಿಯೂ ದಾಳಿಗಳಾಗುತ್ತಿವೆ. ನಂದಿ ಕೂಗು ಅಭಿಯಾನದ ಹೆಸರಿನಲ್ಲಿ ಬಸವತತ್ವವನ್ನು ಮತ್ತೆ ಎತ್ತುಗಳಿಗೆ ಸಮೀಕರಿಸುವ ಪ್ರಯತ್ನ ನಡೆಯುತ್ತಿದೆ ಎಂದರು.

ಲಿಂಗಾಯತರು ಆತ್ಮವಿಮರ್ಶೆ ಮಾಡಿಕೊಳ್ಳಬೇಕು

ಚರ್ಚೆಯನ್ನು ವಿಸ್ತರಿಸಿದ ಅಶೋಕ ಬರಗುಂಡಿ ಬಸವಣ್ಣನವರ ಕಾಲದಿಂದಲೇ ಲಿಂಗಾಯತರ ಮೇಲೆ ದಾಳಿ, ಆಕ್ರಮಣ ಒಳಗಿನಿಂದ, ಹೊರಗಿನಿಂದ ನಡೆಯುತ್ತಿದೆ. ಶರಣರ ಪುರಾಣೀಕರಣ, ವೈದಿಕೀಕರಣ, ಗುರು ಭಕ್ತ ವರ್ಗ ಭೇದ, ಜಾತೀಯತೆಗಳನ್ನು ಬಿತ್ತುವ ಕೆಲಸ ನಡೆದುಕೊಂಡು ಬಂದಿದೆ.

ವಚನಗಳನ್ನು ಅಪ್ರಸ್ತುತ, ಅಪಮೌಲ್ಯಗೊಳಿಸುವ ಪ್ರಯತ್ನ ನಡೆಯುತ್ತಿದೆ. ಇವುಗಳನ್ನು ಎದುರಿಸಲು ಮೊದಲು ನಾವು ಲಿಂಗಾಯತವು ಹುಟ್ಟಿನಿಂದ ಬರುತ್ತದೋ ಅಥವಾ ತತ್ವ ಆಚರಣೆಯಿಂದ ಬರುತ್ತದೋ ಎಂದು ಆತ್ಮವಿಮರ್ಶೆ ಮಾಡಿಕೊಳ್ಳಬೇಕೆಂದು, ಹೇಳಿದರು.

ರಾಜಕೀಯ ಪ್ರಜ್ಞೆ ಬರುವತನಕ ಮಾನ್ಯತೆಯಿಲ್ಲ

ಬಸವ ಸಂಘಟನೆಗಳ ರಾಜಕೀಯ ಪ್ರಜ್ಞೆ ಮತ್ತು ಪ್ರಭಾವ ಬೆಳೆಸುವ ಗೋಷ್ಠಿಯ ಮೇಲಿನ ಚರ್ಚೆಯಲ್ಲಿ ಅಕ್ಕಿ ಮಲ್ಲಿಕಾರ್ಜುನ ಹಾಗೂ ಡಾ ರಾಜಶೇಖರ ನಾರನಾಳ ಭಾಗವಹಿಸಿದರು.

ಯಾವುದೇ ಧರ್ಮ ಬೆಳೆಯಲು ರಾಜಾಶ್ರಯ ಅಗತ್ಯವಾಗಿದ್ದು, ಬಸವಣ್ಣ ಆರ್ಥಿಕ ಮಂತ್ರಿಯಾಗದಿದ್ದರೆ ಲಿಂಗಾಯತ ಧರ್ಮ ಕಟ್ಟಲು ಸಾಧ್ಯವಾಗುತ್ತಿರಲಿಲ್ಲ ಎಂದು ಮಲ್ಲಿಕಾರ್ಜುನ ಹೇಳಿದರು.

ಬಸವ ಸಂಘಟನೆಗಳ ರಾಜಕೀಯ ಪ್ರಜ್ಞೆ, ಪ್ರಭಾವ ಬೆಳೆಯುವ ತನಕ ಲಿಂಗಾಯತ ಧರ್ಮಕ್ಕೆ ಮಾನ್ಯತೆ ಸಿಗುವುದಿಲ್ಲವೆಂದು ಹೇಳಿದರು. ಬಸವನಗುಡಿ ಕ್ಷೇತ್ರವನ್ನು ಅಲ್ಲಿನ ಬ್ರಾಹ್ಮಣ ಮತದಾರರು ಹಿಡಿತಕ್ಕೆ ತೆಗೆದುಕೊಂಡ ರೀತಿಯನ್ನು ನೋಡಿ ಲಿಂಗಾಯತರು ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳಬೇಕೆಂದು ಹೇಳಿದರು.

ಲಿಂಗಾಯತರ ಎರಡು ಮುಖ್ಯ ಆದ್ಯತೆಗಳು

ಚರ್ಚೆ ವಿಸ್ತರಿಸಿದ ನಾರನಾಳ 2006ರಲ್ಲಿ ಯಡಿಯೂರಪ್ಪನವರಿಗೆ ಅಧಿಕಾರ ವಂಚನೆಯಾದಾಗ ಇಡೀ ಲಿಂಗಾಯತ ಸಮುದಾಯ ಅವರ ಹಿಂದೆ ನಿಂತಿತು. ಜಾತಿ, ಧರ್ಮ, ಅನುಕಂಪದ ಮೇಲೆ ಮತ ಹಾಕುವುದಕ್ಕಿಂತಲೂ ಪ್ರಶ್ನಿಸಿ ಮತ ಹಾಕುವುದು ರಾಜಕೀಯ ಪ್ರಜ್ಞೆ. ಪ್ರಶ್ನಿಸದಿದ್ದರೆ ಸಂತನೂ ಸರ್ವಾಧಿಕಾರಿಯಾಗುತ್ತಾನೆ, ಎಂದು ಎಂದರು.

ಲಿಂಗಾಯತರ ಮುಂದೆ ಎರಡು ಮುಖ್ಯ ಆದ್ಯತೆಗಳಿವೆ. ಪ್ರತ್ಯೇಕ ಧರ್ಮ ಮಾನ್ಯತೆ ಪಡೆಯುವುದು ಹಾಗೂ ನೂತನ ಅನುಭವ ಮಂಟಪದ ರಕ್ಷಣೆ ಹಾಗೂ ನಿರ್ವಹಣೆ. ಇವೆರಡೂ ಕೈ ತಪ್ಪಿ ಹೋದರೆ, ಲಿಂಗಾಯತರಿಗೆ ಉಳಿಗಾಲವಿಲ್ಲ, ಎಂದು ಹೇಳಿದರು.

ಹೋರಾಟವನ್ನು ಗಟ್ಟಿಗೊಳುಸುವುದು ಹೇಗೆ?

ಇಂದು ನಡೆಯುತ್ತಿರುವ ಅನೇಕ ಬೆಳವಣಿಗೆಗೆಳಿಗೆ ಬಸವ ಸಂಘಟನೆಗಳಿಂದ ತೀವ್ರ ಪ್ರತಿಕ್ರಿಯೆ ಬರುತ್ತಿದೆ. ಬಸವ ಕಾರ್ಯಕರ್ತರು ಸರಕಾರಕ್ಕೆ ಮನವಿ ಪತ್ರ ಕೊಡುವುದು, ಸುದ್ದಿ ಗೋಷ್ಠಿ ನಡೆಸುವುದು ಸಾಮಾನ್ಯವಾಗಿದೆ.

ಈ ಹೋರಾಟವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ರೂಪಿಸುವ ಮಾರ್ಗಗಳ ಬಗ್ಗೆ ವಿಜಯಪುರದ ಸಬಲ ಸಂಸ್ಥೆಯ ಮಲ್ಲಮ್ಮ ಯರವಾಳ ಹಾಗೂ ಟಿ ಎಚ್ ಬಸವರಾಜ್ ಮಾತನಾಡಿದರು.

ರೈತರ ಭೂಹಕ್ಕಿನ ಪರವಾಗಿ ನಡೆಸಿದ ಬಹುವರ್ಷಗಳ ಹೋರಾಟದ ಅನುಭವವನ್ನು ಮಲ್ಲಮ್ಮ ಹಂಚಿಕೊಂಡರು.

ಭೂಮಿ ಸಮೀಕ್ಷೆ ನಡೆಸಿ, ರೈತರಿಂದ ಒಂದು ಲಕ್ಷ ಪತ್ರಗಳನ್ನು ಬರೆಸಿ, ಕೊನೆಗೆ ಸಾವಿರಾರು ಜನರನ್ನು ಕರೆದುಕೊಂಡು ವಿಧಾನಸೌಧ ಚಲೋ ಹೋರಾಟಕ್ಕೆ ಹೊರಟ್ಟಿದ್ದನ್ನು ಸ್ಮರಿಸಿಕೊಂಡರು.

ಈಗಿನ ಪರಿಸ್ಥಿತಿಯಲ್ಲಿ ಬಸವ ಸಂಘಟನೆಗಳು ಸಾಮಾಜಿಕ ಜಾಲತಾಣಗಳನ್ನು ತಮ್ಮ ಹೋರಾಟದಲ್ಲಿ ಬಳಸಿಕೊಳ್ಳಬೇಕು. ವಕೀಲರನ್ನು, ಮಹಿಳೆಯರನ್ನು,ಯುವಕರನ್ನು ಸಂಘಟಿಸಿದರೆ ಹೋರಾಟ ಯಶಸ್ವಿಯಾಗುವುದೆಂದು ತಿಳಿಸಿದರು.

ಒತ್ತಡ ಗುಂಪಾಗಿ ಕೆಲಸ ಮಾಡಬೇಕು

ಬಸವಣ್ಣ ಇವ ನಮ್ಮವ ಎಂದು ಕರೆದುಕೊಂಡು ಬಂದವರನ್ನು ನಾವು ಕೈ ಬಿಟ್ಟಿದ್ದೇವೆ, ಆ ಶಾಪದಿಂದ ನಾವು ರಾಜಕಾರಣಿಗಳ ಮೇಲೆ ಒತ್ತಡ ತರಲು ಸಾಧ್ಯವಾಗುತ್ತಿಲ್ಲ ಎಂದು ಟಿ ಎಚ್ ಬಸವರಾಜ್ ಹೇಳಿದರು.

ರಾಜಕಾರಣಿಗಳನ್ನು ಪ್ರಶ್ನಿಸಲು ಬಸವ ಸಂಘಟನೆಗಳು ಒಂದು ಒತ್ತಡ ಗುಂಪಾಗಿ (pressure group) ಕೆಲಸ ಮಾಡುವುದನ್ನು ಕಲಿಯಬೇಕು.

ಆಗ ಮಾತ್ರ ರಾಜಕಾರಣಿಗಳು ಮತ ಕೇಳಲು ಮಠಗಳಿಗೆ ಹೋಗುವ ಬದಲು ಸಮುದಾಯ ಭವನಗಳಿಗೆ ಬರುತ್ತಾರೆ ಎಂದು ಹೇಳಿದರು.

ಅನುಭವ ಮಂಟಪ ನಿರ್ವಹಣೆ, ರಕ್ಷಣೆಯ ವಿಷಯದಲ್ಲಿಯೂ ಬಸವ ಸಂಘಟನೆಗಳು ಒಂದು ಒತ್ತಡ ಗುಂಪಾಗಿ ಕಾರ್ಯ ನಿರ್ವಹಿಸಬೇಕು, ಸಾವಿರಾರು ಜನರ ಸ್ವಯಂಸೇವಕ ಪಡೆ ಕಟ್ಟಬೇಕೆಂದು ಹೇಳಿದರು.

ಚುನಾವಣೆಗಳ ಮೇಲೆ ಪ್ರಭಾವ ಬೀರಬೇಕು

ಚುನಾವಣೆಗಳಲ್ಲಿ ಬಸವ ಸಂಘಟನೆಗಳು ಸಕ್ರಿಯವಾಗುವ ವಿಷಯದ ಮೇಲೆ ಬಸವಲಿಂಗಪ್ಪ ಬಾದರ್ಲಿ ಹಾಗೂ ಬಸವರಾಜ ಮಾವಿನಹಳ್ಳಿ ಮಾತನಾಡಿದರು.

ಪಕ್ಷಗಳ, ರಾಜಕಾರಣಿಗಳ ಮೇಲೆ ಪ್ರಭಾವ ಬೀರಲು ಚುನಾವಣೆಗಳಲ್ಲಿ ಬೂತ್ ಮಟ್ಟದಲ್ಲಿ ಕೆಲಸ ಮಾಡುವುದು ಅನಿವಾರ್ಯ ಎಂದು ಮಾವಿನಹಳ್ಳಿ ಹೇಳಿದರು.

ಬೂತುಗಳಲ್ಲಿರುವ ಲಿಂಗಾಯತ ಮತದಾರರ ಪಟ್ಟಿಯನ್ನು ಪಡೆದುಕೊಂಡು ಅವರಲ್ಲಿ ಕೆಲವರನ್ನಾದರೂ ಒಲಿಸುವ ಪ್ರಯತ್ನ ಮಾಡಬೇಕು ಎಂದರು.

ಸಮಾಜಮುಖಿಯಾಗಿ ಕೆಲಸ ಮಾಡಿದರೆ, ಜನರ ಸಮಸ್ಯೆಗಳಿಗೆ ಸ್ಪಂದಿಸಿದರೆ, ಜನರೂ ಚುನಾವಣೆಗಳಲ್ಲಿ ಸ್ಪಂದಿಸುತ್ತಾರೆ. ಜನರಿಗೆ ಲಿಂಗಾಯತ ಧರ್ಮದ ಮಾನ್ಯತೆಯಿಂದ ಸಿಗುವ ಪ್ರಯೋಜನದ ಬಗ್ಗೆ ಜಾಗೃತಿ ಮೂಡಿಸಬೇಕು.

ಚುನಾವಣೆಯಲ್ಲಿ ನಿಲ್ಲುವ ಅಭ್ಯರ್ಥಿಗಳಲ್ಲಿ ಸಮಾಜದ ಪರ ಇರುವವರನ್ನು ಬೆಂಬಲಿಸಬೇಕು. ನಾವು ಗೆಲ್ಲಿಸಿದ ಮೇಲೆ ಹಕ್ಕಿನಿಂದ ನಮ್ಮ ಕೆಲಸ ಮಾಡಿಸಿಕೊಳ್ಳಲು ಸಾಧ್ಯ. ಬಸವ ಶಕ್ತಿ ಶಿಬಿರಗಳನ್ನು ತಾಲೂಕು ಮಟ್ಟದಲ್ಲಿ ನಡೆಸುವುದರಿಂದ ಜನರಲ್ಲಿ, ಸಂಘಟನೆಗಳಲ್ಲಿ ಜಾಗೃತಿ ಮೂಡಿಸಲು ಸಾಧ್ಯ ಎಂದು ಹೇಳಿದರು.

‘ಇವ ನಮ್ಮವ’ ಸಮಾವೇಶ ನಡೆಸಿ

ಲಿಂಗಾಯತ ಧರ್ಮ ಮಾನ್ಯತೆಗೆ ಹೋರಾಟ ಜಂತರ್ ಮಂತರ್, ರೈತರ ಹೋರಾಟದಂತೆ ತೀವ್ರವಾದರೆ ಮಾತ್ರ ಗುರಿ ಸಾಧಿಸಬಹುದೆಂದು ಬಸವಲಿಂಗಪ್ಪ ಬಾದರ್ಲಿ ಹೇಳಿದರು.

ಬಸವ ಸಂಘಟನೆಗಳು ರಾಜಕೀಯವಾಗಿ, ಚುನಾವಣೆಗಳಲ್ಲಿ ಸಕ್ರಿಯವಾಗಲು ಕೆಲವು ಸಲಹೆಗಳನ್ನು ನೀಡಿದರು:

1) ನಾವು ರಾಜಕೀಯವಾಗಿ ಸಕ್ರಿಯವಾಗುತ್ತಿದ್ದೇವೆಂಬ ಸಂದೇಶ ಎಲ್ಲಾ ರಾಜಕಾರಣಿಗಳಿಗೆ, ಪಕ್ಷಗಳಿಗೆ ಮುಟ್ಟುವಂತೆ ಪ್ರಚಾರ ಮಾಡಬೇಕು. ಬಸವ ಶಕ್ತಿ ಶಿಬಿರ ನಡೆಯುತ್ತಿದೆ ಎಂದು ಜಿಲ್ಲೆಗಳಲ್ಲಿ ಎಲ್ಲಾ ರಾಜಕಾರಣಿಗಳಿಗೆ ತಿಳಿಸಿದರೆ ಅವರಲ್ಲಿ ಜಾಗೃತಿ ಬರುತ್ತದೆ.

2) ನಮ್ಮ ಜಾತ್ಯತೀತ ಧೋರಣೆಯನ್ನು ಎಲ್ಲಾ ವರ್ಗದವರಿಗೂ ಮನದಟ್ಟು ಮಾಡಿಕೊಡಬೇಕು. ಜಿಲ್ಲಾ ಮಟ್ಟದಲ್ಲಿ ಸಮಾನಮನಸ್ಕ ಧರ್ಮ, ಸಮುದಾಯದ ಸಂಘಟನೆಗಳ ಜೊತೆ ‘ಇವ ನಮ್ಮವ’ ಸಮಾವೇಶ ನಡೆಸಬೇಕು.

3) ಎಲ್ಲಾ ರಾಜಕಾರಣಿಗಳಿಗೆ ಬಸವತತ್ವದ ಬಗ್ಗೆ, ಲಿಂಗಾಯತ ಧರ್ಮದ ಹೋರಾಟದ ಬಗ್ಗೆ ಜಾಗೃತಿ ಮೂಡಿಸಬೇಕು.

4) ಎಲ್ಲಾ ಕಾಯಕವರ್ಗಗಳನ್ನು ಸೇರಿಸಿಕೊಂಡು ಜಿಲ್ಲಾ ಮಟ್ಟದಲ್ಲಿ ಕಾಯಕಜೀವಿಗಳ ಸಮಾವೇಶ ನಡೆಸಬೇಕು.

ಸಂಪನ್ಮೂಲ ವ್ಯಕ್ತಿಗಳು ಮಾತನಾಡಿದ ಮೇಲೆ ಪ್ರತಿಯೊಂದು ವಿಷಯದ ಮೇಲೂ ಶಿಬಿರಾರ್ಥಿಗಳಿಂದ ವಿಸ್ತೃತ ಚರ್ಚೆ ನಡೆಯಿತು. ಎಲ್ಲಾ ಜಿಲ್ಲೆಗಳಲ್ಲಿ ಬಸವ ಶಕ್ತಿ ಶಿಬಿರಗಳು ಮುಗಿದ ಮೇಲೆ ಚುನಾವಣೆಯ ಮುಂಚೆ ರಾಜ್ಯಮಟ್ಟದ ಬಸವ ಶಕ್ತಿ ಶಿಬಿರ ನಡೆಸಬೇಕೆಂಬ ಅಭಿಪ್ರಾಯ ಬಹಳ ಜನರಿಂದ ಕೇಳಿಬಂದಿತು.

ಜಾಗತಿಕ ಲಿಂಗಾಯತ ಮಹಾಸಭಾ, ಅರಿವು ಆಚಾರ ಅನುಭಾವ ಟ್ರಸ್ಟ್, ಶರಣ ಸಾಹಿತ್ಯ ಪರಿಷತ್, ಬಸವ ಬಳಗ, ರಾಷ್ಟ್ರೀಯ ಬಸವದಳ ಮುಂತಾದ ಸಂಘಟನೆಗಳ ನೇತೃತ್ವದಲ್ಲಿ ಎರಡು ದಿನಗಳ ಶಿಬಿರವನ್ನು ಆಯೋಜಿಸಲಾಗಿತ್ತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM

Share This Article
1 Comment
  • ಅತ್ಯುತ್ತಮವಾದ ಕೆಲಸ ಧನ್ಯವಾದಗಳು 🙏🙏

Leave a Reply

Your email address will not be published. Required fields are marked *