ವಿದ್ಯಾರ್ಥಿಗಳು ಪ್ರಶ್ನೆ ಮಾಡುವ ಗುಣ ಬೆಳೆಸಿಕೊಳ್ಳಬೇಕು: ಕೋರಣೇಶ್ವರ ಸ್ವಾಮೀಜಿ

ಬಸವ ಮೀಡಿಯಾ
ಬಸವ ಮೀಡಿಯಾ

ಆಳಂದ ಅನುಭವ ಮಂಟಪದಲ್ಲಿ ವಿಶಿಷ್ಟ ಗುರುವಂದನಾ ಕಾರ್ಯಕ್ರಮ

ಆಳಂದ:

ವಿದ್ಯಾರ್ಥಿಗಳಿಗೆ ಪ್ರಶ್ನಿಸುವ ಮನೋಭಾವವಿರಬೇಕು ಎಂದು ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ಅನುಭವ ಮಂಟಪದ ಸಂಚಾಲಕರಾದ ಪೂಜ್ಯ ಕೋರಣೇಶ್ವರ ಸ್ವಾಮಿಗಳು ಹೇಳಿದರು.

ಇಲ್ಲಿನ ಬುಧವಾರ ವಿಜೃಂಭಣೆಯಿಂದ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಾ
ಪ್ರಶ್ನೆ ಮಾಡುವ ಗುಣ ಬೆಳೆಸಿಕೊಳ್ಳಬೇಕು, ಕಣ್ಣು ಮುಚ್ಚಿ ಯಾವುದನ್ನೂ ಒಪ್ಪಿಕೊಳ್ಳಬಾರದು. ಪ್ರಶ್ನಿಸುವ ಮತ್ತು ವಿಚಾರ ಮಾಡುವ ಗುಣವೇ ಪ್ರತಿಯೊಬ್ಬರಲ್ಲಿರುವ ನಿಜವಾದ ಗುರುತ್ವ ಎಂದು ತಿಳಿಸಿದರು.

ಶರಣರು “ಅರಿವೇ ಗುರು” (ಜ್ಞಾನವೇ ನಿಜವಾದ ಗುರು) ಎಂದು ಸಾರಿದರೆ, ಬುದ್ಧನು “ಅಪ್ಪ ದೀಪೋ ಭವ” (ನಿನಗೆ ನೀನೇ ಬೆಳಕಾಗು) ಎಂದು ಬೋಧಿಸಿದರು.

ಗುರು ಎಂದರೆ ಕೇವಲ ಒಬ್ಬ ನಿರ್ದಿಷ್ಟ ವ್ಯಕ್ತಿಯಲ್ಲ; ಅದೊಂದು ಸಿದ್ಧಾಂತ ಮತ್ತು ಮಾರ್ಗದರ್ಶನ. ಸರ್ವರಿಗೂ ನಿಷ್ಕಲ್ಮಶ ಮನಸ್ಸಿನಿಂದ ಸನ್ಮಾರ್ಗವನ್ನು ತೋರಿಸುವುದೇ ನಿಜವಾದ ಗುರುತ್ವ.

ಶರಣರು ಹೇಳಿದಂತೆ, ಗುರುತ್ವವನ್ನು ಕೇವಲ ಮನುಷ್ಯರಿಂದಷ್ಟೇ ಅಲ್ಲದೆ, ಪ್ರಕೃತಿಯಲ್ಲಿರುವ ಪಶು-ಪಕ್ಷಿಗಳಿಂದಲೂ ಕಲಿಯಬೇಕು. ಎಂದರು

ಇಂದಿನ ದಿನಗಳಲ್ಲಿ ತತ್ತ್ವ- ವಿಚಾರಗಳನ್ನು ಬದಿಗೊತ್ತಿ, ಕೇವಲ ವ್ಯಕ್ತಿಪೂಜೆ ಮತ್ತು ಆಡಂಬರದ ಪೂಜೆ-ಪುರಸ್ಕಾರಗಳಿಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ. ಇದು ಜನರನ್ನು ಮೂಢನಂಬಿಕೆಗೆ ತಳ್ಳುತ್ತಿದೆ.

ಗುರುವಿನ ಹೆಸರಿನಲ್ಲಿ ಮತ್ತು ಧರ್ಮದ ಹೆಸರಿನಲ್ಲಿ ದೊಡ್ಡಮಟ್ಟದ ವ್ಯಾಪಾರ ನಡೆಯುತ್ತಿದ್ದು, ವೈಭವೀಕರಣ ಹಾಗೂ ಭೋಗಜೀವನವೇ ಪ್ರಮುಖವಾಗಿದೆ.

ನಿಜವಾದ ಗುರುವಿನ ಲಕ್ಷಣ ಸ್ವತಃ ಸುಜ್ಞಾನವನ್ನು ಬೆಳೆಸಿಕೊಂಡು, ಸದಾಚಾರ ಸಂಪನ್ನರಾಗಿ ಬದುಕಿ ತೋರಿಸಿದ ನಂತರವಷ್ಟೇ ಇನ್ನೊಬ್ಬರಿಗೆ ಬೋಧನೆ ಮಾಡುವವನೇ ನಿಜವಾದ ಗುರು.

ಆಸೆಯೆಂಬುದು ಅರಸಂಗಲ್ಲದೆ ಶಿವಭಕ್ತರಿಗುಂಟೆ ಈಸಕ್ಕಿ ಆಸೆ ನಮಗೇಕೆ ಈಶ್ವರನಪ್ಪ ಎಂದು ತನ್ನ ಪತಿಯನ್ನೇ ಪ್ರಶ್ನಿಸಿದ ಶರಣೆ‌ ಲಕ್ಕಮ್ಮ. ಆದರೆ ಇಂದಿನ ಮಠಾಧೀಶರು ಅಥವಾ ಗುರುಗಳು ಭಕ್ತರು ಕೊಡುವ ಕಾಣಿಕೆ ಯಾವ ಮಾರ್ಗದಿಂದ ಬಂದಿದೆ (ಮೋಸ, ಲೂಟಿ ಅಥವಾ ಭ್ರಷ್ಟಾಚಾರವೇ?) ಎಂದು ಪ್ರಶ್ನಿಸುವುದಿಲ್ಲ. ಬದಲಾಗಿ, ಹೆಚ್ಚು ಹಣ ಕೊಟ್ಟವರಿಗೆ ‘ಧರ್ಮಭೂಷಣ’, ‘ಧರ್ಮವೀರ’ ಎಂಬ ಬಿರುದುಗಳನ್ನು ನೀಡಿ ಪ್ರೋತ್ಸಾಹಿಸುತ್ತಿದ್ದಾರೆ. ಇದು ಸಮಾಜದಲ್ಲಿ ವಿಷಮತೆ ಮತ್ತು ಭ್ರಷ್ಟಾಚಾರ ಹೆಚ್ಚಾಗಲು ಕಾರಣವಾಗಿದೆ.

ಈ ಸಂದರ್ಭದಲ್ಲಿ ಅನುಭವ ಮಂಟಪ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಪ್ರದರ್ಶಿಸಿದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಮನಸೂರೆಗೊಂಡವು.

ಮಕ್ಕಳು ತಮ್ಮ ಅದ್ಭುತ ನೃತ್ಯ, ಅಭಿನಯ ಹಾಗೂ ಗಾಯನದ ಮೂಲಕ ಗುರುವಿನ ಶ್ರೇಷ್ಠತೆಯನ್ನು ಸ್ಮರಿಸಿ, ಭಕ್ತಿ-ಗೌರವಗಳನ್ನು ಸಮರ್ಪಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಅಭಿನಂದನ್ ಬೇಡಿಗಿಯವರ ಮಾತನಾಡಿ, ಅನುಭವ ಮಂಟಪ ಶಾಲೆಯ ಈ ಗುರುವಂದನ ಕಾರ್ಯಕ್ರಮ ತುಂಬಾ ವಿಶೇಷವಾಗಿತ್ತು. ಮಕ್ಕಳು ತಮ್ಮ ಕಲೆಯ ಮುಖಾಂತರ ಅನೇಕ ವಿಚಾರಗಳನ್ನು ಸಮಾಜಕ್ಕೆ ಬೋಧಿಸಿದರು ಎಂದು ಹೇಳಿದರು.

ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಮಲ್ಲಿನಾಥ ಎಲಶೆಟ್ಟಿ, ಸದಸ್ಯರಾದ ಸುಭಾಷ ಪಾಟೀಲ, ಮಲ್ಲಿನಾಥ ಪರೇಣಿ, ಮೇಲಗಿರಪ್ಪ ವಾಲಿ, ರಾಜಶೇಖರ ಹರಿಹರ. ಶಿವಪುತ್ರಪ್ಪಾ ಪಾಟೀಲ, ವಿಶ್ವನಾಥ ಕೊಟ್ಟರಗಿ, ಶಿವಾನಂದ ಹತ್ತಿ, ಅಪ್ಪಾಸಾಬ ತಿರ್ಥೆ, ರಾಜೇಂದ್ರ ಗುಂಡೆ ಹಾಗೂ ಉದ್ಯಮಿಗಳಾದ ಮೇಘರಾಜ ಸ್ವಾಮಿ, ಮುಂಬೈ ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM

Share This Article
Leave a comment

Leave a Reply

Your email address will not be published. Required fields are marked *