ದಾವಣಗೆರೆ
ವಚನ ದರ್ಶನದ ನಂತರ ಬಸವಾದಿ ಶರಣರನ್ನು ಹಿಂದುತ್ವದ ಮಡಿಲಿಗೆ ಸೇರಿಸಲು ಮತ್ತೊಂದು ಪ್ರಯತ್ನ ನಡೆದಿದೆ.
ಈಚೆಗೆ ಪ್ರಕಟವಾದ ‘ಬಸವ ಶೈವದಲ್ಲಿ ಹಿಂದುತ್ವ’ ಪುಸ್ತಕ ಹಿಂದೂ ಧರ್ಮಕ್ಕೆ ಪೂರಕವಾದಂತೆ ಕಾಣಿಸುವ ಕೆಲವು ವಚನಗಳನ್ನು ಸಂಗ್ರಹಿಸಿ ವಿಶ್ಲೇಷಿಸಿದೆ. ಈ ಪುಸ್ತಕವನ್ನು ಈಗ ಹಿಂದುತ್ವ ಸಂಘಟನೆಗಳು ಅನೇಕ ನಗರಗಳಲ್ಲಿ ಬಿಡುಗಡೆ ಮಾಡುತ್ತಿವೆ.
ಇದಕ್ಕೆ ಪ್ರತಿಯಾಗಿ ಬಸವ ತತ್ವ ಚಿಂತಕ ವಿಶ್ವೇಶ್ವರಯ್ಯ ಬಿ. ಎಂ. ವೈದಿಕತೆಯನ್ನು ನಿರಾಕರಿಸುವ ಹಲವಾರು ಶರಣರ ವಚನಗಳನ್ನು ಆಯ್ಕೆ ಮಾಡಿದ್ದಾರೆ.
ಇಂದು ಸನಾತನ ಧರ್ಮವನ್ನು ಸಾರಾಸಗಟಾಗಿ ನಿರಾಕರಿಸುವ ಜಕ್ಕಣ್ಣಯ್ಯನವರ ಕೆಲವು ವಚನಗಳು:
ಸನಾತನ ಧರ್ಮದಲ್ಲಿ ಮೇಲು ಕೀಳು ಜಾತಿಗಳಿವೆ. ಆದರೆ ಲಿಂಗಾಯತ ಧರ್ಮದಲ್ಲಿ ಶಿವದೀಕ್ಷೆ ಆದ ವ್ಯಕ್ತಿಯ ಕುಲವನ್ನು ಅರಸುವುದು ತಪ್ಪು.
ಹೊಲೆಹದಿನೆಂಟುಜಾತಿ ನೂರೊಂದು ಕುಲದಲ್ಲಿ
ಆರಾದರೂ ಆಗಲಿ ಗುರುವಿರ್ದು ಲಿಂಗವಿರ್ದು ಜಂಗಮವಿರ್ದು
ಪಾದೋದಕ ಪ್ರಸಾದವಿರ್ದು ಶಿವಾಚಾರವಿರ್ದಲ್ಲಿ
ಶಿವಾರ್ಪಣವ ಮಾಡಬಹುದಯ್ಯಾ.
ದೇವರಾಗಲಿ ಭಕ್ತರಾಗಲಿ ಅವರ ಕುಲವನರಸಿ
ಶಿವಾರ್ಪಣವ ಮಾಡಬಾರದೆಂದು ಸೂತಕವ ಮಾಡಿದರೆ
ಅವರು ರೌರವ ನರಕದೊಳು ಬೀಳುವರು ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
ಸನಾತನ ಧರ್ಮದಲ್ಲಿರುವವರು ಮಾಯೆಯ ಬಂಧನಕ್ಕೆ ಒಳಗಾದವರು. ಆದರೆ ಪ್ರಮಥರು ಮಾಯೆಯನ್ನೇ ತಿಂದು ತೇಗಿದರು
ವೇದವ ನೋಡುವಣ್ಣಗಳ ವಾದಿಸಿತ್ತು ಮಾಯೆ.
ಶಾಸ್ತ್ರವ ನೋಡುವಣ್ಣಗಳ ಗತಿಗೆಡಿಸಿತ್ತು ಮಾಯೆ.
ಆಗಮ ನೋಡುವಣ್ಣಗಳ ಮರುಳಮಾಡಿತ್ತು ಮಾಯೆ.
ಪುರಾಣವ ನೋಡುವಣ್ಣಗಳ ಭ್ರಮಿತರ ಮಾಡಿತ್ತು ಮಾಯೆ.
ಜ್ಯೋತಿಷ್ಯವ ನೋಡುವಣ್ಣಗಳ ಆಶ್ಚರ್ಯವ ಮಾಡಿತ್ತು ಮಾಯೆ.
ಹರಹರಾ ಶಿವಶಿವಾ ಮಾಯೆ ಇದ್ದೆಡೆಯ ನೋಡಾ!
ಬ್ರಹ್ಮ ವಿಷ್ಣು ರುದ್ರಾದಿಗಳು ದೇವ ದಾನವ ಮಾನವರು
ಗಂಗೆವಾಲುಕರು ಭೃಂಗಿಪ್ರಿಯರು ಪಂಚಮುಖರು
ಚತುರ್ಮುಖರು ಏಕಾದಶರುದ್ರರು
ಎಂಬತ್ತೆಂಟುಕೋಟಿ ಋಷೀಶ್ವರರು ನವಕೋಟಿಬ್ರಹ್ಮರು
ಮಾಯಾಬಲೆಗೆ ಸಿಲ್ಕಿದರು ನೋಡಾ |
ಹರಹರಾ ಶಿವಶಿವಾ ಇದು ಕಾರಣ ನಿಮ್ಮ ಪ್ರಮಥರು
ಆ ಮಾಯೆವಿಡಿದು ತಿಂದು ತೇಗಿದರು ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
ವೇದ ಶಾಸ್ತ್ರ ಓದಿದರೇನು ತನ್ನೊಳಗಿನ ಅರಿವನ್ನು ಪಡೆಯದಿದ್ದರೆ?
ವೇದದಲ್ಲಿ ನಾಲ್ಕು ನುಡಿಯ ಕಲಿತರೇನು?
ಶಾಸ್ತ್ರದಲ್ಲಿ ನಾಲ್ಕು ನುಡಿಯ ಕಲಿತರೇನು?
ಪುರಾಣಗಳಲ್ಲಿ ನಾಲ್ಕು ನುಡಿಯ ಕಲಿತರೇನು?
ಆಗಮದಲ್ಲಿ ನಾಲ್ಕು ನುಡಿಯ ಕಲಿತರೇನು?
ಕಲಿತು ಜ್ಯೋತಿಷ್ಯವ ಹೇಳಿದರೇನು? ಶ್ರುತಿಪಾಠಕನಾದರೇನು?
ಚೌಷಷ್ಠಿ ವಿದ್ಯವ ಕಲಿತರೇನು?
ತನ್ನ ಅಂತರಂಗದ ಪರಬ್ರಹ್ಮದ ನಿಲವ ತಾನರಿಯದೆ
ನಾ ಬಲ್ಲೆನೆಂದು ಅಹಂಕರಿಸಿಕೊಂಡಿಪ್ಪ ತರಕಿಮೂಳರ
ಎನಗೊಮ್ಮೆ ತೋರದಿರಯ್ಯ
ಝೇಂಕಾರ ನಿಜಲಿಂಗಪ್ರಭುವೆ.
ವೇದ, ಶಾಸ್ತ್ರ, ಪುರಾಣ, ಜ್ಯೋತಿಷ್ಯ, ದೊಡ್ಡವಲ್ಲ
ವೇದ ದೊಡ್ಡದೆಂದು ನುಡಿವ ವಾದಿಯ ಮಾತ
ಹೇಳಲಾಗದು ಕೇಳಲಾಗದು.
ಶಾಸ್ತ್ರ ದೊಡ್ಡದೆಂದು ನುಡಿವ ಪಾತಕನ ಮಾತ
ಹೇಳಲಾಗದು ಕೇಳಲಾಗದು.
ಪುರಾಣ ದೊಡ್ಡದೆಂದು ನುಡಿವ ಪುಂಡರ ಮಾತ
ಹೇಳಲಾಗದು ಕೇಳಲಾಗದು.
ಆಗಮ ದೊಡ್ಡದೆಂದು ನುಡಿವ ಅಹಂಕಾರಿಯ ಮಾತ
ಹೇಳಲಾಗದು ಕೇಳಲಾಗದು.
ಜ್ಯೋತಿಷ್ಯ ದೊಡ್ಡದೆಂದು ನುಡಿವ ಘಾತುಕನ ಮಾತ
ಹೇಳಲಾಗದು, ಕೇಳಲಾಗದು.
ಅದೇನು ಕಾರಣವೆಂದಡೆ,
ತನ್ನ ಅಂತರಂಗದಲ್ಲಿ ಪರಬ್ರಹ್ಮದ ನಿಲವ ಅರಿತ ಮಹಾತ್ಮಂಗೆ
ಇನ್ನೆಲ್ಲಿಯ ವೇದವೋ? ಇನ್ನೆಲ್ಲಿಯ ಶಾಸ್ತ್ರವೋ?
ಇನ್ನೆಲ್ಲಿಯ ಪುರಾಣವೋ?
ಇನ್ನೆಲ್ಲಿಯ ಆಗಮವೋ? ಇನ್ನೆಲ್ಲಿಯ ಜ್ಯೋತಿಷ್ಯವೋ?
ಇಂತೀ ಇವಕ್ಕೆ ಸಿಲ್ಕದೆ ಅತ್ತತ್ತಲೆಯಾಗಿರ್ದನಯ್ಯ ನಿಮ್ಮ ಶರಣನು
ಝೇಂಕಾರ ನಿಜಲಿಂಗಪ್ರಭುವೆ.
ಕಲ್ಲು ದೇವರುಗಳಿಗೆ ನಮಸ್ಕಾರ ಮಾಡಿದರೆ ಉಪಯೋಗವಿಲ್ಲ
ಈ ಧರೆಯ ಮೇಲೆ ಹುಟ್ಟಿ
ಕಲ್ಲದೈವಂಗಳಿಗೆ ಎರಗಿದರೆ ಭವ ಹಿಂಗುವುದೇ?
ಹಿಂಗದು ನೋಡಾ.
ಅದೇನು ಕಾರಣವೆಂದಡೆ:
ಮನದ ಗುಣಾದಿಗಳ ಶುದ್ಧಮಾಡಲರಿಯದೆ
ನಿಶ್ಚಿಂತ ನಿರ್ಮಲ ಲಿಂಗದಲ್ಲಿ ಕೂಡಲರಿಯದೆ
ಹಲವು ದೈವಂಗಳಿಗೆ ಅಡ್ಡಡ್ಡ ಬಿದ್ದು
ಎದೆ ದಡ್ಡಾಗಿ, ಹಣೆ ದಡ್ಡಾಗಿ, ಭವದ ಕುರಿಗಳಾದರು ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
ಇಷ್ಟಲಿಂಗ ಅನುಸಂಧಾನದಿಂದ ತನ್ನತಾ ಅರಿಯುವುದೇ ಉತ್ತಮ
ವೇದ ಶಾಸ್ತ್ರ ಪುರಾಣ ಆಗಮಂಗಳ ನೋಡಿದರೇನಯ್ಯ?
ಗುರು ಉಪದೇಶದಿಂದ ಪ್ರಾಣಲಿಂಗಸಂಬಂಧವನರಿತು
ವೇದ ಶಾಸ್ತ್ರ ಪುರಾಣ ಆಗಮಂಗಳನೋದಬಲ್ಲಾತನೆ
ನಿಮ್ಮ ಶರಣ ನೋಡಾ ಝೇಂಕಾರ ನಿಜಲಿಂಗಪ್ರಭುವೆ.

ಇವುಗಳನ್ನೆಲ್ಲ ಕ್ರೂಡಿಕರಿಸಿ ಬಸವ ಶೈವದಲ್ಲಿ ಹಿಂದೂತ್ವ ಕೃತಿಗೆ ಮರು ಚಾಟಿ ಏಟು ನೀಡುವ ಪುಸ್ತಕ ಹೊರ ಬರಲಿ.