ಬೆಂಗಳೂರು:
ಇತ್ತೀಚೆಗೆ ಮೈಸೂರು ನಗರದಲ್ಲಿ ನಡೆದ ಸೌಹಾರ್ದ ಸಹಕಾರಿ ಕಾಯ್ದೆಯ ರಜತ ಮಹೋತ್ಸವ ಸಮಾರಂಭದಲ್ಲಿ ಚಾಮರಾಜನಗರ ಜಿಲ್ಲೆಯ ಶ್ರೀ ಸಿದ್ಧಮಲ್ಲೇಶ್ವರ ಸೌಹಾರ್ದ ಸಹಕಾರಿ ಸಂಘ ಉತ್ತಮ ಸೇವೆ ಮತ್ತು ಸಮಾಜಮುಖಿ ಕಾರ್ಯಗಳಿಗಾಗಿ ಸನ್ಮಾನಕ್ಕೆ ಪಾತ್ರವಾಗಿರುವುದು ಸ್ಮರಣೀಯ ಘಟನೆಯಾಗಿದೆ.
ಕಾರ್ಯಕ್ರಮ ಬೆಂಗಳೂರಿನ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಹಾಗೂ ಮೈಸೂರು–ಮಂಡ್ಯ–ಚಾಮರಾಜನಗರ ಸೌಹಾರ್ದ ಸಹಕಾರಿ ಸಂಘಗಳ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ನಡೆಯಿತು.
ಸಹಕಾರದ ತತ್ವವೆಂದರೆ ಒಬ್ಬರಿಗಾಗಿ ಎಲ್ಲರೂ – ಎಲ್ಲರಿಗಾಗಿ ಒಬ್ಬರು ಎಂಬ ಬಸವ ಸಂಸ್ಕೃತಿಯ ಮೌಲ್ಯ. ಬಸವಣ್ಣವರು ಪ್ರತಿಪಾದಿಸಿದ ಸಮಾನತೆ, ಸೇವಾಮನೋಭಾವ ಮತ್ತು ಸಮೂಹ ಹಿತಾಸಕ್ತಿ ಎಂಬ ಮೌಲ್ಯಗಳನ್ನು ಆಚಾರದಲ್ಲಿ ಮೂಡಿಸಿದಾಗಲೇ ಸಹಕಾರಿ ಚಳುವಳಿ ಅರ್ಥಪೂರ್ಣವಾಗುತ್ತದೆ. ಆ ಅರ್ಥದಲ್ಲಿ ಶ್ರೀ ಸಿದ್ಧಮಲ್ಲೇಶ್ವರ ಸೌಹಾರ್ದ ಸಹಕಾರಿ ಸಂಘವು ನಿಜಕ್ಕೂ ಬಸವ ಸಂಸ್ಕೃತಿಯ ಆತ್ಮವನ್ನು ಬದುಕಿನಲ್ಲಿ ಅಳವಡಿಸಿಕೊಂಡಿರುವ ಸಂಘವಾಗಿದೆ.
ಈ ಮಹತ್ತರ ಗೌರವಕ್ಕೆ ಸಂಘವು ಪಾತ್ರವಾಗಲು ಶ್ರೀ ಸಿದ್ಧಮಲ್ಲೇಶ್ವರ ವಿರಕ್ತ ಮಠಾಧ್ಯಕ್ಷರಾದ ಚನ್ನಬಸವ ಮಹಾಸ್ವಾಮಿಗಳವರ ಮಾರ್ಗದರ್ಶನ, ಎಲ್ಲಾ ಪದಾಧಿಕಾರಿಗಳು, ನಿರ್ದೇಶಕರು ಹಾಗೂ ಸದಸ್ಯರ ಸಮೂಹ ಪರಿಶ್ರಮವೇ ಪ್ರಮುಖ ಕಾರಣವಾಗಿದೆ. ಅದರಲ್ಲೂ ವಿಶೇಷವಾಗಿ ಸಂಘದ ಅಧ್ಯಕ್ಷರಾದ ರಾಮಸಮುದ್ರ ಬಾಬು ಅವರ ದೂರದೃಷ್ಟಿ, ಸೇವಾಭಾವ ಮತ್ತು ಸಮರ್ಪಿತ ನಾಯಕತ್ವವು ಈ ಸಾಧನೆಯ ಪ್ರಮುಖ ಶಕ್ತಿ ಎಂಬುದು ನಿರ್ವಿವಾದ.
ಕೇವಲ ಹಣಕಾಸು ವ್ಯವಹಾರಗಳಿಗೆ ಸೀಮಿತವಾಗದೆ, ಸಮಾಜಮುಖಿ ಸೇವೆಯನ್ನೇ ಸಹಕಾರದ ಹೃದಯವೆಂದು ಭಾವಿಸಿ ಸಂಘವು ಹಲವು ಮಾದರಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ.
ಕೋವಿಡ್ ಮಹಾಮಾರಿಯ ಸಂಕಷ್ಟದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಲಸಿಕೆ ಕೊಡಿಸುವ ಕಾರ್ಯದಲ್ಲಿ ಸಂಘವು ತೋರಿದ ಜವಾಬ್ದಾರಿ ಹಾಗೂ ಸೇವಾಭಾವವು ನಿಜಕ್ಕೂ ಶ್ಲಾಘನೀಯ. ಪ್ರತಿವರ್ಷ ಉಚಿತ ಆರೋಗ್ಯ ತಪಾಸಣೆ ಶಿಬಿರಗಳನ್ನು ಏರ್ಪಡಿಸಿ ಜನರ ಆರೋಗ್ಯದ ಕಾಳಜಿ ವಹಿಸುವ ಕಾರ್ಯವು ಸಹಕಾರಿ ಸಂಸ್ಥೆಯ ಮಾನವೀಯ ಮುಖವನ್ನು ತೋರಿಸುತ್ತದೆ.
ಸಂಘದ ಸದಸ್ಯರಲ್ಲಿ ಯಾರಾದರೂ ಲಿಂಗೈಕ್ಯರಾದರೆ ಅವರ ಕುಟುಂಬದೊಂದಿಗೆ ನಿಂತು ಸಂಘದ ವತಿಯಿಂದ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಏರ್ಪಡಿಸುವುದು ಸಹಕಾರದ ನಿಜವಾದ ಬಾಂಧವ್ಯವನ್ನು ಪ್ರತಿಬಿಂಬಿಸುತ್ತದೆ. ಹಾಗೆಯೇ ಸಂಘದ ಸದಸ್ಯರು ಯಾರಾದರೂ ಉನ್ನತ ಹುದ್ದೆಗಳಿಗೆ ಏರಿದಾಗ ಅವರನ್ನು ಗುರುತಿಸಿ ಸಂಘದ ವತಿಯಿಂದ ಅಭಿನಂದಿಸುವುದು ಸದಸ್ಯರಲ್ಲಿ ಆತ್ಮಗೌರವ ಮತ್ತು ಪ್ರೇರಣೆಯನ್ನು ಹೆಚ್ಚಿಸುವ ಮಹತ್ವದ ಪರಂಪರೆಯಾಗಿದೆ.
ಇನ್ನೊಂದು ವಿಶೇಷತೆ ಎಂದರೆ ಸಂಘದ ವಾರ್ಷಿಕ ಮಹಾಸಭೆಗೆ ಎಲ್ಲಾ ಸದಸ್ಯರನ್ನು ಸಂಘದ ಅಧ್ಯಕ್ಷರು ಸ್ವತಃ ಮನೆಮನೆಗೆ ಭೇಟಿ ನೀಡಿ ಆಹ್ವಾನಿಸುವ ಸಂಪ್ರದಾಯ. ಪ್ರತಿವರ್ಷ ದಾನಿಗಳ ಸಹಕಾರದಿಂದ ಸಂಘದ ಹೆಸರಿನಲ್ಲಿ ದಿನದರ್ಶಿಕೆಗಳನ್ನು ಮುದ್ರಿಸಿ, ಅವನ್ನು ಸಂಘದ ಅಧ್ಯಕ್ಷರು ಖುದ್ದಾಗಿ ಸದಸ್ಯರ ಮನೆಗಳಿಗೆ ತಲುಪಿಸುವುದು ನಿಜಕ್ಕೂ ಅಪರೂಪದ ಸಹಕಾರಿ ಸಂಸ್ಕೃತಿ.

ಈ ಎಲ್ಲಾ ಕಾರ್ಯಗಳನ್ನು ಗಮನಿಸಿದಾಗ ಶ್ರೀ ಸಿದ್ಧಮಲ್ಲೇಶ್ವರ ಸೌಹಾರ್ದ ಸಹಕಾರಿ ಸಂಘವು ಕೇವಲ ಒಂದು ಆರ್ಥಿಕ ಸಂಸ್ಥೆಯಲ್ಲ, ಅದು ಸಹಕಾರ, ಸೇವೆ ಮತ್ತು ಮಾನವೀಯತೆಗಳ ಸಂಗಮವಾದ ಬಸವ ಸಂಸ್ಕೃತಿಯ ಜೀವಂತ ಮಾದರಿ ಎಂಬುದು ಸ್ಪಷ್ಟವಾಗುತ್ತದೆ.
ಆದ್ದರಿಂದ ಇಂತಹ ಸಮಾಜಮುಖಿ ಮತ್ತು ಆದರ್ಶ ಕಾರ್ಯಗಳನ್ನು ಗುರುತಿಸಿ ರಜತ ಮಹೋತ್ಸವದ ವೇದಿಕೆಯಲ್ಲಿ ಸನ್ಮಾನಿಸಿರುವುದು ಅತ್ಯಂತ ಶ್ಲಾಘನೀಯ ಮತ್ತು ಅನುಕರಣೀಯ ನಡೆ. ಈ ಗೌರವವು ಕೇವಲ ಒಂದು ಸಂಘದ ಸಾಧನೆ ಮಾತ್ರವಲ್ಲ, ಚಾಮರಾಜನಗರ ಜಿಲ್ಲೆಯ ಸಹಕಾರಿ ಚಳುವಳಿಯ ಗೌರವವೂ ಆಗಿದೆ.
ಇಂತಹ ಸಂಘಗಳು ಬೆಳೆಯಲಿ, ಬಸವಣ್ಣವರ ಸಮಾನತೆ ಮತ್ತು ಸೇವೆಯ ಮೌಲ್ಯಗಳು ಸಮಾಜದಲ್ಲಿ ಮತ್ತಷ್ಟು ಬೇರೂರಲಿ ಎಂದು ಹಾರೈಸುತ್ತಾ, ಶ್ರೀ ಸಿದ್ಧಮಲ್ಲೇಶ್ವರ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರು, ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.
