ಮಾನವುಳ್ಳವರು ಮಾನಕ್ಕೆ ಅಂಜಿದರೆ, ಮಾನಗೇಡಿ ತನಗೇ ಅಂಜಿದರು ಅಂತ ತಿಳಿತಂತೆ

ಸತ್ಯ ಹೇಳುವುದೇ ತಪ್ಪಾದ ಈ ಕಾಲಘಟ್ಟದಲ್ಲಿ ಮಾನಗೇಡಿಗಳ ವಿಜೃಂಭಣೆ ಕೇಕೆ ಹಾಕುತ್ತಿದೆ.

ನಮ್ಮ ಉತ್ತರ ಕರ್ನಾಟಕದಲ್ಲಿ ಈ ಗಾದೆ ಮಾತು ಅತಿ ಹೆಚ್ಚು ಬಳಕೆಯಾಗುತ್ತೆ. ಇದು ಗಾದೆ ಮಾತಾದರೂ ಇಂದಿನ ಪ್ರಸ್ತುತ ಕಾಲಘಟ್ಟಕ್ಕೆ ಇದು ಸೂಕ್ತ ಅನಿಸಿತು.

ನಿಜಾ ನಾವು ಇಂದು ದುರಂತದ ಕಾಲಘಟ್ಟದಲ್ಲಿ ಬದುಕುತ್ತಿದ್ದೇವೆ. ಸತ್ಯ ಹೇಳುವುದೇ ತಪ್ಪಾದ ಈ ಕಾಲಘಟ್ಟದಲ್ಲಿ ಮಾನಗೇಡಿಗಳ ವಿಜೃಂಭಣೆ ಕೇಕೆ ಹಾಕುತ್ತಿದೆ. ಸತ್ಯ ಹೇಳುವವರ ಮಾತುಗಳನ್ನು ತನ್ನ ಭಂಡತನದ ಮಾತುಗಳಿಂದ ಬಾಯಿಮುಚ್ಚಿಸುವ ವ್ಯವಸ್ಥೆಯಲ್ಲಿ ನಾವು ಬದುಕುತಿದ್ದೇವೆ. ಇಂತಹ ವ್ಯವಸ್ಥೆಯನ್ನ ನೋಡಿಯೇ ಜನಪದರ ಈ ಗಾದೆ ಮಾತು, ಎಷ್ಟು ವಾಸ್ತವಿಕತೆಯಿಂದ ಕೂಡಿದೆಯಲ್ಲಾ ಎಂದನಿಸಿತು.

ಇಂದು ನಾವು ಪ್ರಜಾಪ್ರಭುತ್ವದಲ್ಲಿ ಬದುಕುತ್ತಿದ್ದೆವೆಯೋ? ಅಥವಾ ರಾಜಪ್ರಭುತ್ವದಲ್ಲಿ ಬದುಕುತ್ತಿದ್ದೆವೋ? ಎನ್ನುವ ಸಂಶಯ ಮೂಡುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಅನ್ನೋದು ಕೇವಲ ನಾಲಿಗೆ ಮೇಲಿದೆ, ಹೊರತು ಹೃದಯಕ್ಕೆ ಇಳಿದಿಲ್ಲದ ಈ ಕಾಲಘಟ್ಟದಲ್ಲಿ ಮತ್ತೆ ನಾವು ಬಸವತತ್ವವನ್ನು ಹೇಗೆ ಕಟ್ಟಬೇಕಿದೆ ಮತ್ತೆ ಆ ತತ್ವವನ್ನು ಹೇಗೆ ಗಟ್ಟಿಗೊಳಿಸಬೇಕಿದೆ ಎನ್ನುವ ಜಿಜ್ಞಾಸೆ ಮೂಡುತ್ತಿದೆ.

“ಕಟ್ಟಬೇಕು ಮನವ ಮೆಟ್ಟಬೇಕು ಮದವ
ಸುಟ್ಟುಹರುಹಬೇಕು ಸಪ್ತವ್ಯಸನಗಳ
ತೊಟ್ಟಿಲ ಮುರಿದು
ಕಣ್ಣೀಯ ಹರಿದು ಬಟ್ಟ ಬಯಲಲ್ಲಿ ನಿಲಬಲ್ಲಡೆ ಕೂಡಲ ಚೆನ್ನಬಸವಣ್ಣ ಪ್ರೀಯಾ “

ಸುಳ್ಳುಗಳೆ ಮೆರೆಯುತ್ತಾ ಸತ್ಯವನ್ನು ಮೂಲೆಗೆ ಸೇರಿಸುತ್ತಿರುವ ಈ ಸಂದಿಗ್ಧ ಕಾಲದಲ್ಲಿ ನಾವು ಮೇಲಿನ ಹಡಪದ ಅಪ್ಪಣ್ಣನವರ ವಚನದಂತೆ ಸಂಘಟಿತರಾಗುವ ಜರೂರಿ ಕಾಲಘಟ್ಟವು ಇದಾಗಿದೆ.

ಇಂದು ವ್ಯವಸ್ಥೆಯಲ್ಲಿನ ಪಟ್ಟಭದ್ರರ ಮನಸ್ಥಿತಿ ಹೇಗಿದೆ ಅಂದರೆ ” ಕೈಲಾಗದವನ ಕೊನೆ ಅಸ್ತ್ರ ವೈಯಕ್ತಿಕ ಅಪಚಾರ ” ಎನ್ನುವಂತೆ ತತ್ವ ಸಿದ್ದಾಂತದಿಂದ ಬಗ್ಗಿಸಲಾರದವರು ಅವರ ಮೇಲೆ ವೈಯಕ್ತಿಕ ಅಪಪ್ರಚಾರದ ದಾಳಿಗೆ ಇಳಿಯುವಂತೆ ಆ ಕುತಂತ್ರಶಾಹಿ ಕೆಲವರನ್ನು ಬಳಸಿಕೊಳ್ಳುತ್ತಿದೆ. ಅಂತಹ ಒಂದು ಕುತಂತ್ರದ ಪಾತ್ರವೆ ಕನ್ನೇರಿ ಸ್ವಾಮಿಗಳು.

ಅದೇನೆ ಇರಲಿ. ಆದರೆ ಇಂದು ಲಿಂಗಾಯತತ್ವ ಮತ್ತು ಲಿಂಗಾಯತ ಸಮುದಾಯಕ್ಕೆ ಇದು ಕುಂದುವ ಕಾಲವಲ್ಲ, ಲಿಂಗಾಯತ ಚರಿತ್ರೆಯಲ್ಲಿ ಮುನ್ನುಡಿ ಬರೆಯುವ ಕಾಲ ಇದಾಗಿದೆ.

ಲಿಂಗಾಯತ ಧರ್ಮವು ಸ್ವತಂತ್ರ ವಿಚಾರವುಳ್ಳದ್ದು, ವೈದಿಕತೆಯ ಸುಳ್ಳು ಪೊಳ್ಳುಗಳ ಪಕ್ಕೆಲುಬು ಮುರಿದ ಸ್ವತಂತ್ರ ಅವೈದಿಕ ಧರ್ಮವೆಂದು ಗಟ್ಟಿಯಾಗಿ ಹೇಳುವ ಮತ್ತು ಪ್ರತಿಪಾದಿಸುವ ಕಾಲಘಟ್ಟ ಇದಾಗಿದೆ. ಲಿಂಗಾಯತದ ಸಮಾಜೋ -ಧಾರ್ಮಿಕ- ರಾಜಕೀಯ- ಸಾಂಸ್ಕ್ರತಿಕ ಸಮೀಕರಗಳ ಬಹುದೊಡ್ಡ ಪಲ್ಲಟಗಳ ಅನುಸಂಧಾನಗಳಿಗೆ ದಾರಿ ಮಾಡಿಕೊಡಬೇಕಾದ ಕಾಲಘಟ್ಟ ಇದಾಗಿದೆ.

ಇಲ್ಲಿಯವರೆಗೆ ಬರಿ ಹಸಿ ಸುಳ್ಳುಗಳನ್ನೇ ಹೇಳುತ್ತಾ, ಲಿಂಗಾಯತ ಸಮುದಾಯವನ್ನು ಮರಳು ಮಾಡುತ್ತಾ, ತನ್ನ ಹಿತ ಕಾಯ್ದಕೊಂಡ ಪಟ್ಟಭದ್ರ ಹಿತಾಸಕ್ತಿಗಳಿಗೆ ಸಾಮಾಜಿಕ-ರಾಜಕೀಯ-ಸಾಂಸ್ಕ್ರತಿಕ ರಾಜಕಾರಣವನ್ನು ಯಶಸ್ವಿಯಾಗಿ ಕಟ್ಟಿ ಅಸಲಿ ಸನಾತನವಾದಿಗಳ ಹೀನ ರಾಜಕಾರಣದ ಅವಸಾನಕ್ಕಾಗಿ ಈಗ ಸಂಕ್ರಮಣ ಕಾಲ ಕೂಡಿ ಬಂದಿದೆ. ಇದು ಲಿಂಗಾಯತ ಚರಿತೆಯಲ್ಲಿ ಚಾರಿತ್ರಿಕ ಕಾಲಘಟ್ಟವಾಗಿ ಹೊರ ಹೊಮ್ಮಬೇಕು. ಆ ಗಟ್ಟಿತನದ ಕಟ್ಟುವಿಕೆಯನ್ನು ಲಿಂಗಾಯತ ಮಾಡಬೇಕಿದೆ.

ಲಿಂಗಾಯತ ತತ್ವ ಹೇಳುವಲ್ಲಿ ಮಾತಾಡುವಲ್ಲಿ ಇಂದಿಗೂ ಯುವಕರನ್ನು ಸರಿಯಾಗಿ ಬಳಸಿಕೊಂಡಿಲ್ಲ ಎನ್ನುವ ಸತ್ಯವನ್ನು ಅರಿತು, ಯುವಸಮುದಾಯವನ್ನು ಲಿಂಗಾಯತ ತತ್ವ ಸಿದ್ದಾಂತಗಳನ್ನು ನಿರರ್ಗಳವಾಗಿ ವೈಚಾರಿಕವಾಗಿ, ವೈಜ್ಞಾನಿಕವಾಗಿ ಎಲ್ಲರ ಮನ ಮುಟ್ಟುವಂತೆ ಮಾತಾಡುವಂತೆ ಅವರನ್ನು ತಯಾರು ಮಾಡಬೇಕಿದೆ. ಲಾಗಾಯ್ತಿನ ಒಣ ವಿಚಾರಗಳು, ಒಣಪ್ರತಿಷ್ಠೆಗಳಿಂದ ಹೊರಬಂದು ಸಮುದಾಯವು ತನ್ನ ಸಾಂಸ್ಕ್ರತಿಕ -ಚಾರಿತ್ರಿಕ – ಇತಿಹಾಸಗಳ ಗಂಭೀರ ಚಿಂತನೆಗಳಿಗೆ ಮುಂದಾಗಲಿಕ್ಕೆ ಈ ಕಾಲಘಟ್ಟವು ಮುನ್ನುಡಿ ಬರೆಯಲಿ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
Leave a comment

Leave a Reply

Your email address will not be published. Required fields are marked *