ನಾಲತವಾಡ:
ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಪಟ್ಟಣದ ಹೃದಯ ಭಾಗದಲ್ಲಿ ನಿರ್ಮಿಸಲಾದ ಕರ್ನಾಟಕದ ಸಾಂಸ್ಕೃತಿಕ ನಾಯಕ, ಮಹಾತ್ಮ ಬಸವೇಶ್ವರ ವೃತ್ತಕ್ಕೆ ನಿತ್ಯವೂ ಅವಮಾನ ನಡೆದಿದ್ದು ಅಭಿವೃದ್ಧಿ ಪಡಿಸಲು ಪಟ್ಟಣ ಪಂಚಾಯಿತಿಯವರು ಹಿಂದೇಟು ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯ ಬಿಜೆಪಿ ಯುವ ಮುಖಂಡರು ಹಾಗೂ ಹಿರಿಯರು ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಅಧಿಕಾರಿಗಳೊಂದಿಗೆ ಜಟಾಪಟಿ ನಡೆಸಿದ ಘಟನೆ ಸೋಮವಾರ ನಡೆದಿದೆ.
ಬಸವೇಶ್ವರ ವೃತ್ತದಲ್ಲಿ ಬಸವಣ್ಣನವರ ಪುತ್ಥಳಿ ಪ್ರತಿಷ್ಠಾಪನೆ ಮಾಡಿ ಸುಮಾರು 3-4 ವರ್ಷಗಳೇ ಕಳೆದರೂ ಈವರೆಗೂ ಸುತ್ತಲೂ ಗ್ರೀಲ್ ಹಾಗೂ ಏರಲು ಏಣಿಯ ವ್ಯವಸ್ಥೆ ಮಾಡಿಲ್ಲ. ವೃತ್ತದಲ್ಲಿ ಹಂದಿಗಳ ವಾಸ, ಅಂಗಡಿಕಾರರ ಕಿರಿಕಿರಿ, ಕಸ ಕಡ್ಡಿ ಹಾಕಿ ನಿತ್ಯವೂ ಅವಮಾನ ಮಾಡಲಾಗುತ್ತಿದೆ. ಬಸವಣ್ಣನವರಿಗೆ ಏಕೆ ಈ ಅವಮಾನ ಎಂದು ಕಾರ್ಯಕರ್ತರು ಪಟ್ಟಣದ ವಿವಿಧ ವೃತ್ತಗಳ ಅಭಿವೃದ್ಧಿಗೊಳಿಸಿ ಬಸವಣ್ಣನವರ ವೃತ್ತವನ್ನಷ್ಟೆ ಏಕೆ ಅಭಿವೃದ್ಧಿ ಪಡಿಸುತ್ತಿಲ್ಲ ಎಂದು ಪ್ರಶ್ನಿಸಿದರು.
ಗಂಭೀರವಾಗಿ ಪರಿಗಣಿಸಿ ಅಭಿವೃದ್ಧಿಗೆ ಮುಂದಾಗಬೇಕು ಮತ್ತೇ ಅಸಡ್ಡೆ ಧೋರಣೆ ಮುಂದುವರೆದಲ್ಲಿ ಏಪ್ರಿಲ್ 20ರ ಬಸವ ಜಯಂತಿಯಂದು ಭಾರೀ ಪ್ರಮಾಣದಲ್ಲಿ ಹೋರಾಟ ಮಾಡುತ್ತೇವೆ.
ಪಟ್ಟಣದಲ್ಲಿ ಅಭಿವೃದ್ಧಿ ಶೂನ್ಯಗೊಂಡಿದೆ, ಹೆಸರಿಗೆ ಮಾತ್ರ ಮಹಿಳಾ ಶೌಚಾಲಯ ನಿರ್ಮಿಸಿ ಅನುದಾನ ವ್ಯರ್ಥ ಮಾಡಿದ್ದೀರಿ ಅವುಗಳ ಬಳಕೆ ಇಲ್ಲ, ವೀರೇಶ ನಗರದಲ್ಲಿ ರೈತರ ಜಮೀನು ಕಬಳಿಸಿ ಅವೈಜ್ಞಾನಿಕ ಘನತ್ಯಾಜ ಸಂಗ್ರಹ ಘಟಕವನ್ನು ನಿರ್ಮಾಣ ಮಾಡಿ ಸುಮಾರು 30 ಲಕ್ಷ ರೂ. ವೆಚ್ಚದ ಕಂಪೌಂಡ್ ತೆರವುಗೊಳಿಸಲಾಗಿದೆ, ಸರ್ಕಾರದ ಹಣ ದುರುಪಯೋಗ ಆಗಿರುವುದಕ್ಕೆ ಯಾರು ಹೊಣೆ, ಆಸರೆ ಮನೆಗಳ ಜಿಪಿಎಸ್ನಲ್ಲೂ ರಾಜಕೀಯ ಮಾಡಲಾಗುತ್ತಿದೆ, ಮಾಜಿ ಶಾಸಕ ನಡಹಳ್ಳಿಯವರು ನಿರ್ಮಿಸಿದ ವೀರೇಶ್ವರ ಭವನ ಸದ್ಯ ತಿಪ್ಪೆ ಗುಂಡಿಯಾಗಿ ಜೀನಿ ಗಿಡಗಂಟಿಗಳಲ್ಲಿ ನರಳುತ್ತಿದೆ, ಪಟ್ಟಣದಲ್ಲಿ ಗ್ರಂಥಾಲಯ ಆರಂಭಕ್ಕೂ ಹಿಂದೇಟು ಹಾಕಿದ್ದೀರಿ, ವೀರೇಶ್ವರ ವೃತ್ತದಿಂದ ಹಳ್ಳದವರೆಗೆ ಅರ್ಧಕ್ಕೆ ನಿಂತ ರಸ್ತೆ ಆರಂಭ, ಹೈಮಾಸ್ಕ್ ದೀಪಗಳ ದುರಸ್ತಿ, ಸಿಎ ನಿವೇಶನಗಳನ್ನು ವಶಪಡಿಸಿಕೊಂಡು ಅಭಿವೃದ್ಧಿಗೊಳಿಸಬೇಕು.
ಒಂದು ವೇಳೆ ಮತ್ತೇ ಬೇಜವಾಬ್ದಾರಿತನ ಮುಂದುವರೆದಲ್ಲಿ ಬಸವ ಜಯಂತಿ ದಿನ ನಿಮ್ಮ ವಿರುದ್ಧ ನಮ್ಮ ಹೋರಾಟ ಫಿಕ್ಸ್ ಎಂದು ಎಚ್ಚರಿಕೆ ನೀಡಿದರು.
ಸ್ಪಂದನೆ:
ಕಾರ್ಯಕರ್ತರ ಅಹವಾಲು ಸ್ವೀಕರಿಸಿದ ಪಟ್ಟಣ ಪಂಚಾಯಿತಿ ಸಿಒ ಈರಣ್ಣ ಕೊಣ್ಣೂರ ಹಾಗೂ ಉಪಾಧ್ಯಕ್ಷ ಬಸವರಾಜ ಗಂಗನಗೌಡ್ರ ಮಾತನಾಡಿ, ಮುಂದಿನ ಸಾಮಾನ್ಯ ಸಭೆಯಲ್ಲಿ ನಿಮ್ಮೆಲ್ಲಾ ಬೇಡಿಕೆ ಚರ್ಚಿಸಿ ಬಸವೇಶ್ವರ ವೃತ್ತದ ಅಭಿವೃದ್ಧಿಗೆ ಅನುದಾನ ಮೀಸಲಿಟ್ಟು ಅನುಮೋದನೆಗೆ ಕಳಿಸುತ್ತೆವೆ ಇತರೇ ಅಭಿವೃದ್ಧಿ ವಿಷಯಗಳಿಗೆ ಸ್ಪಂದಿಸುತ್ತೇವೆ’ ಎಂದರು.
ಈ ಸಂದರ್ಭ ಸಂಗು ಮೇಟಿ, ಎಂ.ಬಿ. ಅಂಗಡಿ, ಪಿ.ಜಿ. ಬಿರಾದಾರ, ಸಂಗನಗೌಡ ಕುಳಗೇರಿ, ಬಾಪುಗೌಡ ಪಾಟೀಲ, ಎ.ಎಸ್. ಪಟ್ಟಣಶೆಟ್ಟಿ, ಚಂದ್ರಶೇಖರ ದೇಶಮುಖ, ಜಿ.ಎಚ್. ಗಂಗನಗೌಡ್ರ, ಎಚ್.ಎಂ. ವಡಗೇರಿ, ಶೇಖಣ್ಣ ಗಂಗನಗೌಡ್ರ, ಸಂಗಣ್ಣ ಕಾಳಗುಂಡಿ, ಸಂಗಣ್ಣ ಹಾವರಗಿ, ಅಮರೇಶ ಹಟ್ಟಿ, ಬಸನಗೌಡ್ರ ಹಂಪನಗೌಡ್ರ, ಅಜಯ್ ಕೋಟೆಖಾನಿ, ಚಂದ್ರು ಗಂಗನಗೌಡ್ರ, ಶಾಂತಪ್ಪ ನವಲಿ, ಶರಣಪ್ಪ ಬಿದರಕುಂದಿ, ಶೇಖಣ್ಣ ಗಂಗನಗೌಡರ, ದೇಶಮುಖ, ವೀರೇಶ ಚಲವಾದಿ, ಶಿವಯ್ಯ ವಿರಕ್ತಮಠ, ಮುತ್ತು ಸ್ಥಾವರಮಠ, ಪರಶುರಾಮ ಹಡಪದ ಮತ್ತಿತರರು ಉಪಸ್ಥಿತರಿದ್ದರು.
