ಬೀದರ :
ವೈಚಾರಿಕ ಚಿಂತಕರು, ನೂತನ ಅನುಭವ ಮಂಟಪದ ರೂವಾರಿ, ಕಾಯಕ ನಿಷ್ಠೆ-ದಾಸೋಹ ಕರುಣಾ ಮೂರ್ತಿ, ಅನಾಥರ – ನೊಂದವರ ದನಿ, ಅವರ ಬಾಳಿನ ಬೆಳಕು, ಗಡಿಭಾಗದಲ್ಲಿ ಕನ್ನಡ ಉಳಿಸಿ – ಬೆಳೆಸಿದ ಕನ್ನಡ ಭಾಷಾ ಪ್ರೇಮಿ, ವಚನ ಸಾಹಿತ್ಯ ತತ್ವಗಳನ್ನು ಸಾಗರದಾಚೆಗೂ ಕೊಂಡೊಯ್ದ ಮೇಧಾವಿ ಸಂತರ ಸಂತ, ಸರಳತೆಯನ್ನು ಮೈಗೂಡಿಸಿಕೊಂಡ ಸ್ನೇಹ ಜೀವಿ, ಸರ್ವರನ್ನೂ ಸಮಾನತೆಯಿಂದ ಕಂಡ ಸಮತಾವಾದಿ, ನುಡಿದಂತೆ ನಡೆದು, ಜಗತ್ತಿಗೆ ಮಾದರಿಯಾಗಿ ಬದುಕಿ, ಇತರರಿಗೆ ಆದರ್ಶ ಚೇತನರಾಗಿ ಬಾಳಿದ ನಮ್ಮ ಹೆಮ್ಮೆಯ ಕಲ್ಯಾಣದ ಪ್ರಜ್ವಲ ಜ್ಯೋತಿ ಭಾಲ್ಕಿ ಹಿರೇಮಠ ಸಂಸ್ಥಾನದ ಪರಮಪೂಜ್ಯ ಲಿಂಗೈಕ್ಯ ಡಾ. ಚನ್ನಬಸವ ಪಟ್ಟದೇವರ ನಿಸ್ವಾರ್ಥ ಸೇವೆ ಅನನ್ಯ ಮತ್ತು ಅಪಾರ.
ಪಟ್ಟದ್ದೇವರ ಹಿರೇಮಠ ಸಂಸ್ಥಾನ ಕನ್ನಡದ ಮಠವೆಂದೆ ಪ್ರಸಿದ್ಧಿ ಪಡೆದ, ಕಲ್ಯಾಣ ಕರ್ನಾಟಕ ಭಾಗದ ಬಸವ ತತ್ವದ ಮಠ, ಇದು ಜನಸಾಮಾನ್ಯರ ಮಠ, ಸರ್ವ ಜನಾಂಗದ ಮಠ. ಭಾವೈಕ್ಯತೆಯ ಮಠ. ಸಮಾನತೆ ಸಾರಿದ ಮಠ.
ಬಸವಣ್ಣನವರನ್ನು ಹಾಸಿಕೊಂಡು, ಹೊದ್ದುಕೊಂಡಿರುವಂಥ ಮಠ.
ಇವನಾರು, ಇವನಾರು? ಎಂದು ಕೆಳದೇ ಎಲ್ಲರೂ ನಮ್ಮವರೆನ್ನುವ ಮಠ. ಬಡವರಿಗೆ, ದೀನರಿಗೆ, ದಲಿತರಿಗೆ, ಅಂಗವಿಕಲರಿಗೆ, ಅಬಲೆಯರಿಗೆ, ವಿಧವೆಯರಿಗೆ, ಅನಾಥರಿಗೆ, ಕಲಾವಿದಾರಿಗೆ ಆಶ್ರಯ ನೀಡಿರುವಂಥ ವಿಶ್ವಶ್ರೇಷ್ಠ ಶ್ರೀ ಮಠ ಭಾಲ್ಕಿಯ ಸಂಸ್ಥಾನ ಹಿರೇಮಠ ಎಂದರೆ ಖಂಡಿತವಾಗಿಯೂ ತಪ್ಪಾಗಲಾರದು.
ಬೀದರ ಜಿಲ್ಲೆಯ ಭಾಲ್ಕಿ ಹಿರೇಮಠದ ಲಿಂಗೈಕ್ಯ ಶಿವಯೋಗಿ, ದಾರ್ಶನಿಕ ಮತ್ತು ಶಿಕ್ಷಣಪ್ರೇಮಿ. ನಿಜಾಮರ ಆಳ್ವಿಕೆಯಲ್ಲಿ ಕನ್ನಡ ಭಾಷೆ, ಶಿಕ್ಷಣ ಮತ್ತು ದಲಿತರ ಏಳಿಗೆಗಾಗಿ ಶ್ರಮಿಸಿದ ಶ್ರೀಗಳು, “ನಡೆದಾಡುವ ದೇವರು” ಎಂದೇ ಪ್ರಸಿದ್ಧರಾಗಿದ್ದವರು. ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಸ್ಥಾಪಕರು, 109 ವರ್ಷಗಳ ಕಾಲ ಸಮಾಜ ಸೇವೆಗೆ ತಮ್ಮನ್ನು ತಾವು ತೊಡಗಿಸಿಕೊಂಡು ನಾಡಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಟೊಂಕ ಕಟ್ಟಿಕೊಂಡು ಕೆಲಸ ಮಾಡಿದ ಶ್ರೇಯಸ್ಸು ಪೂಜ್ಯ ಶ್ರೀಗಳಿಗೆ ಸಲ್ಲುತ್ತದೆ.
ಹಾಗಾಗಿಯೇ ಲಿಂಗಾಯತ ಧರ್ಮಕ್ರಾಂತಿಯ ಧೀರಯೋಗಿ, ವೀರ ಸನ್ಯಾಸಿ, ಸರ್ವಜನಾಂಗದ ಸಾಮಾಜಿಕ ಸುಧಾರಕರಾದ ಪರಮ ಪೂಜ್ಯ ಶ್ರೀ ಡಾ. ಚನ್ನಬಸವ ಪಟ್ಟದ್ದೇವರಿಗೆ
ಅವರ ಜೀವಮಾನ ಸಾಧನೆ ಗುರುತಿಸಿ ಕರ್ನಾಟಕ ಸರಕಾರವು ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಬೇಕು.
ಅಂದಿನ ನಿಜಾಮ್ ಆಳ್ವಿಕೆಯ ಕಠಿಣ ನಿಯಮಗಳ ನಡುವೆಯೂ ಕನ್ನಡ ಶಾಲೆಗಳನ್ನು ತೆರೆದು ಶಿಕ್ಷಣ ನೀಡಿದ್ದಾರೆ. ದಲಿತರಿಗೆ ಲಿಂಗದೀಕ್ಷೆ ನೀಡಿ, ಮಠದಲ್ಲಿ ಆಶ್ರಯ ನೀಡುವ ಮೂಲಕ ಸಾಮಾಜಿಕ ಸಮಾನತೆಗಾಗಿ ಹೋರಾಡಿದ್ದಾರೆ. ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪದ ಸ್ಥಾಪನೆ ಮಾಡಿ, ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ ಸಾವಿರಾರು ಜನಪರ, ರೈತಪರ, ಕನ್ನಡಪರ ಕಾರ್ಯಗಳನ್ನು ಸದ್ದುಗದ್ದಲವಿಲ್ಲದೆ ಮಾಡಿರುತ್ತಾರೆ.
ಇದಲ್ಲದೆ ಡಾ. ಚನ್ನಬಸವ ಪಟ್ಟದೇವರಿಗೆ ಕನ್ನಡ ಕೇವಲ ಭಾಷೆಯಾಗಿ ಕಾಣಲಿಲ್ಲ ಬದಲಿಗೆ ಕನ್ನಡವೆಂದರೆ ಜನತೆ ಶತಮಾನಗಳಿಂದ ಆಚರಿಸಿಕೊಂಡು ಬಂದ ಸಂಪ್ರದಾಯ, ನಂಬಿಕೆ, ಸಂಸ್ಕೃತಿ, ಒಟ್ಟು ಜೀವನ ವಿಧಾನ. ಆದ್ದರಿಂದ ಕನ್ನಡವೆಂದರೆ ಜನತೆಯ ಬದುಕು ಎಂದು ಭಾವಿಸಿ ಕನ್ನಡದ ಉಳಿವೆಂದರೆ ಅದು ಕನ್ನಡಿಗರ ಉಳಿವೆಂದು ತಿಳಿದಿದ್ದರು. ಆ ಕಾರಣಕ್ಕಾಗಿಯೇ ಹ್ಶೆದ್ರಾಬಾದ ಕರ್ನಾಟಕ ವಿಮೋಚನೆ, ಕನ್ನಡ ಏಕೀಕರಣ, ಕರ್ನಾಟಕದ ಪುನರ್ ನಾಮಕರಣಕ್ಕಾಗಿ ಹೋರಾಟ ಮಾಡಿ, ನೆಲ,ಜಲ, ಕನ್ನಡ ಭಾಷಾಭಿಮಾನವನ್ನು ಜನಸಾಮಾನ್ಯರ ಮನದಾಳದಲ್ಲಿ ಬಿತ್ತುವ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡಿರುತ್ತಾರೆ.
ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಹಾಕಿಕೊಂಡು ಕೆಲಸಗಳು ಮಾಡಿದ್ದಾರೆ. ಹೆಚ್ಚು ಪ್ರಚಾರದ ಅಬ್ಬರವಿಲ್ಲದೇ ಹಲವಾರು ಜನಪರ ರಚನಾತ್ಮಕ ಕಾರ್ಯಗಳನ್ನು ಕೈಗೊಂಡು ಕಾರ್ಯರೂಪಕ್ಕೆ ತಂದರೂ “ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲವೆಂಬತೆ” ಬದುಕಿದ ಶ್ರೀಗಳು ಜೀವನದುದ್ದಕ್ಕೂ “ಮುಗಿದ ಕೈ ಬಾಗಿದ ತಲೆ” ಅವರದ್ದು. ಇಡೀ ಬದುಕಿನ ಒಂದೊಂದು ಹೆಜ್ಜೆಕೂಡ ಇಂದಿನ ಸಮಾಜಕ್ಕೆ ಆದರ್ಶ ಹಾಗೂ ಅನುಕರಣೀಯವಾಗಿದೆ. ಅಂತೆಯೇ ನಾಡಿನಾದ್ಯಂತ ಮನೆ ಮನೆಗೆ, ಊರು ಊರಿಗೆ ತೆರಳಿ ಬಸವ ತತ್ವ ಪ್ರಚಾರ ಮಾಡಿದವರಲ್ಲಿ ಮೊದಲಿಗರಾಗಿದ್ದಾರೆ.
ವಿಶ್ವ ಸಮಾನತೆಯ ಸಂದೇಶ ಸಾರುವ ಬಸವತತ್ವವನ್ನು ತಮ್ಮ ಉಸಿರಾಗಿಸಿಕೊಂಡ ಶ್ರೀಗಳು ಅದರಲ್ಲಿ ಅಪಾರ ಪಾಂಡಿತ್ಯವನ್ನು ಸಾಧಿಸಿದ್ದಲ್ಲದೆ ತಮ್ಮ ಇಡೀ ಜೀವನವನ್ನು ಅದರ ಪ್ರಚಾರಕ್ಕಾಗಿ ಸವೆಸಿದ್ದಾರೆ. ಅನಾಥ, ನಿರ್ಗತಿಕ, ವೃದ್ಧರ, ಅಬಲೆಯರ ಏಳಿಗೆಗಾಗಿ ಶ್ರಮಿಸಿದ್ದಾರೆ. ಸರ್ವ ಜನಾಂಗದವರ ಪ್ರೀತಿಯ ಪಟ್ಟದ್ದೇವರೆಂದೇ ಖ್ಯಾತಿ ಪಡೆದಿದ್ದಾರೆ. ಇವರ ಜೀವನ ಮತ್ತು ಸೇವೆ ಇಂದಿಗೂ ಈ ಸಮಾಜಕ್ಕೆ ದಾರಿದೀಪವಾಗಿದೆ.
ಆದ್ದರಿಂದ ಇವರ ನಿಸ್ವಾರ್ಥ ಸೇವೆಯ ಸಾಧನೆಯನ್ನು ಪರಿಗಣಿಸಿ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಿ ಕರ್ನಾಟಕ ಸರಕಾರವು ಗೌರವಿಸಬೇಕಾಗಿದೆ.
