ಬೆಳಗಾವಿ:
‘ಬಸವ ಜಯಂತಿ ಮಹೋತ್ಸವ -2026ರ ಮುಖ್ಯ ಮೆರವಣಿಗೆಯನ್ನು ಏಪ್ರಿಲ್ 20ರ ಬದಲಿಗೆ ಏಪ್ರಿಲ್ 26ರಂದು ನಡೆಸಲಾಗುವುದು’ ಎಂದು ಶಾಸಕರಾದ ಲಕ್ಷ್ಮಣ ಸವದಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ರವಿವಾರ ನಡೆದ ಬಸವಪರ ಸಂಘಟನೆಗಳ ಒಕ್ಕೂಟದ ಪೂರ್ವಭಾವಿ ಸಭೆಯ ನಂತರ, ಮಾಧ್ಯಮದೊಂದಿಗೆ ಅವರು ಮಾತನಾಡಿದರು.
‘ಏಪ್ರಿಲ್ 19ರಂದು ಬೆಳಗಾವಿಯಲ್ಲಿ ಬೈಕ್ ರ್ಯಾಲಿ ನಡೆಸಲಾಗುವುದು. 20ರಂದು ಗ್ರಾಮೀಣ ಭಾಗಗಳಲ್ಲಿ ಜಯಂತಿಯ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
26ರಂದು ಸಂಜೆ 4ಕ್ಕೆ ಬೆಳಗಾವಿಯಲ್ಲಿ ಮುಖ್ಯ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ 50 ಸಾವಿರಕ್ಕೂ ಅಧಿಕ ಬಸವಭಕ್ತರು, ಬಸವಾಭಿಮಾನಿಗಳು ಭಾಗವಹಿಸುವ ನಿರೀಕ್ಷೆ ಇದೆ’ಎಂದರು.
ಕೆಎಲ್ಇ ಸಂಸ್ಥೆಯ ಗೌರವ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ‘ರಾಣಿ ಚನ್ನಮ್ಮನ ವೃತ್ತದಿಂದ ಮುಖ್ಯ ಮೆರವಣಿಗೆ ಆರಂಭಗೊಂಡು, ಲಿಂಗರಾಜ ಕಾಲೇಜು ಮೈದಾನದಲ್ಲಿ ಅಂತ್ಯಗೊಳ್ಳಲಿದೆ. ಇದರಲ್ಲಿ ಬಸವಣ್ಣನವರ ತತ್ವ, ಸಂದೇಶಗಳನ್ನು ಪ್ರಚುರಪಡಿಸುತ್ತೇವೆ. ಮುಖ್ಯವಾಗಿ ಡಾಲ್ಬಿ ಬಳಸದಿರಲು ತೀರ್ಮಾನ ಕೈಕೊಂಡಿದ್ದೇವೆ. ಮೆರವಣಿಗೆ ಮುಗಿದ ನಂತರ ಮಹಾಪ್ರಸಾದ ವ್ಯವಸ್ಥೆ ಇರಲಿದೆ’ ಎಂದು ಹೇಳಿದರು.
ಬಸವ ಜಯಂತಿ ಮಹೋತ್ಸವ ಸಮಿತಿ ಸಂಚಾಲಕ ಬಸವರಾಜ ರೊಟ್ಟಿ, ಬಸವಪರ ಸಂಘಟನೆಗಳ ಪ್ರಮುಖರಾದ ಅಶೋಕ ಮಳಗಲಿ, ಶಂಕರ ಗುಡಾಸ, ಈರಣ್ಣ ದೇಯಣ್ಣವರ, ಆನಂದ ಗುಡಾಸ, ಮನೋಹರ ಪುಡಕಲಕಟ್ಟೆ, ಗುಂಡು ಪಾಟೀಲ, ವಿ.ಕೆ .ಪಾಟೀಲ ಮತ್ತಿತರರು ಇದ್ದರು.
ಸಭೆಯಲ್ಲಿ ಸಂಸದರಾದ ಜಗದೀಶ ಶೆಟ್ಟರ, ಶಾಸಕರಾದ ಗಣೇಶ ಹುಕ್ಕೇರಿ, ಬಾಬಾಸಾಹೇಬ ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಮಾಜಿ ಸಚಿವರಾದ ಎ.ಬಿ.ಪಾಟೀಲ, ಶಶಿಕಾಂತ ನಾಯಕ, ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ, ಮಲ್ಲಣ್ಣ ಯಾದವಾಡ, ವಿಜಯ ಮೆಟಗುಡ್ಡ, ಶಂಕರ ಮಾಡಲಗಿ, ಪಂಪನಗೌಡ ದ್ಮಾಮನಗೌಡ ಭಾಗವಹಿಸಿದ್ದರು.
