ದಾವಣಗೆರೆ
ಕನ್ನಡ ನಾಡಿನ ಇತಿಹಾಸದಲ್ಲಿ ೧೨ನೇಯ ಶತಮಾನದ ಒಂದು ವಿಶಿಷ್ಟ ಕಾಲಘಟ್ಟ. ಅಜ್ಞಾನ, ಅಂದಶ್ರದ್ಧೆ, ಮೂಢನಂಬಿಕೆ, ಕಂದಾಚಾರ, ವರ್ಣಬೇಧ, ಜಾತಿಬೇಧ, ಲಿಂಗ ತಾರತಮ್ಯ, ಪೂಜೆಯ ಹೆಸರಿನಲ್ಲಿ ಜನ ಸಾಮಾನ್ಯರ ಸುಲಿಗೆ, ದೇವರ ಭಯ ಹುಟ್ಟಿಸಿ ಜನರ ಶೋಷಣೆ. ದೇವರಿಗೆ ಪ್ರಾಣಿ ಬಲಿಕೊಡುವುದು ಇಂತಹ ಮೌಡ್ಯಾಚರಣೆಗಳಿಂದ ಜನರ ಬದುಕು ನರಕ ಸದೃಶ್ಯವಾಗಿತ್ತು.
ಎತ್ತೆತ್ತ ನೋಡಿದರೂ ಅಂದಶ್ರದ್ಧೆಯ ಗಾಢಾಂದಕಾರ ಕವಿದಿತ್ತು. ಅಂತಹ ವಿಷಮ ಪರಿಸ್ಥಿತಿಯಲ್ಲಿ ಹುಣ್ಣಿಮೆಯ ಪೂರ್ಣಚಂದ್ರನ ಬೆಳಕಿನಂತೆ ಅಜ್ಞಾನದ ಕತ್ತಲೆಯನ್ನು ಹೊಡೆದೋಡಿಸುವ ಜ್ಞಾನ ಸೂರ್ಯನಂತೆ ಈ ಭುವನದ ಭಾಗ್ಯವಾಗಿ ಬಂದು ಬೆಳಕು ಚೆಲ್ಲಿದವರು ಜಗದ ಜ್ಯೋತಿ ಬಸವೇಶ್ವರರು. ಸಾವಿರಾರು ವರ್ಷಗಳಿಂದ ಆಳವಾಗಿ ಬೇರುಬಿಟ್ಟಿದ್ದ ಸಂಪ್ರದಾಯ ಕಂದಾಚಾರಗಳೆಂಬ ಹೆಮ್ಮರಕ್ಕೆ ಕೊಡಲಿ ಪೆಟ್ಟು ಹಾಕಿದವರು ಅಪ್ಪ ಬಸವಣ್ಣನವರು.
ಈ ಆಧುನಿಕ ತಂತ್ರಜ್ಞಾನ ಯುಗದಲ್ಲಿಯೂ ಸಹ ಮೂಢನಂಬಿಕೆಗಳ ಪಿಡುಗು ಸಾಂಕ್ರಾಮಿಕ ರೋಗದಂತೆ ಸರ್ವವ್ಯಾಪಿಯಾಗಿದೆ. ಇಂದು ಅವಿದ್ಯಾವಂತರಿಗಿಂತ ವಿದ್ಯಾವಂತರೆ ಮೂಢನಂಬಿಕೆಗಳಿಗೆ ಬಲಿಪಶುವಾಗುತ್ತಿದ್ದಾರೆ. ಯಾವುದು ಪ್ರಕೃತಿ ನಿಯಮಗಳಿಗೆ ಬದ್ಧವಾಗಿರುವುದಿಲ್ಲವೋ ಯಾವುದಕ್ಕೆ ಕಾರಣ ಪುರಾವೆಗಳಿರುವುದಿಲ್ಲವೋ ಅಂತಹ ಸಂಗತಿಗಳೇ ಮೂಢನಂಬಿಕೆಗಳು. ದುರ್ಬಲ ಮನಸ್ಸಿನವರು ಮೌಡ್ಯತೆಗೆ ವಶವಾಗುತ್ತಾರೆ. ವೈಜ್ಞಾನಿಕವಾಗಿ ಎಲ್ಲಾ ರಂಗದಲ್ಲಿಯೂ ಮುಂದಿರುವ ನಾವು ಯಾವುದನ್ನು ವಿವೇಚಿಸದೆ ನಂಬಿ ಬಿಡುತ್ತೇವೆ. ಅದರಲ್ಲಿಯೂ ಇಂದಿನ ಸುಶಿಕ್ಷಿತ ಮಹಿಳೆಯರು ತನ್ನ ಕುಟುಂಬಕ್ಕೆ ಎನೂ ತೊಂದರೆಯಾಗಬಾರದೆಂದು ಯಾವುದೇ ಸಂಗತಿಗಳನ್ನು ವಿಮರ್ಶಿಸದೇ ವೈಜ್ಞಾನಿಕವಾಗಿ ಯೋಚಿಸದೇ ಸಮಾಜದಲ್ಲಿ ಪ್ರಚಲಿತವಿರುವ ಮೂಢನಂಬಿಕೆಗಳಿಗೆ ವಶವಾಗುತ್ತಾರೆ. ನಂಬಿಕೆ ಬದುಕಿಗೆ ಆಧಾರವಾದರೆ ಮೂಢನಂಬಿಕೆ ಅಭಿವೃದ್ದಿಗೆ ಮಾರಕ.
ಬಸವಣ್ಣನವರು ಮನೆಯಿಂದಲೇ ಕಂದಾಚಾರದ ವಿರುದ್ದ ಕ್ರಾಂತಿ ಕಹಳೆಯನ್ನೂದಿದರು. ಬಸವಣ್ಣನವರು ಎಂಟು ವರ್ಷದ ಬಾಲಕನಿದ್ದಾಗ ಅವರಿಗೆ ಉಪನಯನ ಮಾಡಲು ಮನೆಯಲ್ಲಿ ಹಮ್ಮಿಕೊಂಡಾಗ, ತನಗಿಂತ ದೊಡ್ಡವಳು ಅಕ್ಕನಾಗಮ್ಮ ಅವಳಿಗೆ ಉಪನಯನ ಮೊದಲು ಮಾಡಿರಿ ಎಂದಾಗ, ಅಲ್ಲಿ ಸೇರಿದ್ದ ಹಿರಿಯರೆಲ್ಲರೂ ನಾಗಮ್ಮ ಹೆಣ್ಣುಮಗಳು ಹೆಣ್ಣುಮಕ್ಕಳು ಶೂದ್ರರು ಅವರಿಗೆ ಜನಿವಾರ ಹಾಕಲು ಬರುವುದಿಲ್ಲವೆಂದು ಪುರೋಹಿತರು ಹೇಳಿದಾಗ, ಹಾಗಾದರೆ ನನ್ನ ತಾಯಿಯು ಸಹ ಶೂದ್ರಳೇ, ಶೂದ್ರಳ ಹೊಟ್ಟೆಯಲ್ಲಿ ಹುಟ್ಟಿದ ನಾನ್ಯಾರು? ಎಂದು ಟೀಕಿಸುತ್ತಾ ಜನಿವಾರವನ್ನು ಕಿತ್ತೆಸೆದು ಮನೆ ಬಿಟ್ಟು ಅಕ್ಕನ ಜೊತೆ ಕೂಡಲಸಂಗಮಕ್ಕೆ ಹೋಗುತ್ತಾರೆ. ಮನೆಯಿಂದಲೇ ಸ್ತ್ರೀ ಸ್ವಾತಂತ್ರ್ಯ ಮತ್ತು ಸಮಾನತೆಗಾಗಿ ಚಳುವಳಿ ಹೂಡುತ್ತಾರೆ.
ನಾವುಗಳು ಅನೇಕ ಪಾಪ ಕರ್ಮಗಳನ್ನು ಮಾಡಿ ಗಂಗೆಯಲ್ಲಿ ಸ್ನಾನ ಮಾಡಿದರೆ ಪಾಪಗಳು ಪರಿಹಾರವಾಗುತ್ತವಯೇ? ಬಹಳಷ್ಟು ಜನ ನೀರ ಕಂಡಲ್ಲಿ ಮುಳುಗುವುದು ಮರ ಕಂಡಲ್ಲಿ ಸುತ್ತುವುದು ಮಾಡುತ್ತಾರೆ. ಬೇಸಿಗೆ ಬಂತೆಂದರೆ ಜಲವು ಬತ್ತಿ ಹೋಗುತ್ತದೆ. ಮರವು ಬಾಡಿ ಒಣಗಿ ಹೋಗುತ್ತದೆ. ಆದ್ದರಿಂದ ಅವ್ಯಾವವು ದೇವರುಗಳಲ್ಲ. ನಾವು ತಪ್ಪು ಮಾಡಿದರೆ ಪಶ್ಚಾತಾಪದ ಕಣ್ಣೀರಿನಿಂದ ತೊಳೆದುಕೊಂಡರೆ ನಾವಂದುಕೊಂಡ ಪಾಪ ಪರಿಹಾರವಾಗುತ್ತದೆ.
ಒಬ್ಬರ ಮನವನ್ನು ನೋಯಿಸದೇ ಒಬ್ಬರಿಗೆ ಮೋಸ ವಂಚನೆ ಅನ್ಯಾಯ ಮಾಡದೇ ಇದ್ದಾಗ ಮಾತ್ರ ಪರಮ ಪಾವನರಾಗಲು ಸಾಧ್ಯ ಎಂದು ಬಸವಣ್ಣನವರು ಹೇಳಿದ್ದಾರೆ. ಮೀಪರೆ ಪೋಪರೆ ಪಾಪವದೇನು ಕೆಸರೆ ಎಂದು ಶರಣರು ಕೇಳಿದ್ದಾರೆ.

ನಮ್ಮ ಭಕ್ತಿ ಹೇಗಿದೆ ಅಂದರೆ ಪ್ರತಿವರ್ಷ ಜನರು ಲಕ್ಷಾಂತರ ಲೀಟರ್ ಹಾಲನ್ನು ಹುತ್ತಕ್ಕೆ ನಾಗರಕಲ್ಲಿಗೆ ಹಾಕುತ್ತಾರೆ. ಹಾಲೇನು ಹಾವಿನ ಆಹಾರ ಅಲ್ಲ. ಅದಕ್ಕೆ ಬಸವಣ್ಣನವರು ಹೀಗೆ ಹೇಳಿದ್ದಾರೆ. ಕಲ್ಲನಾಗರ ಕಂಡರೆ ಹಾಲನೆರೆ ಎಂಬರು ದಿಟದ ನಾಗರ ಕಂಡರೆ ಕೊಲ್ಲು ಕೊಲ್ಲು ಎಂಬರು. ಉಣ್ಣುವ ಜಂಗಮ ಬಂದರೆ ಮುಂದೆ ನಡೆ ಎಂಬರು ಉಣಬಾರದ ಲಿಂಗಕ್ಕೆ ಬೋನವ ಹಿಡಿಯೆಂಬರು.
ದೇಶದಲ್ಲಿ ಎಷ್ಟೋ ಬಡಮಕ್ಕಳು ಹಾಲು ತುಪ್ಪವಿಲ್ಲದೇ ಅಪೌಷ್ಟಿಕತೆಯಿಂದ ಬಳಲುತ್ತಿರುತ್ತಾರೆ. ಕಲ್ಲಿಗೆ ಹಾಕದೇ ಅಂತಹ ಮಕ್ಕಳಿಗಾದರೂ ಕೊಟ್ಟರೆ ಅವರು ಹಾಲು ಕುಡಿದು ಸಶಕ್ತರಾಗುತ್ತಾರೆ. ಎಲ್ಲಿ ಅಗತ್ಯ ಅವಶ್ಯಕತೆ ಇದೆಯೋ ಅಲ್ಲಿಗೆ ಕೊಡುವುದನ್ನು ಬಿಟ್ಟು ದೇವರು ದಿಂಡರುಗಳಿಗೆ ಬೆಳ್ಳಿ ಬಂಗಾರ ವಜ್ರ ವೈಡೂರ್ಯಗಳನ್ನು ಒಯ್ದು ಕೊಡುತ್ತೇವೆ. ಕೊಡುವ ದಾತನಿಗೆ ಕೊಡುವುದರಿಂದ ಏನು ಪ್ರಯೋಜನ, ಓದುವ ಬಡಮಕ್ಕಳಿಗಾದರೂ ಕೊಟ್ಟರೆ ಅವರು ಓದಿ ವಿದ್ಯಾವಂತರಾಗಿ ನಮ್ಮ ಸಮಾಜದ ದೇಶದ ಆಸ್ತಿಯಾಗುತ್ತಾರೆ.
ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟ ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರು ಎಂದು ಬಸವಣ್ಣನವರು ಹೇಳಿ ನಾವು ಸತ್ಕರ್ಮಗಳನ್ನು ಮಾಡಿ ಸನ್ಮಾರ್ಗದಲ್ಲಿ ನಡೆದು ನಾಲ್ಕು ಜನರ ಬಾಯಲ್ಲಿ ಒಳ್ಳೆಯವರು ಅನ್ನಿಸಿಕೊಂಡರೆ ಪರಮಾತ್ಮನ ಕಡೆ ಹೋಗುತ್ತೇವೆ. ನಾಲ್ಕು ಜನರಿಗೆ ಕೆಡಕು ಮಾಡಿ ವಂಚನೆ ಮಾಡಿದರೆ ನರಕಕ್ಕೆ ಹೋಗುತ್ತೇವೆ. ಸ್ವರ್ಗ ನರಕಗಳು ಎಲ್ಲಾ ಇಲ್ಲೇ ಇವೆ ಎಂದು ನುಡಿದು ನಡೆದು ತೋರಿಸಿದ್ದಾರೆ.
ಎನಿಸುಕಾಲ ಕಲ್ಲು ನಿರೋಳಗಿರ್ದು ನೆನೆದು ಮೃದುವಾಗಬಲ್ಲುದೇ ಅಂದರೆ ನಾವು ಭಕ್ತಿ ಭಾವ ಇಲ್ಲದೇ ಎಷ್ಟು ದಿನ ಪೂಜಿಸಿದರೂ ಫಲವಿಲ್ಲ ಹುತ್ತವ ಬಡಿದೊಡೆ ಹಾವು ಸಾಯಬಲ್ಲುದೇ? ಅಘೋರ ತಪವ ಮಾಡಿದೊಡೇನು ಅಂತರಂಗ ಆತ್ಮ ಶುದ್ಧವಿಲ್ಲದೇ? ಈ ದೇಹ ಅನ್ನುವ ಹುತ್ತಕ್ಕೆ ಜಪ, ತಪ, ಉಪವಾಸ ಪಾದಯಾತ್ರೆ ಮಾಡುವುದರಿಂದ ಒಳಗಿನ ಹಾವು ಸಾಯುವುದಿಲ್ಲ. ಸಹನೆ ಸದಾಚಾರ ಸದ್ಭಕ್ತಿ ಸದ್ಭಾವನೆಗಳಿಂದ ಅಂತರಂಗ ಶುದ್ಧಿಯಾಗುವುದು ಎಂದು ಅಣ್ಣನವರು ಹೇಳಿದ್ದಾರೆ.
ಈ ಜಗತ್ತಿನಲ್ಲಿ ಸೃಷ್ಠಿಯಾದ ಸಕಲಜೀವಿಗಳು ಭಗವಂತನ ಸಂತಾನ ಯಾವ ಜೀವಿಗೆ ನೋವಾದರೂ ದಯಾನಿದಿ ದೇವರು ಸಹಿಸಿಕೊಳ್ಳುವುದಿಲ್ಲ. ದೇವರ ಹೆಸರಿನಲ್ಲಿ ಬಲಿಕೊಡುವುದನ್ನು ಖಂಡಿಸಿದ್ದಾರೆ. ಕೊಲ್ಲೆನಯ್ಯಾ ಪ್ರಾಣಿಗಳ ಮೆಲ್ಲೆನಯ್ಯಾ ಬಾಯಿಚ್ಚೆಗೆ ಎಂದ ಬಸವಣ್ಣ ದಯವಿಲ್ಲದಾ ಧರ್ಮದಾವುದಯ್ಯ ಸಕಲ ಪ್ರಾಣಿಗಳಲ್ಲಿ ದಯೆ ಅಂತಕರುಣೆ ಇರಬೇಕೆಂದಿದ್ದಾರೆ. ಶರಣರ ದೃಷ್ಟಿಯಲ್ಲಿ ಒಳ್ಳೆಯ ಕಾಲ ಕೆಟ್ಟಕಾಲ ಅನ್ನುವುದಿಲ್ಲ. ಎಲ್ಲ ಕಾಲವೂ ಒಳ್ಳೆಯವೇ. ಎಮ್ಮವರು ಬೆಸಗೊಂಡರೆ ಶುಭಲಗ್ನವೇನ್ನಿರಯ್ಯಾ ನಾಳಿನ ದಿನಕಿಂದಿನ ದಿನವೇ ಲೇಸೆಂದು ಹೇಳಿದ್ದಾರೆ. ನಾಳೆ ಅನ್ನುವರು ಅಶುಭ ಇಂದೇ ಮಾಡುವುದು ಶುಭ ಗುಳಿಕ ಕಾಲ ನೋಡಿ ಪ್ರಯಾಣ ಮಾಡುತ್ತಾರಲ್ಲಾ ಅವರಿಗೆ ಏನು ಅಪಘಾತ ಅವಘಡ ಅಪಮ್ರತ್ಯುಗಳು ಸಂಭವಿಸುವುದಿಲ್ಲವೇ?
ಎಲ್ಲಾ ಹೇಳಿಸಿ ಕೇಳಿಸಿ ಜಾತಕ ನೋಡಿ ಮದುವೆ ಮಾಡಿರುತ್ತಾರೆ. ೨೪ ಗುಣ ನೋಡಿ ಹುಡುಗಿ ತಂದಿರುತ್ತಾರೆ. ಆದರೆ ಸೊಸೆಯಾದವಳು ೨೪ ತಿಂಗಳು ಜೊತೆಯಲ್ಲಿರುವುದಿಲ್ಲಾ. ಎಲ್ಲಾ ನೋಡಿ ಮಾಡಿದರೂ ವಿಚ್ಛೇದನದಂತ ಪ್ರಕರಣಗಳು ಜಾಸ್ತಿ ಆಗ್ತಾ ಇವೆ. ಇದಕ್ಕೆ ಜಾತಕ ಜ್ಯೋತಿಷ್ಯಕ್ಕಿಂತ ಹೊಂದಾಣಿಕೆ ಅನ್ನುವುದು ಬಹಳ ಮುಖ್ಯ.
ಮಡಿಕೆ ದೈವ ಮರದೈವ ಬೀದಿಯ ಕಲ್ಲು ದೈವ ದೈವ ದೈವವೆಂದು ಕಾಲಿಡಲಿಂಬಿಲ್ಲ ಕಂಡ ಕಂಡದ್ದನ್ನೆಲ್ಲಾ ಪೂಜಿಸುವ ಬಹು ದೇವೊಪಾಸನೆಯನ್ನು ಖಂಡ ತುಂಡವಾಗಿ ಖಂಡಿಸಿ ದೇವನೊಬ್ಬ ನಾಮ ಹಲವು ಎನ್ನುವ ಏಕ ದೇವೋಪಾಸನೆಯನ್ನು ಮಾಡಲು ತಿಳಿಸಿದ್ದಾರೆ. ಕೆಲವು ಜನ ತಮ್ಮಲ್ಲಿಯೇ ನ್ಯೂನತೆಗಳನ್ನು ಇಟ್ಟುಕೊಂಡು ಇನ್ನೊಬ್ಬರ ನ್ಯೂನತೆಗಳನ್ನು ಎತ್ತಿ ತೋರಿಸುತ್ತಿರುತ್ತಾರೆ. ಅಂತವರು ಹಾವಾಡಿಗನು ಮೂಕೊರತಿಯು ತನ್ನ ಮಗನ ಮದುವೆಗೆ ಶಕುನವ ನೋಡ ಹೋಗುವಾಗ ಇದಿರಲೊಬ್ಬ ಮೂಕೊರತಿ ಹಾವಾಡಿಗನ ಕಂಡು ಶಕುನ ಹೊಲ್ಲೆಂಬ ಚತುರನ ನೋಡಾ ಎಂಬ ಬಸವಣ್ನನವರ ವಚನ ಸ್ವತಃ ತಾವೇ ಹಾವಾಡಿಗರು ತನ್ನ ಪತ್ನಿ ಮೂರೊರಪಿ ಇದ್ದರೂ ಎದುರಿಗೆ ಇರುವವರನ್ನು ಅಪಶಕುನ ಎಂದು ಭಾವಿಸುವವರಿಗೆ ಅವರು ನಮ್ಮ ಬಗ್ಗೆ ಹೀಗೆ ವರ್ತಿಸಬಹುದು ಎಂಬುದನ್ನು ಮರೆಯುವವರಿಗೆ ವಿಡಂಬನೆ ಮಾಡಿದ್ದಾರೆ.
ಕೆಲವೊಂದು ದೇವಸ್ಥಾನಗಳಿಗೆ ಗಂಡ ಹೆಂಡತಿ ಒಟ್ಟಿಗೆ ಹೋಗುವುದಿಲ್ಲವಂತೆ. ಹೋದರೆ ಒಳ್ಳೆಯದಾಗುವುದಿಲ್ಲ ಅನ್ನುವ ಮೂಡನಂಬಿಕೆ. ಹಿಂದಿನ ಕಾಲದಲ್ಲಿ ಈಗಿನ ಹಾಗೆ ಸಾರಿಗೆ ವ್ಯವಸ್ಥೆ ಇರಲಿಲ್ಲ. ಅದಕ್ಕೋಸ್ಕರ ಗಂಡ ಒಂದು ಸಾರೆ, ಹೆಂಡತಿ ಒಂದು ಸಾರೆ ಹೋಗಿರಬಹುದು. ಅದೇ ಒಂದು ಸಂಪ್ರದಾಯ ಆಗಿ ಹೋಯಿತು. ಸತಿಪತಿಗಳಲ್ಲೊಂದಾದ ಭಕ್ತಿ ಹಿತವಾಗಿದ್ದುದು ಶಿವಂಗೆ ಸತಿಪತಿಗಳಲ್ಲೊಂದಾಗದ ಭಕ್ತಿ ಅಮೃತದೊಳು ವಿಷವ ಬೆರೆಸಿದಂತೆ ಎಂದು ಹೇಳಿದ್ದಾರೆ. ಸತಿಪತಿಗಳಿಬ್ಬರು ಒಂದಾಗಿ ಹೋದರೂ ಏನೂ ಆಗುವುದಿಲ್ಲ. ಜ್ಞಾನದ ಬಲದಿಂದ ಅಜ್ಞಾನದ ಕೇಡನೋಡಯ್ಯ ಎನ್ನುವಂತೆ ಜ್ಞಾನವನ್ನು ಬೆಳಿಸಿಕೊಂಡು ಬದುಕನ್ನು ಸುಂದರ ಮಾಡಿಕೊಳ್ಳಬೇಕು.
ಹೀಗೆ ಹೆಜ್ಜೆ ಹೆಜ್ಜೆಗೂ ನಮ್ಮನ್ನು ಎಚ್ಚರಿಸಿ ಅಜ್ಞಾನ ಅಂಧಶ್ರದ್ಧೆ ಮೂಡನಂಬಿಕೆಗಳನ್ನು ಬಿಟ್ಟು ವೈಜ್ಞಾನಿಕ ವೈಚಾರಿಕೆ ವಿಚಾರಗಳನ್ನು ಅಳವಡಿಸಿಕೊಳ್ಳಲು ವಚನಗಳ ಮೂಲಕ ಹೇಳಿದ್ದಾರೆ. ಜಗತ್ತಿನ ಆಧ್ಯಾತ್ಮದ ಹಸಿವನ್ನು ನೀಗಿಸಲು ವಚನ ಸಾಹಿತ್ಯ ಎಂಬ ಬುತ್ತಿಯನ್ನು ಕೊಟ್ಟು ಹೋಗಿದ್ದಾರೆ. ವಚನಗಳು ನಮಗೆ ದಾರಿ ತೋರಿಸುವ ನಂದಾದೀವಿಗೆಗಳು ವಚನಗಳನ್ನು ಓದಿ ಅಳವಡಿಸಿಕೊಂಡು ಮೌಡ್ಯದ ಕತ್ತಲೆಯಿಂದ ವೈಚಾರಿಕತೆಯ ಬೆಳಕಿನಡೆಗೆ ಸಾಗೋಣ.
