ಹೋರಾಟದ ರೂಪುರೇಷೆ ನಿರ್ಧರಿಸಲು ಜೂನ್ 14 ಬಸವ ಸಂಘಟನೆಗಳ ಸಭೆ
ಬೀದರ್
ಕನ್ನೇರಿ ಸ್ವಾಮಿ ನೇತೃತ್ವದ ಜೂನ್ 28 ಸಮಾವೇಶಕ್ಕೆ ಅನುಮತಿ ನೀಡಲು ತಾಲ್ಲೂಕು ಆಡಳಿತ ನಿರಾಕರಿಸಿದೆ.
ಇದರಿಂದ ಹಿಂದೂ ಸಮಾವೇಶ ನಡೆಯುವುದರ ಬಗ್ಗೆ ಅನುಮಾನ ಹುಟ್ಟಿದ್ದರೂ ಜೂನ್ 28ರ ವರಗೆ ಹೋರಾಟ ಮುಂದುವರೆಸುವುದಾಗಿ ಬಸವ ಸಂಘಟನೆಗಳು ಸೂಚಿಸಿವೆ.
ಹೋರಾಟದ ರೂಪುರೇಷೆ ನಿರ್ಧರಿಸಲು ಬಸವ ಸಂಘಟನೆಗಳು ಜೂನ್ 14 ಬಸವ ಕಲ್ಯಾಣದಲ್ಲಿ ಕರೆದಿರುವ ಸಭೆ ನಿಗದಿಯಾದಂತೆ ನಡೆಯಲಿದೆ ಎಂದು ಪ್ರಮುಖರು ತಿಳಿಸಿದ್ದಾರೆ.
“ಈ ಹೋರಾಟ ಇಲ್ಲಿಗೆ ನಿಲ್ಲಿಸಲ್ಲ. 28ರವರೆಗೂ ಹೋರಾಟ ಮುಂದುವರೆಯಲಿದೆ,” ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಬೀದರ್ ಜಿಲ್ಲಾಧ್ಯಕ್ಷ ಬಸವರಾಜ ಧನ್ನೂರ ಹೇಳಿದರು.
“ಸರ್ಕಾರ ಸಮಾವೇಶಕ್ಕೆ ಅನುಮತಿ ನೀಡಿಲ್ಲ ಅಷ್ಟೇ. ಆದರೆ ಕನ್ನೆರಿ ಸ್ವಾಮಿ ಕಲ್ಯಾಣಕ್ಕೆ ಬರಲಾರದಂತೆ ತಡೆಯುವದು ನಮ್ಮ ಉದ್ಧೇಶ. ಈಗಾಗಲೇ ನಿಗದಿ ಮಾಡಿದಂತೆ ನಾಳೆ ಬಸವಕಲ್ಯಾಣದಲ್ಲಿ ಲಿಂಗಾಯತ ಮಠಾಧೀಶರ, ಬಸವಪರ ಸಂಘಟನೆಗಳ, ಬಸವ ಅನುಯಾಯಿಗಳ ಸಭೆ ನಡೆಯುತ್ತೆ. ಬಸವ ಭಕ್ತರು ಭಾಗವಹಿಸಲು ಈ ಮೂಲಕ ಮನವಿ ಮಾಡುತ್ತೇನೆ,” ಎಂದು ಹೇಳಿದರು.
ಮುಂಚೆ ಹೇಳಿದಂತೆ ನಾಳೆ ಸಭೆ ಸೇರುತ್ತೇವೆ ಎಂದು ಹೋರಾಟದ ಮುಂಚೂಣಿಯಲ್ಲಿರುವ ಗುಣಾತೀರ್ಥವಾಡಿ ಕಲ್ಯಾಣ ಮಹಾಮನೆಯ ಪೂಜ್ಯ ಬಸವಪ್ರಭು ಸ್ವಾಮೀಜಿ ಹೇಳಿದರು.
“ಈ ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶಗಳು ರಾಜ್ಯದಲ್ಲಿ ಎಲ್ಲೂ ನಡೆಯಬಾರದು. ಇನ್ನೆಂದೂ ಸನಾತನ ಮತ್ತು ಬಸವ ತತ್ವಗಳನ್ನು ಜೋಡಿಸುವ ಸಾಹಸ ಮಾಡಬಾರದು. ಈ ರೀತಿಯ ಪ್ರಯತ್ನ ಎಂದೆಂದಿಗೂ ಸಲ್ಲಬಾರದು,” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಬಸವ ತತ್ವ ಮತ್ತು ವೈದಿಕತೆ ಪೂರ್ವ ಪಶ್ಚಿಮ ಇದ್ದಂಗೆ. ವೈದಿಕ, ಸನಾತನ ನಂಬಿಕೆಗಳು ಬಸವತತ್ವಕ್ಕೆ ವಿರುದ್ಧ. ಇವರು ಬಸವ ಸಂಸ್ಕೃತಿಯನ್ನು ಹೈಜಾಕ್ ಮಾಡುವುದನ್ನು ಇನ್ನು ಯಾವತ್ತೂ ಸಹಿಸಿಕೊಳ್ಳುವುದಿಲ್ಲ. ಇದೇ ರೀತಿ ಅವರು ಮುಂದುವರೆದರೆ ನಮ್ಮ ಹೋರಾಟವೂ ನಿರಂತರವಾಗಿ ಮುಂದುವರೆಯುತ್ತೆ. ಬೇಕಾದರೆ ಅವರು ಹಿಂದೂ ಸಮಾವೇಶ ಮಾಡಿಕೊಳ್ಳಲಿ. ಆದರೆ ನಮ್ಮ ಹೆಸರಿನ ದುರ್ಬಳಕೆಗೆ ಅವಕಾಶ ನೀಡುವುದಿಲ್ಲ,” ಎಂದು ಎಚ್ಚರಿಕೆ ನೀಡಿದರು.
ಭಾಲ್ಕಿ ಸಂಸ್ಥಾನದ ಪೀಠಾಧಿಪತಿ ಪೂಜ್ಯ ಗುರುಬಸವ ಪಟ್ಟದ್ದೇವರು, “ನಾಳೆ ಸಭೆ ಮಾಡುತ್ತೇವೆ. ಸಭೆಯಲ್ಲಿ ಆದ ಒಮ್ಮತದ ತೀರ್ಮಾನದಂತೆ ನಾವು ಮುಂದುವರಿಯುತ್ತೇವೆ,” ಎಂದು ಹೇಳಿದರು.
ಸರಕಾರ ಅನುಮತಿ ನಿರಾಕರಿಸಿದ್ದರೂ ಹಿಂದೂ ಸಮಾವೇಶ ಆಯೋಜಿಸುವ ಪ್ರಯತ್ನ ಮುಂದುವರೆಯುತ್ತದೆ ಎಂದು ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶದ ಅಧ್ಯಕ್ಷ ಗುಂಡುರೆಡ್ಡಿ ಕಮಲಾಪುರ ಹೇಳಿದ್ದಾರೆ.
