ಗೃಹ ಸಚಿವ ಪ್ರಿಯಾಂಕ್ ಖರ್ಗೆ ಭೇಟಿ ಮಾಡಿದ ಬಳಗದ ಸದಸ್ಯರು
ಬೆಂಗಳೂರು:
ಬಸವಕಲ್ಯಾಣದಲ್ಲಿ ಜೂನ್ 28 ಆಯೋಜಿಸಲು ಉದ್ದೇಶಿಸಿರುವ ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶಕ್ಕೆ ಅನುಮತಿ ನೀಡದಂತೆ ಲಿಂಗಾಯತ ಯುವ ಬಳಗ ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದೆ.
ಬಸವಕಲ್ಯಾಣದಲ್ಲಿ ನಡೆಯಲಿರುವ ಸಮಾವೇಶವು ಜಿಲ್ಲೆಯ ಶಾಂತಿ, ಸೌಹಾರ್ದತೆ ಹಾಗೂ ಸಾರ್ವಜನಿಕ ನೆಮ್ಮದಿಗೆ ಧಕ್ಕೆಯುಂಟು ಮಾಡುವ ಸಾಧ್ಯತೆ ಇದೆ ಎಂದು ಮನವಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.
ವಿಶ್ವಗುರು ಬಸವಣ್ಣನವರು ಸಮಾನತೆ, ಮಾನವೀಯತೆ, ವರ್ಣ, ವರ್ಗರಹಿತ ಸಮಾಜ ಹಾಗೂ ಶರಣ ಸಂಸ್ಕೃತಿಯ ಸಂದೇಶವನ್ನು ಸಾರಿದ ಮಹಾನ್ ದಾರ್ಶನಿಕರಾಗಿದ್ದು, ಅವರ ತತ್ವಗಳನ್ನು ನಿರ್ದಿಷ್ಟ ರಾಜಕೀಯ ಅಥವಾ ವೈದಿಕ ಚೌಕಟ್ಟಿಗೆ ಸೀಮಿತಗೊಳಿಸುವ ಪ್ರಯತ್ನಗಳು ಸಮಾಜದಲ್ಲಿ ಅನಗತ್ಯ ಉದ್ವಿಗ್ನತೆ ಸೃಷ್ಟಿಸುತ್ತಿವೆ ಎಂದು ಉಲ್ಲೇಖಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಕನ್ನೇರಿ ಸ್ವಾಮಿಯ ಭಾಷಣಗಳು ಹಾಗೂ ಅವರ ಬೆಂಬಲಿಗರ ನಡೆ-ನುಡಿಗಳು ಬಸವತತ್ವ ಪ್ರಚಾರಕರ ಭಾವನೆಗಳಿಗೆ ಧಕ್ಕೆ ಉಂಟುಮಾಡಿವೆ ಎಂದು ಮನವಿದಾರರು ಆರೋಪಿಸಿದ್ದಾರೆ.
ಅಲ್ಲದೆ, ರಾಜ್ಯದ ವಿವಿಧ ಮಠಾಧೀಶರ ಒಕ್ಕೂಟದ ಸ್ವಾಮಿಗಳ ವಿರುದ್ಧ ಅವಹೇಳನಕಾರಿ ಹೇಳಿಕೆಗಳು ಹಾಗೂ ಬಸವಭಕ್ತರ ಕುರಿತು ಅವಮಾನಕಾರಿ ಪದಗಳ ಬಳಕೆ ನೋವುಂಟು ಮಾಡಿದೆ ಎಂದು ತಿಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಜೂನ್ 28ರಂದು ಬಸವಕಲ್ಯಾಣದಲ್ಲಿ ನಡೆಯಲಿರುವ ಸಮಾವೇಶದಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಸರ್ಕಾರ ಸೂಕ್ತ ನಿರ್ಬಂಧ ಹೇರಬೇಕು ಎಂದು ಮನವಿ ಮಾಡಲಾಗಿದೆ.
ಮನವಿಯಲ್ಲಿ ಕನ್ನೇರಿ ಸ್ವಾಮಿಯನ್ನು ಬಸವಕಲ್ಯಾಣ ಸೇರಿದಂತೆ ಬೀದರ ಜಿಲ್ಲೆಯ ವ್ಯಾಪ್ತಿಯಲ್ಲಿ ಪ್ರವೇಶಿಸದಂತೆ ತಾತ್ಕಾಲಿಕ ನಿರ್ಬಂಧ ಹೇರಬೇಕು. ಜೂನ್ 28ರಂದು ಬಸವಕಲ್ಯಾಣದಲ್ಲಿ ನಡೆಯಲಿರುವ “ಬಸವಾದಿ ಶರಣರ ಹಿಂದೂ ಸಮಾವೇಶ” ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದು.
ಸಮಾಜದಲ್ಲಿ ದ್ವೇಷ, ಉದ್ವಿಗ್ನತೆ ಅಥವಾ ಪ್ರಚೋದನಾತ್ಮಕ ಭಾಷಣಗಳು ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯ ಪೊಲೀಸ್ ಭದ್ರತೆ ಒದಗಿಸಬೇಕು ಎಂದು ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಕೋರಲಾಗಿದೆ.
ಬಸವಕಲ್ಯಾಣದ ಐತಿಹಾಸಿಕ ಹಾಗೂ ಧಾರ್ಮಿಕ ಸಂವೇದನೆಗಳನ್ನು ಗೌರವಿಸಿ ಸರ್ಕಾರ ತ್ವರಿತವಾಗಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಒಂದು ವೇಳೆ ಸರ್ಕಾರ ಅಗತ್ಯ ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ ಧರಣಿ ಹಾಗೂ ಸತ್ಯಾಗ್ರಹ ಹೋರಾಟ ನಡೆಸುವುದಾಗಿ ಲಿಂಗಾಯತ ಯುವ ಬಳಗ ಹೇಳಿದೆ.
ಈ ಮನವಿ ಸಲ್ಲಿಸುವ ಸಂದರ್ಭದಲ್ಲಿ ಲಿಂಗಾಯತ ಯುವ ಬಳಗದ ಪ್ರಮುಖರಾದ ಕಿರಣ ಬೆಲ್ಲದ, ಪ್ರಕಾಶ ಬೇರ್ಗೆ, ಶಿವಪ್ರಸಾದ ಪಟ್ನೆ, ಶಿವಾನಂದ ಗುಂಡಾನವರ, ಭೀಮನಗೌಡ ಪರಗೊಂಡ ಮತ್ತಿತರರು ಉಪಸ್ಥಿತರಿದ್ದರು.


