ಸಾಣೇಹಳ್ಳಿಯಲ್ಲಿ ಮಕ್ಕಳ ಬೇಸಿಗೆ ಶಿಬಿರ ಶುರು

ಸಾಣೇಹಳ್ಳಿ

ಇಲ್ಲಿನ ರಂಗಶಾಲೆಯ ಆವರಣದಲ್ಲಿರುವ ಲತಾ ಮಂಟಪದಲ್ಲಿ ನಡೆದ ‘ಮಕ್ಕಳ ಹಬ್ಬ’ಬೇಸಿಗೆ ಶಿಬಿರ-೨೬ ಉದ್ಘಾಟನೆಗೊಂಡಿತು.

ಸಮಾರಂಭ ದಿವ್ಯ ಸಾನ್ನಿಧ್ಯ ವಹಿಸಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ;  “ಶಿಬಿರವು ಕೇವಲ ಕಲೆಯ ಕಲಿಕೆಯಲ್ಲ, ಬದಲಾಗಿ ಜೀವನದ ಶಿಸ್ತನ್ನು ರೂಢಿಸಿಕೊಳ್ಳುವ ವೇದಿಕೆ. ಮುಂಜಾನೆ ೫ ಗಂಟೆಗೆ ಎದ್ದು ನಿತ್ಯಕರ್ಮಗಳನ್ನು ಮುಗಿಸಿ, ಹಣೆಯ ಮೇಲೆ ವಿಭೂತಿಯನ್ನು ಧರಿಸುವುದು ಜ್ಞಾನ ಮತ್ತು ಅರಿವಿನ ಸಂಕೇತ. ಇದು ಮುಖಕ್ಕೆ ತೇಜಸ್ಸನ್ನು ನೀಡಿ ಅಜ್ಞಾನವನ್ನು ದೂರ ಮಾಡುತ್ತದೆ” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಕೇವಲ ಪಠ್ಯದ ಶಿಕ್ಷಣ ನೀಡಿದರೆ ಸಾಲದು, ಬದಲಾಗಿ ಅವರನ್ನು ಉತ್ತಮ ಮನುಷ್ಯರನ್ನಾಗಿ ರೂಪಿಸುವ ಶಿಕ್ಷಣದ ಅಗತ್ಯವಿದೆ. ಶಿಬಿರವು ಒಂದು ಹಬ್ಬದ ಸಂಭ್ರಮದಂತೆ ಇರಬೇಕು. ೧೫ ದಿನಗಳ ಶಿಬಿರದಲ್ಲಿ ಇಂಗ್ಲಿಷ್, ಕನ್ನಡ, ಗಣಿತದಂತಹ ಪಠ್ಯ ವಿಷಯಗಳ ಬದಲಾಗಿ, ಮನುಷ್ಯ ಮನುಷ್ಯನಾಗಿ ಹೇಗೆ ಬಾಳಬೇಕು ಮತ್ತು ನಡವಳಿಕೆಯಲ್ಲಿ ಬದಲಾವಣೆ ತರುವುದು ಹೇಗೆ ಎಂಬುದನ್ನು ಕಲಿಸಿಕೊಡಲಾಗುವುದು.

ಶಿಬಿರದಲ್ಲಿ ಅಬ್ರಹಾಂ ಲಿಂಕನ್ ಅವರು ತಮ್ಮ ಮಗನ ಶಿಕ್ಷಕರಿಗೆ ಬರೆದ ಪತ್ರವನ್ನು ಉಲ್ಲೇಖಿಸುತ್ತಾ ಮಕ್ಕಳು ಕೇವಲ ಅಂಕಗಳ ಬೆನ್ನತ್ತದೆ, ಪ್ರಕೃತಿಯನ್ನು ಪ್ರೀತಿಸುವ, ಸತ್ಯವನ್ನೇ ನುಡಿಯುವ ಮತ್ತು ಶ್ರಮಜೀವಿಗಳಾಗಿ ಬೆಳೆಯಬೇಕು.

ಇಂದಿನ ಮಕ್ಕಳು ಮೊಬೈಲ್ ಮತ್ತು ಟಿವಿಯ ದಾಸರಾಗುತ್ತಿದ್ದಾರೆ. ಮೊಬೈಲ್ ಮನುಷ್ಯನ ತಲೆ ತಗ್ಗಿಸುವಂತೆ ಮಾಡಿದರೆ, ಶಿಬಿರವು ತಲೆ ಎತ್ತಿ ಬಾಳುವುದನ್ನು ಕಲಿಸುತ್ತದೆ. ಶಿಬಿರದ ಅವಧಿಯಲ್ಲಿ ಮಕ್ಕಳು ಮೊಬೈಲ್ ಮತ್ತು ಟಿವಿ ಮಾಯಾಲೋಕದಿಂದ ದೂರವಿರುವುದು ಒಂದು ದೊಡ್ಡ ಸಾಧನೆಯಾಗಿದೆ. ಮನೆಯಲ್ಲಿ ತಂದೆ-ತಾಯಿಯ ಅವಲಂಬನೆಯಲ್ಲಿರುವ ಮಕ್ಕಳು, ಇಲ್ಲಿ ತಮ್ಮ ಬಟ್ಟೆಗಳನ್ನು ತಾವೇ ಒಗೆಯುವುದು, ನಿಗದಿತ ಸಮಯಕ್ಕೆ ಊಟ ಮಾಡುವುದು ಮತ್ತು ಸ್ವಂತ ಕೆಲಸಗಳನ್ನು ತಾವೇ ಮಾಡಿಕೊಳ್ಳುವ ಮೂಲಕ ಸ್ವಾವಲಂಬನೆಯ ಪಾಠ ಇಲ್ಲಿ ಕಲಿಯಲಿದ್ದೀರಿ.

ನಾಟಕಗಳು ಕೇವಲ ಮನೋರಂಜನೆಯಲ್ಲ, ಅವು ಮನೋವಿಕಾಸದ ಸಾಧನಗಳು. ಅಮೆರಿಕಾ, ಇಸ್ರೇಲ್ ಮತ್ತು ಇರಾನ್ ದೇಶಗಳ ನಡುವೆ ನಡೆಯುತ್ತಿರುವ ಯುದ್ಧಗಳ ಉದಾಹರಣೆ ನೀಡಿ, ನೈತಿಕತೆ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯ ಕೊರತೆಯಿಂದಾಗಿ ಇಂತಹ ಅಹಿತಕರ ಘಟನೆಗಳು ಸಂಭವಿಸುತ್ತಿವೆ. ಮಕ್ಕಳಲ್ಲಿ ರಾಕ್ಷಸತ್ವವನ್ನು ಹೋಗಲಾಡಿಸಿ ಮನುಷ್ಯತ್ವವನ್ನು ಬೆಳೆಸುವುದೇ ಈ ಶಿಬಿರದ ಮುಖ್ಯ ಉದ್ದೇಶ.

ಇತ್ತೀಚಿನ ದಿನಗಳಲ್ಲಿ ಚಲನಚಿತ್ರ ಗೀತೆಗಳ ಪ್ರಭಾವಕ್ಕೆ ಒಳಗಾಗುತ್ತಿರುವ ಮಕ್ಕಳಿಗೆ ವಚನ ಸಾಹಿತ್ಯದ ಪರಿಚಯ ಮಾಡಿಕೊಡುವ ಅಗತ್ಯವಿದೆ. ೧೫ ದಿನಗಳ ಈ ಶಿಬಿರದಲ್ಲಿ ಮಕ್ಕಳು ಕನಿಷ್ಠ ೧೫ ವಚನಗಳನ್ನು ಕಲಿಯುವುದರ ಜೊತೆಗೆ ಚಿತ್ರಕಲೆ, ಮಣ್ಣಿನ ಕಲೆ, ನಾಟಕ, ನೃತ್ಯದ ಕಲೆ ಹಾಗೂ ಪ್ರಕೃತಿಯನ್ನು ಗುರುತಿಸುವ ಹೀಗೆ ಹಲವಾರು ಕಲೆಗಳನ್ನು ಅಭ್ಯಾಸ ಮಾಡುವುದರ ಜೊತೆಗೆ ತಮ್ಮ ವ್ಯಕ್ತಿತ್ವ ವಿಕಾಸಗೊಳಿಸಿಕೊಳ್ಳಬೇಕು.

“ಮಕ್ಕಳ ಮನಸ್ಸು ಹಸಿ ಗೋಡೆಯಂತೆ, ಅಲ್ಲಿ ಬಿತ್ತಿದ ಮೌಲ್ಯಗಳು ಶಾಶ್ವತವಾಗಿ ಉಳಿಯುತ್ತವೆ”.  ತಟ್ಟೆಯಲ್ಲಿ ಒಂದು ಅಗಳೂ ಅನ್ನವನ್ನು ವ್ಯರ್ಥ ಮಾಡದಂತೆ ಹಾಗೂ ಶೌಚಾಲಯ ಸೇರಿದಂತೆ ತಮ್ಮ ಪರಿಸರವನ್ನು ತಾವೇ ಸ್ವಚ್ಛಗೊಳಿಸಿಕೊಳ್ಳುವ ಮೂಲಕ ಸ್ವಾಲಂಬನೆಯನ್ನು ಬೆಳೆಸಿಕೊಳ್ಳಬೇಕು. ಶಿಬಿರದಿಂದ ಮಕ್ಕಳನ್ನು ‘ಮಂಗತ್ವ’ದಿಂದ ‘ದೈವತ್ವ’ದ ಕಡೆಗೆ ಕೊಂಡೊಯ್ಯುವ ಒಂದು ಸಾರ್ಥಕ ಪ್ರಯತ್ನವಾಗಲಿದೆ. ಒಟ್ಟಾರೆಯಾಗಿ, ಈ ಶಿಬಿರವು ಮಕ್ಕಳಲ್ಲಿ ಶಿಸ್ತು, ಸಮಯ ಪ್ರಜ್ಞೆ ಮತ್ತು ಉತ್ತಮ ಸಂಸ್ಕಾರವನ್ನು ಬಿತ್ತುವ ಮೂಲಕ ಅವರ ಭವಿಷ್ಯಕ್ಕೆ ಭದ್ರಬುನಾದಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಶಿಕ್ಷಕ ಎಸ್ ರೇವಣಸಿದ್ಧಯ್ಯ ಮಾತನಾಡಿ; ಇಂದಿನ ದಿನಗಳಲ್ಲಿ ಮಕ್ಕಳು ಮೊಬೈಲ್ ಗೇಮ್ಸ್ ಮತ್ತು ಸಾಮಾಜಿಕ ಜಾಲತಾಣಗಳ ಚಂಚಲ ಬುದ್ಧಿಗೆ ಮಾರು ಹೋಗುತ್ತಿದ್ದಾರೆ. ಏಕಾಗ್ರತೆಯನ್ನು ಬೆಳೆಸಿಕೊಳ್ಳಲು ಇಂತಹ ಶಿಬಿರಗಳು ಸಹಕಾರಿಯಾಗಿದೆ. ಇಂದಿನ ಡಿಜಿಟಲ್ ಯುಗದಲ್ಲಿ ಮಕ್ಕಳು ಮೊಬೈಲ್ ಗೀಳಿನಿಂದ ಹೊರಬಂದು ತಮ್ಮಲ್ಲಿರುವ ಸೃಜನಶೀಲತೆಯನ್ನು ಗುರುತಿಸಿಕೊಳ್ಳುವುದು ಅವಶ್ಯಕ ಎಂದರು.

ಶಿಬಿರದ ನಿರ್ದೇಶಕ ರಾಘವೇಂದ್ರ ಪುರಪ್ಪಮನೆ ಪ್ರಾಸ್ತಾವಿಕ ಮಾತನಾಡಿ; ಇಂದಿನ ಮೊಬೈಲ್ ಮತ್ತು ರಿಯಾಲಿಟಿ ಶೋಗಳ ಯುಗದಲ್ಲಿ ಮಕ್ಕಳಿಗೆ ಆರೋಗ್ಯಕರ ಮನರಂಜನೆ ನೀಡುವ ಮತ್ತು ಅವರಲ್ಲಿ ಸಾಂಸ್ಕೃತಿಕ ಪ್ರಜ್ಞೆ ಮೂಡಿಸುವ ಉದ್ದೇಶದಿಂದ ‘ರಂಗಶಿಬಿರ ೨೦೨೬’ ಅನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಿಬಿರದ ಸಂಪನ್ಮೂಲ ವ್ಯಕ್ತಿ ರಘು ಅವರು ತಿಳಿಸಿದರು.

 “ಕುವೆಂಪು ಹೇಳಿದಂತೆ, ನಾವು ಬಾಲ್ಯದಿಂದಲೇ `ವಿಶ್ವಮಾನವರಾಗುವ’ ಹಾದಿಯಲ್ಲಿ ಸಾಗಬೇಕಿದೆ. ಜಾತಿ, ಮತ, ಪಂಥಗಳ ಭೇದ ಮರೆತು ಇಡೀ ಜಗತ್ತೇ ನಮ್ಮದು ಎಂಬ ಭಾವನೆ ಮಕ್ಕಳಲ್ಲಿ ಮೂಡಬೇಕಿದೆ. ಶಿಕ್ಷಣ ಮತ್ತು ಪಠ್ಯಕ್ರಮಗಳು ರಾಜಕೀಯ ಪ್ರಭಾವಕ್ಕೆ ಒಳಗಾಗುತ್ತಿರುವ ಈ ಕಾಲದಲ್ಲಿ, ಸಾಂಸ್ಕೃತಿಕ ಕ್ಷೇತ್ರವು ಮಕ್ಕಳ ಮನೋವಿಕಾಸಕ್ಕೆ ಪೂರಕವಾಗಿ ಕೆಲಸ ಮಾಡಬೇಕಿದೆ,” ಎಂದು ಅವರು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ವೇದಿಕೆಯ ಶಿಬಿರದ ಸಂಪನ್ಮೂಲ ವ್ಯಕ್ತಿಗಳಾದ ಮಂಜುನಾಥ, ಹನುಮಂತಪ್ಪ, ಮರಿಯಮ್ಮ, ರಮೇಶ ಕಾವ, ಶ್ವೇತ ಕಾವ ಹಾಗೂ ರಂಗಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಶಿಬಿರದ ಆರಂಭದಲ್ಲಿ ನಾಗರಾಜ ಹಾಗೂ ಶರಣ್ ‘ಕಲಿಸು ಗುರುವೇ ಕಲಿಸು ಗುರುವೇ’ ಎಂಬ ಅರ್ಥಪೂರ್ಣ ಹಾಡು ಹಾಗೂ ವಚನಗೀತೆಗಳನ್ನು ಹಾಡಿದರು. ಶಿಬಿರದಲ್ಲಿ ನೂರಾರು ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದು ವಿಶೇಷವಾಗಿತ್ತು. ಸಂಗೀತ ಬಿಡೆ ಸ್ವಾಗತಿಸಿ ನಿರೂಪಿಸಿದರು. ರಾಜು ವಂದಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
Leave a comment

Leave a Reply

Your email address will not be published. Required fields are marked *