(893ನೇ ಬಸವ ಜಯಂತಿ ಅಂಗವಾಗಿ ಕಲಬುರ್ಗಿಯಲ್ಲಿ ನಡೆಯುತ್ತಿರುವ ‘ಬಸವತತ್ವ ದರ್ಶನ ಪ್ರವಚನ’ದ ಮುಖ್ಯಾಂಶಗಳು)
ಕಲಬುರ್ಗಿ:
ದಿನಾಂಕ: 14 ಏಪ್ರಿಲ್ 2026
ಪ್ರವಚನಕಾರರು: ಪೂಜ್ಯ ಬಸವೇಶ್ವರಿಮಾತಾಜಿ,, ಬಸವಧಾಮ, ಅತ್ತಿವೇರಿ
ಸ್ಥಳ: ಬಸವ ಮಂಟಪ, ಮಾಕಾ ಲೇಔಟ್, ಕಲಬುರಗಿ
ಆಯೋಜನೆ: ಜಗಜ್ಯೋತಿ ಬಸವೇಶ್ವರ ಸೇವಾ ಸಮಿತಿ, ಕಲಬುರಗಿ
ಇಂದಿನ ಪ್ರವಚನದಲ್ಲಿ ಮಾತಾಜಿಯವರು “ಲಿಂಗಾಯತವು ಒಂದು ಜಾತಿಯಲ್ಲ, ಅದೊಂದು ಧರ್ಮ”ಎಂದು ಸ್ಪಷ್ಟಪಡಿಸಿದರು. “ಇವನಾರು, ಇವನಾರು ಎಂದು ಬೇರ್ಪಡಿಸುವುದು ಜಾತಿ (ಕತ್ತರಿಯ ಕೆಲಸದಂತೆ), ಇವನಮ್ಮವ, ಇವನಮ್ಮವ ಎಂದು ಒಂದಾಗಿಸುವುದು ಧರ್ಮ (ಸೂಜಿಯ ಕೆಲಸದಂತೆ)” ಎಂದು ಸುಂದರ ರೂಪಕದ ಮೂಲಕ ವಿವರಿಸಿದರು. ಧರ್ಮವು ಮಾನವನನ್ನು ಮೇಲಕ್ಕೆತ್ತುವ ಶಕ್ತಿ ಎಂಬ ಸಂದೇಶವನ್ನು ನೀಡಿದರು.
ಶರಣರು ನೀಡಿದ ಅಷ್ಟಾವರಣ (ಗುರು, ಲಿಂಗ, ಜಂಗಮ, ವಿಭೂತಿ, ರುದ್ರಾಕ್ಷಿ, ಮಂತ್ರ, ಪಾದೋದಕ, ಪ್ರಸಾದ), ಪಂಚಾಚಾರ ಮತ್ತು ಷಟಸ್ಥಲಗಳ ತತ್ವಗಳನ್ನು ಅವರು ವಿಶದವಾಗಿ ವಿವರಿಸಿದರು. ಯೋಗ್ಯ ಗುರುವಿನ ಮಹತ್ವವನ್ನು ಒತ್ತಿಹೇಳಿ, ವಿವಿಧ ರೀತಿಯ ಗುರುಗಳ ಕುರಿತು ತಿಳಿಸಿದರು. ಕಳ್ಳ, ಸುಳ್ಳು, ಪಾಖಂಡಿ ಗುರುಗಳನ್ನು ಅನುಸರಿಸುವ ಶಿಷ್ಯರು ಮಹಾಪಾಖಂಡರಾಗುತ್ತಾರೆ ಎಂದು ಉದಾಹರಣೆಗಳೊಂದಿಗೆ ಎಚ್ಚರಿಕೆ ನೀಡಿದರು.
“ಶಿವಪಥವನ್ನು ಅರಿಯಲು ಮೊದಲು ಗುರುಪಥವೇ ಅಗತ್ಯ”ಎಂದು ಹೇಳಿದ ಅವರು, ತಂದೆ-ತಾಯಿಗಿಂತಲೂ ಗುರು ಹೇಗೆ ಶ್ರೇಷ್ಠನಾಗುತ್ತಾನೆ ಎಂಬುದನ್ನು ಗುರು-ಶಿಷ್ಯ ಸಂಬಂಧಗಳ ಉದಾಹರಣೆಗಳ ಮೂಲಕ ವಿವರಿಸಿದರು. ಲಿಂಗದ ವೈಜ್ಞಾನಿಕ ಹಾಗೂ ಆಧ್ಯಾತ್ಮಿಕ ಮಹತ್ವವನ್ನು ತಿಳಿಸಿ, ಇಷ್ಟಲಿಂಗ ಧಾರಣೆಯ ಅಗತ್ಯತೆಯನ್ನು ಸ್ಪಷ್ಟಪಡಿಸಿದರು. ಮಕ್ಕಳನ್ನು ಸಂಸ್ಕಾರವಂತರನ್ನಾಗಿ ರೂಪಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.

ಶಿವಯೋಗ, ತ್ರಾಟಕ ಮತ್ತು ಲಿಂಗಪೂಜೆಯ ವಿಧಾನಗಳನ್ನು ವಿವರಿಸಿದ ಅವರು, ಇಷ್ಟಲಿಂಗದ ಮೂಲಕ ಇಡೀ ವಿಶ್ವದ ಅಸ್ತಿತ್ವವನ್ನೇ ಪೂಜಿಸಬಹುದಾಗಿದೆ ಎಂದು ತಿಳಿಸಿದರು. ಜಂಗಮ ಎಂದರೆ ಜನನ-ಮರಣ ಚಕ್ರವನ್ನು ಗೆದ್ದವನು ಎಂದು ಅರ್ಥೈಸಿದರು. ಬಸವಣ್ಣನವರ ವಚನಗಳನ್ನು ಉಲ್ಲೇಖಿಸಿ ವಿಭೂತಿಯ ಪಾವಿತ್ರ್ಯ ಮತ್ತು ಸಾತ್ವಿಕತೆಯನ್ನು ವಿವರಿಸಿದರು. ರುದ್ರಾಕ್ಷಿಯ ಮಹತ್ವವನ್ನು ತಿಳಿಸಿ, “ಓಂ ನಮಃ ಶಿವಾಯ” ಮಂತ್ರದ ಜಪದ ಶಕ್ತಿಯನ್ನು ವಿವರಿಸಿದರು. ಪಾದೋದಕದ
ತತ್ವವನ್ನು ತಿಳಿಸಿದರು. ಸತ್ಯಶುದ್ಧ ಕಾಯಕದಿಂದ ಗಳಿಸಿದ್ದೇ ಪ್ರಸಾದ; ಅನ್ಯಾಯದಿಂದ ಪಡೆದದ್ದು ಕೇವಲ ಕೂಳು ಆಗುತ್ತದೆ, ಪ್ರಸಾದವಾಗುವುದಿಲ್ಲ ಎಂದು ಹೇಳಿದರು.
ಒಟ್ಟಾರೆ ಇಂದಿನ ಈ ಪ್ರವಚನವು ಲಿಂಗಾಯತ ಧರ್ಮದ ತಾತ್ವಿಕ ಆಳವನ್ನು ಸ್ಪಷ್ಟಪಡಿಸಿ, ಶ್ರೋತೃಗಳನ್ನು ಧಾರ್ಮಿಕ ಮೌಲ್ಯಗಳತ್ತ ಪ್ರೇರೇಪಿಸಿತು ಎನ್ನಬಹುದು
