ಸೇಡಂ:
ಕಲಬುರಗಿಯಲ್ಲಿ ಆಯೋಜಿಸಲಾಗಿರುವ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣನವರ 893ನೇ ಜಯಂತ್ಯೋತ್ಸವವನ್ನು ಅತ್ಯಂತ ವೈಭವದಿಂದ ಮತ್ತು ಯಶಸ್ವಿಯಾಗಿ ಆಚರಿಸಲು ಸರ್ವ ಸಮಾಜದ ಬಸವಭಿಮಾನಿಗಳು ಕೈಜೋಡಿಸಬೇಕು ಎಂದು ಜಯಂತ್ಯೋತ್ಸವ ಸಮಿತಿಯ ಅಧ್ಯಕ್ಷ ಬಿ.ಆರ್. ಪಾಟೀಲ ಕರೆ ನೀಡಿದರು.
ಸೇಡಂ ಪಟ್ಟಣದ ಪ್ರಸಿದ್ಧ ಶ್ರೀ ಕೊತ್ತಲ ಬಸವೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಜಯಂತ್ಯೋತ್ಸವದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿ. ಇದೇ ಸಂದರ್ಭದಲ್ಲಿ ಬಸವ ಜಯಂತಿಯ ಪ್ರಚಾರ ಕರಪತ್ರಗಳನ್ನು ಗಣ್ಯರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು.
ಏಪ್ರಿಲ್ 19 ಮತ್ತು 20 ಎರಡು ದಿನಗಳ ಕಾಲ ಕಲಬುರಗಿಯ ಜಗತ್ ವೃತ್ತದ ಶ್ರೀ ಬಸವೇಶ್ವರ ಪುತ್ಥಳಿ ಆವರಣದಲ್ಲಿ ಬಹಿರಂಗ ಸಭೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು. ಬಸವಣ್ಣನವರ ವಿಚಾರಧಾರೆಗಳು ಇಂದಿನ ಸಮಾಜಕ್ಕೆ ಅತ್ಯಂತ ಅವಶ್ಯಕವಾಗಿವೆ. ಈ ಉತ್ಸವವು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗದೆ, ಬಸವಾದಿ ಶರಣರ ತತ್ವದಲ್ಲಿ ನಂಬಿಕೆಯುಳ್ಳ ಎಲ್ಲಾ ಸಮುದಾಯದವರು ಮತ್ತು ಹಿರಿಯ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.
ಕೊತ್ತಲ ಬಸವೇಶ್ವರ ದೇವಾಲಯದ ಶ್ರೀ ಸದಾಶಿವ ಮಹಾಸ್ವಾಮಿಗಳು ಹಾಗೂ ಹಾಲಪ್ಪಯ್ಯ ವಿರಕ್ತ ಮಠದ ಶ್ರೀ ಪಂಚಾಕ್ಷರ ಮಹಾಸ್ವಾಮಿಗಳು, ಸಚಿವ ಡಾ. ಶರಣಪ್ರಕಾಶ ಪಾಟೀಲ, ಮಾಜಿ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ, ಜಯಂತ್ಯೋತ್ಸವ ಸಮಿತಿಯ ಕಾರ್ಯದರ್ಶಿ ಬಿ.ಜಿ. ಪಾಟೀಲ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಶರಣು ಮೋದಿ, ತಾಲೂಕಾಧ್ಯಕ್ಷ ರಾಜಶೇಖರ ನಿಲಂಗಿ, ಅಮರನಾಥ ಪಾಟೀಲ, ರವೀಂದ್ರ ಶಹಬಾದಿ, ಶಿವಕುಮಾರ (GK) ಪಾಟೀಲ ತೆಲ್ಕೂರ, ಶಿವಕುಮಾರ ಬೊಳಶೆಟ್ಟಿ, ಸಿದ್ದಣ್ಣ ಶೆಟ್ಟಿ ಸೇರಿದಂತೆ ನೂರಾರು ಬಸವಭಿಮಾನಿಗಳು ಭಾಗವಹಿಸಿದ್ದರು.
ಕೃಪೆ : ವಾರ್ತಾ ಭಾರತಿ
